Booster Dose: 3ನೇ ಡೋಸ್ ಲಸಿಕೆ ವಿತರಿಸುವಂತೆ ಆಸ್ಪತ್ರೆಗಳಲ್ಲಿ ಜನರಿಂದ ಬೇಡಿಕೆ ಬರುತ್ತಿದೆಯಂತೆ
Covid 3rd Dose: ಎರಡೂ ಡೋಸ್ ಕಂಪ್ಲೀಟ್ ಆದವರು ಮೂರನೇ ಬಾರಿ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಮಾತ್ರ ಬೂಸ್ಟರ್ ಡೋಸ್ ವಿತರಿಸಬೇಕೆಂಬ ಅಭಿಲಾಶೆ ಹೆಚ್ಚುತ್ತಿದೆ.
ಬೆಂಗಳೂರು: ಕೊರೊನಾ 2ನೇ ಅಲೆಗೆ ಹೆದರಿದ ಜನ ಲಸಿಕೆ ತೆಗೆದುಕೊಳ್ಳಲು ಸರತಿಯಲ್ಲಿ ನಿಲ್ಲುತ್ತಿದ್ದರು. ಇದೀಗ ಮೂರನೇ ಅಲೆಯ ಹೆದರಿಕೆ ಶುರುವಾಗಿದ್ದು, ಬೂಸ್ಟರ್ ಡೋಸ್ ಬೇಕು ಅಂತ ಮುಗಿ ಬೀಳ್ತಿದ್ದಾರೆ. ಅರೇ! ಬೂಸ್ಟರ್ ಡೋಸ್ ಸಿಗುತ್ತಾ? ಸರ್ಕಾರ ಯಾವಾಗಿಂದ ಕೊಡ್ತಿದೆ? ಸ್ವಲ್ಪ ತಡೀರಿ, ಸರ್ಕಾರ ಇನ್ನೂ ಮೂರನೇ ಡೋಸ್ ಲಸಿಕೆ ವಿತರಣೆ ಆರಂಭಿಸಿಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ಮಾತ್ರ ಬೂಸ್ಟರ್ ಡೋಸ್ ವಿತರಿಸಬೇಕೆಂಬ ಅಭಿಲಾಶೆ ಹೆಚ್ಚುತ್ತಿದೆ.
ಕೊರೊನಾ ಎರಡನೇ ಅಲೆಯಲ್ಲಿ ಅನುಭವಿಸಿದ ಪಾಡಿನಿಂದ ಬೆದರಿದ ರಾಜ್ಯದ ಜನರು ಮತ್ತಷ್ಟು ಸಾವು-ನೋವು ಸಂಭವಿಸಬಾರದು ಅಂತ ಹೆಚ್ಚಾಗಿ ಲಸಿಕೆ ತೆಗೆದುಕೊಳ್ಳಲು ಮುಂದಾಗುತ್ತಿದ್ದರು. ಸದ್ಯ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದು ಒಂದು ತಿಂಗಳ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಬಹುದು. ಕೊವಿಶೀಲ್ಡ್ ಕೂಡ ಮೊದಲ ಡೋಸ್ ಪಡೆದುಕೊಂಡ 84 ದಿನಗಳ ನಂತರ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬಹುದು ಅಂತ ಆರೋಗ್ಯ ಇಲಾಖೆ ಸೂಚಿಸಿತ್ತು. ಇದೀಗ ಎರಡೂ ಡೋಸ್ ಪಡೆದುಕೊಂಡವರು ಮೂರನೇ ಡೋಸ್ ಅಂದರೆ, ಬೂಸ್ಟರ್ ಡೋಸ್ ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಕೆಲವರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೂರನೇ ಡೋಸ್ ಲಸಿಕೆ ನೀಡಿ ಅಂತ ಮನವಿ ಮಾಡಿಕೊಳ್ತಿದ್ದಾರೆ.
ಐಸಿಎಂಆರ್ ಹಾಗೂ ಕೇಂದ್ರ ಸರ್ಕಾರದಿಂದ ಮೂರನೇ ಡೋಸ್ ಲಸಿಕೆ ನೀಡಲು ಸೂಚನೆ ಬಂದಿಲ್ಲ. ಸದ್ಯ ಅಮೇರಿಕ 65 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಇಟಲಿ, ಜಪಾನ್ ಸೇರಿದಂತೆ ಇತರೆ ದೇಶಗಳಲ್ಲೂ ಮೂರನೇ ಲಸಿಕೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲೂ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಾಕಷ್ಟು ಸಭೆ, ಚರ್ಚೆಗಳನ್ನು ನಡೆಸಿವೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಅಸೋಸಿಯೇಷನ್ ಸಂಘಟನೆ ಕೂಡ ಸದ್ಯಕ್ಕೆ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದಿದೆ. ಎರಡೂ ಡೋಸ್ ಲಸಿಕೆ ಪಡೆದುಕೊಂಡವರಿಗೆ ಕನಿಷ್ಠ 8 ರಿಂದ 10 ತಿಂಗಳುಗಳವರೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಜನ ಹೆದರುವ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅಮೆರಿಕ ಆಸ್ಪತ್ರೆಗಳಳಲ್ಲಿ ಮೂರನೇ ಲಸಿಕೆ ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ಪ್ರಸನ್ನ ವಿವರಿಸುತ್ತಾರೆ.
ಸದ್ಯ ದಿನ ದಿನೇ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಹಾಗೂ ಡೆಂಗ್ಯೂನಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಶಾಲಾ-ಕಾಲೇಜುಗಳು ಆರಂಭವಾದ್ದರಿಂದ ಪೋಷಕರಿಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ. ಹೀಗಾಗಿ ಎರಡೂ ಡೋಸ್ ಕಂಪ್ಲೀಟ್ ಆದವರು ಮೂರನೇ ಬಾರಿ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸರ್ಕಾರ ಇದಕ್ಕೆ ಯಾವಾಗ ಗ್ರೀನ್ ಸಿಗ್ನಲ್ ನೀಡುತ್ತದೆಯೋ ಕಾದು ನೋಡಬೇಕಿದೆ.
ವರದಿ: ಅನಿಕ್ ಕಲ್ಕೆರೆ
ಇದನ್ನೂ ಓದಿ:
ZyCov-D Vaccine: ಅ.2ರಂದು ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜೈಕೋವ್-ಡಿ ಬೆಲೆ ನಿಗದಿ ಬಗ್ಗೆ ಚರ್ಚೆ
Published On - 9:48 pm, Thu, 30 September 21