Opinion: ಕೋಲಾರ ರಾಜಕೀಯ; ರಾಜಕಾರಣಿಗಳ ಬೀದಿ ನಾಟಕ, ಪಕ್ಷದಲ್ಲಿದ್ದರೆ ಜೈ, ಪಕ್ಷ ಬಿಟ್ಟರೆ ಬಾಯಿಗೆ ಬಂದಂತೆ ಬೈ
ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರುವಲ್ಲ ಯಾರಿಗೆ ಯಾರೂ ಮಿತ್ರರಲ್ಲ, ನಮಗೆ ಯಾವುದೇ ನಾಚಿಕೆ ಆಗೋದೆ ಇಲ್ಲ, ಜನರು ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಗಮನಿಸುತ್ತಿರುತ್ತಾರೆ ಅನ್ನೋ ಭಯವೂ ಇಲ್ಲದೆ, ಜಗವೇ ಒಂದು ನಾಟಕ ರಂಗ ಎನ್ನವಂತೆ ಬಣ್ಣ ಹಚ್ಚಿಕೊಂಡು ಕುಣಿಯೋದಕ್ಕೆ ಶುರುಮಾಡಿದ್ದಾರೆ.
ರಾಜಕೀಯ ಅಂದರೇ ಹಾಗೆ, ಒಂದು ರೀತಿಯ ಕೆಸರು ಎರೆಚಾಟದಂತೆ. ಪಕ್ಷದಲ್ಲಿರುವಾಗ ಅವರಿಗೆ ಸಿಗುವ ಮರ್ಯಾದೆ ಅದೇ ವ್ಯಕ್ತಿ ಪಕ್ಷ ತೊರೆದ ನಂತರ ಅವರಿಗೆ ಸಿಗುವ ಸ್ಥಾನವೇ ಬೇರೆ, ಪಕ್ಷದಲ್ಲಿದ್ದಾಗ ಹೊಗಳಿಕೆಗೆ ಕಾರಣವಾಗಿದ್ದ ವಿಷಯಗಳೇ ಅವರು ಪಕ್ಷಬಿಟ್ಟ ನಂತರ ಎಲ್ಲವೂ ನಾಟಕವೆಂದು ಟೀಕಾಕಾರರ ಆಹಾರವಾಗುತ್ತಿದೆ.
ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಕಳೆದ ಹದಿನೈದು ದಿನಗಳಿಂದ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಪಕ್ಷ ತೊರೆದು ಕಾಂಗ್ರೆಸ್ ಸೇರುವ ವಿಚಾರ ಬಾರೀ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ರಾಜಕೀಯದಲ್ಲಿ ರಾಜಕಾರಣಿಗಳು ಹೇಗೆ ತಮ್ಮ ಜೊತೆಯಲ್ಲಿದ್ದಾಗ ನಾಯಕರನ್ನು ಹೊಗಳುವ ಅವರು ತಮ್ಮ ಪಕ್ಷ ಬಿಟ್ಟಾಗ ಬಾಯಿಗೆ ಬಂದಂತೆ ತೆಗಳುವ ಚಾಳಿಯನ್ನು ಹೇಗೆ ಪ್ರದರ್ಶನ ಮಾಡ್ತಾರೆ ಎಂಬುದು ಶ್ರೀನಿವಾಸಗೌಡ ಪ್ರಕರಣ ಜೀವಂತ ಸಾಕ್ಷಿ. ಇಷ್ಟು ದಿನ ಶಾಸಕ ಶ್ರೀನಿವಾಸಗೌಡರನ್ನು ಕ್ಷೇತ್ರದ ಅಭಿವೃದ್ದಿಯ ಹರಿಕಾರ ಹಿರಿಯ ರಾಜಕಾರಣ ಎಂದು ಹೇಳುತ್ತಿದ್ದ ಜೆಡಿಎಸ್ ಪಕ್ಷದ ಮುಖಂಡರುಗಳು ಇಂದು ಶ್ರೀನಿವಾಸಗೌಡರು ಪಕ್ಷ ಬಿಡುವ ನಿರ್ಧಾರ ಪ್ರಕಟ ಮಾಡುತ್ತಿದ್ದಂತೆ ಹೇಳಿಕೆ ಬಿಡುಗಡೆ ಮಾಡಿದ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹಾಗೂ ಜೆಡಿಎಸ್ ಮುಖಂಡರು ಶ್ರೀನಿವಾಸಗೌಡರನ್ನು ಬಾಯಿಗೆ ಬಂದಂತೆ ತೇಜೋವಧೆ ಮಾಡಿದ್ದಾರೆ.
