Opinion: ಪ್ರಾಮಾಣಿಕ ಪತ್ರಕರ್ತರನ್ನು ನೀವು ಕೊಲ್ಲಬೇಡಿ!

‘ಮಂಗಳೂರ ಸಮಾಚಾರ’ದ ಮೊದಲ ಸಂಚಿಕೆ 1843ರ ಜುಲೈ 1 ರಂದು ಪ್ರಕಟವಾದ ದಿನವನ್ನು ಸ್ಮರಿಸಲು ಕರ್ನಾಟಕದಲ್ಲಿ ಜುಲೈ 1ನ್ನು ‘ಪತ್ರಿಕಾ ದಿನ’ವಾಗಿ ಆಚರಿಸಲ್ಪಡುತ್ತಿದೆ. ಈ ಸಂದರ್ಭದಲ್ಲಿ ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಎದ್ದಿರುವ ಗುಲ್ಲನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Opinion: ಪ್ರಾಮಾಣಿಕ ಪತ್ರಕರ್ತರನ್ನು ನೀವು ಕೊಲ್ಲಬೇಡಿ!
ಪ್ರಾತಿನಿಧಿಕ ಚಿತ್ರ
bhaskar hegde

| Edited By: guruganesh bhat

Jul 01, 2021 | 9:17 PM

‘ಮಂಗಳೂರ ಸಮಾಚಾರ’ದ ಮೊದಲ ಸಂಚಿಕೆ 1843ರ ಜುಲೈ 1 ರಂದು ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡ ಪತ್ರಿಕೆಯೊಂದರ ಮೊದಲ ಆವೃತ್ತಿ ಹೊರಬಂದ ದಿನವನ್ನು ಸ್ಮರಿಸಲು ಕರ್ನಾಟಕದಲ್ಲಿ ಜುಲೈ 1ನ್ನು ‘ಪತ್ರಿಕಾ ದಿನ’ವಾಗಿ ಆಚರಿಸಲ್ಪಡುತ್ತಿದೆ. ಹೆಸರಿನಲ್ಲಿ ಪತ್ರಿಕೆ ಇದ್ದರೂ, ಕರ್ನಾಟಕದಲ್ಲಿ ಮಾಧ್ಯಮ ಪ್ರತಿನಿಧಿಗಳು-ಟಿವಿಯಲ್ಲಿ ಕೆಲಸ ಮಾಡುವವರಿಂದ ಡಿಜಿಟಲ್ ಮಾಧ್ಯಮ ಪತ್ರಕರ್ತರೆಲ್ಲ ಈ ದಿನವನ್ನು ಆಚರಿಸಿದ್ದಾರೆ.

ಆದರೆ, ಸಾಮಾಜಿಕ ಜಾಲತಾಣದಲ್ಲಿ, ಪತ್ರಕರ್ತರಿಗೆ ಶುಭಾಶಯ ಹಂಚಿಕೊಂಡವರ ಜೊತೆಗೆ ತುಂಬಾ ಜನ ಪತ್ರಿಕೋದ್ಯಮದ ಚರಮಗೀತೆಯನ್ನು ಮತ್ತೊಮ್ಮೆ ಹಾಡಿದ್ದಾರೆ. ಇದೇನು ಹೊಸದಲ್ಲ. ಇಲ್ಲೊಂದು ವಿಶೇಷ ಇದೆ. ಬೇರೆ ದಿನ ನರೇಂದ್ರ ಮೋದಿ ಅವರನ್ನು ಬಯ್ಯುವ ಅಥವಾ ಅವರ ಎಲ್ಲಾ ಕಾರ್ಯದಲ್ಲಿ ಕಲ್ಲು ಹುಡುಕುವ ಕನ್ನಡದ ಪತ್ರಕರ್ತರು ಇಂದು ಬೇರೆಬೇರೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರನ್ನು ಜಾಡಿಸಿದ್ದಾರೆ.

