ಸಾಂದರ್ಭಿಕ ಚಿತ್ರ
ಐದು ರಾಜ್ಯಗಳಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಗುರುವಾರ ನಡೆದು, ಫಲಿತಾಂಶ ಬಂದಿದೆ. ಒಂದೆಡೆ ಆಮ್ ಆದ್ಮಿ ಪಕ್ಷಕ್ಕೆ ಪಂಜಾಬ್ನಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದ್ದರೆ, ಮತ್ತೊಂದೆಡೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ನಾಲ್ಕು ರಾಜ್ಯದ ಜನ ಅಧಿಕಾರದ ಚುಕ್ಕಾಣಿ ನೀಡಲು ಮುಂದಾಗಿದ್ದಾರೆ. ಇದು, ಹಲವಾರು ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ. ಪಶ್ಚಿಮ ಬಂಗಾಲದ ಚುನಾವಣೆ ಹೊರತು ಪಡಿಸಿ ಕೋವಿಡ್ ಬಂದ ನಂತರ ಮೊದಲ ಬಾರಿಗೆ, ಒಂದೇ ಬಾರಿ ಹಲವು ರಾಜ್ಯಗಳ ಚುನಾವಣೆ ನಡೆದದ್ದವು. ಅದರಲ್ಲಿಯೂ ಅತ್ಯಂತ ದೊಡ್ಡ ರಾಜ್ಯ ಉತ್ತರ ಪ್ರದೇಶ ಕೂಡ ಈ ಚುನಾವಣೆಯಲ್ಲಿ ಇತ್ತು. ಜನರ ಪ್ರತಿಕ್ರಿಯೆ ನೋಡಿದರೆ, ಕೋವಿಡ್ನಿಂದ ಆದ ಆವಾಂತರವನ್ನು ಮನ್ನಿಸಿ ಬಿಜೆಪಿಗೆ ಮತ್ತೆ ನಾಲ್ಕು ರಾಜ್ಯದಲ್ಲಿ ಅಧಿಕಾರ ನೀಡಲು ಮುಂದಾಗಿದ್ದಾರೆ ಎಂದರೆ ಇದು ಸಾಮಾನ್ಯ ಸಾಧನೆ ಅಲ್ಲ.
ಈ ಚುನಾವಣೆಯಲ್ಲಿ ಎಲ್ಲರ ಚಿತ್ತ ನೆಟ್ಟಿದ್ದಿದ್ದು ಉತ್ತರ ಪ್ರದೇಶದ ಮೇಲೆ. ಸಣ್ಣಸಣ್ಣ ಜಾತಿಗಳನ್ನು ಜೋಡಿಸಿಕೊಂಡು ಈ ಬಾರಿ ಅಧಿಕಾರಕ್ಕೆ ಬರುತ್ತೇನೆಂಬ ಛಲದಿಂದ ಮುನ್ನುಗ್ಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಗ್ಗರಿಸಿದ್ದಾರೆ. ಒಂದು ಬಾರಿ ಅಧಿಕಾರಕ್ಕೆ ಬಂದ ಪಕ್ಷ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದು ಬರಲು ಸಾಧ್ಯವಿಲ್ಲ ಎನ್ನುವ ಅಲಿಖಿತ ನಿಯಮವನ್ನು ಮುರಿದ ಬಿಜೆಪಿಯು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ದಲ್ಲಿ ಮತ್ತೆ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.
