Opinion: ಮಾತು ಮನೆ ಕೆಡಿಸಿತ್ತು; ಸಿದ್ದು, ಕುಮಾರಸ್ವಾಮಿ ರಾಜಕೀಯ ದಡ್ಡತನ ತೋರಿಸಿದ್ದು ನಿಜ

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಬಯ್ಯುವ ಭಾಗವಾಗಿ ಮತ್ತು ಒಳ ಒಪ್ಪಂದ ಇಲ್ಲ ಎಂಬುದನ್ನು ನಿರೂಪಿಸಲು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್​.ಡಿ. ಕುಮಾರಸ್ವಾಮಿ ಕೀಳುಮಟ್ಟದ ಟೀಕೆ ಮಾಡುವ ಪ್ರಯತ್ನ ಮಾಡಿದ್ದನ್ನು ಜನ ಒಪ್ಪಿಕೊಳ್ಳಲಾರರು.

Opinion: ಮಾತು ಮನೆ ಕೆಡಿಸಿತ್ತು; ಸಿದ್ದು, ಕುಮಾರಸ್ವಾಮಿ ರಾಜಕೀಯ ದಡ್ಡತನ ತೋರಿಸಿದ್ದು ನಿಜ
HD Kumaraswamy, Siddaramaiah and BS Yediyurappa
Follow us
ಡಾ. ಭಾಸ್ಕರ ಹೆಗಡೆ
| Updated By: Skanda

Updated on: Jul 06, 2021 | 9:09 AM

ವರ್ಷ, 2013. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಾಯಿಟರ್ಸ್​ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡುತ್ತಿದ್ದರು. 2002ರಲ್ಲಿ ಗುಜರಾತ್​ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ನಿಮಗೆ ಏನನ್ನಿಸುತ್ತೆ? ಇದು ರಾಯಿಟರ್ಸ್ ವರದಿಗಾರರ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರಿಸುತ್ತ ಮೋದಿ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರೂ, ಕಾರಿನ ಗಾಲಿಗೆ ಅಚಾನಕ್ ಆಗಿ ನಾಯಿ ಮರಿ ಸಿಕ್ಕಿಕೊಂಡರೆ ಯಾವ ರೀತಿ ನೋವಾಗುತ್ತೋ ಹಾಗೇ ನನಗೂ ನೋವಾಗುತ್ತೆ. ನಾನು ಮನುಷ್ಯ ಎಂದರು. ಆ ಮಾತು ನಮ್ಮ ದೇಶದಲ್ಲಿ ಮಾತ್ರ ಅಲ್ಲ, ವಿದೇಶದಲ್ಲಿ ಕೂಡ ವಿವಾದಕ್ಕೆ ಕಾರಣ ಆಗಿತ್ತು. ಮುಸ್ಲಿಂರನ್ನು ನಾಯಿಗೆ ಹೋಲಿಸಿದರು ಮೋದಿ. ಅವರಿಗೆ ಸ್ವಲ್ಪವೂ ಮಾನವೀಯತೆ ಇಲ್ಲ ಎಂದು ಹೇಳುತ್ತ ಮೋದಿಯವರನ್ನು ಹಿಗ್ಗಾಮುಗ್ಗಾ ಜಾಲಾಡಿದ್ದರು.

ಈಗ ನಮ್ಮ ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಇಂದು ನೀಡಿದ ಹೇಳಿಕೆಯನ್ನು ನೋಡೋಣ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೊರಗೆ ಬಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಕೆಆರ್​ಎಸ್ ಬಾಗಿಲಿಗೆ ಸುಮಲತಾರನ್ನ ಅಡ್ಡ ಮಲಗಿಸಬೇಕು ಎಂದು ಹೇಳಿದರು. ಆಮೇಲೆ ತಮ್ಮ ಮಾತು ಗೊಂದಲಕ್ಕೆ ಕಾರಣವಾಗಿದ್ದನ್ನು ಕಂಡು, ನಾನು ಹೇಳಿದ್ದರ ಅರ್ಥವೇನೆಂದರೆ, ಸುಮಲತಾ ಕೆಆರ್​ಎಸ್ ಡ್ಯಾಂನ್ನು ಕಾಯಲು ನಿಂತುಕೊಳ್ಳಲಿ ಎಂದು ತಿಪ್ಪೆ ಸಾರಿಸಲು ಪ್ರಯತ್ನಿಸಿದರು.