ಕೆಸಿ ವ್ಯಾಲಿ ನೀರು ಕುಡಿದಿದ್ದು ಬರೀ ನಾಟಕ, ಅವರು ನೀರೇ ಕುಡಿದಿಲ್ಲ ಎಂದ ಮುಖಂಡರು! ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಆರಂಭದ ಹಂತದಲ್ಲಿ ನೀರಿನ ಪರಿಶುದ್ದತೆ ವಿಚಾರ ಬಂದಾಗ ನೀರನ್ನು ಕುಡಿದು ನೀರಾವರಿ ಯೋಜನೆಯನ್ನು ಉಳಿಸಿ ಇದರಿಂದ ಏನೂ ಸಮಸ್ಯೆ ಆಗೋದಿಲ್ಲ ಎಂದು ಮನವಿ ಮಾಡಿದ್ದ ಶ್ರೀನಿವಾಸಗೌಡರ ಕೆಲಸವನ್ನು ಅಂದು ಹಾಡಿ ಹೊಗಳಿದ್ದ ನಾಯಕರೇ ಇಂದು ಅವರು ನೀರೇ ಕುಡಿದಿಲ್ಲ, ನೀರು ಕುಡಿದಂತೆ ನಾಟಕ ಮಾಡಿದ್ದಾರೆ. ಬೊಗಸೆಯಲ್ಲಿ ಹಿಡಿದು ಹೊರಚೆಲ್ಲಿ ನೀರು ಕುಡಿದಂತೆ ನಾಟಕ ಮಾಡಿದ್ದರು. ರಾಜಕೀಯ ಲಾಭಕ್ಕಾಗಿ ಹೀಗೆ ನಾಟಕವಾಡುತ್ತಿದ್ದಾರೆ, ಅವರು ಯಾವ ಪಕ್ಷಕ್ಕೂ ನಿಷ್ಠರಲ್ಲ, ಅವರಿಗೆ ಬುದ್ದಿಭ್ರಮಣೆಯಾಗಿದೆ. ಶ್ರೀನಿವಾಸಗೌಡರ ಪರಿಸ್ಥಿತಿ ಸತ್ತ ಕೋಳಿ ಬೆಂಕಿಗಂಜುತ್ತಾ ಎನ್ನುವಂತಾಗಿದೆ ಎನ್ನುವ ಮೂಲಕ ಅವರು ಇನ್ನು ಮುಂದೆ ಅವರ ಕಥೆ ಅಷ್ಟೇ ಎಂದು ವ್ಯಂಗ್ಯ ಮಾಡಿದ್ದಾರೆ.