- ಪಶ್ಚಿಮ ಬಂಗಾಲದ ಚುನಾವಣೆ ನಂತರ, ವಿರೋಧ ಪಕ್ಷಗಳು ಚಿಗುರಿಕೊಂಡಿದ್ದವು. ಎಷ್ಟರ ಮಟ್ಟಿಗೆ ಅಂದರೆ, ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋದರೆ, ಅಲ್ಲಿ ಸ್ವಾಗತಿಸಲು, ಮೀಟೀಂಗ್ಗೆ ಬರದೇ ಇರಲು ನಿರ್ಧರಿಸಿ ಒಂದು ಹೊಸ ಸಂಪ್ರದಾಯವನ್ನು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಮಾಡಿದ್ದರು. ಬಿಜೆಪಿ ಕತೆ ಮುಗಿಯಿತು. ಇನ್ನೇನಿದ್ದರೂ ನಮ್ಮದೇ ಜಮಾನ ಅಂತ ಮುನ್ನುಗ್ಗಲು ತಯಾರಾಗಿದ್ದ ಈ ಪಕ್ಷಗಳಿಗೆ, ಐದು ರಾಜ್ಯಗಳ ಫಲಿತಾಂಶ ಶಾಕ್ ನೀಡಿದೆ. ಅದರಲ್ಲಿಯೂ 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ ಮತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದನ್ನು ನೋಡಿದರೆ, ವಿರೋಧ ಪಕ್ಷಗಳು ಸ್ವಲ್ಪ ಆತುರದಲ್ಲಿ ಅತಿಯಾಗಿಯೇ ಪ್ರತಿಕ್ರಿಯಿಸಿದವು ಎಂಬುದು ನಿಚ್ಚಳ.
- ಕಾಂಗ್ರೆಸ್ ಪಕ್ಷ ತನ್ನಲ್ಲಿದ್ದ ಕೊನೆಯ ಅಸ್ತ್ರ ಬಳಸಿದ್ದು ಈ ಚುನಾವಣೆಯಲ್ಲಿ. ಆ ಪಕ್ಷದ ಹೀನಾಯ ಸೋಲು ವಿಷಾದನೀಯ. ಎಲ್ಲರೂ ಅಂದುಕೊಂಡಿದ್ದೇನೆಂದರೆ, ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ಚುನಾವಣೆಗೆ ಇಳಿದರೆ, ಗೆಲವು ಕಟ್ಟಿಟ್ಟ ಬುತ್ತಿ. ಆದರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಭಾರಿ ಮುಖಭಂಗ ಆಗಿದೆ. ಈಗ G-23 ನಾಯಕರು ಹೇಳಿದಂತೆ ಕಾಂಗ್ರೆಸ್ ಏನು ಮಾಡುತ್ತದೆ, ನಾಯಕರನ್ನು ಬದಲಾಯಿಸುತ್ತದೇಯೇ? ಈ ಕುರಿತು ವಿಚಾರ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ.
- ಉತ್ತರ ಪ್ರದೇಶದಲ್ಲಿನ ಕೆಲವು ಕ್ಷೇತ್ರಗಳ ಫಲಿತಾಂಶಗಳನ್ನು ನೋಡಿದರೆ ಮೇಲ್ನೋಟಕ್ಕೆ ಕಾಣ ಸಿಗುವುದು ಒಂದಂಶ. ಸಮಾಜವಾದಿ ಪಕ್ಷದ ಸಾಂಪ್ರದಾಯಿಕ ಮುಸ್ಲಿಂ ಮತದಾರರು ಜಾಟ್ ಮತ್ತು ಇನ್ನಿತರೆ ಪಕ್ಷಗಳ ಅಭ್ಯರ್ಥಿಗಳ ಕೈ ಹಿಡಿದಂತೆ ಕಾಣುತ್ತಿಲ್ಲ. ಇದು ಅಖಿಲೇಶ್ ಯಾದವ್ಗಿಂತ ಜಾತಿಯಾಧಾರಿತ ಪಕ್ಷ ಕಟ್ಟಿ ಮೆರೆಯುತ್ತಿರುವ ಪುಡಿ ನಾಯಕರುಗಳಿಗೆ ಪಾಠವಾಗಿದೆ. ಈ ವಿಚಾರದ ಕುರಿತು ಆಳವಾಗಿ ಅಧ್ಯಯನ ಮಾಡಬೇಕಾಗಿದೆ. ಈ ವಿಚಾರ ನಿಜವಾದಲ್ಲಿ, 2024 ರ ಚುನಾವಣೆಗೆ ಈ ಪಕ್ಷಗಳು ಸಮಾಜವಾದಿ ಪಕ್ಷದ ಜೊತೆಗೆ ಯಾಕೆ ಮತ್ತು ಹೇಗೆ ನಿಲ್ಲುತ್ತಾರೆ ಎಂಬ ಅಂಶ ಮುಖ್ಯವಾಗುತ್ತದೆ.
