ಲಾಕ್ಡ್ ಶೀಲ್ಡ್ಸ್ 2023: ನ್ಯಾಟೋದ ಜಾಗತಿಕ ಸೈಬರ್ ಸೆಕ್ಯುರಿಟಿ ಅಭ್ಯಾಸದ ಪರಿಣಾಮಗಳು

|

Updated on: Apr 20, 2023 | 10:08 AM

ಜಗತ್ತಿನ ಅತಿದೊಡ್ಡ ಸೈಬರ್ ರಕ್ಷಣಾ ಅಭ್ಯಾಸವಾದ ಲಾಕ್ಡ್ ಶೀಲ್ಡ್ಸ್ 2023 ಎಪ್ರಿಲ್ 18ರಿಂದ 21ರ ನಡುವೆ ಟಾಲಿನ್, ಈಸ್ಟೋನಿಯಾದಲ್ಲಿ ಜರುಗಲಿದೆ.

ಲಾಕ್ಡ್ ಶೀಲ್ಡ್ಸ್ 2023: ನ್ಯಾಟೋದ ಜಾಗತಿಕ ಸೈಬರ್ ಸೆಕ್ಯುರಿಟಿ ಅಭ್ಯಾಸದ ಪರಿಣಾಮಗಳು
Cyber Defence exercise
Follow us on

ಜಗತ್ತಿನ ಅತಿದೊಡ್ಡ ಸೈಬರ್ ರಕ್ಷಣಾ ಅಭ್ಯಾಸವಾದ ಲಾಕ್ಡ್ ಶೀಲ್ಡ್ಸ್ 2023 ಎಪ್ರಿಲ್ 18ರಿಂದ 21ರ ನಡುವೆ ಟಾಲಿನ್, ಈಸ್ಟೋನಿಯಾದಲ್ಲಿ ಜರುಗಲಿದೆ. ನ್ಯಾಟೋ ಕೋಆಪರೇಟಿವ್ ಸೈಬರ್ ಡಿಫೆನ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಸಿಡಿಸಿಒಇ) ಆಯೋಜಿಸುತ್ತಿರುವ ಈ ಸಮಾರಂಭದಲ್ಲಿ ಜಗತ್ತಿನಾದ್ಯಂತ 3,000ಕ್ಕೂ ಹೆಚ್ಚು ಜನರು ಬಂದು ಭಾಗವಹಿಸಿ, ಸೈಬರ್ ದಾಳಿಯ ಸಂದರ್ಭದಲ್ಲಿ ಅವರ ದೇಶದ ಐಟಿ ವ್ಯವಸ್ಥೆ ಮತ್ತು ಮೂಲಭೂತ ವ್ಯವಸ್ಥೆಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.

ಈ ಅಭ್ಯಾಸ ಬೃಹತ್ ಪ್ರಮಾಣದ ಸೈಬರ್ ಘಟನೆಗಳನ್ನು ಪ್ರದರ್ಶಿಸುತ್ತದೆ. ಆ ಮೂಲಕ ಕಾರ್ಯತಂತ್ರದ ನಿರ್ಧಾರ ಕೈಗೊಳ್ಳುವಲ್ಲಿ, ಫಾರೆನ್ಸಿಕ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಕಾನೂನಾತ್ಮಕ ಮತ್ತು ಮಾಧ್ಯಮಗಳ ಸವಾಲು ಎದುರಿಸುವಲ್ಲಿ ನೆರವಾಗಲಿದೆ. ಆಧುನಿಕ ತಂತ್ರಜ್ಞಾನಗಳು ಮತ್ತು ಸೂಕ್ತ ದಾಳಿ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಲಾಕ್ಡ್ ಶೀಲ್ಡ್ಸ್ 2023 ಸೈಬರ್ ಸುರಕ್ಷತೆಯ ಮಿತಿಗಳನ್ನು ವಿಸ್ತರಿಸಿ, ಆಧುನಿಕ ಅಪಾಯಗಳನ್ನು ಎದುರಿಸುವಲ್ಲಿ ತಂಡಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ.

