ದೆಹಲಿ: ಜೈಡಸ್ ಕ್ಯಾಡಿಲಾದ ಕೊವಿಡ್ 19 ಲಸಿಕೆ ಝೈಕೊವ್-ಡಿ (ZyCov-D) ಅಕ್ಟೋಬರ್ ಪ್ರಾರಂಭದಿಂದ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ZyCov-D 12ವರ್ಷ ಮೇಲ್ಪಟ್ಟವರಿಗೆ ನೀಡಲು ಅನುಮತಿ ಪಡೆದ ದೇಶದ ಮೊದಲ ಲಸಿಕೆಯಾಗಿದ್ದು ಸೆಪ್ಟೆಂಬರ್ನಲ್ಲಿಯೇ ಬಳಕೆಗೆ ಸಿಗಲಿದೆ ಎಂದು ಹೇಳಲಾಗಿತ್ತು. ಇದು ಮೂರು ಡೋಸ್ಗಳ, ಜಗತ್ತಿನ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದೆ. ಹಾಗೇ, ಈ ಲಸಿಕೆಯ ತುರ್ತು ಬಳಕೆಗೆ ಆಗಸ್ಟ್ 20ರಂದೇ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರ ಅನುಮೋದನೆಯನ್ನೂ ನೀಡಿದೆ. ಇದನ್ನು ಮೊದಲ ಡೋಸ್ ತೆಗೆದುಕೊಂಡ 28 ದಿನಗಳ ಬಳಿಕ ಇನ್ನೊಂದು ಡೋಸ್ ಮತ್ತು ಅದಾದ 28 ದಿನ ಅಂದರೆ ಮೊದಲ ಡೋಸ್ನಿಂದ 56 ದಿನಗಳಾದ ಬಳಿಕ ಮೂರನೇ ಡೋಸ್ ಪಡೆಯಬೇಕು.
ಈ ಜೈಡಸ್ ಕ್ಯಾಡಿಲಾ ಆ್ಯಂಟಿಬಾಡಿ ಕಾಕ್ಟೇಲ್ ನೀಡುವ ಮೂಲಕ ಶ್ವಾಸಕೋಶದಲ್ಲಿ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಸಾಧ್ಯವಿದೆ ಎನ್ನಲಾಗುತ್ತಿದ್ದು, ಪ್ರಾಣಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಸಂಶೋಧನಾಕಾರರು ಈ ಅಂಶವನ್ನು ಕಂಡುಕೊಂಡಿದ್ದಾರೆ. ಇದು ಎರಡು ಮೋನೋಕ್ಲೋನಲ್ ಪ್ರತಿಕಾಯಗಳ ಸಮ್ಮಿಶ್ರಣವಾಗಿದ್ದು ದೇಹದಲ್ಲಿನ ಪ್ರತಿಕಾಯಗಳನ್ನು ಸದೃಢಗೊಳಿಸಲು ಸದರಿ ಚಿಕಿತ್ಸೆ ಸಹಕಾರಿಯಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ.
ಇನ್ನು ಝೈಕೊವ್ -ಡಿ ಲಸಿಕೆ ಒಮ್ಮೆ ಬಳಕೆ ಶುರುವಾದರೆ 12ವರ್ಷ ಮೇಲ್ಪಟ್ಟ ಎಲ್ಲರೂ ತೆಗೆದುಕೊಳ್ಳಬಹುದಾಗಿದೆ. ಇಷ್ಟು ದಿನಗಳ ಕಾಲ ನೀಡಲಾಗುತ್ತಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಸೇರಿ ಎಲ್ಲವೂ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊಡಬಹುದಾದ ವ್ಯಾಕ್ಸಿನ್ಗಳು. ಮಕ್ಕಳಿಗೆ ಇನ್ನೂ ಯಾವುದೇ ಲಸಿಕೆಗಳೂ ಹೊರಬಂದಿಲ್ಲ. ಹೈದರಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಲಸಿಕೆ ಅಭಿವೃದ್ಧಿ ಪಡಿಸುವಾಗಲೇ 12 ವರ್ಷ ಮೇಲ್ಪಟ್ಟವರಿಗೆ ಎಂದೇ ಹೇಳಿತ್ತು. ಹಾಗೇ 12 ವರ್ಷ ಮೇಲ್ಪಟ್ಟವರ ಮೇಲೆ ಕೂಡ ಕ್ಲಿನಿಕಲ್ ಪ್ರಯೋಗ ನಡೆದಿದೆ. ಇದು ಕೊರೊನಾ ವಿರುದ್ಧ ಶೇ.66ರಷ್ಟು ಸುರಕ್ಷಿತ ಎಂದು ಕಂಪನಿ ತಿಳಿಸಿದೆ. ಅಂತೆಯೇ 12-18 ವಯಸ್ಸಿನವರಿಗೂ ಸುರಕ್ಷಿತ ಎನ್ನಲಾಗಿದೆ.
ಇದನ್ನೂ ಓದಿ: ಗುಜರಾತ್ನ ಮುಂದಿನ ಮುಖ್ಯಮಂತ್ರಿ ಯಾರು?-ರೇಸ್ನಲ್ಲಿದ್ದಾರೆ ಈ ಎಲ್ಲ ಪ್ರಮುಖ ನಾಯಕರು
ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್
(Zydus Cadila Covid 19 vaccine likely to be launched In October)
Published On - 9:49 pm, Sat, 11 September 21