- ಇನ್ನು ಉತ್ತರಾಖಂಡ್ ವಿಚಾರಕ್ಕೆ ಬಂದರೆ ಅಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಿಯೂ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಗೆ ಸಾಧ್ಯವಾಯಿತು. ಅಲ್ಲಿ ಜಾತಿ ಜೊತೆಗೆ ಇನ್ನು ಕೆಲವು ವಿಚಾರಗಳು ಕೆಲಸ ಮಾಡಿವೆ ಎಂಬುದು ದಿಟ. ಆಡಳಿತ ಪಕ್ಷ ಬಿಜೆಪಿಯಲ್ಲಿ ಒಳಜಗಳ ಇದ್ದಂತೆ ವಿರೋಧ ಪಕ್ಷ ಕಾಂಗ್ರೆಸ್ನಲ್ಲೂ ಒಳ ಜಗಳ ತೀವ್ರವಾಗಿತ್ತು. ಪಹಾಡಿ (Hill region) ಅಭಿವೃದ್ಧಿಯಲ್ಲಿ ಅತೀವ ಆಸಕ್ತಿ ತೋರಿದ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಪ್ರತಿಫಲ ಸಿಕ್ಕಿದೆ. ಚಾರಧಾಮ್ ರಸ್ತೆ, ಗುಡ್ಡಗಾಡು ಪ್ರದೇಶದಲ್ಲಿ ರೈಲು ಯೋಜನೆ, ಕೇದಾರನಾಥ್ ಪುನರುತ್ಥಾನ-ಹೀಗೆ ಕೆಲಸಗಳ ಜೊತೆಗೆ ಚುನಾವಣಾ ಸಮೀಕರಣವನ್ನು ಸರಿಯಾಗಿಯೇ ಮಾಡಿದ್ದರಿಂದ ಅಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ.
- ಉತ್ತರಾಖಂಡ್ನಲ್ಲಿ ಬಿಜೆಪಿ ಮಾಡಿದ ಪ್ರಯೋಗವನ್ನು ಪಂಜಾಬಿನಲ್ಲಿ ಕಾಂಗ್ರೆಸ್ ಮಾಡಿತ್ತು. ಓರ್ವ ದಲಿತ ನಾಯಕ ಚರಣ್ಜಿತ್ ಚನ್ನಿಗೆ ನೇತೃತ್ವ ನೀಡಿ ಕಾಂಗ್ರೆಸ್ ಬಹಳ ನಿರೀಕ್ಷೆ ಮಾಡಿತ್ತು. ಅದು ಹುಸಿಯಾಗಿದೆ. ಅಂದರೆ ಕಾಂಗ್ರೆಸ್ ಪಕ್ಷದಲ್ಲಿ ನಿಜವಾದ ನಾಯಕರು ಚುನಾವಣಾ ತಂತ್ರಗಾರಿಕೆ ಗೊತ್ತಿರುವವರು ಇಲ್ಲವೆಂದಾಯಿತು.
- ಈ ಉತ್ತರಾಖಂಡ್ನ ಫಲಿತಾಂಶ ಕರ್ನಾಟಕದ ರಾಜಕೀಯಕ್ಕೆ ಸ್ವಲ್ಪ ಹತ್ತಿರವಾಗಿದೆ. ಇಲ್ಲಿಯೂ ಬಿಜೆಪಿ ಅಷ್ಟೇನೂ ಸುಭದ್ರವಾಗಿರುವಂತೆ ಕಾಣುತ್ತಿಲ್ಲ. ಅಲ್ಲಿ ಪ್ರಬಲ ಠಾಕುರ್ ಜಾತಿಯ, ಪುಷ್ಕರ್ ಸಿಂಗ್ ಧಾಮಿ ಅವರನ್ನು ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಮಾಡಿ ಅದನ್ನು ಜೀರ್ಣಿಸಿಕೊಂಡಿದ್ದು ಬಿಜೆಪಿ. ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಅದೇ ರೀತಿಯ ಸ್ಥಿತಿ ಇದೆ. ಬಿ.ಎಸ್. ಯಡಿಯೂರಪ್ಪನವರನ್ನು ತೆಗೆದು ಅವರಿಗೆ ಹತ್ತಿರವಿರುವ ಮತ್ತು ಅವರದೇ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಬಿಜೆಪಿ ಒಂದು ಹೊಸ ಪ್ರಯೋಗ ನಡೆಸಿದೆ.
