“ಎಲ್ಲ ಮಹಿಳೆಯರಿಗೂ (Women) ಆಸ್ತಿಯಲ್ಲೇನೂ ಹಕ್ಕು ಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಇರುವವರು ಹಾಗೂ ಗ್ರಾಮೀಣ ಪ್ರದೇಶದವರ ಆಲೋಚನೆಯೇ ಬೇರೆ ಬೇರೆ ರೀತಿಯಲ್ಲಿದೆ. ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದೇವೆ, ವಂಶೋದ್ಧಾರಕರು ಅಂದರೆ ಗಂಡುಮಕ್ಕಳು ಅನ್ನೋ ಕಾರಣಕ್ಕೆ ಅವರಿಗಷ್ಟೇ ಆಸ್ತಿ ಬರೆಯಬೇಕು ಎಂದು ಚಿಂತಿಸುವವರು ಈಗಲೂ ಇದ್ದಾರೆ. ಆದರೆ ಈ ಹಿಂದಿನ ಸ್ಥಿತಿಗೆ ಹೋಲಿಸಿದಲ್ಲಿ ಸುಧಾರಣೆ ಕಂಡಿದೆ. ಉಯಿಲು ಬರೆಯುವಾಗ ಹೆಣ್ಣುಮಕ್ಕಳ ಹೆಸರಿಗೂ ಗಂಡು ಮಕ್ಕಳಂತೆಯೇ ಆಸ್ತಿ ಹಂಚಿಕೆ ಮಾಡಬೇಕು ಎಂಬ ಕಾನೂನಿನ ಬಗ್ಗೆ ಅರಿವು ಹೆಚ್ಚಾಗಿದೆ. ಸ್ವತಃ ಹೆಣ್ಣುಮಕ್ಕಳೇ ವಿದ್ಯಾಭ್ಯಾಸ ಮಾಡಿ, ಕಾಯ್ದೆ- ಕಾನೂನಿನ ಬಗ್ಗೆ ತಿಳಿದುಕೊಂಡಿದ್ದಾರೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ 1956ಕ್ಕೆ ತಿದ್ದುಪಡಿ ತರಲಾಗಿದ್ದು, ಅದರ ಅನ್ವಯ ಹೆಣ್ಣುಮಕ್ಕಳು ತಮ್ಮ ತವರು ಮನೆಯ ಆಸ್ತಿಗೆ ಸಮಾನ ಹಕ್ಕುದಾರರಾಗಿರುತ್ತಾರೆ. ಆದರೆ ಈಚೆಗೆ ಹಲವರು ಮದುವೆ ಸಮಯದಲ್ಲೇ ಹೆಣ್ಣುಮಕ್ಕಳಿಂದ ರಿಲೀಸ್ ಡೀಡ್ ಬರೆಸಿಕೊಳ್ಳುತ್ತಿದ್ದಾರೆ. ಅಂದರೆ ಸ್ವ-ಇಚ್ಛೆಯಿಂದ ತನಗೆ ಆ ಆಸ್ತಿ ಬೇಡ ಎಂಬರ್ಥ ಬರುತ್ತದೆ. ಇನ್ನೂ ಕೆಲವು ಹೆಣ್ಣುಮಕ್ಕಳಿಗೆ ತವರು ಮನೆಗೆ ಹೋಗಿಬರುವಷ್ಟು ಸಂಬಂಧ ಉಳಿಯಬೇಕು ಅಂದರೆ ಆಸ್ತಿಯನ್ನು ಕೇಳಬಾರದು ಎಂಬ ಅಳುಕು ಇರುತ್ತದೆ,” ಹೀಗೆ ವಕೀಲರಾದ ಅನು ಚೆಂಗಪ್ಪ ಮಹಿಳೆಯರ ಆಸ್ತಿ ಹಕ್ಕುಗಳನ್ನು ವಿವರಿಸುತ್ತಾ ಸಾಗಿದರು.