ಪತ್ರಿಕೋದ್ಯಮ ತನ್ನ ಅಂತ್ಯ ಕಂಡಿದೆ, ಎಲ್ಲ ಪತ್ರಕರ್ತರು ತಮ್ಮನ್ನು ಮಾರಿಕೊಂಡಿದ್ದಾರೆ. ಆಡಳಿತ ಪಕ್ಷಗಳ ಬಾಲಂಗೋಚಿಗಳಾಗಿದ್ದಾರೆ. ಅವರ ಪ್ರಕಾರ, ಅಧಿಕಾರದಲ್ಲಿರುವ ಮೋದಿ ಎಲ್ಲ ಪತ್ರಕರ್ತರನ್ನು ಖರೀದಿಸಿದ್ದಾರೆ. ಇಂಗ್ಲೀಷಿನ ಗಾದೆ ಹೇಳುವಂತೆ, (when asked to bend they crawled), ಪತ್ರಕರ್ತರಿಗೆ ಬಗ್ಗು ಎಂದರೆ ಸಾಕು, ಅಂಬೆಗಾಲಿಕ್ಕಿ ಅಧಿಕಾರಸ್ಥರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾರೆ ಈ ಪತ್ರಕರ್ತರು. ಕೆಲವು ಟಿವಿ ಚಾನೆಲ್​ಗಳ ಕಾರ್ಯಕ್ರಮಕ್ಕೆ ಜನ ನೀಡುವ ಪ್ರತಿಕ್ರಿಯೆ ನೋಡಿದಾಗ ಇದು ನಿಜವೇನೋ ಎನ್ನಿಸಿಬಿಡುತ್ತದೆ.

ಸತ್ಯ ಯಾವುದು? ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವ ವರದಿಗಾರನಿಗೂ ತಪ್ಪು, ಸುಳ್ಳು ಸುದ್ದಿಯನ್ನು ಕೊಡುವ ಉದ್ದೇಶ ಇರುವುದಿಲ್ಲ. ಪ್ರತಿಯೊಬ್ಬ ವರದಿಗಾರನೂ ಸಾರ್ವಜನಿಕ ಅಗ್ನಿಪರೀಕ್ಷೆಗೆ (scrutiny) ಪ್ರತಿದಿನವೂ ಒಳಗಾಗುತ್ತಿರುತ್ತಾನೆ. ಪ್ರತಿಷ್ಠಿತ ಮಾಧ್ಯಮದಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದು ಗೊತ್ತು. ಒಬ್ಬ ಪತ್ರಕರ್ತನಿಗೆ ತಾನು ನೀಡಿದ ಮಾಹಿತಿ / ವಿಶ್ಲೇಷಣೆ ಸರಿಯಾಗಿತ್ತು ಎಂದು ಹೇಳುವ ಕೆಚ್ಚಿರುತ್ತದೆ. ಹಾಗಾಗಿ ಯಾವ ಪತ್ರಕರ್ತನೂ ಉದ್ದೇಶಪೂರ್ವಕವಾಗಿ ತಪ್ಪು ಮಾಡಿ ತನ್ನ ಕಾಲ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳೋಲ್ಲ.

ಒಂದಂಶವನ್ನು ನಾವು ನೆನಪಿಡಬೇಕು: ಒಳ್ಳೇ ಪತ್ರಕರ್ತ ಸತ್ತಿಲ್ಲ. ಹಾಗಂತ ಈ ಕ್ಷೇತ್ರದಲ್ಲಿ black sheep ಇಲ್ಲ ಎಂದು ವಾದ ಮಾಡುವ ಭಂಡತನ ತೋರಿಸುವುದು ಸರಿ ಅಲ್ಲ ಅಲ್ಲವೇ? ಎಲ್ಲರನ್ನೂ ಕಪ್ಪು ಬಣ್ಣದಲ್ಲಿ ಅದ್ದಿ ಎಸೆಯುವುದಕ್ಕಿಂತ, ಸಾಕ್ಷ್ಯಗಳೊಂದಿಗೆ specific case ಬಗ್ಗೆ ಮಾತನಾಡಿದಾಗ ಆ ರೀತಿಯ ಚರ್ಚೆಗೆ ಅರ್ಥ ಇರುತ್ತದೆಯೋ ಹೊರತು, ಬರೀ ಆರೋಪ ಮಾಡುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಆದ್ದರಿಂದ ಪತ್ರಿಕಾ ಕ್ಷೇತ್ರದಲ್ಲಿ ಕೆಂಭೂತ ಇಲ್ಲ, ಬರೀ ಕಾಗೆಗಳೇ ತುಂಬಿವೆ ಎಂದು ವಾದ ಮಾಡುವವರಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ.

