ಅಳೆದೂ ತೂಗಿ ಬಿಜೆಪಿ ಹೈಕಮಾಂಡ್ ಕರ್ನಾಟಕಕ್ಕೆ ನೂತನ ಮುಖ್ಯಮಂತ್ರಿಗಳನ್ನಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಸೂಚಿಸಿ, ಅವರು ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಇದೀಗ ಕರ್ನಾಟಕ ರಾಜ್ಯದ ಪ್ರಜೆಗಳು ಯೋಚಿಸುತ್ತಿರುವುದು: ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ (CM Basavaraj Bommai Cabinet) ಯಾವ ಖಾತೆಗೆ ಯಾರು ನೇಮಕವಾಗಿ ನಮ್ಮನ್ನು ಸಲಹುತ್ತಾರೆಂದು. ಆದರೆ ಸ್ವತಃ ಮುಖ್ಯಮಂತ್ರಿಗಳು, ಅದಕ್ಕೂ ಮಿಗಿಲಾಗಿ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಸಚಿವ ಸಂಪುಟ ರಚಿಸುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಸಂಪುಟ ರಚನೆಯಾಗಿದೆ! ತಮಾಷೆಗಲ್ಲ, ವಾಟ್ಸ್ಆ್ಯಪ್ ಸ್ಟೇಟಸ್ಗಳಲ್ಲಿ, ಫೇಸ್ಬುಕ್ ಖಾತೆಗಳಲ್ಲಿ, ಫ್ಯಾನ್ ಫೇಜ್ಗಳಲ್ಲಿ ಕರ್ನಾಟಕ ಸಚಿವ ಸಂಪುಟ ರಚನೆಯಾಗಿ ಹೋಗಿದೆ! ಬಿಜೆಪಿ ಶಾಸಕರು ಮತ್ತು ಸಚಿವಾಕಾಂಕ್ಷಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕೆನಿಸಿದ ಖಾತೆಗಳನ್ನು ತಮ್ಮ ನಾಯಕರಿಗೆ ನೀಡುತ್ತಿದ್ದಾರೆ.
ಅತ್ತ ಬಿಜೆಪಿ ಹೈಕಮಾಂಡ್ಗೆ ಸರಿ ಎನಿಸುವಂತೆ ಸಚಿವ ಸಂಪುಟ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಪದೇಪದೆ ಪ್ರಯಾಣ ಮಾಡುತ್ತಿದ್ದಾರೆ. ಸಚಿವ ಸಂಪುಟ ಇಂದು ರಚನೆಯಾಗಲಿದೆ, ನಾಳೆ, ನಾಡಿದ್ದು ಎಂದು ಬಿಜೆಪಿ ಮೂಲಗಳು ಹೇಳುತ್ತಲೇ ಇವೆ. ಕಾರ್ಯಕರ್ತರು ತೆರೆದ ಕಣ್ಣಿಂದ ಕಾಯುತ್ತಲೇ ಇದ್ದಾರೆ. ಆದರೆ ಇತ್ತ ಬಿಜೆಪಿಯ ಸಚಿವಾಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಚಿವರಾಗಿಬಿಟ್ಟಿದ್ದಾರೆ.
ಉದಾಹರಣೆಗೆ: ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಭಿಮಾನಿಗಳ ಕೃಪಾಕಟಾಕ್ಷದಿಂದ ಈಗಾಗಲೇ ಕರ್ನಾಟಕದ ಶಿಕ್ಷಣ ಸಚಿವರಾಗಿ ನಿಯುಕ್ತಿಗೊಂಡಿದ್ದಾರೆ! ಇಂತಹ ವಿಡಿಯೋಗಳು, ವಾಟ್ಸ್ಆ್ಯಪ್ ಸ್ಟೇಟಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಫುಲವಾಗಿ ಹರಿದಾಡುತ್ತಿವೆ.
ಹಿಂದೆ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರ ಅಭಿಮಾನಿಗಳು ಸಹ ತಮ್ಮ ನಾಯಕನನ್ನು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಬಿಂಬಿಸಲು ಯತ್ನಿಸಿದ್ದರು. ‘ದೇಶಕ್ಕೆ ಮೋದಿ, ರಾಜ್ಯಕ್ಕೆ ಸವದಿ’ ಎಂದು ಉತ್ತಮ ಪ್ರಾಸ ಹೊಂದುವಂತೆಯೇ ಘೋಷವಾಕ್ಯ ರೂಪಿಸಿ ಹೈಕಮಾಡ್ವರೆಗೆ ತಲುಪಿಸುವ ಯತ್ನ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಆ ಯತ್ನ ವಿಫಲಾಯಿತು. ಬಿಜೆಪಿ ಹೈಕಮಾಂಡ್ವರೆಗೆ ತಲುವಂತೆ ಆ ಪೋಸ್ಟರ್ಗಳು ಶೇರ್ ಆಗಲೇ ಇಲ್ಲವೇನೋ, ಬಿಜೆಪಿ ಹೈಕಮಾಂಡ್ ಯಾವುದೇ ಒತ್ತಡ ಹಾಕದೇ ಇದ್ದ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಎಂ ಹುದ್ದೆಯನ್ನಿ ಬಿಜೆಪಿ ವರಿಷ್ಠರು ದಯಪಾಲಿಸಿದರು.
ಈಗಲೂ ಅಷ್ಟೇ, ಸಚಿವ ಸಂಪುಟದ ಅಂತಿಮ ಪಟ್ಟಿ ಕರ್ನಾಟಕಕ್ಕೆ ಬಂದಿಳಿಯುವ ಮುನ್ನವೇ ಸಚಿವಾಕಾಂಕ್ಷಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹಂಚಿಕೆ ಮಾಡಿದ್ದಾರೆ. ಅಂದಹಾಗೆ ಹೀಗೆ ಅಭಿಮಾನಿಗಳು ಆಸೆ, ಇಚ್ಛೆ ವ್ಯಕ್ತಪಡಿಸುವುದು ಇಂದೇ ಮೊದಲಲ್ಲ, ಇಂದೇ ಕೊನೆಯಲ್ಲ. ಹೈಕಮಾಂಡ್ಗಿಂತಲೂ ಮೊದಲೇ ಕಾರ್ಯಕರ್ತರು, ಅಭಿಮಾನಿಗಳು ಸಚಿವ ಸ್ಥಾನ ಘೋಷಣೆ, ಖಾತೆ ಹಂಚಿಕೆ ಮಾಡುವುದು ಒಂದರ್ಥದಲ್ಲಿ ನಿಜವಾದ ಪ್ರಜಾಪ್ರಭುತ್ವವೂ ಹೌದಲ್ಲವೇ!
ಇದನ್ನೂ ಓದಿ:
Opinion: ಬಸವರಾಜ ಬೊಮ್ಮಾಯಿ ಮೇಲೆ ರಬ್ಬರ್ ಸ್ಟಾಂಪ್ ಆರೋಪ, ಕಾಂಗ್ರೆಸ್ಗೆ ಮುಳುವಾಗಬಹುದೇ?
Opinion: ಮಾತು ಮನೆ ಕೆಡಿಸಿತ್ತು; ಸಿದ್ದು, ಕುಮಾರಸ್ವಾಮಿ ರಾಜಕೀಯ ದಡ್ಡತನ ತೋರಿಸಿದ್ದು ನಿಜ
(CM Basavaraj Bommai cabinet social media posts by Vijayapura MLA Basanagouda Patil Yatnal fans he appointed as Education Minister)
Published On - 7:48 pm, Tue, 3 August 21