ಮಹಿಳಾ ದಿನಾಚರಣೆ ಅಂಗವಾಗಿ ಟಿವಿ9ಕನ್ನಡ ಡಿಜಿಟಲ್ನಿಂದ ಅನು ಚೆಂಗಪ್ಪ ಅವರನ್ನು ಮಾತನಾಡಿಸಲಾಯಿತು. ಮಾತು ಮುಂದುವರಿಸಿದ ಅವರು, ಹೆಣ್ಣುಮಕ್ಕಳಿಗೆ ತನ್ನ ಗಂಡನ ಮನೆಯಿಂದ ಜೀವನಾಂಶ ಮಾತ್ರ ದೊರೆಯುವ ಹಕ್ಕು ಕಾನೂನಿನಲ್ಲಿ ಇದೆ. ಆದರೆ ತನ್ನ ತವರು ಮನೆಯ ವಿಚಾರಕ್ಕೆ ಬಂದಲ್ಲಿ ಗಂಡುಮಕ್ಕಳಂತೆಯೇ ಆಸ್ತಿಗೆ ವಾರಸುದಾರರಾಗಿರುತ್ತಾರೆ. ಈ ವಿಚಾರಕ್ಕೆ ಬಂದರೆ ಹಲವು ಆಯಾಮಗಳಿವೆ. ಮಹಿಳೆಯ ಗಂಡನಿಗೆ ಆ ಆಸ್ತಿಯ ಬಗ್ಗೆ ಯಾವ ಧೋರಣೆ ಇದೆ ಎಂಬುದು ಗಣನೆಗೆ ಬರುತ್ತದೆ. ಎಷ್ಟೋ ಪ್ರಕರಣಗಳಲ್ಲಿ ಮಹಿಳೆಯನ್ನು ಮದುವೆ ಆದ ವ್ಯಕ್ತಿ ಆಕೆಯ ಮೇಲೆ ಒತ್ತಡವನ್ನು ತಂದು ಅಥವಾ ಆಕೆಗೆ ತಿಳಿವಳಿಕೆ ಹೇಳಿ, ಆಸ್ತಿಯನ್ನು ಪಡೆಯುವಂತೆ ಮಾಡುತ್ತಾರೆ. ಇನ್ನೂ ಕೆಲವು ಕಡೆ ಹೆಣ್ಣುಮಗಳಿಗೆ ತನ್ನ ಅಣ್ಣ- ತಮ್ಮಂದಿರಿಗೆ ರಿಲೀಸ್ ಡೀಡ್ ಮಾಡಿಕೊಟ್ಟು ಬಿಟ್ಟರೆ ಅದರಿಂದ ತವರು ಮನೆಯ ಸಂಬಂಧ ಕಳಚಿ ಹೋದಂತೆಯೇ ಎಂಬ ಮುಂಜಾಗ್ರತೆಯಿಂದ ಹಾಗೇ ಉಳಿಸಿಕೊಂಡು ಮುಂದುವರಿಯುವುದು ಸಹ ಉಂಟು ಎಂದರು.
ಇನ್ಷೂರೆನ್ಸ್, ಬ್ಯಾಂಕ್ ಖಾತೆ ಹೀಗೆ ಎಲ್ಲದರಲ್ಲೂ ಮಹಿಳೆಯ ಹೆಸರನ್ನು ಕಾಣಬಹುದು. ಆದರೆ ನಾಮಿನಿ ಯಾರು ಎಂಬುದನ್ನು ಗಮನಿಸಿ. ಈ ಮಾತನ್ನು ಬಹಳ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಇನ್ಷೂರೆನ್ಸ್, ಬ್ಯಾಂಕ್ನಲ್ಲಿನ ಹಣಕ್ಕಾಗಿ ಮಹಿಳೆಯರ ಮೇಲೆ ಹಲ್ಲೆ, ಹತ್ಯೆ ಪ್ರಯತ್ನ ಸೇರಿ ನಾನಾ ಬಗೆಯಲ್ಲಿ ಹಿಂದೆ ನೀಡುತ್ತಿರುವುದನ್ನು ನೋಡುತ್ತಿದ್ದೇವೆ. ಇದರ ಮಧ್ಯೆಯೂ ಸುಕನ್ಯಾ ಸಮೃದ್ಧಿ ಯೋಜನೆಯೂ ಸೇರಿದಂತೆ ಮತ್ತಿತರ ಯೋಜನೆಗಳಲ್ಲಿ ಅವರ ವಿದ್ಯಾಭ್ಯಾಸ, ಮದುವೆ, ಭವಿಷ್ಯಕ್ಕಾಗಿಯೇ ಹಣ ಉಳಿತಾಯ ಮಾಡುವ ತಂದೆ- ತಾಯಿ ಲಕ್ಷಲಕ್ಷ ಸಂಖ್ಯೆಯಲ್ಲಿ ಇದ್ದಾರೆ. ಆದರೆ ನಮ್ಮ ದೇಶದ ಜನಸಂಖ್ಯೆ ಹಾಗೂ ಮಹಿಳೆಯರಿಗೆ ಸಿಗಬೇಕಾದ ಪ್ರಾಮುಖ್ಯವನ್ನು ಒಟ್ಟಾರೆಯಾಗಿ ನೋಡಿದಾಗ ಇಷ್ಟು ಸಾಕಾಗಲ್ಲ ಎಂದೆನಿಸುವುದು ಸಹಜ ಎನ್ನುತ್ತಾರೆ ಅನು ಚೆಂಗಪ್ಪ.