ಮಾರಾಟವಾದವರೆಷ್ಟು? ಇದೊಂದು ಭ್ರಮೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು, ಇಡೀ ಪ್ರಜಾಪ್ರಭುತ್ವದ ಸ್ಯಾಚುರೆಶನ್ ಲೆವಲ್ ತುಂಬಾ ಕೆಳಗಿಳಿದಿದೆ. ಇನ್ನೇನು ಜೀವಕ್ಕೇ ಅಪಾಯ ಇದೆ. ಇದಕ್ಕೆ ಕಾರಣ ಮಾಧ್ಯಮಗಳು ಮಾರಾಟವಾಗಿದ್ದು ಎಂದು ಹೇಳುತ್ತಾರೆ. ಹೀಗೆ ಹೇಳುವ ಪಂಡಿತರೆಲ್ಲ ಮಾತನಾಡುವುದು, ಲೇಖನ ಬರೆಯುವುದು ಹಲವಾರು ಅಗ್ರ ಇಂಗ್ಲಿಷ್ ಮತ್ತು ಭಾಷಾ ಪತ್ರಿಕೆಗಳ ಮತ್ತು ಚಾನೆಲ್​ಗಳ ಮೂಲಕ. ಅಂಥ ಪತ್ರಿಕೆಗಳ ಚಾನೆಲ್​ಗಳ ಸಂಖ್ಯೆ ಕಡಿಮೆ ಆಗಿಲ್ಲ. ಅಷ್ಟೇ ಅಲ್ಲ, ಈ campaignಗಳ ಮೂಲಕ ಅವರ ಗಳಿಕೆ ಚೆನ್ನಾಗಿ ಹೆಚ್ಚಿದೆ.

ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು: ದೇಶದ್ರೋಹಿ ಕೇಸುಗಳು ಜಾಸ್ತಿ ಆಗುತ್ತಿವೆ. ಪತ್ರಕರ್ತರ ಮೇಲೆ ದಾಳಿ ಜಾಸ್ತಿ ಆಗುತ್ತಿದೆಯಲ್ಲ. ಇದು ಏನನ್ನು ಸೂಚಿಸುತ್ತದೆ? ಹೌದು. ಇದಕ್ಕೆ ಮೋದಿಯೇ ಕಾರಣ ಎಂದು ವಾದಿಸುವವರು ಇದ್ದಾರೆ. ಹಾಗಾದರೆ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಸ್ಥಿತಿಯನ್ನು ಸೂಕ್ಷ್ಮವಾಗಿ ನೋಡಿದರೆ, ವಾಸ್ತವ ಬೇರೆ ಎಂಬುದು ಗೋಚರವಾಗುತ್ತದೆ. ಈ ಕೇಸುಗಳು ಮತ್ತು ದಾಳಿ ಎಲ್ಲೇ ಆಗಲಿ, ಅದು ತಪ್ಪೇ. ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದು, ಬಿಜೆಪಿ- ಆಡಳಿತದಲ್ಲಿರುವ ರಾಜ್ಯವಿರಬಹುದು ಅಥವಾ ಬೇರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿರಬಹುದು. ಎಲ್ಲಕ್ಕೂ ಒಂದೇ ಅಳತೆಗೋಲಿರಬೇಕು ತಾನೆ?

