ಲಖನೌ: ಇಷ್ಟು ದಿನ ಜಿಲ್ಲೆಗಳು, ಸ್ಥಳಗಳ ಹೆಸರು ಬದಲಿಸುತ್ತಿದ್ದ ಉತ್ತರ ಪ್ರದೇಶ ಸರ್ಕಾರ (Uttar Pradesh Government) ಇದೀಗ 9 ಅತಿಥಿಗೃಹಗಳಿಗೆ (Guest Houses) ಮರುನಾಮಕರಣ ಮಾಡಿದೆ. ಲಖನೌ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಗಳಲ್ಲಿ ಇರುವ ಯುಪಿ ಸರ್ಕಾರಕ್ಕೆ ಸೇರಿದ ಅತಿಥಿಗೃಹಗಳ ಹೆಸರು ಬದಲಿಸಿದ್ದು, ಅವಕ್ಕೆಲ್ಲ ಇದೀಗ ಹಿಂದೂ ನದಿಗಳು ಮತ್ತು ಹಿಂದು ಧಾರ್ಮಿಕ ಪ್ರದೇಶಗಳ ಹೆಸರನ್ನು ಇಡಲಾಗಿದೆ.
ದೆಹಲಿಯಲ್ಲಿರುವ ಯುಪಿ ಭವನಕ್ಕೆ ಉತ್ತರ ಪ್ರದೇಶ ಭವನ ಸಂಗಮ್ ಎಂದು ಹೆಸರಿಡಲಾಗಿದ್ದು, ಯುಪಿ ಸದನಕ್ಕೆ ತ್ರಿವೇಣಿ ಎಂದು ನಾಮಕರಣವಾಗಿದೆ. ಲಖನೌದ ಮಹಾತ್ಮ ಗಾಂಧಿ ಮಾರ್ಗದಲ್ಲಿರುವ ವಿವಿಐಪಿ ಗೆಸ್ಟ್ಹೌಸ್ಗೆ ಸಾಕೇತ್ ವಿವಿಐಪಿ ಗೆಸ್ಟ್ ಹೌಸ್ ಎಂಬ ಹೆಸರಿಡಲಾಗಿದೆ. ದಲಿಬಾಗ್ ವಿಐಪಿ ಅತಿಥಿಗೃಹಕ್ಕೆ ಯಮುನಾ, ವಿಕ್ರಮಾದಿತ್ಯ ಮಾರ್ಗದಲ್ಲಿರುವ ಅತಿಥಿಗೃಹಕ್ಕೆ ಗೋಮತಿ ಮತ್ತು ಮೀರಾಬಾಯಿ ಮಾರ್ಗದಲ್ಲಿರುವ ಸರ್ಕಾರಿ ಗೆಸ್ಟ್ಹೌಸ್ಗೆ ಸರಯೂ, ಬಟ್ಲರ್ ಪ್ಯಾಲೇಸ್ ಕಾಲನಿಯಲ್ಲಿರುವ ಗೆಸ್ಟ್ಹೌಸ್ಗೆ ನೈಮಿಶಾರಣ್ಯ ಎಂದು ಹೆಸರಿಡಲಾಗಿದೆ ಎಂದು ಸರ್ಕಾರಿ ಕಚೇರಿ ತಿಳಿಸಿದೆ. ಮುಂಬೈನಲ್ಲಿ ಇರುವ ಉತ್ತರಪ್ರದೇಶ ಸರ್ಕಾರಕ್ಕೆ ಸೇರಿದ ಅತಿಥಿ ಗೃಹವನ್ನು ಇನ್ನು ವೃಂದಾವನ ಎಂದು ಕರೆಯಲಾಗುವುದು, ಹಾಗೇ ಕೋಲ್ಕತ್ತದಲ್ಲಿರುವ ಯುಪಿ ಸರ್ಕಾರಿ ಗೆಸ್ಟ್ಹೌಸ್ನ್ನು ಗಂಗಾ ಎಂದು ಹೆಸರಿಸಲಾಗುವುದು ಎಂದೂ ಹೇಳಲಾಗಿದೆ.
ಹೆಸರು ಬದಲಾವಣೆ ಪ್ರಕ್ರಿಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಬರುವ ದಿನಗಳಲ್ಲಿ ಉತ್ತರ ಪ್ರದೇಶದ ಸುಮಾರು 12 ಜಿಲ್ಲೆಗಳು, ಪಟ್ಟಣಗಳ ಮರುನಾಮಕರಣ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ನೇತೃತ್ವದಲ್ಲಿ ಅಲ್ಲಿನ ಸಚಿವರು, ಶಾಸಕರೆಲ್ಲ ಸೇರಿ ಯೋಜನೆ ರೂಪಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಂಭಾಲ್ಗೆ ಪ್ರಥ್ವಿರಾಜ್ ನಗರ ಅಥವಾ ಕಲ್ಕಿ ನಗರ ಎಂದು ನಾಮಕರಣ ಮಾಡಬೇಕು ಎಂದು ಯುಪಿ ಪ್ರೌಢಶಿಕ್ಷಣ ಸಚಿವ ಗುಲಾಬ್ ದೇವಿ ಇಂಗಿತ ವ್ಯಕ್ತಪಡಿಸಿದ್ದಾರೆ. ದೇವಬಂದ್ ಕ್ಷೇತ್ರಕ್ಕೆ ದೇವವೃಂದ ಎಂದು ಹೆಸರಿಡಬೇಕು ಎಂದು ಅಲ್ಲಿನ ಬಿಜೆಪಿ ಶಾಸಕ ಬ್ರಿಜೇಶ್ ಸಿಂಗ್ ಪ್ರಸ್ತಾವನೆ ಇಟ್ಟಿದ್ದಾರೆ. ಇನ್ನು ಫಿರೋಜಾಬಾದ್ ಜಿಲ್ಲೆಯನ್ನು ಚಂದ್ರನಗರ ಎಂದು ಬದಲಿಸಬೇಕು ಎಂಬ ನಿರ್ಣಯವನ್ನು ಫಿರೋಜಾಬಾದ್ ಜಿಲ್ಲಾ ಪಂಚಾಯತ್ ಈಗಾಗಲೇ ಅಂಗೀಕರಿಸಿದೆ.
ಇದನ್ನೂ ಓದಿ: ‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