ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

Karnataka Politics: ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ, ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟದಲ್ಲಿದ್ದರೆ, ಕಾಂಗ್ರೆಸ್​ problem of plenty ಸಮಸ್ಯೆಯನ್ನು ಎದುರಿಸುತ್ತಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಸವಾಲಾಗುವುದರಲ್ಲಿ ಸಂಶಯವಿಲ್ಲ.

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್
bhaskar hegde

| Edited By: guruganesh bhat

Jun 20, 2021 | 4:50 PM

ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ನಾಯಕತ್ವ ಬದಲಾವಣೆ ಕೂಗಿಗೆ ತುಪ್ಪ ಸುರಿಯಲು ಪ್ರಯತ್ನಿಸಿ ನಿನ್ನೆ ಮತ್ತು ಮೊನ್ನೆ ತುಂಬಾ ಖುಷಿಯಾಗಿದ್ದ ಕಾಂಗ್ರೆಸ್​ ಪಕ್ಷದ “ಭಿನಾಭಿಪ್ರಾಯ ಸಂಸ್ಕೃತಿ” ಇಂದು ಮತ್ತೊಮ್ಮೆ ಹೊರಬಿದ್ದಿದೆ. ತಮ್ಮದೇ ಕ್ಷೇತ್ರದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದ್ದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ರಾಜಕೀಯ ಕಿಡಿ ಹೊತ್ತಿಸಿದ್ದಾರೆ: ನಮ್ಮ ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನ ಹಾರೈಸಿದರೆ ಪಕ್ಷದ ಹೈಮಾಂಡ್​ನಿಂದ ಕೂಡ ಅವರನ್ನು ಮುಖ್ಯಮಂತ್ರಿ ಆಗುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು ಅರ್ಥ ಬರುವಂತೆ ಹೇಳಿ ಪಕ್ಷದ ನಾಯಕರೇ ಹುಬ್ಬೆರಿಸುವಂತೆ ಮಾಡಿದ್ದಾರೆ. ಅದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಪಕ್ಷದ ಹೈಮಾಂಡ್ ತೀರ್ಮಾನಿಸುತ್ತದೆ. ಜಮೀರ್ ಅಹ್ಮದ್ ಖಾನ್ ಹೇಳಿಕೆ ಕೊಡುವಾಗ ಎಚ್ಚರದಿಂದ ಇರಬೇಕು ಎಂದು ತಿವಿದಿದ್ದಾರೆ. ಆದರೆ ಜಮೀರ್ ಅಹ್ಮದ್ ಖಾನ್ ಮಾತ್ರ ಆ ಎಚ್ಚರಿಕೆಗೆ ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ.

