ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಝಿಕಾ ವೈರಸ್ (Zika Virus) ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಝಿಕಾ ವೈರಸ್ ಹರಡುತ್ತಿರುವುದಕ್ಕೆ ಕಾರಣಗಳು, ನಿಯಂತ್ರಣಾ ಕ್ರಮಗಳ ಬಗ್ಗೆ ಅವರು ಚರ್ಚಿಸಿದ್ದಾರೆ. ಶನಿವಾರ ಕಾನ್ಪುರದಲ್ಲಿ 13 ಹೊಸ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿಗೆ ಒಟ್ಟು ಪ್ರಕರಣಗಳ ಸಂಖ್ಯೆ 79ಕ್ಕೆ ಏರಿದೆ.
ನವೆಂಬರ್ 6ರವರೆಗೆ ಒಟ್ಟು 79 ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸುತ್ತಿದೆ. ಝಿಕಾ ಸೋಂಕಿಗೆ ಒಳಗಾದವರ ಮನೆಗೆ ಆರೋಗ್ಯ ಇಲಾಖೆಯ ಆರ್ಆರ್ಟಿ (ಕ್ಷಿಪ್ರ ಪ್ರತಿಕ್ರಿಯೆ ತಂಡ) ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಕಾನ್ಪುರ ಜಿಲ್ಲಾಧಿಕಾರಿ ವಿಶಾಖ್ ಜಿ ತಿಳಿಸಿದ್ದಾರೆ.
ಕಾನ್ಪುರದಲ್ಲಿ ಝಿಕಾ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಇದರ ಗಂಭೀರತೆಯನ್ನು ಪರಿಗಣಿಸಿ ವಿಶೇಷ ಎಚ್ಚರಿಕೆ ತೆಗೆದುಕೊಳ್ಳಲು ನಿರ್ಧಾರ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಝಿಕಾ ಸೋಂಕಿಗೆ ಒಳಗಾದ ಪ್ರತಿಯೊಬ್ಬ ರೋಗಿಯ ಆರೋಗ್ಯವನ್ನೂ ತುಂಬ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಭೆಯಲ್ಲಿ ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚುವುದರಿಂದ ಈ ಝಿಕಾ ಸೋಂಕು ತಗುಲುತ್ತದೆ. ಜ್ವರ, ಮೈಕೈನೋವು, ದದ್ದು, ಸ್ನಾಯು-ಕೀಲು ನೋವುಗಳು, ಅಸ್ವಸ್ಥತೆ, ತಲೆನೋವು ಇದರ ಸಾಮಾನ್ಯ ಲಕ್ಷಣಗಳು. ಆಗಸ್ಟ್ನಲ್ಲಿ ಮಹಾರಾಷ್ಟ್ರದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಅದಕ್ಕೂ ಮೊದಲು ಕೇರಳದಲ್ಲಿ ಹಲವರಿಗೆ ಝಿಕಾ ಸೋಂಕು ಕಾಣಿಸಿಕೊಂಡಿತ್ತು.
ಇದನ್ನೂ ಓದಿ: ಪಾಲಿಕೆಯ ಹಗ್ಗಜಗ್ಗಾಟಕ್ಕೆ ಬ್ರೇಕ್: ಕಲಬುರಗಿ ಪಾಲಿಕೆ ಮೇಯರ್ ಆಯ್ಕೆಗೆ ದಿನಾಂಕ ನಿಗದಿ