ಅನಿಲ್ ದೇಶ್ಮುಖ್ ನ.12ರವರೆಗೆ ಇ.ಡಿ.ಕಸ್ಟಡಿಗೆ; ಮಾಜಿ ಸಚಿವನಿಗೆ ಶುರುವಾಗಲಿದೆ ಸಿಬಿಐ ಸಂಕಷ್ಟ !
ನವೆಂಬರ್ 12ರವರೆಗೂ ಇ.ಡಿ.ಅಧಿಕಾರಿಗಳು ಅನಿಲ್ ದೇಶ್ಮುಖ್ರನ್ನು ವಿಚಾರಣೆ ನಡೆಸಬಹುದು ಎಂದು ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ದೆಹಲಿ: ಅಕ್ರಮ ಹಣವರ್ಗಾವಣೆ ಪ್ರಕರಣದಡಿ ಈಗಾಗಲೇ ಇ.ಡಿ.ಯಿಂದ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh)ರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಸಿಬಿಐ ಕೂಡ ಮನವಿ ಮಾಡಿದೆ. ಮೊನ್ನೆ ಅನಿಲ್ ದೇಶ್ಮುಖ್ರನ್ನು ಬಂಧಿಸಿದ್ದ ಇ.ಡಿ.ಅಧಿಕಾರಿಗಳು ಅವರನ್ನು ಮುಂಬೈ ಕೋರ್ಟ್ಗೆ ಹಾಜರುಪಡಿಸಿದ್ದರು. ಹಾಗೇ, ಇನ್ನೂ 9 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿದ್ದ ಕೋರ್ಟ್ ಅನಿಲ್ ದೇಶ್ಮುಖ್ರನ್ನು ಜೈಲಿಗೆ ಕಳಿಸಿತ್ತು.
ಇನ್ನು ತಮ್ಮ ಮನವಿಯನ್ನು ಪುರಸ್ಕರಿಸದ ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ಇ.ಡಿ.ಅಧಿಕಾರಿಗಳು ಕೂಡ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನವೆಂಬರ್ 12ರವರೆಗೂ ಇ.ಡಿ.ಅಧಿಕಾರಿಗಳು ಅನಿಲ್ ದೇಶ್ಮುಖ್ರನ್ನು ವಿಚಾರಣೆ ನಡೆಸಬಹುದು ಎಂದೂ ಹೇಳಿದೆ. ಇನ್ನು ಅನಿಲ್ ದೇಶ್ಮುಖ್ ಅವರನ್ನು ಇ.ಡಿ.ಅಧಿಕಾರಿಗಳು ವಿಚಾರಣೆ ಮಾಡಿ ಮುಗಿಸುತ್ತಿದ್ದಂತೆ ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂದರೆ ಅನಿಲ್ ದೇಶ್ಮುಖ್ರನ್ನು ಕಸ್ಟಡಿಗೆ ಕೊಡುವಂತೆ ಸಿಬಿಐ ಅಧಿಕಾರಿಗಳು ಕೋರ್ಟ್ಗೆ ಮನವಿ ಸಲ್ಲಿಸಲಿದ್ದಾರೆ. ನ್ಯಾಯಾಲಯ ಅನುಮತಿ ನೀಡಿದರೆ, ದೇಶಮುಖ್ ವಿರುದ್ಧ ಇರುವ ಭ್ರಷ್ಟಾಚಾರ ಆರೋಪ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ನಡೆಸಿದ್ದಾರೆ ಎನ್ನಲಾದ ಅಕ್ರಮದ ಬಗ್ಗೆ ಸಿಬಿಐ ಅವರನ್ನು ಪ್ರಶ್ನಿಸಲಿದೆ.
ಅನಿಲ್ ದೇಶ್ಮುಖ್ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪ ಮಾಡಿದ್ದಾರೆ. ಈ ಹಿಂದಿನ ಪೊಲೀಸ್ ಅಧಿಕಾರಿ ಸಚಿನ್ ವಾಜ್ರನ್ನು ಬಳಸಿಕೊಂಡು ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್ಗಳ ಮೂಲಕ 100 ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದರು ಎಂದು ಪರಮ್ ಬೀರ್ ಸಿಂಗ್ ಪತ್ರ ಬರೆದು ಉದ್ಧವ್ ಠಾಕ್ರೆಗೆ ತಿಳಿಸಿದ್ದರು. ಅದಾದ ಮೇಲೆ ಅನಿಲ್ ದೇಶ್ಮುಖ್ ಮೇಲಿನ ಆರೋಪಗಳೆಲ್ಲ ಮುನ್ನೆಲೆಗೆ ಬಂದು, ಇ.ಡಿ. ಮತ್ತು ಸಿಬಿಐ ಎರಡೂ ತನಿಖಾ ದಳಗಳೂ ಪ್ರಕರಣ ದಾಖಲು ಮಾಡಿವೆ. ಅನಿಲ್ ದೇಶ್ಮುಖ್ ವಿರುದ್ಧ ಮಾಡಲಾದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ನಡೆಸಲಾದ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸುವಂತೆ ಮಾರ್ಚ್ನಲ್ಲಿಯೇ ಬಾಂಬೆ ಹೈಕೋರ್ಟ್ ಸಿಬಿಐಗೆ ಸೂಚಿಸಿತ್ತು. ಇನ್ನು ಇ.ಡಿ. ವಿಚಾರಣೆಗೆ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು.
ಇದನ್ನೂ ಓದಿ: Puneeth Rajkumar: ನಮ್ಮ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು; ವಿಕ್ರಮ್ ರವಿಚಂದ್ರನ್ ಭಾವುಕ ಮಾತು