CM Ibrahim: ರಾಜ್ಯದ ರಾಜಕಾರಣ ಗಂಭೀರ ಸ್ಥಿತಿಯಲ್ಲಿ ಸಾಗುತ್ತಿರುವಾಗ ಅದಕ್ಕೊಂದು ಮನರಂಜನೆಯ ತಿರುವು ನೀಡಿದ್ದು ಸಿ.ಎಂ .ಇಬ್ರಾಹಿಂ..!

JDS: ಲಿಂಗಾಯತ ಮಠವೊಂದರಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಇಬ್ರಾಹಿಂ, ಶರಣರ ವಚನಗಳನ್ನು, ಕವಿಪುಂಗವರ ನುಡಿಮುತ್ತುಗಳನ್ನು ಪೋಣಿಸಿ, ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಮಾಡಿದ ವಿಶಿಷ್ಟ ಶೈಲಿಯ ಭಾಷಣ ಸಭಾಂಗಣದಲ್ಲಿ ಮಾರ್ದನಿಸಿತು. ಆಗ ಮೊದಲ ಬಾರಿಗೆ ಎಚ್ .ಡಿ.ದೇವೇಗೌಡರು ಮತ್ತಿತರ ಮುಖಂಡರು ಇಬ್ರಾಹಿಂ ಅವರತ್ತ ತಲೆ ಎತ್ತಿ ನೋಡಿದರು. ಮಾರನೆಯ ದಿನದಿಂದಲೇ ಇಬ್ರಾಹಿಂ ರಾಜ್ಯ ರಾಜಕಾರಣಕ್ಕೆ ದೊಡ್ಡಮಟ್ಟದ ಪ್ರವೇಶ ಪಡೆದರು.

CM Ibrahim: ರಾಜ್ಯದ ರಾಜಕಾರಣ ಗಂಭೀರ ಸ್ಥಿತಿಯಲ್ಲಿ ಸಾಗುತ್ತಿರುವಾಗ ಅದಕ್ಕೊಂದು ಮನರಂಜನೆಯ ತಿರುವು ನೀಡಿದ್ದು ಸಿ.ಎಂ .ಇಬ್ರಾಹಿಂ..!
ಸಾಂದರ್ಭಿಕ ಚಿತ್ರ
Follow us
Digi Tech Desk
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 21, 2023 | 4:40 PM

ಕಳೆದ ಐದು ದಶಕಗಳ ರಾಜ್ಯದ ರಾಜಕಾರಣದಲ್ಲಿ ಆಗಾಗ ಮಿಂಚಿ ಮರೆಯಾಗುತ್ತಿರುವ ರಾಜಕಾರಣಿ ಯಾರು? ಎಂಬ ಪ್ರಶ್ನೆಗೆ ಎಲ್ಲರೂ ಥಟ್ಟನೆ ಹೇಳುವ ಉತ್ತರವೆಂದರೆ –“ಸಿ.ಎಂ.ಇಬ್ರಾಹಿಂ” (CM Ibrahim). ಅದು 1972-73 ರ ಒಂದು ದಿನ.ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ರಾಜ್ಯಮಟ್ಟದ ಯುವಜನ ಸಮಾವೇಶ ನಡೆಯುತ್ತಿತ್ತು. ವೇದಿಕೆಯ ನೆಲಹಾಸಿನ ಮೇಲೆ ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಎಚ್. ಡಿ. ದೇವೇಗೌಡ ಮೊದಲಾದ ನಾಯಕರು ಗಹನ ಸಮಾಲೋಚನೆಯಲ್ಲಿ ತೊಡಗಿದ್ದರು. ವೇದಿಕೆಯ ತುದಿಯಲ್ಲಿ ಒಂದು ಮೈಕ್ ಇಟ್ಟಿದ್ದರು. ವಿವಿಧ ಜಿಲ್ಲೆಯ ಯುವ ಮುಖಂಡರು ಭಾಷಣ ಮಾಡಿ ಹೋಗುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷ ಎಚ್ .ಸಿ. ಪ್ರಕಾಶ್ ಅವರ ಸರದಿ ಬಂದಿತು. ಆದರೆ ಅವರಿಗೆ ಸ್ಟೇಜ್ ಫಿಯರ್ ಶುರುವಾಯಿತು. ತಮ್ಮೊಂದಿಗೆ ಕಾರ್ಯಕರ್ತರ ನಿಯೋಗದಲ್ಲಿ ಬಂದಿರುವ ಭದ್ರಾವತಿಯ ಯುವಕ ಸಿ.ಎಂ. ಇಬ್ರಾಹಿಂ ಅವರೇ ತಮ್ಮ ಬದಲು ವೇದಿಕೆಯಲ್ಲಿ ಮಾತನಾಡಲು ಸರಿಯಾದ ವ್ಯಕ್ತಿ ಎಂದು ಅವರಿಗೆ ಅನ್ನಿಸಿತು. ರಾಜ್ಯೋತ್ಸವ, ಗಣೇಶೋತ್ಸವಗಳಲ್ಲಿ ಮತ್ತು ಶಿವಮೊಗ್ಗದ ಗೋಪಿ ಸರ್ಕಲ್​​​ನಲ್ಲಿ ವಿದ್ಯಾರ್ಥಿ ಹೋರಾಟಗಳಲ್ಲಿ ಇಬ್ರಾಹಿಂ ಮಾಡುತ್ತಿದ್ದ ಅದ್ಭುತವಾದ ಭಾಷಣಗಳು ಅವರ ನೆನಪಿಗೆ ಬಂದವು.

ಲಿಂಗಾಯತ ಮಠವೊಂದರಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಇಬ್ರಾಹಿಂ, ಶರಣರ ವಚನಗಳನ್ನು, ಕವಿಪುಂಗವರ ನುಡಿಮುತ್ತುಗಳನ್ನು ಪೋಣಿಸಿ, ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಮಾಡಿದ ವಿಶಿಷ್ಟ ಶೈಲಿಯ ಭಾಷಣ ಸಭಾಂಗಣದಲ್ಲಿ ಮಾರ್ದನಿಸಿತು. ಆಗ ಮೊದಲ ಬಾರಿಗೆ ಎಚ್ .ಡಿ.ದೇವೇಗೌಡರು ಮತ್ತಿತರ ಮುಖಂಡರು ಇಬ್ರಾಹಿಂ ಅವರತ್ತ ತಲೆ ಎತ್ತಿ ನೋಡಿದರು. ಮಾರನೆಯ ದಿನದಿಂದಲೇ ಇಬ್ರಾಹಿಂ ರಾಜ್ಯ ರಾಜಕಾರಣಕ್ಕೆ ದೊಡ್ಡಮಟ್ಟದ ಪ್ರವೇಶ ಪಡೆದರು. ಮುಸ್ಲಿಂ ನಾಯಕರೆಲ್ಲಾ ದೇವರಾಜ ಅರಸು ಕ್ಯಾಂಪಿಗೆ ಜಿಗಿದಿದ್ದರು. ಸಂಸ್ಥಾ ಕಾಂಗ್ರೆಸ್​​​ನಲ್ಲಿ ಯಾರೂ ಇರಲಿಲ್ಲ. ಆ ಕೊರತೆಯನ್ನು ಇಬ್ರಾಹಿಂ ತುಂಬಿದರು. ಆಗ ಅವರೊಬ್ಬ ಗ್ಲಾಮರಸ್ ಯುವ ನಾಯಕ. 1978ರಲ್ಲಿ ಜನತಾ ಪಕ್ಷದಿಂದ ಶಾಸಕರಾದರು. ವೀರೇಂದ್ರ ಪಾಟೀಲ್ ಜೊತೆಗೆ ಇಂದಿರಾ ಕಾಂಗ್ರೆಸ್ಸಿಗೆ ಮರಳಿದ ಇಬ್ರಾಹಿಂ, ಗುಂಡೂರಾವ್ ಸಂಪುಟದಲ್ಲಿ ಸಚಿವರಾದರು.