ಆಸ್ತಿ ಎಂಬ ವಿಚಾರ ಬಂದಾಗ ಹಿಂದೂ, ಮುಸ್ಲಿಂ, ಕ್ರೈಸ್ತರು ಹೀಗೆ ಆಯಾ ಧರ್ಮಕ್ಕೆ ಬೇರೆ- ಬೇರೆ ಕಾನೂನು ಇದೆ. ಇತ್ತೀಚೆಗೆ ಬರುತ್ತಿರುವ ಸುಪ್ರೀಂ ಕೋರ್ಟ್ನ ಸಾಕಷ್ಟು ತೀರ್ಪುಗಳು ಹಿಂದೂ ಉತ್ತರಾಧಿಕಾರಿ ಕಾಯ್ದೆಗಳಿಗೆ ಸಂಬಂಧಿಸಿದ್ದು. ನಮ್ಮ ದೇಶದಲ್ಲಿ ಮಹಿಳೆಯರ ಪರವಾಗಿ ಇರುವಷ್ಟು ಕಾಯ್ದೆ- ಕಾನೂನುಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಆದರೆ ಸಮಸ್ಯೆ ಇರುವುದು ಅನುಷ್ಠಾನದಲ್ಲಿ. ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಹಾಗೂ ಒಂದೇ ಕಡೆಗೆ ಎಲ್ಲ ದೂರು- ದುಮ್ಮಾನಗಳನ್ನು ಬಗೆಹರಿಸುವಂಥ ವ್ಯವಸ್ಥೆ ಇರಬೇಕು. ಮಹಿಳಾ ಸಹಾಯವಾಣಿ ಅಂದರೆ ಅದರಲ್ಲೇ ಸಕಲವೂ ದೊರೆಯಬೇಕು. ಕಾನೂನು ನೆರವಿನಿಂದ ಮೊದಲುಗೊಂಡು ಎಲ್ಲವೂ ಸಿಗುವಂತಾಗಬೇಕು. ಮನೆಯಿಂದ ಆಚೆ ಬಂದು ಹೇಳಿಕೊಂಡು ಬಿಟ್ಟರೆ ಏನಾಗಿ ಬಿಡುತ್ತದೋ ಎಂಬ ಆತಂಕ ಮಹಿಳೆಯರಿಂದ ದೂರಾಗಬೇಕು ಎಂಬ ಅಭಿಪ್ರಾಯ ಅವರದು.
ಮಹಿಳೆಯರು ಅಂದರೆ ದೇವತೆ, ಆಕೆ ಎಲ್ಲ ರೀತಿಯಲ್ಲೂ ಪರ್ಫೆಕ್ಟ್ ಎಂಬ ಧೋರಣೆಯನ್ನು ಬಿಡಬೇಕು. ಅದೇ ರೀತಿ ಆಕೆ ದುರ್ಬಲಳು. ಎಲ್ಲ ರೀತಿಯ ಸಹಾಯ ಮಾಡಬೇಕು ಎಂದು ವಿಪರೀತ ಸಹಾನುಭೂತಿಯಿಂದ ನೋಡುವ ಅಗತ್ಯ ಕೂಡ ಇಲ್ಲ. ಇನ್ನು ಆಕೆಗೆ ಗೌರವ ನೀಡಿ, ಗೌರವ ಪಡೆಯಿರಿ ಎಂಬ ಮೂರು ಮಾತನ್ನು ಕೊನೆಯಲ್ಲಿ ಸೇರಿಸಿದರು.
ಇತ್ತೀಚಿನ ದಿನಗಳಲ್ಲಿ ಎಷ್ಟೋ ಬ್ಯಾಂಕ್ಗಳು ಮಹಿಳೆಯರಿಗೆ ಗೃಹ ಸಾಲ ನೀಡುವಾಗ ಬಡ್ಡಿ ದರದಲ್ಲಿ ವಿನಾಯಿತಿ ನೀಡುತ್ತಿವೆ. ವಿವಿಧ ಇನ್ಷೂರೆನ್ಸ್ ಪಾಲಿಸಿಗಳನ್ನು ಮಹಿಳೆಯರ ವಿದ್ಯಾಭ್ಯಾಸ, ಭವಿಷ್ಯ, ಮದುವೆ, ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ರೂಪಿಸಲಾಗುತ್ತದೆ. ಅಷ್ಟೇ ಏಕೆ, ಡಿಯಾಜಿಯೋ, ಆಕ್ಸೆಂಚರ್ ಸೇರಿದಂತೆ ಹಲವು ಕಂಪೆನಿಗಳಲ್ಲಿ ನೇಮಕಾತಿ ಮಾಡಿಕೊಳ್ಳುವಾಗಲೇ ಹೆಣ್ಣುಮಕ್ಕಳ ಸಂಖ್ಯೆಯು ಸಮಾನವಾಗಿ ಇರಬೇಕು ಎಂದು ಆದ್ಯತೆ ನೀಡಲಾಗುತ್ತಿದೆ. ಆದರೆ ಇಷ್ಟೆಲ್ಲ ಆದ ನಂತರವೂ ಮಹಿಳೆಯರ ಅಸಮಾನತೆ, ದೌರ್ಜನ್ಯದ ಬಗ್ಗೆ ಕೂಗು ಕೇಳಿಬರುತ್ತಲೇ ಇದೆ.
ಇದನ್ನೂ ಓದಿ: ‘ಮಹಿಳೆಯರ ಪ್ರಯತ್ನಕ್ಕೆ ಪುರುಷರ ಬೆಂಬಲ ಖಂಡಿತಾ ಇದೆ’; ನಿರ್ದೇಶಕಿ ಅಪೂರ್ವಾ ಅನುಭವದ ಮಾತು