ರಾಜಕಾರಣಿಗಳೆಲ್ಲಾ ಒಂದೇ ಜಾತಿ ಎನ್ನುವಂತೆ ಶಾಸಕ ಶ್ರೀನಿವಾಸಗೌಡರು ಇದಕ್ಕೆ ಹೊರತಾಗಿಲ್ಲ. ಇಷ್ಟು ದಿನ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿಯವರು ನಮ್ಮ ನಾಯಕರು ಎಂದೆಲ್ಲಾ ಮಾತನಾಡುತ್ತಿದ್ದ ಶ್ರೀನಿವಾಸಗೌಡರು ಪಕ್ಷ ಬಿಡುವ ನಿರ್ಧಾರ ಮಾಡುತ್ತಿದ್ದಂತೆ ಅವರನ್ನು ಬಾಯಿಗೆ ಬಂದಂತೆ ಟೀಕೆ ಮಾಡಲು ಶುರುಮಾಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಎಷ್ಟು ಸ್ಥಾನ ಇದ್ದರೂ ಅವರ ಕುಟುಂಬಕ್ಕೇ ಸಾಕಾಗೋದಿಲ್ಲ, ಅವರಿಗೆ ಹಿರಿಯರನ್ನು, ಶಾಸಕರ ಹಿರಿತವನ್ನು ಗುರುತಿಸುವ ಯೋಗ್ಯತೆ ಇಲ್ಲ ಎಂದು ಅವರನ್ನು ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಸಚಿವ ಸ್ಥಾನ ಕೊಟ್ಟಿತ್ತು. ಆದರೆ ಜೆಡಿಎಸ್ ಪಕ್ಷ ನನಗೆ ಸಚಿವ ಸ್ಥಾನ ಕೊಡಲಿಲ್ಲ ನಮ್ಮ ಅಸೆ ಆಕಾಂಕ್ಷೆಗಳನ್ನು ಕೇಳೋದಿಲ್ಲ, ಎಂದು ಜೆಡಿಎಸ್ ಪಕ್ಷದ ವರಿಷ್ಠರನ್ನು ಟೀಕಿಸಿ ಕಾಂಗ್ರೆಸ್ ನಾಯಕರೊಟ್ಟಿಗೆ ಕೈಜೋಡಿಸಿದ್ದಾರೆ.
ಪಕ್ಷಕ್ಕೆ ಕರೆದುಕೊಳ್ಳುವ ಮುನ್ನ ಕಾಂಗ್ರೆಸ್ ಮುಖಂಡರಿಂದ ಹೊಗಳಿಕೆಯ ಮಂತ್ರ! ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ನತ್ತ ಮುಖ ಮಾಡಿರುವ ಶ್ರೀನಿವಾಸಗೌಡರಿಗೆ ಜೆಡಿಎಸ್ನಲ್ಲಿ ತೆಗಳಿಕೆಯಾದರೆ ಕಾಂಗ್ರೆಸ್ನಲ್ಲಿ ಹೊಗಳಿಗೆ ಶುರುವಾಗಿದೆ. ಪಕ್ಷಕ್ಕೆ ಬರುತ್ತಿರುವ ಮುಖಂಡರನ್ನು ಹಾಡಿ ಹೊಗಳಲು ಶುರುಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ರಮೇಶ್ ಕುಮಾರ್, ಶ್ರೀನಿವಾಸಗೌಡ ಮನೆಯಲ್ಲಿ ಕರೆದಿದ್ದ ಔತಣಕೂಟದಲ್ಲಿ ಶ್ರೀನಿವಾಸಗೌಡರನ್ನ ಮೇಧಾವಿ ರಾಜಕಾರಣಿ ಅವರಿಗೆ ತಮ್ಮದೇ ಆದ ರಾಜಕೀಯ ಹಿನ್ನೆಲೆ ಇದೆ. ಅವರು ಬೇರು ಮಟ್ಟದಿಂದ ಬೆಳೆದಬಂದವರು ಎಂದು ಹಾಡಿಹೊಗಳಿದ್ದಾರೆ.
ಒಟ್ಟಾರೆ ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರುವಲ್ಲ ಯಾರಿಗೆ ಯಾರೂ ಮಿತ್ರರಲ್ಲ, ನಮಗೆ ಯಾವುದೇ ನಾಚಿಕೆ ಆಗೋದೆ ಇಲ್ಲ, ಜನರು ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಗಮನಿಸುತ್ತಿರುತ್ತಾರೆ ಅನ್ನೋ ಭಯವೂ ಇಲ್ಲದೆ, ಜಗವೇ ಒಂದು ನಾಟಕ ರಂಗ ಎನ್ನವಂತೆ ಬಣ್ಣ ಹಚ್ಚಿಕೊಂಡು ಕುಣಿಯೋದಕ್ಕೆ ಶುರುಮಾಡಿದ್ದಾರೆ.
ಬರಹ: ರಾಜೇಂದ್ರ ಸಿಂಹ ಟಿವಿ9 ಕೋಲಾರ
ಇದನ್ನೂ ಓದಿ:
ಜೆಡಿಎಸ್ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ: ಶಾಸಕ ಶ್ರೀನಿವಾಸಗೌಡ ವ್ಯಂಗ್ಯ