ಪಾಲಿಕೆಯ ಹಗ್ಗಜಗ್ಗಾಟಕ್ಕೆ ಬ್ರೇಕ್: ಕಲಬುರಗಿ ಪಾಲಿಕೆ ಮೇಯರ್ ಆಯ್ಕೆಗೆ ದಿನಾಂಕ ನಿಗದಿ
ಕಲಬುರಗಿ ಪಾಲಿಕೆ ಚುನಾವಣೆಗೆ ನಡೆದ ಮತದಾನದ ಮತ ಎಣಿಕೆ, ಕಳೆದ ಸೆಪ್ಟೆಂಬರ್ ಆರರಂದೇ ನಡೆದಿತ್ತು. ಆದ್ರೆ ಪಾಲಿಕೆ ಸದಸ್ಯರು ಆಯ್ಕೆಯಾದ ವಾರದಲ್ಲಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಿಗದಿಯಾಗುತ್ತದೆ ಅಂತ ಎಲ್ಲರು ಕೂಡಾ ಅಂದುಕೊಂಡಿದ್ದರು. ಆದರೆ ಅನೇಕ ಹಗ್ಗಜಗ್ಗಾಟದಿಂದಾಗಿ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆ ದಿನಾಂಕವನ್ನು ಪ್ರಕಟಿಸಿರಲಿಲ್ಲ.
ಕಲಬುರಗಿ: ಕಲಬುರಗಿ ಮಹಾಗನರ ಪಾಲಿಕೆಯ ಹಗ್ಗಜಗ್ಗಾಟಕ್ಕೆ ಬ್ರೇಕ್ ಬೀಳುವ ದಿನಗಳು ಸಮೀಪಿಸಿವೆ. ತೀರ್ವ ಕುತೂಹಲ ಮೂಡಿಸಿದ್ದ ಕಲಬುರಗಿ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಇದೀಗ ಪಾಲಿಕೆಯ ಗದ್ದುಗೆ ಹಿಡಿಯೋರು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಯಾಕಂದರೆ ಯಾವುದೇ ಪಕ್ಷಕ್ಕೂ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೇ ಇರೋದರಿಂದ ಪಾಲಿಕೆ ಚುಕ್ಕಾಣಿ, ಕೈ, ಕಮಲ, ದಳಪತಿಗಳು ಮತ್ತೆ ಹೊಸ ರೀತಿಯ ಲೆಕ್ಕಾಚಾರ ಪ್ರಾರಂಭಿಸಿದ್ದಾರೆ.
ಮೇಯರ್, ಉಪ ಮೇಯರ್ ಆಯ್ಕೆಗೆ ದಿನಾಂಕ್ ಪಿಕ್ಸ್ ಕಲಬುರಗಿ ಪಾಲಿಕೆ ಚುನಾವಣೆಗೆ ನಡೆದ ಮತದಾನದ ಮತ ಎಣಿಕೆ, ಕಳೆದ ಸೆಪ್ಟೆಂಬರ್ 6ರಂದೇ ನಡೆದಿತ್ತು. ಆದ್ರೆ ಪಾಲಿಕೆ ಸದಸ್ಯರು ಆಯ್ಕೆಯಾದ ವಾರದಲ್ಲಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಿಗದಿಯಾಗುತ್ತದೆ ಅಂತ ಎಲ್ಲರು ಕೂಡಾ ಅಂದುಕೊಂಡಿದ್ದರು. ಆದರೆ ಅನೇಕ ಹಗ್ಗಜಗ್ಗಾಟದಿಂದಾಗಿ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆ ದಿನಾಂಕವನ್ನು ಪ್ರಕಟಿಸಿರಲಿಲ್ಲ. ಆದರೆ ಇದೀಗ ಕಲಬುರಗಿ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಗೆ ದಿನಾಂಕ ಫಿಕ್ಸ್ ಆಗಿದೆ. ಹೌದು ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿರುವ ಡಾ. ಎನ್ ವಿ ಪ್ರಸಾದ್, ನವೆಂಬರ್ 20 ರಂದು ಮಧ್ಯಾಹ್ನ 12.30 ಕ್ಕೆ ಕಲಬುರಗಿ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಗೆ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಕಲಬುರಗಿ ನಗರದ ಟೌನ್ ಹಾಲ್ ನಲ್ಲಿ ಆಯ್ಕೆ ಪ್ರಕ್ರಿಯೇ ನಡೆಯಲಿದೆ.
