‘ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೊಡೆತ ಬಿದ್ದಿದ್ದು ಬಿಜೆಪಿಯಿಂದ..ಟಿಎಂಸಿ ಗೆದ್ದಿದ್ದೂ ಬಿಜೆಪಿಯಿಂದ’
ಪಶ್ಚಿಮ ಬಂಗಾಳದಲ್ಲಿ 2016ರಿಂದಲೂ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಇದೆ. ಆದರೆ 2021ರ ಚುನಾವಣೆಯಲ್ಲಿ ಈ ಮೈತ್ರಿ ಒಂದೇಒಂದು ಸೀಟ್ ಕೂಡ ಗೆಲ್ಲಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧೀರ್ ರಂಜನ್ ಚೌಧರಿ, ನಾವು ಬೇರೆಯಾಗುವ ಬಗ್ಗೆ ಯೋಚನೆಯಿಲ್ಲ ಎಂದಿದ್ದಾರೆ.
ಕೋಲ್ಕತ್ತ: ಈ ಬಾರಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಪಣತೊಟ್ಟಿದ್ದ ಬಿಜೆಪಿ ಅದಕ್ಕಾಗಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್ ಪಶ್ಚಿಮ ಬಂಗಾಳದ ವಿಚಾರದಲ್ಲಿ ಮೌನವಾಗಿಯೇ ಇತ್ತು. ಕೇರಳವನ್ನು ತೆಗೆದುಕೊಂಡಷ್ಟು ಗಂಭೀರವಾಗಿ ಪಶ್ಚಿಮ ಬಂಗಾಳವನ್ನು ಪರಿಗಣಿಸಲಿಲ್ಲ. ಆದರೆ ಕೊನೆಗೂ ಅಲ್ಲಿ ಗೆದ್ದಿದ್ದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ. ಪಶ್ಚಿಮ ಬಂಗಾಳದ ಚುನಾವಣೆ ಫಲಿತಾಂಶ ಹೊರಬಿದ್ದು ತಿಂಗಳ ನಂತರ ಇದೀಗ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿ ಸೋಲಿಗೆ ಕಾರಣವೇನು ಎಂಬುದನ್ನು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸನ್ನಿವೇಶ ಬಿಜೆಪಿ ಪರವಾಗಿ ಇರಲಿಲ್ಲ. ಆ ಪಕ್ಷದ ಧ್ರುವೀಕರಣ ರಾಜಕಾರಣದಿಂದ ಮಮತಾ ಬ್ಯಾನರ್ಜಿಗೆ ಗೆಲ್ಲಲು ತುಂಬ ಸಹಾಯವಾಯಿತು. ಆದರೆ ಕಾಂಗ್ರೆಸ್ಗೆ ಹೊಡೆತ ಬಿತ್ತು. ಬಿಜೆಪಿಯಂಥ ಕೋಮುಶಕ್ತಿ ಪಕ್ಷವನ್ನು ನಿರ್ಮೂಲನ ಮಾಡಲು ಸಾಧ್ಯವಾಗುವುದು ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷಕ್ಕೆ ಮಾತ್ರವೆಂದು ಇಲ್ಲಿನ ಅಲ್ಪಸಂಖ್ಯಾತರು ನಿರ್ಧರಿಸಿದ್ದಾರೆ ಎಂದೂ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 2016ರಿಂದಲೂ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಇದೆ. ಆದರೆ 2021ರ ಚುನಾವಣೆಯಲ್ಲಿ ಈ ಮೈತ್ರಿ ಒಂದೇಒಂದು ಸೀಟ್ ಕೂಡ ಗೆಲ್ಲಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧೀರ್ ರಂಜನ್ ಚೌಧರಿ, ನಾವು ಬೇರೆಯಾಗುವ ಬಗ್ಗೆ ಯೋಚನೆಯಿಲ್ಲ. ನಮ್ಮ ಮೈತ್ರಿ ಮುಂದುವರಿಯಲಿದೆ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. 294 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 213 ಸೀಟ್ಗೆದ್ದು, ಅಮೋಘ ಜಯ ಸಾಧಿಸಿತ್ತು. ಬಿಜೆಪಿ 77 ಕ್ಷೇತ್ರಗಳಲ್ಲಿ ಗೆದ್ದಿದೆ.
ಇದನ್ನೂ ಓದಿ: ಜೀರಿಗೆ ಸೇವನೆಯ ಆರೋಗ್ಯ ಪ್ರಯೋಜನ ತಿಳಿಯಿರಿ; ಜೀರಿಗೆ ನೀರು ಕುಡಿಯುವ ಅಭ್ಯಾಸ ರೂಢಿಯಲ್ಲಿರಲಿ
Published On - 9:15 am, Sun, 20 June 21