ರೆಡ್ ಟೀಮ್ ವರ್ಸಸ್ ಬ್ಲೂ ಟೀಮ್: ಅತ್ಯದ್ಭುತ ಸೈಬರ್ ಸೆಕ್ಯುರಿಟಿ ಪ್ರದರ್ಶನ

ಕೋಆಪರೇಟಿವ್ ಸೈಬರ್ ಡಿಫೆನ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಸಿಡಿಸಿಒಇ) ಎನ್ನುವುದು ಒಂದು ನ್ಯಾಟೋ ಬೆಂಬಲಿತ ಜ್ಞಾನ ಕೇಂದ್ರವಾಗಿದ್ದು, ಸೈಬರ್ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಇದರ ಅಂತರ್ಗತ ವಿಭಾಗಗಳು ಮಿಲಿಟರಿ, ಸರ್ಕಾರ, ಶೈಕ್ಷಣಿಕ ಹಾಗೂ ಔದ್ಯಮಿಕ ವಲಯಗಳ, 39 ಪ್ರಾಯೋಜಕ ರಾಷ್ಟ್ರಗಳ ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ಒಂದೆಡೆ ಸೇರಿಸುತ್ತದೆ.

ಇದರ ಹಲವು ಯೋಜನೆಗಳಲ್ಲಿ ಲಾಕ್ಡ್ ಶೀಲ್ಡ್ಸ್ ಸಹ ಒಂದಾಗಿದ್ದು, ಇದನ್ನು ರಾಷ್ಟ್ರೀಯ ಐಟಿ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಮತ್ತು ದಾಳಿಯ ಸಂದರ್ಭದಲ್ಲಿ ಪ್ರಮುಖ ವ್ಯವಸ್ಥೆಗಳನ್ನು ರಕ್ಷಿಸುವುದನ್ನು ಕಲಿಯಲು ರೂಪಿಸಲಾಗಿದೆ. ಇದೊಂದು ಬಹುಮುಖಿ ಮತ್ತು ವಿವರವಾದ ವಿಧಾನವನ್ನು ಅನುಸರಿಸುತ್ತದೆ.

ಇದರಲ್ಲಿ ಜಗತ್ತಿನಾದ್ಯಂತ 24 ತಂಡಗಳು ಭಾಗವಹಿಸಲಿದ್ದು, ಅವುಗಳಿಗೆ ಅತ್ಯಂತ ಸ್ಪರ್ಧಾತ್ಮಕ ಸಮಯದಲ್ಲಿ ಪ್ರಮುಖ ಮೂಲಭೂತ ವ್ಯವಸ್ಥೆಗಳು ಮತ್ತು ಐಟಿ ವ್ಯವಸ್ಥೆಗಳನ್ನು ಕಾರ್ಯಾಚರಿಸುವ ರೀತಿಯಲ್ಲಿ ರಕ್ಷಿಸಿಕೊಳ್ಳುವ ಗುರಿ ನೀಡಲಾಗುತ್ತದೆ. ಈ ಅಭ್ಯಾಸಕ್ಕಾಗಿ 5,500ಕ್ಕೂ ಹೆಚ್ಚು ವರ್ಚುವಲ್ ವ್ಯವಸ್ಥೆಗಳನ್ನು ಸೃಷ್ಟಿಸಲಾಗಿದ್ದು, ನೈಜ ದಾಳಿಯ ಪರಿಸ್ಥಿತಿಯಲ್ಲಿ ತಂಡಗಳು ಹೇಗೆ ಕಾರ್ಯಾಚರಿಸುತ್ತವೆ ಎಂದು ತಿಳಿಯಲು ಲಾಕ್ಡ್ ಶೀಲ್ಡ್ಸ್ ಅವಕಾಶ ಮಾಡಿಕೊಡುತ್ತದೆ.

ಸಿಸಿಡಿಸಿಒಇ ನಿರ್ದೇಶಕರಾದ ಮಾರ್ಟ್ ನೂರ್ಮಾ ಅವರ ಪ್ರಕಾರ, ಬೇರೆ ಯಾವುದೇ ಸೈಬರ್ ಸುರಕ್ಷಾ ಕಾರ್ಯಾಚರಣೆಯೂ ಲಾಕ್ಡ್ ಶೀಲ್ಡ್ಸ್ ನಷ್ಟು ಬಹುಮುಖಿಯಾದ, ವಿವರವಾದ ಅನುಭವವನ್ನು ನೀಡುವುದಿಲ್ಲ.