ಮೇಯರ್, ಉಪ ಮೇಯರ್ ಮೀಸಲಾತಿ ನಿಗದಿ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪ ಮೇಯರ್ ಸ್ಥಾನ, ಹಿಂದುಳಿದ ವರ್ಗಕ್ಕೆ ನಿಗದಿ ಮಾಡಲಾಗಿದೆ. ಹೀಗಾಗಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿಯಿಂದ ಅನೇಕರು ತೆರೆ ಮರೆಯ ಕಸರತ್ತು ಪ್ರಾರಂಭಿಸಿದ್ದಾರೆ.
ಇನ್ನು ಈ ಬಗ್ಗೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೇದಾರಲಿಂಗಯ್ಯ ಹಿರಮೇಠ ಮಾತನಾಡಿದ್ದು, ಪಾಲಿಕೆಯಲ್ಲಿ ಯಾರಿಗೆ ಬೆಂಬಲಿಸಬೇಕು ಅನ್ನೋ ನಿರ್ಧಾರವನ್ನು ಕುಮಾರಸ್ವಾಮಿ ಅವರು ಕೈಗೊಳ್ಳುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಗೆ ಬೆಂಬಲಿಸಬೇಕಾ, ಅಥವಾ, ತಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಕೇಳಬೇಕಾ ಅನ್ನೋದನ್ನು ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರು ಹೇಳಿದಂತೆ ನಡೆಯುತ್ತೇವೆ. ತಮ್ಮ ಪಕ್ಷದ ನಾಲ್ವರು ಸದಸ್ಯರು, ಒಗ್ಗಟ್ಟಾಗಿದ್ದು, ಕುಮಾರಸ್ವಾಮಿ ಅವರು ಹೇಳಿದಂತೆ ನಡೆಯುತ್ತಾರೆ ಎಂದರು.
ತೀರ್ವ ಕುತೂಹಲ ಮೂಡಿಸಿದ ಮೇಯರ್ ಸ್ಥಾನ ಕಲಬುರಗಿ ಪಾಲಿಕೆಯ ಮೇಯರ್, ಉಪ ಮೇಯರ್, ಸ್ಥಾನಕ್ಕೆ ಚುನಾವಣೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ, ಯಾರಿಗೆ ಮೇಯರ್ ಅನ್ನೋದು ತೀರ್ವ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದರೆ ಕಲಬುರಗಿ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲಾ. ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್ ಗಳ ಪೈಕಿ, ಬಿಜೆಪಿ 23 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ 27 ವಾರ್ಡ್ ಗಳಲ್ಲಿ ಗೆದ್ದಿದೆ. ಜೆಡಿಎಸ್ನ ನಾಲ್ವರು ಸದಸ್ಯರು ಆಯ್ಕೆಯಾಗಿದ್ದಾರೆ. ಓರ್ವ ಪಕ್ಷೇತರ ಅಭ್ಯರ್ಥಿ ಕೂಡಾ ಗೆದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿ ಈಗಾಗಲೇ ಬಿಜೆಪಿ ಸೇರಿದ್ದರಿಂದ ಬಿಜೆಪಿ ಬಳಿ ತನ್ನ 23 ಸದಸ್ಯರು ಓರ್ವ ಪಕ್ಷೇತರ ಅಭ್ಯರ್ಥಿ, ಶಾಸಕರು, ಸಂಸದ, ಮತ್ತು ವಿಧಾನ ಪರಿಷತ್ ಸದಸ್ಯರ ಮತದಿಂದ 29 ಕ್ಕೆ ತಲುಪಿದೆ. ಇತ್ತ ಕಾಂಗ್ರೆಸ್ ಬಳಿ ಕೂಡಾ 27 ಪಾಲಿಕೆ ಸದಸ್ಯರ ಜೊತೆ, ಓರ್ವ ರಾಜ್ಯಸಭಾ ಸದಸ್ಯ, ಓರ್ವ ಶಾಸಕಿಯ ಮತ ಸೇರಿದಂತೆ 29 ಮತಗಳಿವೆ. ಆದ್ರೆ ಪಾಲಿಕೆಯ ಚುಕ್ಕಾಣಿ ಹಿಡಿಯಬೇಕಾದರೆ ಮ್ಯಾಜಿಕ್ ಸಂಖ್ಯೆ 32 ಮತಗಳು ಬೇಕು. ಆದರೆ ಯಾವುದೇ ಪಕ್ಷದ ಬಳಿ ಮ್ಯಾಜಿಕ್ ಸಂಖ್ಯೆ ತಲುಪುವಷ್ಟು ಮತಗಳು ಇಲ್ಲದೇ ಇರುವುದರಿಂದ ಯಾರು ಪಾಲಿಕೆಯ ಚುಕ್ಕಾಣಿ ಹಿಡಿಯುತ್ತಾರೆ ಅನ್ನೋ ತೀರ್ವ ಕುತೂಹಲ ಹೆಚ್ಚಾಗಿದೆ.
ತೀರ್ವ ಕುತೂಹಲ ಮೂಡಿಸಿರೋ ಜೆಡಿಎಸ್ ನಡೆ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ, ಜೆಡಿಎಸ್ ಬೆಂಬಲ ಅವಶ್ಯಕ. ಆದರೆ ಇಲ್ಲಿವರಗೆ ದಳಪತಿಗಳು ತಮ್ಮ ಬೆಂಬಲ ಯಾರಿಗೆ ಅನ್ನೋ ಗುಟ್ಟು ಬಿಟ್ಟು ಕೊಟ್ಟಿಲ್ಲಾ. ಪಾಲಿಕೆಯ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ನವರು ಮಾಜಿ ಪ್ರಧಾನಿ ದೇವೇಗೌಡರನ್ನು ಸಂಪರ್ಕಿಸಿ ತಮಗೆ ಬೆಂಬಲ ನೀಡಬೇಕು ಅಂತ ಮನವಿ ಮಾಡಿದ್ದರೆ. ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು, ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಆದರೆ ಕುಮಾರಸ್ವಾಮಿ ಮತ್ತು ದೇವೇಗೌಡರು ಮಾತ್ರ, ಯಾರಿಗೆ ತಮ್ಮ ಬೆಂಬಲ ಅನ್ನೋದನ್ನು ಹೇಳಿರಲಿಲ್ಲಾ. ಮೇಯರ್ ಆಯ್ಕೆಗೆ ಚುನಾವಣೆ ನಿಗದಿ ಮಾಡಲಿ ಆ ಮೇಲೆ ತಮ್ಮ ನಿರ್ಧಾರ ಅಂತ ಹೇಳಿದ್ದರು. ಜೊತೆಗೆ ನಾವು ಬೇರೆ ಪಕ್ಷಕ್ಕೆ ಬೆಂಬಲ ಕೊಡೋದಿಲ್ಲಾ. ಬದಲಾಗಿ ನಮ್ಮ ಪಕ್ಷದವರೇ ಮೇಯರ್ ಆಗಲಿಕ್ಕೆ, ಬಿಜೆಪಿ, ಕಾಂಗ್ರೆಸ್ ನವರು ಬೆಂಬಲ ನೀಡಲಿ ಅನ್ನೋ ದಾಳವನ್ನು ಕೂಡಾ ಉರಳಿಸಿದ್ದರು. ಆದರೆ ಇದೀಗ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ದಳಪತಿಗಳು ಯಾರಿಗೆ ಜೈ ಅಂತಾರೆ ಅನ್ನೋ ಕೂತಾಹಲ ಹೆಚ್ಚಾಗಿದೆ.