ಇನ್ನೊಂದೆಡೆ, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಘರ್ ಕಾ ಕುತ್ತಾ ಗಲೀ ಮೇ ಶೇರ್ ಹೈ (ಮನೆಯ ನಾಯಿ ನಮ್ಮನೆ ಇರುವ ಗಲ್ಲಿಯಲ್ಲಿ ಮಾತ್ರ ಹುಲಿ) ಎಂದು ಯಡಿಯೂರಪ್ಪನವರನ್ನು ಕಾಲೆಳೆದರು. ಕೇಂದ್ರ ಸರಕಾರದ ಎದುರು ಹೋಗಿ ನಮಗೆ ಬರಬೇಕಾದ ಬಾಕಿ ಹಣ ಕೇಳುವ ಧೈರ್ಯ ಯಡಿಯೂರಪ್ಪನವರಿಗೆ ಇಲ್ಲ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಆ ವಾಡಿಕೆಯ ಮಾತನ್ನು ಹೇಳಿದರು.

ಕುಮಾರಸ್ವಾಮಿ ವಿಚಾರವನ್ನು ಮೊದಲು ನೋಡೋಣ. 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಾರಂಭವಾದ ಸುಮಲತಾ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡ ಕುಟುಂಬದಲ್ಲಿ ಹುಟ್ಟಿದ ದ್ವೇಷ ಇನ್ನೂ ಆರಿಲ್ಲ. ಅವರ ಅಣ್ಣ, ಹೆಚ್.ಡಿ. ರೇವಣ್ಣ ಚುನಾವಣಾ ಸಮಯದಲ್ಲಿ ಒಂದು ಮಾತು ಹೇಳಿ ಇಡೀ ಚುನಾವಣಾ ಪ್ರಚಾರದ ಕಳೆಯನ್ನೇ ತೆಗೆದಿದ್ದರು: ಗಂಡನ್ನ ಕಳೆದುಕೊಂಡ ವಿಧವೆಗೆ ಚುನಾವಣೆ ಬೇಕಾ ಅಂತ ಕೇಳಿದ್ದರು. ಅದನ್ನು ಜನ ಇನ್ನೂ ಮರೆತಿಲ್ಲ. ಈಗ ತಮ್ಮ ಕುಮಾರಸ್ವಾಮಿ ನಾಲಿಗೆ ಹರಿಬಿಟ್ಟಿದ್ದಾರೆ. ಅವರ ಪ್ರಕಾರ ಈ ರೀತಿ ಹೇಳಿದ್ದು ಸರಿ. ತಮ್ಮ ಹೇಳಿಕೆಯಿಂದ ಯಾವುದೇ ಗೊಂದಲವಾಗಬಾರದು ಎಂಬ ಕಾರಣಕ್ಕೆ ಕುಮಾರಸ್ವಾಮಿ ನನ್ನ ಬಳಿ ಕೆಲವು ಆಡಿಯೋ ಇದೆ. ಚುನಾವಣೆ ಬಂದಾಗ ಬಿಡ್ತೀನಿ ಅಂತ ಹೇಳಿ ಹೋಗಿದ್ದಾರೆ. ಪ್ರಾಯಶಃ, ಮುಖ್ಯಮಂತ್ರಿ ಆಗಿದ್ದಾಗ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಮಾಡಿದ್ದಾರೆನ್ನಲಾದ ಫೋನ್ ಟ್ಯಾಪಿಂಗ್ ಮೂಲಕ ಸಿಕ್ಕ ಆಡಿಯೋ ಬಗ್ಗೆ, ಕುಮಾರಸ್ವಾಮಿ ಸೂಚ್ಯವಾಗಿ ಹೇಳಿ ಹೆದರಿಸಿಬಿಟ್ರಾ? ಕುಮಾರಸ್ವಾಮಿಯವರ ಇಂದಿನ ನಡವಳಿಕೆ ಎಂಬತ್ತರ ದಶಕದಲ್ಲಿ ಕಾಲೇಜುಗಳಲ್ಲಿ ನಡೆಯುತ್ತಿದ್ದ ರ್‍ಯಾಗಿಂಗ್​ಗೆ ಏನೂ ಕಡಿಮೆ ಇಲ್ಲ ಎಂಬುದನ್ನು ಅವರು ತಿಳಿದರೆ ಸಾಕು.