ಲಾಕ್ಡ್ ಶೀಲ್ಡ್ಸ್ ಒಂದು ವಾರ್ಷಿಕ ಸೈಬರ್ ರಕ್ಷಣಾ ಅಭ್ಯಾಸವಾಗಿದ್ದು, ಅತ್ಯಾಧುನಿಕವಾದ ಮತ್ತು ನೈಜವೆನಿಸುವ, ಅತಿದೊಡ್ಡ ಸೈಬರ್ ಅಭ್ಯಾಸವನ್ನು ಒದಗಿಸುತ್ತದೆ. ಈ ಸಮಾರಂಭದಲ್ಲಿ, ವಿವಿಧ ದೇಶಗಳ ರಾಪಿಡ್ ರಿಯಾಕ್ಷನ್ ತಂಡಗಳು ಭಾಗವಹಿಸಿ, ಒಂದು ಕಾಲ್ಪನಿಕ ರಾಷ್ಟ್ರದ ಮೇಲೆ ನಡೆಯುವ ಸೈಬರ್ ದಾಳಿಯನ್ನು ತಡೆಯಲು ಯತ್ನಿಸುತ್ತವೆ.

ಇಲ್ಲಿ ಬ್ಲೂ ತಂಡದಲ್ಲಿ ಸಿಸಿಡಿಸಿಒಇ ಸದಸ್ಯ ರಾಷ್ಟ್ರಗಳ ತಂಡಗಳಿದ್ದು, ಅವುಗಳಿಗೆ ಈ ಕಾಲ್ಪನಿಕ ರಾಷ್ಟ್ರದ ಐಟಿ ವ್ಯವಸ್ಥೆಗಳನ್ನು ಸಾವಿರಾರು ದಾಳಿಗಳಿಂದ ರಕ್ಷಿಸುವ ಗುರಿ ನೀಡಲಾಗುತ್ತದೆ. ಈ ತಂಡ ಕಾರ್ಯತಂತ್ರದ ನಿರ್ಧಾರಗಳನ್ನು ಕೈಗೊಂಡು, ಫಾರೆನ್ಸಿಕ್, ಕಾನೂನು ಹಾಗೂ ಮಾಧ್ಯಮ ಸವಾಲುಗಳನ್ನು ಪರಿಹರಿಸಬೇಕಾಗುತ್ತದೆ. ಲಾಕ್ಡ್ ಶೀಲ್ಡ್ಸ್ ಅನ್ನು ಎಷ್ಟು ಸಾಧ್ಯವೋ ಅಷ್ಟು ನೈಜವೆನಿಸುವಂತೆ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ.

32 ರಾಷ್ಟ್ರಗಳ 2,000ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದ ಲಾಕ್ಡ್ ಶೀಲ್ಡ್ಸ್ 2022 ಅತ್ಯಂತ ಸಂಕೀರ್ಣ ಹಾಗೂ ಅತಿದೊಡ್ಡ ಸೈಬರ್ ಸುರಕ್ಷತಾ ಸ್ಪರ್ಧೆಯಾಗಿತ್ತು. ಆ ಸ್ಪರ್ಧೆಯಲ್ಲಿ ಅಂತಿಮವಾಗಿ ಫಿನ್ಲ್ಯಾಂಡ್ ತಂಡವನ್ನು ವಿಜೇತವೆಂದು ಘೋಷಿಸಲಾಯಿತು. ಆ ತಂಡದ ಘಟನೆಯ ವರದಿ ಮಾಡುವಿಕೆಯ ರೀತಿ, ಕಾರ್ಯತಂತ್ರದ ಉಪಾಯ, ಹಾಗೂ ಪರಿಹಾರ ಕಂಡುಕೊಳ್ಳುವಿಕೆಯನ್ನು ಶ್ಲಾಘಿಸಲಾಯಿತು.