ಜಮೀರ್ vs ಡಿಕೆಶಿ? ಕರ್ನಾಟಕ ರಾಜಕೀಯವನ್ನು ಸೂಕ್ಷ್ಮವಾಗಿ ಗ್ರಹಿಸುವ ಯಾರಿಗಾದರೂ ಗೊತ್ತಾಗುತ್ತದೆ, ಇದು ಜಮೀರ್ vs ಡಿ.ಕೆ. ಶಿವಕುಮಾರ್ ಫೈಟ್ ಅಲ್ಲ. ಅಸಲಿನಲ್ಲಿ ಇದು ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಮುಸುಕಿನ ಗುದ್ದಾಟ. ಈ ಜಟಾಪಟಿಯಲ್ಲಿ ಎದುರಿಗೆ ಕಾಣುತ್ತಿರುವವರು, ಜಮೀರ್ ಅಹ್ಮದ ಖಾನ್ ಮಾತ್ರ. ಆದರೆ ಕಾಂಗ್ರೆಸ್​ನ ಶಾಸಕಾಂಗ ಪಕ್ಷದೊಳಗೆ ಒಮ್ಮೆ ಇಣುಕಿ ನೋಡಿದರೆ, ಅಲ್ಲಿ ಅನೇಕ ಜಮೀರ್ ಅಹ್ಮದ್ ಖಾನ್ ಇರಬಹುದು. ಹಾಗಾಗಿ ಜಮೀರ್ ಅಹ್ಮದ್ ಮತ್ತು ಇನ್ನಿತರೆ ಸಿದ್ದರಾಮಯ್ಯ ಅವರನ್ನು ಮೆಚ್ಚುವ ಅನೇಕ ಕಾಂಗ್ರೆಸ್ ಶಾಸಕರು ಕೆಪಿಸಿಸಿ ಅಧ್ಯಕ್ಷರ ಜೊತೆ ನಡೆಸುವ ಮುಸುಕಿನ ಗುದ್ದಾಟ, ಶಿವಕುಮಾರ್ ಅವರಿಗೆ ತಲೆನೋವು ತಂದರೆ ಆಶ್ಚರ್ಯ ಇಲ್ಲ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಛಿದ್ರವಾಗುವುದು ಗ್ಯಾರೆಂಟಿ. ಆಗ ಪಕ್ಷಕ್ಕೆ 113 ಕ್ಕೂ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರೆ, ಕೆಪಿಸಿಸಿ ಅಧ್ಯಕ್ಷನಾದ ತನಗೆ ಸಿಎಂ ಪಟ್ಟ ಗ್ಯಾರೆಂಟಿ ಎಂಬ ಲೆಕ್ಕಾಚಾರದಲ್ಲಿ ಡಿಕೆಶಿ ಇದ್ದಾರೆ. ಇದು ತಪ್ಪಲ್ಲ. ಕಳೆದ ಮೂವತ್ತಕ್ಕೂ ಹೆಚ್ಚಿನ ವರ್ಷದಿಂದ ರಾಜಕೀಯದ ಫುಟ್ಬಾಲ್ ಆಡುತ್ತ ಬಂದಿರುವ ಡಿಕೆಶಿ, ಇತ್ತೀಚೆಗೆ ರಾಜಕೀಯ ಚದುರಂಗದಾಟ ಆಡಲು ಕಲಿತಿದ್ದಾರೆ. ಕರ್ನಾಟದ ಮತದಾರರಿಗೆ ತಾವೊಬ್ಬ ಯಶಸ್ವೀ ನಾಯಕ ಎಂಬುದನ್ನು ಮನದಟ್ಟು ಮಾಡಲು ಡಿಕೆಶಿ ಅನೇಕ ಪಟ್ಟನ್ನು ಹಾಕಲು ಪ್ರಾರಂಭಿಸಿದ್ದಾರೆ. ಪ್ರತಿ ದಿನ ಅವರು ಮಾಧ್ಯಮದ ಮುಂದೆ ಹೊಸ ದನಿಯಲ್ಲಿ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುವುದು ಮತ್ತು ಅದು ಸಾಮಾಜಿಕ ಜಾಲತಾಣದಲ್ಲಿ ಜಾಸ್ತಿ ಸದ್ದು ಮಾಡುವಂತೆ ನೋಡಿಕೊಳ್ಳುವುದು- ಹೀಗೆ ಅವರು ಅನೇಕ ಹೊಸ ಪಟ್ಟುಗಳನ್ನು ಹಾಕುತ್ತಿದ್ದಾರೆ. ಈ ಮೂಲಕ ವಿರೋಧ ಪಕ್ಷ ಚುರುಕಾಗುತ್ತಿದೆ ಎಂಬ ಅನಿಸಿಕೆ ಜನರಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ನಿಜ.

ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಪ್ರಬಲ ಕೋಮಿನಿಂದ ಬಂದವರು. ಒಬ್ಬರು ಕುರುಬ ಸಮುದಾಯದಿಂದ ಬಂದವರು ಮತ್ತೊಬ್ಬರು, ಪ್ರಬಲ ಒಕ್ಕಲಿಗೆ ಸಮದಾಯಕ್ಕೆ ಸೇರಿದವರು. ಜನಪ್ರಿಯತೆಯನ್ನು (popularity) ಮಾನದಂಡವನ್ನಾಗಿ ತೆಗೆದುಕೊಂಡರೆ, ಸಿದ್ದರಾಮಯ್ಯ ಡಿಕೆಶಿಗಿಂತ ಮುಂದಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರಲ್ಲಿ ಡಿಕೆಶಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡರೆ, ಸಿದ್ದರಾಮಯ್ಯ ಅವರಿಗೆ ಸ್ಪರ್ಧೆ ಕೊಡುವುದು ಗ್ಯಾರೆಂಟಿ.

ಈಗಿನ ಪರಿಸ್ಥಿತಿ ಹೇಗಿದೆ? ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು. ಜಾತಿ ರಾಜಕೀಯದ ಕಿಡಿ ಹೊತ್ತಿಸದಿದ್ದರೆ ಮತ್ತು ದೇವೇಗೌಡರ ಕುಟುಂಬವನ್ನು ಚುನಾವಣಾ ಸಮಯದಲ್ಲಿ ಹಿಗ್ಗಾಮುಗ್ಗಾ ಬಯ್ಯುತ್ತ ಹೋಗದಿದ್ದರೆ ಅವರಿಗೆ ಮತ್ತೆ ಅಧಿಕಾರಕ್ಕೆ ಬರುವ ಸಂಭವ ಇತ್ತು. ಅದರ ಅರ್ಥ ಇಷ್ಟೇ- ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಅವರಿಗೆ ಬೆಂಬಲ ಇತ್ತು ಮತ್ತು ಈಗಲೂ ಅವರಿಗೆ ಅಲ್ಲಿ ಜನಪ್ರಿಯತೆ ಇರುವುದು ಕಾಣುತ್ತಿದೆ. ರಾಜಕೀಯದಲ್ಲಿ ಇನ್ನೊಂದು ಕುತೂಹಲಕಾರಿ ಅಂಶ ಇದೆ. ಕರೆಯದೇ ಯಾವುದಾದರೂ ನಾಯಕರ ಮನೆಗೆ ಶಾಸಕರು, ಮಾಜಿ ಮಂತ್ರಿಗಳು ತಂಡೋಪತಂಡವಾಗಿ ಹೋಗುತ್ತಿದ್ದರೆ, ಅದನ್ನೇ ಆ ನಾಯಕರ ಪ್ರಾಬಲ್ಯ ಮತ್ತು ಜನಪ್ರಿಯತೆಗೆ ಸಾಕ್ಷಿ ಎಂದು ಹೇಳುತ್ತಾರೆ. ಮೀಟಿಂಗ್ ಇಲ್ಲದಿದ್ದಾಗ ಕೂಡ, ಬೆಂಗಳೂರಿಗೆ ಬರುವ ವಿರೋಧ ಪಕ್ಷದ ಹಾಲೀ ಶಾಸಕರು ಮತ್ತು ಮಾಜೀ ಮಂತ್ರಿಗಳು ಫ್ರೀಯಾಗಿ ಹೋಗುವುದು ಸಿದ್ದರಾಮಯ್ಯ ಅವರ ಮನೆಗೆ ಎನ್ನುವುದು ಕುತೂಹಲಕಾರಿಯಾಗಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿ.