ಇನ್ನು ಸಿದ್ದರಾಮಯ್ಯ ಅವರ ಹೇಳಿಕೆಗೆ ಬರೋಣ. ಅಧಿಕಾರದಲ್ಲಿದ್ದಾಗ ಹಿಂದಿ ಹೇರಿಕೆ ವಿರುದ್ಧ ನರೇಂದ್ರ ಮೋದಿ ಸರಕಾರದ ವಿರುದ್ಧ ಸಮರ ಸಾರಿ ಪ್ರಗತಿಪರ ಚಿಂತಕರಿಂದ ಶಹಬ್ಬಾಸ್​ಗಿರಿ ಪಡೆದಿದ್ದ ಸಿದ್ದರಾಮಯ್ಯ ಅವರಿಗೆ ಪ್ರಾಯಶಃ ಪಕ್ಕದಲ್ಲಿ ಕಾಣುತ್ತಿರುವ ಚಾಮರಾಜಪೇಟೆ ಶಾಸಕ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವ ಸ್ವಲ್ಪ ಜಾಸ್ತಿಯೇ ಆದಂತಿದೆ. ಇಂಗ್ಲಿಷಿನಲ್ಲಿ slang ಅಂತ ಹೇಳುತ್ತಾರಲ್ಲ, ಅಂತಹ ಮಾತನ್ನು ಸಿದ್ದರಾಮಯ್ಯ ಬಳಸಿದ್ದಾರೆ. ಹಿಂದಿ ಬಾರದ ಸಿದ್ದರಾಮಯ್ಯ ಕನ್ನಡದ ಗಾದೆ ಬಳಸಬಹುದಿತ್ತು. ಅದು ಬಿಟ್ಟು ಹೇಳಿಕೊಟ್ಟ (?) ಮಾತನ್ನು ಉಪಯೋಗಿಸಿ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳಲು ಮುಂದಾದರಾ? ಅಂದು ನರೇಂದ್ರ ಮೋದಿ ಹೇಳಿದ್ದಕ್ಕೆ ದನಿ ಎತ್ತಿದ್ದ ಕಾಂಗ್ರೆಸ್ ಈಗ ಏನು ಹೇಳಬಹುದು? ಅಥವಾ ಯಡಿಯೂರಪ್ಪನವರ ಬಗ್ಗೆ ಇಂತದೇ ಭಾಷೆ ಬಳಸಬೇಕು ಎಂದು ಹೇಳಿ, ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸುತ್ತಾರಾ?

ಇನ್ನೇನಾದರೂ ಇದೆಯಾ? ರಾಜಕಾರಿಣಿ ನಮ್ಮ ನಿಮ್ಮಂಥಲ್ಲ. ಅದೇ ರೀತಿ ಮಾಜೀ ಮುಖ್ಯಮಂತ್ರಿಗಳೇನು ದಡ್ಡರಲ್ಲ. ಅವರಿಗೆ ರಾಜಕೀಯ ಚೆನ್ನಾಗಿ ಗೊತ್ತು. ಇಂದು ಯಾಕೆ ಪೇಚಿಗೆ ಸಿಲುಕುವ ಹೇಳಿಕೆ ನೀಡುತ್ತಿದ್ದಾರೆ? ಇನ್ನೊಂದು ಕಾರಣ ಇದ್ದರೂ ಇರಬಹುದು. ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಈ ಇಬ್ಬರೂ ನಾಯರ ಹೆಸರು ಹೇಳದೇ, ವಿರೋಧ ಪಕ್ಷದ ನಾಯಕರು ಯಡಿಯೂರಪ್ಪನವರ ರೋಲ್ಕಾಲ್​ನಲ್ಲಿದೆ ಎಂದು ಪ್ರತಿದಿನ ಹೇಳುತ್ತಿದ್ದಾರೆ. ಈ ಆರೋಪದಿಂದ ಮುಕ್ತರಾಗಲು ಇಬ್ಬರು ನಾಯಕರು ಬೇರೆ ಬೇರೆ ರೀತಿಯ ತಂತ್ರ ಅಳವಡಿಸಿಕೊಂಡಂತಿದೆ.

ತನ್ನ ಮತ್ತು ಮುಖ್ಯಮಂತ್ರಿಗಳ ನಡುವಿನ ಭೇಟಿಯ ಬಗ್ಗೆ, ಮಾಧ್ಯಮ ಇನ್ನೇನೋ ಕತೆ ಕಟ್ಟಬಹುದು ಎಂಬ ಲೆಕ್ಕಾಚಾರದ ಹಾಕಿ ಸುಮಲತಾ ಬಗ್ಗೆ ಹೇಳಿದರೇನೋ ಎಂಬ ಗುಮಾನಿ ಕಾಡುತ್ತಿದೆ? ಯೋಗಿಶ್ಬರ್ ಮತ್ತು ಯತ್ನಾಳ್ ಅವರ ಆರೋಪದಿಂದ ಮುಕ್ತರಾಗಲು, ಸಿದ್ದರಾಮಯ್ಯ ಹಾಲೀ ಮುಖ್ಯಮಂತ್ರಿಯನ್ನು ನಾಯಿಗೆ ಹೋಲಿಸಿದ್ರಾ? ಆಡಳಿತ ಪಕ್ಷದ ನಾಯಕರ ಆರೋಪದಿಂದ ಮುಕ್ತರಾಗುವ ತಂತ್ರದ ಭಾಗವಾಗಿ ಯಡಿಯೂರಪ್ಪನವರನ್ನು ಬಯ್ಯುವ ಯೋಜನೆಯನ್ನು ಈ ಇಬ್ಬರೂ ನಾಯಕರು ಹಾಕಿಕೊಂಡಿದ್ದರೆ ಅದು ತಪ್ಪು. ಪ್ರಾಯಶಃ ಜನ ಇದನ್ನು ಒಪ್ಪಿಕೊಳ್ಳಲಾರರು.