ಈ ಸ್ಪರ್ಧೆ ರೆಡ್ ಟೀಮ್ ಮತ್ತು ಬ್ಲೂ ಟೀಮ್‌ಗಳ ಮಧ್ಯೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಅಟ್ಲಾಂಟಿಕ್ ಸಮುದ್ರದ ಒಂದು ಕಾಲ್ಪನಿಕ ದ್ವೀಪವಾದ ಬೆರಿಲ್ಲಾದ ಮೇಲೆ ಸೈಬರ್ ದಾಳಿ ನಡೆದಿತ್ತು. ಅಲ್ಲಿನ ಮಿಲಿಟರಿ ಮತ್ತು ಸಾರ್ವಜನಿಕ ಐಟಿ ವ್ಯವಸ್ಥೆಗಳ ಮೇಲೆ ದಾಳಿ ನಡೆಸಲಾಗಿತ್ತು. ಲಾಕ್ಡ್ ಶೀಲ್ಡ್ಸ್ ಸೈಬರ್ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸಮಕಾಲೀನ ಅಪಾಯಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಾಚರಿಸುವುದನ್ನು ತಿಳಿಸುತ್ತದೆ.

ಮಿಲಿಟರಿಯಿಂದ ಖಾಸಗಿ ವಲಯ: ಸೈಬರ್ ಸುರಕ್ಷತಾ ಕೌಶಲಗಳನ್ನು ಒರೆಗೆ ಹಚ್ಚುವ ಲಾಕ್ಡ್ ಶೀಲ್ಡ್ಸ್

ಹ್ಯಾಕ್ ದ ಬಾಕ್ಸ್ ಎಂಬ ಆನ್‌ಲೈನ್ ಸೈಬರ್ ಸುರಕ್ಷತಾ ತರಬೇತಿ ವ್ಯವಸ್ಥೆ ಪೂರೈಕೆದಾರ ಸಂಸ್ಥೆಯೂ ಲಾಕ್ಡ್ ಶೀಲ್ಡ್ಸ್ 2022ಕ್ಕೆ ಕೊಡುಗೆ ನೀಡಿತ್ತು. ಈ ಅಭ್ಯಾಸದಲ್ಲಿ, ಈಸ್ಟೋನಿಯಾ ಸೇನಾಪಡೆಗಳು ಮತ್ತು ಅಲ್ಲಿನ ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ಭಾಗವಹಿಸಿದ್ದು, ಸೈಬರ್ ಸುರಕ್ಷೆಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳೂ ಒಳಗೊಂಡಿದ್ದವು.

ಹ್ಯಾಕ್ ದ ಬಾಕ್ಸ್ ಸಂಸ್ಥೆ ಸಮಾರಂಭದಲ್ಲಿ ನೀಡಲಾದ ಸವಾಲುಗಳನ್ನು ಸೃಷ್ಟಿಸಿತ್ತು. ಸಂಸ್ಥೆಯ ಸಿಇಒ ಹ್ಯಾರಿಸ್ ಪೈಲಾರಿನಸ್ ಅವರ ಪ್ರಕಾರ, ಮಿಲಿಟರಿಗಳ ಕಾರ್ಯಾಚರಣೆ ವಿವಿಧ ಅಂಶಗಳೆಡೆಗೆ ಗಮನ ಹರಿಸುವ ಹ್ಯಾಕ್ ದ ಬಾಕ್ಸ್‌ನಂತಹ ಸಂಸ್ಥೆಗಳಿಗೆ ಲಾಕ್ಡ್ ಶೀಲ್ಡ್ಸ್ ಒಂದು ಉತ್ತಮ ಅವಕಾಶವಾಗಿದೆ. ಈ ಕಾರ್ಯಾಚರಣೆಯಲ್ಲಿ ನಿರ್ಧಾರ ಕೈಗೊಳ್ಳುವಿಕೆ ಅತ್ಯಂತ ಮುಖ್ಯವಾಗಿರುವುದರಿಂದ, ಇದು ಸೈಬರ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡುವುದು ಮತ್ತು ಕಾಪಾಡಿಕೊಳ್ಳುವುದರಿಂದಲೂ ಮೇಲ್ಮಟ್ಟದಲ್ಲಿರುತ್ತದೆ.

