‘ಸಿಜೆಪಿ ಚಳವಳಿಯನ್ನು ದುರ್ಬಲಗೊಳಿಸಿದ್ದೀರಿ’; ರಾಹುಲ್ ಗಾಂಧಿ ವಿರುದ್ಧ ಅಸ್ಸಾಂನ ಮಾಜಿ ಮಿತ್ರಪಕ್ಷದ ವಾಗ್ದಾಳಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರ್ಯವೈಖರಿ ಮತ್ತು ಪ್ರತಿಭಟನಾ ರಾಜಕಾರಣದ ಕುರಿತು ಅವರ ಮಾಜಿ ಮಿತ್ರಪಕ್ಷದ ನಾಯಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗಂಭೀರ ಎಚ್ಚರಿಕೆ ನೀಡಿದ್ದಾರೆ. "ನೀವು ಸಿಜೆಪಿ ಚಳವಳಿಯನ್ನು ದುರ್ಬಲಗೊಳಿಸಿದ್ದೀರಿ ಮತ್ತು ಬೀದಿ ಹೋರಾಟಗಳಲ್ಲಿ ಒಡಕು ಮೂಡಿಸಿದ್ದೀರಿ" ಎಂದು ಆರೋಪಿಸಿರುವ ಮಾಜಿ ಮಿತ್ರಪಕ್ಷದ ಹೇಳಿಕೆಯು ರಾಷ್ಟ್ರೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ಈ ಗಂಭೀರ ಆರೋಪ ಮಾಡಿದ್ದಾರೆ.

‘ಸಿಜೆಪಿ ಚಳವಳಿಯನ್ನು ದುರ್ಬಲಗೊಳಿಸಿದ್ದೀರಿ’; ರಾಹುಲ್ ಗಾಂಧಿ ವಿರುದ್ಧ ಅಸ್ಸಾಂನ ಮಾಜಿ ಮಿತ್ರಪಕ್ಷದ ವಾಗ್ದಾಳಿ
ರಾಹುಲ್ ಗಾಂಧಿ
Image Credit source: PTI

Updated on: Nov 17, 2026 | 9:07 PM

ನವದೆಹಲಿ, ನವೆಂಬರ್ 17: ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡ 2 ತಿಂಗಳ ನಂತರ, ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ಸರಣಿ ಪತ್ರಗಳ ಮೂಲಕ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳು ಮತ್ತು ನೈಜ ಜನಪರ ಚಳವಳಿಗಳನ್ನೇ ಕಾಂಗ್ರೆಸ್ ತನ್ನ ಪ್ರಮುಖ ಶತ್ರುಗಳಂತೆ ಪರಿಗಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ಕಾಂಗ್ರೆಸ್ ಪಕ್ಷವು ಮತ್ತೊಂದು ಪರ್ಯಾಯ ಪ್ರತಿಭಟನೆ ಆಯೋಜಿಸುವ ಮೂಲಕ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನಡೆಸುತ್ತಿದ್ದ ಹೋರಾಟವನ್ನು ದುರ್ಬಲಗೊಳಿಸಿದೆ ಎಂದು ಗೊಗೊಯ್ ದೂರಿದ್ದಾರೆ.

“ಬೀದಿ ಹೋರಾಟಗಳನ್ನು ವಿಭಜಿಸುವ ಮೂಲಕ ಮತ್ತು ನೈಜ ಜನಬಂಡಾಯದೊಂದಿಗೆ ಪೈಪೋಟಿ ನಡೆಸುವ ಮೂಲಕ, ನಿಮ್ಮ ಪಕ್ಷವು ಸಿಜೆಪಿ ಚಳವಳಿಯನ್ನು ದುರ್ಬಲಗೊಳಿಸಿತು, ಬಿಜೆಪಿ ಸರ್ಕಾರಕ್ಕೆ ಅದನ್ನು ಹತ್ತಿಕ್ಕಲು ಅವಕಾಶ ಮಾಡಿಕೊಟ್ಟಿತು ಮತ್ತು ನಿರ್ಣಾಯಕ ಹೋರಾಟಕ್ಕಾಗಿ ದೇಶಕ್ಕಿದ್ದ ಅತ್ಯುತ್ತಮ ಅವಕಾಶವನ್ನು ವ್ಯರ್ಥಮಾಡಿತು” ಎಂದು ಗೊಗೊಯ್ ಪತ್ರದಲ್ಲಿ ಬರೆದಿದ್ದಾರೆ.

Loading...

 

ರಾಜಕೀಯ ಹೋರಾಟಗಾರ ಯೋಗೇಂದ್ರ ಯಾದವ್ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ಗೊಗೊಯ್ ಅವರು, ಸಿಜೆಪಿ ಹೋರಾಟವನ್ನು ಕಾಂಗ್ರೆಸ್ ನಿಭಾಯಿಸಿದ ರೀತಿ ಮತ್ತು ಪ್ರಾದೇಶಿಕ ಮಿತ್ರಪಕ್ಷಗಳನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಆಕೆ ಈಗ ನನ್ನ ಸ್ನೇಹಿತೆ’, ಗೆಳತಿಯ ಬಗ್ಗೆ ಪ್ರಶ್ನಿಸಿದಾಗ ರಾಹುಲ್ ಗಾಂಧಿ ಕೊಟ್ಟ ಉತ್ತರ ವೈರಲ್

“ಬಿಜೆಪಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳು ಮತ್ತು ನೈಜ ಜನಪರ ಚಳವಳಿಗಳನ್ನು ಕಾಂಗ್ರೆಸ್ ತನ್ನ ಪ್ರಮುಖ ಶತ್ರುಗಳಂತೆ ನೋಡುತ್ತದೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಿಜೆಪಿಯನ್ನು ತನ್ನ ಸೈದ್ಧಾಂತಿಕ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಂಡರೂ, ಅದು ಪ್ರಾದೇಶಿಕ ಮಿತ್ರಪಕ್ಷಗಳು ಮತ್ತು ಸ್ವತಂತ್ರ ತಳಮಟ್ಟದ ಚಳವಳಿಗಳನ್ನು ನಿಷ್ಕ್ರಿಯಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತದೆ” ಎಂದು ಅವರು ಆರೋಪಿಸಿದ್ದಾರೆ.

ಅಸ್ಸಾಂ ಮೈತ್ರಿ ಕಡಿತವಾಗಿದ್ದೇಕೆ?:

ಸೆಪ್ಟೆಂಬರ್ 3ರಂದು ಅಸ್ಸಾಂ ಕಾಂಗ್ರೆಸ್ ಘಟಕವು “ಮೈತ್ರಿ ಧರ್ಮದ ಉಲ್ಲಂಘನೆ” ಎಂಬ ಕಾರಣ ನೀಡಿ ರೈಜೋರ್ ದಳದೊಂದಿಗಿನ ಎಲ್ಲಾ ರಾಜಕೀಯ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿತ್ತು. ಪ್ರಾದೇಶಿಕ ಪಕ್ಷದ ನಾಯಕತ್ವವು ಕಾಂಗ್ರೆಸ್‌ಗೆ ಮಸಿ ಬಳಿಯುತ್ತಿದೆ ಮತ್ತು ಇತರ ಮಿತ್ರಪಕ್ಷಗಳ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಏಪ್ರಿಲ್‌ನಲ್ಲಿ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಗೆ ಸುಮಾರು 3 ವಾರಗಳ ಮೊದಲು ಉಭಯ ಪಕ್ಷಗಳು ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದವು. 126 ಸದಸ್ಯ ಬಲದ ವಿಧಾನಸಭೆಯಲ್ಲಿ ರೈಜೋರ್ ದಳ ಸ್ಪರ್ಧಿಸಿದ್ದ 13 ಸ್ಥಾನಗಳ ಪೈಕಿ ಧಿಂಗ್ ಮತ್ತು ಶಿವಸಾಗರ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.

ಇದನ್ನೂ ಓದಿ: ‘ಅಪ್ಪನ ತೊಡೆ ಮೇಲೆ ಅಮ್ಮ ಕೂರುತ್ತಿದ್ದರು’ ಹೇಳಿಕೆ ವಿವಾದಕ್ಕೆ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ (ಎಸ್​ಐಆರ್​) ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟ ನಡೆಸಿದ ರ‍್ಯಾಲಿಯನ್ನು ಗೊಗೊಯ್ ತಮ್ಮ ಪತ್ರದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಏಕೈಕ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದರಲ್ಲೇ ಕಾಂಗ್ರೆಸ್ ಮುಳುಗಿದೆ ಎಂದು ಆರೋಪಿಸಿರುವ ಗೊಗೊಯ್, “ನಾಗರಿಕರು ಕಾಂಗ್ರೆಸ್ ಅನ್ನು ವಿಶಾಲ ವಿರೋಧ ಪಕ್ಷಗಳ ಮೈತ್ರಿಕೂಟದೊಳಗಿನ ಸಮಾನ ಪಾಲುದಾರನಾಗಿ ಮಾತ್ರ ಸ್ವೀಕರಿಸುತ್ತಾರೆಯೇ ಹೊರತು, ಸರ್ವಾಧಿಕಾರಿಯಾಗಿ ಅಲ್ಲ” ಎಂದು ಯಾದವ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us