- ಇಲ್ಲಿ, ವಿರೋಧ ಪಕ್ಷ ಕಾಂಗ್ರೆಸ್ ಒಳಜಗಳದಿಂದ ತುಂಬಿದೆ. ನೈತಿಕ ವಿಚಾರ ಬಿಟ್ಟು ರಾಜಕೀಯ ದೃಷ್ಟಿಕೋನದಿಂದ ನೋಡಿದರೆ, ಕಾಂಗ್ರೆಸ್ ಪಕ್ಷವು, ಹಿಜಾಬ್ ಮತ್ತು ಹರ್ಷ ಕೊಲೆ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟು ಹಿನ್ನಡೆ ಸಾಧಿಸಿದೆ. ಅವರ ಮೇಕೆದಾಟು ಪಾದಯಾತ್ರೆ ಗಳಿಸಿದ್ದು ಶೂನ್ಯ ಸಂಪಾದನೆ.
- ಪ್ರಬಲ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ. ಚುನಾವಣೆಗೆ ಬೇಕಾದ ಜಾತಿ ಸಮೀಕರಣದಲ್ಲಿ ಜೊತೆಗೆ ಮುಂದಿನ ಒಂದು ವರ್ಷದಲ್ಲಿ ಭರಪೂರ ಜನೋಪಯೋಗಿ ಕೆಲಸ ಮಾಡಿ, ಉತ್ತರಾಖಂಡ್ ಮಾದರಿಯಲ್ಲಿ ಪುನಃ ಅಧಿಕಾರಕ್ಕೆ ಬರುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಎರಡು ಪ್ರಬಲ ಜಾತಿಯ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಜೋಡೆತ್ತುಗಳನ್ನು ಇಟ್ಟುಕೊಂಡು ಮುನ್ನುಗ್ಗುತ್ತಿದೆ. ಕರ್ನಾಟಕದ ಚುನಾವಣಾ ಇತಿಹಾಸ ನೋಡಿದರೆ ಈ ರೀತಿಯ ಪ್ರಯೋಗ ಯಶಸ್ಸು ಕಂಡಿದ್ದು ಕಡಿಮೆ. ಒಂದೆಡೆ, ಕುರುಬ ಕೋಮಿನ ಸಿದ್ಧರಾಮಯ್ಯ ಇನ್ನೊಂದೆಡೆ ಒಕ್ಕಲಿಗೆ ಜಾತಿಯ ಡಿ.ಕೆ. ಶಿವಕುಮಾರ್. ಮೇಲ್ನೋಟಕ್ಕೆ, ಇಬ್ಬರೂ ಭಾಯಿ-ಭಾಯಿ. ಆದರೆ ನಿಜದಲ್ಲಿ? ಈ ಎರಡು ಜಾತಿಯ ಮತದಾರರ ಮನೋಭೂಮಿಕೆಯನ್ನು ಅಧ್ಯಯನ ಮಾಡಿದರೆ ಅವರು ತಮ್ಮದಲ್ಲದ ಜಾತಿಯ ನಾಯಕನೊಬ್ಬ ಮುಖ್ಯಮಂತ್ರಿ ಆಗುತ್ತಾನೆ ಎಂಬ ಸಂಶಯ ಸ್ವಲ್ಪ ಮೂಡಿದರೂ ಆ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ತುಂಬಾ ಕಡಿಮೆ. ಈ ವಿಚಾರವನ್ನು ಬಿಜೆಪಿ ತನ್ನ ಚುನಾವಣೆ ತಂತ್ರಗಾರಿಕೆ ಅಳವಡಿಸಿಕೊಂಡರೆ ಕಾಂಗ್ರೆಸ್ಗೆ ಇನ್ನಷ್ಟು ಕಷ್ಟವಾಗುವ ಸಾಧ್ಯತೆ ಇದೆ.