ತಮ್ಮ ಹರಿತವಾದ ನಾಲಿಗೆಯನ್ನು ಯಾವ ದಿಕ್ಕಿಗೆ ಬೇಕಾದರೂ ಹೊರಳಿಸಿ ಭಾಷಣ ಮಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ಇಬ್ರಾಹಿಂ ಅವರನ್ನು ಬಳಸಿಕೊಳ್ಳಲು ಅನೇಕ ನಾಯಕರು ಪ್ರಯತ್ನಿಸಿದ್ದಾರೆ. 1994ರಲ್ಲಿ ದೇವೇಗೌಡರು ಅಧಿಕಾರದ ದಡವನ್ನು ತಲುಪಲು ಇಬ್ರಾಹಿಂ ವಿಶೇಷವಾಗಿ ಪ್ರಯತ್ನಿಸಿದ್ದರು. ದೇವೇಗೌಡರಿಗಾಗಿ ರಾಜ್ಯದಲ್ಲೆಡೆ ಮುಸ್ಲಿಂ ಮುಖಂಡರ ಸಭೆಗಳನ್ನು ಸಂಘಟಿಸಿದ್ದರು. ದೇವೇಗೌಡರು ಪ್ರಧಾನಿಯಾದಾಗ ಇಬ್ರಾಹಿಂ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ದೇವೇಗೌಡರಿಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ. ಅವರು ಹಲವು ಸುತ್ತು ಉತ್ತರ ಭಾರತದ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು. ಆಗ ಅವರನ್ನು ಅಲ್ಲಿನ ಜನರಿಗೆ ಪರಿಚಯಿಸಲು ಇಬ್ರಾಹಿಂ ಮಾಡುತ್ತಿದ್ದ ಹಿಂದೂಸ್ತಾನಿ ಭಾಷಣಗಳು ಜನಪ್ರಿಯವಾಗಿದ್ದವು.

ಇದನ್ನೂ ಓದಿ; ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ: ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ

ನಂತರ ಸಿದ್ದರಾಮಯ್ಯನವರ ತೆಕ್ಕೆಗೆ ಜಾರಿದ ಇಬ್ರಾಹಿಂ ಅಹಿಂದ ಸಮಾವೇಶಗಳಲ್ಲಿ ಸಾವಿರಾರು ಜನರನ್ನು ತಮ್ಮ ಅಮೋಘವಾದ ಭಾಷಣಗಳ ಮೂಲಕ ರಂಜಿಸಿದರು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಮಗೆ ಮಂತ್ರಿ ಸ್ಥಾನ ನೀಡಬಹುದೆಂದು ಇಬ್ರಾಹಿಂ ನಿರೀಕ್ಷಿಸಿದ್ದರು. ನಂತರ 2019 ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಇಬ್ರಾಹಿಂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣು ಹಾಕಿದ್ದರು.ಮಆದರೆ ಅದು ಕೂಡ ಕೈ ತಪ್ಪಿದ್ದರಿಂದ ಇಬ್ರಾಹಿಂ ಸಿದ್ದರಾಮಯ್ಯನವರ ವಿರುದ್ಧವೇ ಸಿಡಿದೆದ್ದರು.

ಈ ಬೆಳವಣಿಗೆಯಿಂದ ತುಂಬಾ ಸಮಾಧಾನವಾಗಿದ್ದು ದೇವೇಗೌಡರಿಗೆ. ಏಕೆಂದರೆ ಕೆಲವು ನೆನಪುಗಳು ಮತ್ತು ಸಂಗತಿಗಳು ಅವರ ಮನಸ್ಸನ್ನು ಕೆಡಿಸಿಬಿಟ್ಟಿದ್ದವು:

1. ವಿಧಾನ ಸೌಧದ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಫೋಟೊ ಇತ್ತು. ಜೆ.ಎಚ್ .ಪಟೇಲ್, ಎಸ್.ಎಂ.ಕೃಷ್ಣ, ಧರಂ ಸಿಂಗ್, ಬಿ ಎಸ್ ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹೀಗೆ ಯಾವ ಮುಖ್ಯಮಂತ್ರಿಯೂ ಆ ಫೋಟೋವನ್ನು ತೆಗೆಸಿರಲಿಲ್ಲ. ಆದರೆ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಅದನ್ನು ತೆಗೆಸಿಬಿಟ್ಟರು.

2. 2018ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಟೀಕಿಸಿದ್ದರು. ಅದರಿಂದಾಗಿ ಜೆಡಿಎಸ್ ಹಲವು ಸೀಟುಗಳನ್ನು ಕಳೆದುಕೊಳ್ಳಬೇಕಾಯಿತು. ರಾಹುಲ್ ಗಾಂಧಿಯವರಿಂದ ಈ ಹೇಳಿಕೆಯನ್ನು ಕೊಡಿಸಿದ್ದು ಸಿದ್ದರಾಮಯ್ಯನವರೇ ಎನ್ನುವುದು ದೇವೇಗೌಡರಿಗೆ ಚೆನ್ನಾಗಿ ಗೊತ್ತು. “ಈ ಹೇಳಿಕೆಯಿಂದ ಡ್ಯಾಮೇಜ್ ಆಯಿತು. ಇಲ್ಲದಿದ್ದರೆ ನಮಗೆ 60 ಸೀಟು ಬರುತ್ತಿದ್ದವು” ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದರು.

3. ಎಚ್ .ಡಿ .ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯನವರ ನಡವಳಿಕೆಯಲ್ಲಿ ಬದಲಾವಣೆಯನ್ನು ದೇವೇಗೌಡರು ಗುರ್ತಿಸಿದ್ದರು. ವಿಧಾನಸಭೆಯಲ್ಲಿ ರೈತರ ಸಾಲ ಮನ್ನಾ ಮತ್ತು ಬಜೆಟ್ ಮೇಲಿನ ಚರ್ಚೆಗಳಿಗೆ ಕುಮಾರಸ್ವಾಮಿಯವರು ಉತ್ತರ ಹೇಳುತ್ತಿದ್ದಾಗ ಸಿದ್ದರಾಮಯ್ಯನವರು ಸದನದಿಂದ ಎದ್ದು ಹೋಗುತ್ತಿದ್ದುದನ್ನು ಕೂಡಾ ದೇವೇಗೌಡರು ಗಮನಿಸಿದ್ದರು. “siddaramaiah was not even in the assembly when mr kumaraswamy spoke during the three day session recently “ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದು ಗಮನಾರ್ಹವಾಗಿತ್ತು

4. ಜಮೀರ್ ಅಹ್ಮದ್ ಮೊದಲಾದ ತಾವೇ ಬೆಳೆಸಿದ್ದ ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ಹೈಜಾಕ್ ಮಾಡುತ್ತಿದ್ದಾರೆ ಎಂಬ ಬೇಸರವೂ ದೇವೇಗೌಡರಿಗೆ ಇತ್ತು.“they also wooed one or two muslim leaders who were with me “ಎಂದು ಅವರು ಅದೇ ಸಂದರ್ಶನದಲ್ಲಿ ಹೇಳಿದ್ದರು.

5. ಸಮ್ಮಿಶ್ರ ಸರ್ಕಾರ ಯಶಸ್ವಿಯಾದರೆ ರಾಜ್ಯ ರಾಜಕಾರಣದ ಮೇಲಿನ ತಮ್ಮ ಹಿಡಿತ ತಪ್ಪಿಹೋದೀತೆಂಬ ಆತಂಕದಿಂದಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಪಿತೂರಿ ಮಾಡಿರಬಹುದೆಂಬ ಅನುಮಾನ ದೇವೇಗೌಡರಿಗೆ ಮೊದಲಿಂದಲೂ ದಟ್ಟವಾಗಿತ್ತು.

ಅಧಿಕಾರವಿರಲಿ ಅಥವಾ ಇಲ್ಲದಿರಲಿ ಹಲವು ದಶಕಗಳಿಂದ ರಾಜಕಾರಣದ ದಾಳಗಳನ್ನು ಲೀಲಾಜಾಲವಾಗಿ ಉರುಳಿಸುತ್ತಾ ಬಂದಿರುವ ದೇವೇಗೌಡರಿಗೆ ಈಗ ಸಿದ್ದರಾಮಯ್ಯನವರೇ ಒಂದು ತೊಡರುಗಾಲು ಆಗಿರುವುದು ಸ್ಪಷ್ಟವಾಗಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ ದೇವೇಗೌಡರು “ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ದೆಹಲಿಗೆ ತೆರಳಲಿ “ಎಂಬ ಸಲಹೆ ನೀಡಿದ್ದರು. ಅವರು ಏಕೆ ಅಂತಹ ಹೇಳಿಕೆ ನೀಡಿದರು ಎಂಬುದು ಬಹಳ ಜನರಿಗೆ ಆಗ ಅರ್ಥವಾಗಿರಲಿಲ್ಲ.ಸಿದ್ದರಾಮಯ್ಯನವರ ವಿರುದ್ಧ ಇಬ್ರಾಹಿಂ ಬಂಡಾಯದ ಬಾವುಟ ಹಾರಿಸಿದ್ದು ದೇವೇಗೌಡರಿಗೆ ಒಂದು ವರದಾನವೇ ಆಯಿತು.