ಫೈನಾನ್ಷಿಯಲ್ ಸರ್ವಿಸಸ್ ಇನ್ಫಾರ್ಮೇಶನ್ ಶೇರಿಂಗ್ ಆ್ಯಂಡ್ ಅನಾಲಿಸಿಸ್ ಸೆಂಟರ್ (ಎಫ್ಎಸ್-ಐಎಸ್ಎಸಿ) ಒಂದು ಲಾಭರಹಿತ ಸೈಬರ್ ಸೆಕ್ಯುರಿಟಿ ಸಮುದಾಯವಾಗಿದ್ದು, ವಿಶೇಷವಾಗಿ ಆರ್ಥಿಕ ಸೇವಾ ಉದ್ಯಮದ ಸೈಬರ್ ರಕ್ಷಣಾ ವಿಭಾಗಕ್ಕೆ ಸೇವೆ ಸಲ್ಲಿಸುತ್ತದೆ. ಎಫ್ಎಸ್-ಐಎಸ್ಎಸಿ ಜಾಗತಿಕ ಉದ್ಯಮ ವಿಭಾಗದ ನಿರ್ದೇಶಕರಾದ ಕ್ಯಾಮರಾನ್ ಡಿಕರ್ ಅವರ ಪ್ರಕಾರ, ಲಾಕ್ಡ್ ಶೀಲ್ಡ್ಸ್ ಚಟುವಟಿಕೆ ಇಂತಹ ಗುರಿಗಳನ್ನು ಸಾಧಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಸ್ಥೆ ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ತನ್ನದೇ ಆದ ಚಟುವಟಿಕೆಗಳನ್ನೂ ಆಯೋಜಿಸುತ್ತದೆ.

ಲಾಕ್ಡ್ ಶೀಲ್ಡ್ಸ್ 2023: ಎಲ್ಲರಿಗೂ ಅನ್ವಯವಾಗುವ ಜಾಗತಿಕ ಸಮಾರಂಭ

ಮುಂಬರುವ ಲಾಕ್ಡ್ ಶೀಲ್ಡ್ಸ್ 2023 ಅಭ್ಯಾಸ ಮಹತ್ವದ ಲೈವ್ – ಫೈರ್ ಸೈಬರ್ ರಕ್ಷಣಾ ಕಾರ್ಯಾಚರಣೆಯಾಗಿರಲಿದ್ದು, 38 ರಾಷ್ಟ್ರಗಳಿಂದ 3,000ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಇದು ಜಗತ್ತಿ‌ನಲ್ಲೇ ಇಂತಹ ಅತಿದೊಡ್ಡ ಸಮಾರಂಭವಾಗಿರಲಿದೆ. ಎಫ್ಎಸ್-ಐಎಸ್ಎಸಿ ಕಳೆದ ಎರಡು ಲಾಕ್ಡ್ ಶೀಲ್ಡ್ಸ್ ನಲ್ಲಿ ಭಾಗವಹಿಸಿದ್ದು, ಈ ವರ್ಷವೂ ಭಾಗವಹಿಸಲಿದೆ. ಈ ಸಮಾರಂಭದ ಆರ್ಥಿಕ ವಲಯದ ಸಮನ್ವಯಕಾರನಾಗಿರುವ ಸಂಸ್ಥೆ ತನ್ನ ಅನುಭವವನ್ನು ಬಳಸಿಕೊಂಡು, ಆರ್ಥಿಕ ವ್ಯವಸ್ಥೆಯ ಮೇಲಿನ ಸೈಬರ್ ದಾಳಿಗಳನ್ನು ಸೃಷ್ಟಿಸುತ್ತದೆ.

ಅದರೊಡನೆ, ಎಫ್ಎಸ್-ಐಎಸ್ಎಸಿ ನಿರ್ಧಾರ ಕೈಗೊಳ್ಳುವವರಿಗೆ ಕಾರ್ಯತಂತ್ರದ ಹಾದಿಯನ್ನು ವಿನ್ಯಾಸಗೊಳಿಸುತ್ತದೆ. ಆ ಮೂಲಕ ಅವರಿಗೆ ಸಾಮಾಜಿಕ ಅಸಮಾಧಾನ, ಪರಸ್ಪರ ಅವಲಂಬನೆ ಹಾಗೂ ಸುಳ್ಳು ಸುದ್ದಿಯ ವಿಚಾರಗಳಲ್ಲಿ ಸವಾಲುಗಳನ್ನು ಒದಗಿಸುತ್ತದೆ. ಎಫ್ಎಸ್-ಐಎಸ್ಎಸಿ ವಕ್ತಾರರೂ ಆಗಿರುವ ಡಿಕರ್ ಅವರು ಆರ್ಥಿಕ ವಲಯ ಹಾಗೂ ಮಿಲಿಟರಿ ವಲಯಗಳು, ಇತರ ಪ್ರಮುಖ ಸುರಕ್ಷತೆ ಮತ್ತು ಆರ್ಥಿಕ ಪ್ರಾಮುಖ್ಯತೆಗಳು ಪರಸ್ಪರ ಬೆಸೆದುಕೊಂಡಿವೆ ಎಂದು ಅಭಿಪ್ರಾಯ ಪಡುತ್ತಾರೆ.