ಕೇಸೊಂದರಲ್ಲಿ ಜೈಲಿಗೆ ಹೋದಾಗ, ಅವರ ಬೆಂಬಲಕ್ಕೆ ನಿಂತ ಜನ ಸಾಗರವನ್ನು ನೋಡಿ ಶಿವಕುಮಾರ್ ಅವರ ಜನಪ್ರಿಯತೆಯ ಅಳೆಯಲು ಸಾಧ್ಯವಿಲ್ಲ. ಅವರು ಇನ್ನೂ ಹಾಸನ ಮತ್ತು ಮಂಡ್ಯದಂಥ ಒಕ್ಕಲಿಗ ಸಮುದಾಯ ಪ್ರಬಲವಾಗಿರುವಲ್ಲಿ ಬೇರೂರಬೇಕಾಗಿದೆ. ಈ ಜಿಲ್ಲೆಗಳಲ್ಲಿ ಗಟ್ಟಿಯಾಗಿರುವ ಜೆಡಿಎಸ್ ಮೂಲವನ್ನು ಅಡಗಿಸಬೇಕಿರುವ ಕಠಿಣ ಸವಾಲನ್ನು ಡಿಕೆಶಿ ಎದುರಿಸುತ್ತಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಶಿವಕುಮಾರ್ ಅದನ್ನೇನಾದರೂ ಸಾಧಿಸಿದರೆ ಮೊದಲ ಹಂತವನ್ನು ಅವರು ಗೆದ್ದಂತೆ. ಎರಡನೇ ಹಂತದಲ್ಲಿ ಅವರ ಮುಂದಿರುವ ಸವಾಲು: ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಮೀರಿಸಿ ತನ್ನ ಪ್ರಾಬಲ್ಯವನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ವಿಸ್ತರಿಸುವುದು.

ಇತ್ತೀಚೆಗೆ ನಡೆದ ಐದು ರಾಜ್ಯದ ಚುನಾವಣೆಯಲ್ಲಿ ಕಹಿ ಉಂಡ ಕಾಂಗ್ರೆಸ್ ಇನ್ನು ಮುಂದೆ ನಡೆಯುವ ಎಲ್ಲಾ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವ ತಂತ್ರಗಾರಿಕೆ ಮಾಡಬಹುದು ಎಂಬ ಊಹೆಯನ್ನು ಅನೇಕ ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ, ಈ ಕುರಿತು ಅಧಿಕೃತವಾಗಿ ಇನ್ನೂ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಕರ್ನಾಟಕದ ವಿಚಾರಕ್ಕೆ ಬಂದಾಗ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರ ದೊಡ್ಡ ಸವಾಲನ್ನೇ ತಂದೊಡ್ಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಹೇಳಿದರೆ ಪಕ್ಷಕ್ಕೆ ಮುಳುವಾಗಬಹುದು ಎಂದು ಬಿಜೆಪಿ ನಾಯಕರು ಚಿಂತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್​  ಬೇರೆಯದೇ ಸಮಸ್ಯೆ ಎದುರಿಸುತ್ತಿದೆ. ಅಧಿಕೃತ ವಿರೋಧ ಪಕ್ಷದಲ್ಲಿ ಈಗ problem of plenty ಎಂಬ ದೊಡ್ಡ ಸಮಸ್ಯೆ ಇದೆ. ಇದು ಹಗ್ಗದ ಮೇಲಿನ ನಡಿಗೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಈ ನಿರ್ಣಯ ಆಗದ ಹೊರತು ಕಾಂಗ್ರೆಸ್​ ಪಕ್ಷಕ್ಕೆ ಸಿಗುತ್ತಿರುವ ಜನರ ಅನುಕಂಪ, ಆಡಳಿತಕ್ಕೆ ಬರಲು ಅನುಕೂಲವಾಗುವ mandate ಆಗಿ ಪರಿವರ್ತಿತವಾಗುತ್ತದೆ ಎಂದು ಹೇಳುವುದು ಕಷ್ಟವೇ ಆಗುತ್ತದೆ.

ಇದನ್ನೂ ಓದಿ:

#BJPFailedKarnataka: ಟ್ವಿಟರ್​ನಲ್ಲಿ ಟ್ರೆಂಡ್ ಆಗ್ತಿದೆ ಕರ್ನಾಟಕ ಸರ್ಕಾರದ ವೈಫಲ್ಯ

Siddaramaiah: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕುರುಬ ನಾಯಕರ ಆಕ್ರೋಶ

(Analysis of Karnataka Congress has problem of plenty to select CM candidate for 2023 assembly elections)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada