2020 year in review | ಸುಪ್ರೀಂಕೋರ್ಟ್ ನೀಡಿದ ಐದು ಮಹತ್ತರ ತೀರ್ಪುಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 10:24 AM

ದೇಶದ ಇತಿಹಾಸದಲ್ಲಿ ಸ್ಥಾನ ಪಡೆಯುವ ಹಲವು ಮಹತ್ತರವಾದ ತೀರ್ಪುಗಳು 2020ರಲ್ಲಿ ಪ್ರಕಟವಾದವು. ಈ ಪೈಕಿ ಮುಖ್ಯ ಐದು ತೀರ್ಪುಗಳ ಮೆಲುಕು ಇಲ್ಲಿದೆ.

2020 year in review | ಸುಪ್ರೀಂಕೋರ್ಟ್ ನೀಡಿದ ಐದು ಮಹತ್ತರ ತೀರ್ಪುಗಳು
ಸುಪ್ರೀಂ ಕೋರ್ಟ್
Follow us on

2020 ಆರಂಭವಾಗಿ ಮೂರು ತಿಂಗಳಾಗುತ್ತಿದ್ದಂತೆಯೇ ಕೊರೊನಾವೈರಸ್ ಲಾಕ್​ಡೌನ್​ನಿಂದಾಗಿ ದಿನನಿತ್ಯದ ಬದುಕು ಅಸ್ತವ್ಯಸ್ತವಾಯಿತು. ಕಚೇರಿಯಲ್ಲಿ ಮಾಡುತ್ತಿದ್ದ ಕೆಲಸ ಕಾರ್ಯಗಳನ್ನು ಮನೆಯಲ್ಲೇ ಕುಳಿತು ಮಾಡುವ ಅನಿವಾರ್ಯತೆ, ಎಲ್ಲ ವಹಿವಾಟುಗಳನ್ನೂ ಆನ್​ಲೈನ್ ಮೂಲಕ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಹೀಗಿರುವಾಗಲೂ ದೇಶದ ನ್ಯಾಯದಾನ ಪ್ರಕ್ರಿಯೆಯ ವ್ಯವಸ್ಥೆಯ ಕಾರ್ಯನಿರ್ವಹಣೆ ಮುಂದುವರಿಯಿತು. ದೇಶದ ಇತಿಹಾಸದಲ್ಲಿ ಸ್ಥಾನ ಪಡೆಯುವ ಹಲವು ಮಹತ್ತರವಾದ ತೀರ್ಪುಗಳು 2020ರಲ್ಲಿ ಪ್ರಕಟವಾದವು. ಈ ಪೈಕಿ ಮುಖ್ಯ ಐದು ತೀರ್ಪುಗಳ ಮೆಲುಕು ಇಲ್ಲಿದೆ.

ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು
ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯಡಿ, ಅವಿಭಕ್ತ ಕುಟುಂಬದ ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕುಗಳಿವೆ ಎಂದು ಸುಪ್ರೀಂಕೋರ್ಟ್‌ ಆಗಸ್ಟ್ 11ರಂದು ಹೇಳಿತು. ತಿದ್ದುಪಡಿ ಕಾಯ್ದೆ ಜಾರಿಗೆ ಬರುವ ಮುನ್ನ ಒಂದು ವೇಳೆ ತಂದೆ ತೀರಿಕೊಂಡಿದ್ದರೂ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳು ಸಹ ಸಮಾನ ಹಕ್ಕು ಹೊಂದಿರುತ್ತಾರೆ. ‘1956ರ ಕಾಯ್ದೆಯು 2005ರಲ್ಲಿ ತಿದ್ದುಪಡಿಗೊಂಡು ಜಾರಿಗೆ ಬಂದ ನಂತರ ಅಥವಾ ಅದಕ್ಕೂ ಮೊದಲೇ ಜನಿಸಿದ ಗಂಡು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಮೇಲೆ ಯಾವ ಹಕ್ಕುಗಳಿವೆಯೋ ಅವೇ ಹಕ್ಕುಗಳು ಹೆಣ್ಣುಮಕ್ಕಳಿಗೂ ಇವೆ’ ಎಂದು ನ್ಯಾಯಪೀಠ ಹೇಳಿತ್ತು.

ನಿರೀಕ್ಷಣಾ ಜಾಮೀನಿಗೆ ಕಾಲಮಿತಿ ಇಲ್ಲ
ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಗೆ ನೀಡಲಾಗುವ ನಿರೀಕ್ಷಣಾ ಜಾಮೀನಿಗೆ ಯಾವುದೇ ಕಾಲಮಿತಿ ನಿಗದಿ ಮಾಡಲು ಸಾಧ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. 1973ರ ಅಪರಾಧ ದಂಡ ಸಂಹಿತೆ ಸೆಕ್ಷನ್ 438ರಲ್ಲಿ ವ್ಯಕ್ತಿಯೊಬ್ಬರಿಗೆ ಬಂಧನ ಭೀತಿಯಿಂದ ತಪ್ಪಿಸಲು ಜಾಮೀನು ನೀಡುವುದರ ಕುರಿತು ಹೇಳಲಾಗಿದೆ. ಬಂಧನಕ್ಕೆ ಮೊದಲು ನೀಡಲಾಗುವ ಜಾಮೀನಿಗೆ ಷರತ್ತುಗಳನ್ನು ವಿಧಿಸಬಹುದು. ಆದರೆ, ಕಾಲಮಿತಿ ವಿಧಿಸುವ ಅಗತ್ಯವಿಲ್ಲ. ಜಾಮೀನು ಪಡೆದವರು ನ್ಯಾಯಾಲಯದಲ್ಲಿ ಹಾಜರಾದ ತಕ್ಷಣ ಜಾಮೀನು ಅನೂರ್ಜಿತಗೊಳ್ಳಬೇಕಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ
ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡುವಾಗ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು.

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಪೂರ್ಣ ಅವಕಾಶ
ಸಶಸ್ತ್ರಪಡೆಗಳಲ್ಲಿ 14 ವರ್ಷ ಸೇವೆ ಪೂರ್ಣಗೊಳಿಸಿದ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನಿಯೋಜನೆ (ಪರ್ಮನೆಂಟ್ ಕಮಿಷನ್) ಕಲ್ಪಿಸುವಂತೆ ಸುಪ್ರೀಂಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿತು. ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಇದು ಮಹತ್ವದ ತೀರ್ಪು ಎಂದೇ ವ್ಯಾಖ್ಯಾನಿಸಲಾಗಿದೆ. ನಿಯೋಜನೆ ದೊರೆಯುವ ಮೊದಲು ನಿವೃತ್ತರಾದ ಮಹಿಳೆಯರಿಗೆ ಪಿಂಚಣಿ ಸಂಬಂಧಿತ ಸವಲತ್ತು ನೀಡುವಂತೆಯೂ ಸುಪ್ರೀಂಕೋರ್ಟ್​ ಸರ್ಕಾರಕ್ಕೆ ಸೂಚಿಸಿತು.

ಬಿಟ್ ಕಾಯಿನ್

ಡಿಜಿಟಲ್‌ ಕರೆನ್ಸಿಗಳ ಆರ್​ಬಿಐ ವಿಧಿಸಿದ್ದ ನಿಷೇಧ ರದ್ದು
ಡಿಜಿಟಲ್‌ ಕರೆನ್ಸಿಗಳ ವಹಿವಾಟಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವಿಧಿಸಿದ್ದ ನಿಷೇಧವನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿತು. ಆರ್‌ಬಿಐ 2018ರ ಏಪ್ರಿಲ್‌ 6ರಂದು ಹೊರಡಿಸಿದ್ದ ಸುತ್ತೋಲೆಯನ್ನು ನ್ಯಾಯಮೂರ್ತಿ ಆರ್.ಎಫ್‌.ನಾರಿಮನ್‌ ನೇತೃತ್ವದ ನ್ಯಾಯಪೀಠವು ರದ್ದುಪಡಿಸಿತು. ಡಿಜಿಟಲ್‌ ಕರೆನ್ಸಿಗಳ ಬಗ್ಗೆ ಕೇಂದ್ರ ಸರ್ಕಾರ ರಚಿಸಿದ್ದ ಹಲವಾರು ಸಮಿತಿಗಳು ಅನೇಕ ಸಲಹೆಗಳನ್ನು ಮುಂದಿಟ್ಟಿವೆ. ಎರಡು ಕರಡು ಮಸೂದೆಗಳನ್ನು ಸಿದ್ಧಪಡಿಸಿದ್ದರೂ ಸರ್ಕಾರ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಬ್ಲಾಕ್‌ಚೇನ್‌ ತಂತ್ರಜ್ಞಾನ ಸ್ವೀಕಾರಾರ್ಹವಾಗಿರುವ ಆರ್‌ಬಿಐಗೆ, ಕ್ರಿಪ್ಟೊ ಕರೆನ್ಸಿ ಬೇಕಾಗಿಲ್ಲ. ತರ್ಕದ ಆಧಾರದಲ್ಲಿ ವಿರೋಧಾಭಾಸದ ನಿಲುವು ತಳೆದಿದೆ. ಹೀಗಾಗಿ ಈ ನಿಷೇಧ ನಿರ್ಧಾರವು ಸೂಕ್ತ ಎನಿಸುವುದಿಲ್ಲ ಎಂದು ಪೀಠ ಹೇಳಿತ್ತು. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ವಿ.ರಾಮ ಸುಬ್ರಮಣಿಯನ್‌ ಈ ನ್ಯಾಯಪೀಠದಲ್ಲಿದ್ದರು.

Published On - 8:02 am, Wed, 30 December 20