ಸಮಾಜದಲ್ಲಿ ಆದ ಇನ್ನೊಂದು ಬದಲಾವಣೆಯನ್ನು ನಮ್ಮ ಪಂಡಿತರು ಚರ್ಚಿಸಲ್ಲ: ಟಿವಿ ಚಾನೆಲ್, ಪತ್ರಿಕೆಗಳು ರಾಜಕಾರಿಣಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ಡಂಭಾಚಾರ, ಅವ್ಯವಹಾರದ ಬಗ್ಗೆ ಬರೆಯುವುದು, ಕಾರ್ಯಕ್ರಮ ಪ್ರಚಾರ ಮಾಡುವುದನ್ನು ಯಾರೂ ಇಂದು ಬಯಸುತ್ತಿಲ್ಲ. ಕಾರ್ಯಕ್ರಮ ಬಂದ ಮರುದಿನ ಕೋರ್ಟ್​ನಿಂದ ಇಂಜಂಕ್ಷನ್ ತಂದು ಭವಿಷ್ಯದಲ್ಲಿ ಏನೂ ಬರೆಯದ ಹಾಗೆ ಮಾಡುತ್ತಾರೆ. ಇದು ಮೊದಮೊದಲು ಕಡಿಮೆ ಇತ್ತು. ಈಗ ಎಲ್ಲರೂ ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇದು ಏನು ತೋರಿಸುತ್ತದೆ? ಅಷ್ಟೇ ಅಲ್ಲ, ಅವರು ದೇಶದ್ರೋಹಿ ಕೇಸು ಹಾಕಲ್ಲ ಅನ್ನುವುದನ್ನು ಬಿಟ್ಟರೆ, ಹೆದರಿಸುತ್ತಾರೆ, ದಾಳಿ ಮಾಡಿಸುತ್ತಾರೆ.

ಇಂತಹ ಕೇಸುಗಳ ಲೆಕ್ಕ ನಮ್ಮ ಲೆಕ್ಕದ ಪಟ್ಟಿಯಲ್ಲಿ ಜಾಗ ಪಡೆಯುವುದೇ ಇಲ್ಲ. ಇಂತಹ ಜನ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಯಾರೂ ಮಾತನಾಡುತ್ತಿಲ್ಲ ಯಾಕೆ? ಹೀಗೆ ಎಲ್ಲರೂ ಕೋರ್ಟ್​ನಿಂದ ತಮ್ಮ ಬಗ್ಗೆ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡದಂತೆ ಸ್ಟೇ ತಂದಲ್ಲಿ ಪತ್ರಿಕೋದ್ಯಮ ಮಾಡುವುದು ಹೇಗೆ ಎಂಬುದು ಒಂದು ಬೃಹತ್ ಪ್ರಶ್ನೆ. ಇದನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಒಂದು ಗೊತ್ತಾಗುತ್ತದೆ:  ಭ್ರಷ್ಟಾಚಾರ, ಅವ್ಯವಹಾರ ಕೇಸುಗಳು ಜಾಸ್ತಿ ಆಗುತ್ತಿವೆ ಮತ್ತು ಅವುಗಳ ವರದಿ ಮಾಡಲು ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ಇಡೀ ಸಮಾಜದಲ್ಲೇ ಆದ ಬೆಳವಣಿಗೆ. ಈ ಕುರಿತು ಇಡೀ ಸಮಾಜವೇ ಚರ್ಚಿಸಬೇಕೇ ಹೊರತು ಕೆಲವು ಬುದ್ಧಿಜೀವಿಗಳು ಅಲ್ಲ. ಇದನ್ನು ಚರ್ಚೆ ಮಾಡದೇ ಬರೀ ಪತ್ರಕರ್ತರನ್ನು ಹೀಗಳೆದು ತಾವೇ ಶ್ರೇಷ್ಠರೆಂದು ಬೀಗುವ ಕೆಲವರ ಆಷಾಢಭೂತಿತನದ ಬಗ್ಗೆ  ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ ಅಲ್ಲವೇ?

(Analysis of freedom of press and corruption in media on the occasion of Patrika Dina or Journalist Day in Karnataka on July 1)

ಇದನ್ನೂ ಓದಿ: Opinion: ಜೈವಿಕ ಯುದ್ಧದ ತಯಾರಿಗೆ ಬಂತಾ ಕೊರೊನಾ ವೈರಸ್​?

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada