ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್
ಸೋಮವಾರ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಕರೆದು ಕಲಬುರಗಿ ಪಾಲಿಕೆಯಲ್ಲಿ ಹೊಂದಾಣಿಕೆ ಕುರಿತು ನಿರ್ಧರಿಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರವಾಗಿ ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸುತ್ತೇವೆ. ಸಭೆಯಲ್ಲಿ ಯಾರಿಗೆ ಬೆಂಬಲ ನೀಡಬೇಕೆಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದಕ್ಕೂ ಮೊದಲು ಅವರನ್ನು ಕಂದಾಯ ಸಚಿವ ಆರ್. ಅಶೋಕ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗೆ ಚರ್ಚಿಸಿದ ನಂತರ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಬಗ್ಗೆ ಸಿದ್ದರಾಮಯ್ಯ ಮಾತಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೊಂದಾಣಿಕೆ ಬಗ್ಗೆ ಹೇಳಿರಬಹುದು. ಆದರೆ ಸಿದ್ದರಾಮಯ್ಯ ಹೇಳುವವರೆಗೆ ಅದು ಅಂತಿಮವಾಗದು ಎಂದು ಕೇತಗಾನಹಳ್ಳಿಯಲ್ಲಿ ತಿಳಿಸಿದ್ದಾರೆ.
ನಮ್ಮಲ್ಲಿ ಅಂತಹ ಯಾವುದೇ ರೀತಿ ಗೊಂದಲ ಇಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆಗೆ ನಮ್ಮ ಪಕ್ಷದ ಒಪ್ಪಿಗೆಯಿದೆ. ಮೈಸೂರು ಪಾಲಿಕೆ ವಿಚಾರವಾಗಿ ಕೂಡ ನಾನು ಮಾತನಾಡಿದ್ದೆ. ಇದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಹೊಂದಾಣಿಕೆಗೆ ನಾವು ಸಿದ್ಧರಿದ್ದೇವೆ. ಪಕ್ಷದ ವರಿಷ್ಠರು ಸೂಚಿಸಿದರೆ ದೇವೇಗೌಡರ ಜತೆ ಕೂಡ ಮಾತುಕತೆ ನಡೆಸುತ್ತೇನೆ ಎಂದು ಸಹ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸಚಿವ ಆರ್. ಅಶೋಕ್ ಜತೆಗೆ ವಿವಿಧ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದೇನೆ. ರೈತರ ಸಮಸ್ಯೆಗಳನ್ನು ಅವರಿಗೆ ವಿವರಿಸಿದ್ದೇನೆ. ಸೋಮವಾರದ ಸಭೆಯಲ್ಲಿ ಶಾಸಕರ ಜತೆ ಚರ್ಚಿಸಿ ನಿರ್ಧರಿಸುವುದಾಗಿ ಅವರಿಗೂ ತಿಳಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ವಿವರಿಸಿದ್ದಾರೆ.
ಇದನ್ನೂ ಓದಿ:
ಕಲಬುರಗಿ: ಜೆಡಿಎಸ್ ಮನವೊಲಿಸುವ ಜವಾಬ್ದಾರಿ ಸಿಎಂ ಬೊಮ್ಮಾಯಿ ಹೆಗಲಿಗೆ; ಪಾಲಿಕೆ ಕೈ ತಪ್ಪುವ ಆತಂಕದಲ್ಲಿ ಕಾಂಗ್ರೆಸ್
(Revenue Minister R Ashok says Siddaramaiah have to agree JDS and Congress friendship in Kalaburagi )