ಕಲಬುರಗಿ ಪಾಲಿಕೆಯಲ್ಲಿ ಕಳೆದ ಬಾರಿ ಕೂಡಾ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ಈ ಬಾರಿ ಕೂಡಾ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಜೆಡಿಎಸ್ ತಮ್ಮ ಪಕ್ಷವನ್ನು ಬೆಂಬಲಿಸುವ ವಿಸ್ವಾಸವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ವಿಶ್ವಾಸ ಹೊರ ಹಾಕಿದ್ದಾರೆ.
ಮೇಯರ್ ಹುದ್ದೆಗೆ ಬಿಜೆಪಿ ಮತ್ತು ಕಾಂಗ್ರೆಸ್ ತಂತ್ರ ಕಲಬುರಗಿ ಪಾಲಿಕೆಯ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹತ್ತಾರು ರೀತಿಯ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರೋದರಿಂದ ಜೆಡಿಎಸ್ ನವರು ತಮಗೆ ಬೆಂಬಲ ನೀಡ್ತಾರೆ ಅನ್ನೋ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಇತ್ತ ಜ್ಯಾತ್ಯಾತೀತ ತತ್ವದ ಆಧಾರದ ಮೇಲೆ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ತಮಗೆ ಬೆಂಬಲ ನೀಡುತ್ತದೆ ಅನ್ನೋ ವಿಶ್ವಾಸದಲ್ಲಿ ಕೈ ನಾಯಕರು ಇದ್ದಾರೆ. ಮತ್ತೊಂದಡೆ ಜೆಡಿಎಸ್ ಬೆಂಬಲ ಪಡೆಯಲು ಎರಡು ಪಕ್ಷದ ನಾಯಕರು ಹತ್ತಾರು ರೀತಿಯ ಕಸರತ್ತು ಪ್ರಾರಂಭಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಕಲಬುರಗಿ ನಗರದ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿ ಪಾಲಿಕೆಯ ಚುಕ್ಕಾಣಿ ಹಿಡಿದರೆ ಉತ್ತಮ. ಇದೇ ಹಿನ್ನೆಲೆಯಲ್ಲಿ ಜೆಡಿಎಸ್ ಕೂಡಾ ತಮಗೆ ಬೆಂಬಲಿಸುತ್ತದೆ ಅನ್ನೋ ವಿಸ್ವಾಸವಿದೆ. ಪಾಲಿಕೆಯ ಚುಕ್ಕಾಣಿ ಬಿಜೆಪಿಯೇ ಹಿಡಿಯಲಿದೆ ಎಂದು ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಲೆಕ್ಕಾಚಾರಗಳೆಲ್ಲವನ್ನು ನೋಡುತ್ತಿರುವ ದಳಪತಿಗಳು ಸದ್ಯ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಯಾರಿಗೆ ಜೈ ಅನ್ನಬೇಕು ಅನ್ನೋದನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಬಿಟ್ಟಿದ್ದರಿಂದ, ಕುಮಾರಸ್ವಾಮಿ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದು ತೀರ್ವ ಕುತೂಹಲ ಮೂಡಿದೆ.
ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ
ಇದನ್ನೂ ಓದಿ: ಕಲಬುರಗಿ ಜಿಲ್ಲೆಯ ವಿವಿಧೆಡೆ ನಡೆದ ದುರ್ಘಟನೆಯಲ್ಲಿ ಮೂವರು ಮಕ್ಕಳು ಸೇರಿ ಐವರು ಸಾವು