ಯಡಿಯೂರಪ್ಪನವರ ಬಗ್ಗೆ ಭ್ರಷ್ಠಾಚಾರದ ಮಾಹಿತಿ ಇದ್ದರೆ ಸಾಕ್ಷ್ಯಾಧಾರಗಳೊಂದಿಗೆ ಜನರ ಮುಂದಿಟ್ಟು, ತಾವು ಯಡಿಯೂರಪ್ಪನವರ ಕೃಪಾಕಟಾಕ್ಷದಲ್ಲಿ ಇಲ್ಲ ಎಂದು ಸಾಬೀತು ಪಡಿಸುವ ದಾರಿ ಈ ಇಬ್ಬರು ನಾಯಕರ ಮುಂದಿದೆ. ಅದರಿಂದ ಜನತೆಗೆ ಯಾರು ನಿಜ, ಯಾರು ಸುಳ್ಳು ಎಂಬುದು ಗೊತ್ತಾಗುತ್ತದೆ. ಆ ದಾರಿ ಬಿಟ್ಟು ಕಳ್ಳ ದಾರಿ ಮೂಲಕ ರಾಜಕೀಯ ದೊಂಬರಾಟಕ್ಕೆ ಇಳಿದರೆ ಜನ ಪಾಠ ಕಲಿಸುತ್ತಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ, ದೇವೇಗೌಡ ಕುಟುಂಬವನ್ನು ಅವಶ್ಯಕತೆಗಿಂತ ಜಾಸ್ತಿ ಬಯ್ಯಲು ಹೋಗಿ ಜನ ಪಾಠ ಕಲಿಸಿದ್ದನ್ನು ಈ ಇಬ್ಬರು ನಾಯಕರು ನೆನಪಿಸಿಕೊಂಡರೆ ಸಾಕು.

ಅತೀಯಾದ ಜಾತಿ ಪ್ರೇಮದಿಂದ ನಲುಗುತ್ತಿರುವ ಕರ್ನಾಟಕದಲ್ಲಿ, ಮುಂದಿನ ದಿನಗಳಲ್ಲಿ ಲಿಂಗಾಯತರು ಈ ಇಬ್ಬರೂ ನಾಯಕರನ್ನು ದ್ವೇಷಿಸಲು ಪ್ರಾಂಭಿಸಿದರೆ? ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೂಡ ತಮ್ಮ ಜಾತಿಯ ಮತ ಸೆಳೆಯಲು ಏನೆಲ್ಲ ತಂತ್ರ ಮಾಡುತ್ತಾರೋ ಅದೇ ರೀತಿಯ ತಂತ್ರವನ್ನು ಯಡಿಯೂರಪ್ಪ ಕೂಡ ಮಾಡಿದರೆ? ಅದು ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ತುಂಬಾ ಕಷ್ಟವಾಗಬಹುದು. ಆದ್ದರಿಂದ ರಾಜಕೀಯವಾಗಿ ಮತ್ತು ಮಾನವೀಯ ನೆಲೆಯಲ್ಲಿ ನಿಂತು ನೋಡಿದಾಗ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಂಥ ಹೇಳಿಕೆ ನೀಡುವ ಮೂಲಕ ತಮ್ಮ ದಡ್ಡತನವನ್ನು ಪ್ರದರ್ಶಿಸಿದ್ದಾರೆ ಎಂದಷ್ಟೇ ಹೇಳಬಹುದು.

ಇದನ್ನೂ ಓದಿ:  Opinion: ಪ್ರಾಮಾಣಿಕ ಪತ್ರಕರ್ತರನ್ನು ನೀವು ಕೊಲ್ಲಬೇಡಿ!

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

(Opinion on Siddaramaiah and HD Kumaraswamy criticising Sumalatha and BS Yediyurappa)

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