ಎಫ್ಎಸ್-ಐಎಸ್ಎಸಿ ಪ್ರಕಾರ, ಜಾಗತಿಕ ಸೈಬರ್ ಸುರಕ್ಷತೆಗೆ ಗಡಿಗಳನ್ನು, ವಲಯಗಳನ್ನು ಮೀರಿದ, ಖಾಸಗಿ – ಸಾರ್ವಜನಿಕ ಸಹಭಾಗಿತ್ವ ಬೇಕು. ಎರಡು ರಾಷ್ಟ್ರಗಳ ನಡುವೆ ನಡೆಯುವ ಯುದ್ಧವೂ ಸೈಬರ್ ಅಪಾಯದ ವಿಚಾರದಲ್ಲಿ ಜಾಗತಿಕ ಪರಿಣಾಮ ಬೀರಬಲ್ಲದಾಗಿದ್ದು, ಸೈಬರ್ ರಕ್ಷಣೆಯಲ್ಲಿ ಲಾಕ್ಡ್ ಶೀಲ್ಡ್ಸ್ ಒಂದು ಪರಿಣಾಮಕಾರಿ ಅಸ್ತ್ರವಾಗಿದೆ. ಡಿಕರ್ ಅವರ ಪ್ರಕಾರ, ವಿವಿಧ ವಿಚಾರಗಳಲ್ಲಿ ಸ್ಪಷ್ಟತೆ ಹೊಂದಿರುವ, ಅನುಭವ ಹೊಂದಿರುವ ಸೈಬರ್ ಸುರಕ್ಷಾ ತಜ್ಞ ತಂಡದಲ್ಲಿರುವುದು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಒಂದು ತಂಡದಲ್ಲಿರುವ ಎಲ್ಲರೂ ಒಂದೇ ವಿಚಾರದಲ್ಲಿ ತಜ್ಞರಾಗಿರುವ ಬದಲು, ಬೇರೆ ಬೇರೆ ವಿಭಾಗಗಳಲ್ಲಿ ಅನುಭವ, ಪರಿಣತಿ ಹೊಂದಿದ್ದರೆ, ಸೈಬರ್ ಸುರಕ್ಷತೆ ಸಾಧಿಸಲು ಹೆಚ್ಚು ಅನುಕೂಲವಾಗುತ್ತದೆ.

ಲಾಕ್ಡ್ ಶೀಲ್ಡ್ಸ್ ಈಗಾಗಲೇ ತನ್ನ ವೈವಿಧ್ಯಮಯ ದಾಳಿಯ ವಿಧಾನಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಜಗತ್ತಿನಲ್ಲೇ ಅತ್ಯುತ್ಕೃಷ್ಟ ಕಾರ್ಯಕ್ರಮ ಎನಿಸಿದೆ. ಒಂದು ಬೃಹತ್ ಹಂತದ ಸಿಮ್ಯುಲೇಟರ್‌ ಸೈಬರ್ ಸಮಾರಂಭವಾಗಿದ್ದು, ಆಧುನಿಕ ಸೈಬರ್ ಅಪಾಯಗಳನ್ನು ಅತ್ಯುತ್ತಮ ತಂಡಗಳು ಹೇಗೆ ಎದುರಿಸುತ್ತವೆ ಎಂದು ಪ್ರದರ್ಶಿಸುತ್ತದೆ. ಭವಿಷ್ಯದ ದೃಷ್ಟಿಯಿಂದಲೂ ಈ ಸಮಾರಂಭ ಸೈಬರ್ ಅಪಾಯದ ವಿರುದ್ಧದ ಜಾಗತಿಕ ಸಮರದ ಪ್ರಮುಖ ಅಸ್ತ್ರವಾಗಿದೆ.

ಲೇಖನ

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