ಸಿದ್ದರಾಮಯ್ಯನವರ ಸುತ್ತಲೂ ಕ್ರೋಢೀಕರಣವಾಗುತ್ತಿರುವ ಮುಸ್ಲಿಂ ಮತಗಳನ್ನು ಚದುರಿಸಲು ದೇವೇಗೌಡರಿಗೆ ಇಬ್ರಾಹಿಂ ಒಂದು ಅಸ್ತ್ರವನ್ನಾಗಿ ದೊರೆತಿದ್ದರು .ಅವರಿಗೆ ದೇವೇ ಗೌಡರು ಜೆಡಿಎಸ್ ಅಧ್ಯಕ್ಷ ಸ್ಥಾನವನ್ನೇ ಧಾರೆ ಎರೆದು ಬಿಟ್ಟರು.ಇಬ್ರಾಹಿಂ ಮೇಲೆ ದೇವೇ ಗೌಡರು ಇಟ್ಟುಕೊಂಡಿದ್ದ ನಿರೀಕ್ಷೆ ನಿಜವಾಯಿತೇ?ಅಥವಾ ಇಬ್ರಾಹಿಂ ಎಂಬ ಅಸ್ತ್ರ ತಿರುಗು ಬಾಣವಾಯಿತೇ ?ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ .

ಈಗ,ಅಭೂತ ಪೂರ್ವ ಜನಾದೇಶದೊಂದಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ವಿರಾಟ ಸ್ವರೂಪ ಅವರ ಎದುರಾಳಿಗಳನ್ನು ಕಂಗೆಡಿಸಿಬಿಟ್ಟಿದೆ.ಅವರ ಎದುರಾಳಿಗಳು ಎಷ್ಟರ ಮಟ್ಟಿಗೆ ಗಲಿಬಿಲಿಗೊಂಡಿದ್ದಾರೆ ಎಂದರೆ ಅವರು ಒಂದು ಆರೋಗ್ಯಕರ ರಾಜಕೀಯ ನಿರ್ಧಾರವನ್ನು ಕೈಗೊಳ್ಳುವ ಮನಃ ಸ್ಥಿತಿಯಲ್ಲಿಯೂ ಇಲ್ಲ.ಇಂತಹ ದುರ್ಬಲ ಸನ್ನಿವೇಶದಲ್ಲಿ ಇಬ್ರಾಹಿಂ ತಮ್ಮ ಪಕ್ಕ ವಾದ್ಯವನ್ನು ಜೋರಾಗಿಯೇ ಬಾರಿಸುತ್ತಿದ್ದಾರೆ.

ಜೆಡಿಎಸ್ ನಿಂದ ತಮ್ಮ ಉಚ್ಛಾಟನೆಗೆ ದೇವೇಗೌಡರ ಕುಟುಂಬ ಭಾರೀ ಬೆಲೆ ತೆರಬೇಕಾದೀತು ಎಂದು ಇಬ್ರಾಹಿಂ ಈಗಾಗಲೇ ಎಚ್ಚರಿಸಿದ್ದಾರೆ.ಕೋರ್ಟು ಮೆಟ್ಟಿಲು ಹತ್ತುವ ಮುನ್ಸೂಚನೆಯನ್ನೂ ನೀಡಿದ್ದಾರೆ.ಆದರೆ ರಾಜ್ಯದ ಜನರು ಮಾತ್ರ ಇಬ್ರಾಹಿಂ ಅವರ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸುವ ಸ್ಥಿತಿಯಲ್ಲಿ ಇಲ್ಲ.ಏಕೆಂದರೆ ಅವರು ಇಬ್ರಾಹಿಂ ಅವರನ್ನು ಮೊದಲಿನಿಂದಲೂ ಕೇವಲ ಒಂದು ಮನರಂಜನೆಯ ಸರಕನ್ನಾಗಿ ನೋಡುತ್ತಾ ಬಂದು ಬಿಟ್ಟಿದ್ದಾರೆ..!.ಮುಂದಿನ ರಾಜಕೀಯ ಬೃಹನ್ನಾಟಕ ಯಾವ ತಿರುವು ಪಡೆದುಕೊಂಡರೂ ಜನರಿಗೆ ಉಚಿತವಾದ ಮನರಂಜನೆಯಂತೂ ಖಚಿತ.

ಲೇಖಕರು: ರುದ್ರಪ್ಪ ಸಿ

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sat, 21 October 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್