ನಿರುದ್ಯೋಗದಿಂದ ಯುವಕರಿಗೆ ವಧುವೇ ಸಿಗುತ್ತಿಲ್ಲ; ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ

| Updated By: ಸುಷ್ಮಾ ಚಕ್ರೆ

Updated on: Jan 05, 2023 | 8:50 AM

ಕೈಗಾರಿಕೆಗಳು ಮಹಾರಾಷ್ಟ್ರದಿಂದ ಹೊರಗೆ ಹೋಗುತ್ತಿವೆ. ಹೊಸ ಉದ್ಯಮಗಳನ್ನು ಸ್ಥಾಪಿಸಲು ಯಾವುದೇ ಅವಕಾಶಗಳನ್ನು ನೀಡುತ್ತಿಲ್ಲ. ಇದು ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

ನಿರುದ್ಯೋಗದಿಂದ ಯುವಕರಿಗೆ ವಧುವೇ ಸಿಗುತ್ತಿಲ್ಲ; ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ
ಶರದ್ ಪವಾರ್
Image Credit source: tv9
Follow us on

ಪುಣೆ: ಭಾರತದಲ್ಲಿ ನಿರುದ್ಯೋಗದ (Unemployment) ಸಮಸ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar), ಮದುವೆಯ ವಯಸ್ಸಿನ ಯುವಕರಿಗೆ ನಿರುದ್ಯೋಗದಿಂದಾಗಿ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ. ನಿರುದ್ಯೋಗದಿಂದ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಟೀಕಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಎನ್‌ಸಿಪಿಯ ಜನ ಜಾಗರ್ ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶರದ್ ಪವಾರ್, ಬೇಕೆಂದೇ ಸಮುದಾಯಗಳ ನಡುವೆ ಬಿರುಕು ಮೂಡಿಸಲಾಗುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗದಂತಹ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶರದ್ ಪವಾರ್ ನಮ್ಮ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಕೆಲವರಿಗೆ ರಾತ್ರಿ ನಿದ್ರೆ ಬರಲ್ಲ; ಏಕನಾಥ್ ಶಿಂಧೆ ಲೇವಡಿ

ನಮ್ಮ ರೈತರು ಉತ್ಪಾದನೆಯನ್ನು ಹೆಚ್ಚಿಸಿರುವುದರಿಂದ ದೇಶದಲ್ಲಿ ಹಸಿವಿನ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಆದರೆ, ಅಧಿಕಾರದಲ್ಲಿರುವ ಜನರು ರೈತರಿಗೆ ಸರಿಯಾದ ಸಂಭಾವನೆ ನೀಡಲು ಸಿದ್ಧರಿಲ್ಲ. ಅದರ ಬದಲಿಗೆ ಅವರು ಮಧ್ಯವರ್ತಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದ್ದಾರೆ ಎಂದು ಶರದ್ ಪವಾರ್ ಹೇಳಿದ್ದಾರೆ.

ಇಂದಿನ ಯುವಕರು ವಿದ್ಯಾವಂತರಾಗಿದ್ದು, ಉದ್ಯೋಗಕ್ಕಾಗಿ ಬೇಡಿಕೆ ಇಡುವ ಹಕ್ಕು ಅವರಿಗಿದೆ. ಕೈಗಾರಿಕೆಗಳು ಮಹಾರಾಷ್ಟ್ರದಿಂದ ಹೊರಗೆ ಹೋಗುತ್ತಿವೆ. ಅಸ್ತಿತ್ವದಲ್ಲಿರುವ ಕೈಗಾರಿಕೆಗಳಿಗೆ ಯಾವುದೇ ಉತ್ತೇಜನವನ್ನು ನೀಡಲಾಗುತ್ತಿಲ್ಲ. ಹೊಸ ಉದ್ಯಮಗಳನ್ನು ಸ್ಥಾಪಿಸಲು ಯಾವುದೇ ಅವಕಾಶಗಳನ್ನು ನೀಡುತ್ತಿಲ್ಲ. ಇದು ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಹಣದುಬ್ಬರ ಮತ್ತು ನಿರುದ್ಯೋಗ ಯಾಕೆ ಹೆಚ್ಚಿದೆ ಎಂಬುದಕ್ಕೆ ನರೇಂದ್ರ ಮೋದಿ ಸರ್ಕಾರ ಉತ್ತರಿಸಬೇಕು: ರಾಹುಲ್ ಗಾಂಧಿ

ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನೀತಿಗಳನ್ನು ಅಳವಡಿಸಿಕೊಳ್ಳುವ ಬದಲು ಸಮುದಾಯಗಳು ಮತ್ತು ಧರ್ಮಗಳ ನಡುವೆ ಒಡಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಎರಡು ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಬೇಕೆಂದೇ ಕೆಲವು ಸಮಸ್ಯೆಯನ್ನು ರಚಿಸಲಾಗಿದೆ. ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ, ಅದನ್ನು ಮುಚ್ಚಿಹಾಕಲೆಂದೇ ಅವರು ಈ ರೀತಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