ಶ್ರೀನಗರ: ಕಾಶ್ಮೀರದಲ್ಲಿ ಈಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಭಾರತ ಸೇನೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೋನ್ ಮಾಡಿದ್ದಾರೆ. ಸಾಮಾಜಿಕ ಬದುಕಿನಿಂದ ದೂರವೇ ಉಳಿಯುವ ಸೇನಾ ಸಿಬ್ಬಂದಿ ಹೀಗೆ ಬಹಿರಂಗವಾಗಿ ಮನದ ಮಾತು ಹಂಚಿಕೊಳ್ಳುವುದು ಅಪರೂಪದ ವಿದ್ಯಮಾನ. ಭಾರತೀಯ ಸೇನೆಯ ಉಪಮುಖ್ಯಸ್ಥರು, ಸೇನಾ ಗುಪ್ತಚರ ವಿಭಾಗದ ಪ್ರಧಾನ ನಿರ್ದೇಶಕರೂ ಆಗಿರುವ ಧಿಲ್ಲೋನ್ ಅವರ ಮಾತುಗಳು ವೈರಲ್ ಆಗಿದ್ದು, ದೇಶಾದ್ಯಂತ ವಿಡಿಯೊ ತುಣುಕು ಹರಿದಾಡುತ್ತಿದೆ. ಇವರ ಮಾತಿನ ವಿಡಿಯೊದ ಕೆಲ ತುಣುಕುಗಳನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಯುಟ್ಯೂಬ್ನಲ್ಲಿ ಇವರ ಭಾಷಣದ ಪೂರ್ಣ ವಿಡಿಯೊ ಲಭ್ಯವಿದೆ. ಕಾಶ್ಮೀರದ ತಾಯಿಯ ಅಸಹಾಯಕ ದುಃಖವನ್ನು ಭಾವುಕವಾಗಿ ವಿವರಿಸಿರುವ ಸೇನಾಧಿಕಾರಿ, ಹಿಂಸಾಚಾರ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವವರ ಧೋರಣೆಯನ್ನು ಕಟು ದನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ.
ಕಾಶ್ಮೀರದಲ್ಲಿ ನಾನು ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾನು ಸಾಕ್ಷಿಯಾದ ಇತಿಹಾಸದ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು ಓದಿದ, ಕೇಳಿಸಿಕೊಂಡ, ಅಜ್ಜಿ ಕಥೆಯ ಇತಿಹಾಸದ ಬಗ್ಗೆ ಅಲ್ಲ. ಕಳೆದ 31 ವರ್ಷ, 9 ತಿಂಗಳು, 1 ದಿನದಲ್ಲಿ ಏನಾಗಿದೆ? 19ನೇ ಜನವರಿ 1990ರಲ್ಲಿ ನಾನು ಕುಪ್ವಾರ ಜಿಲ್ಲೆಯಲ್ಲಿ ಕ್ಯಾಪ್ಟನ್ ಆಗಿದ್ದೆ. ಅಂದು ಏನೆಲ್ಲಾ ಆಯ್ತು ಎಂಬುದು 31 ವರ್ಷಗಳ ನಂತರವೂ ನೆನಪಿದೆ. ಜನವರಿ 1990, 2010, 2016ರಲ್ಲಿ ಅವರು ಎಲ್ಲಿದ್ದರು. ಅಕ್ಟೋಬರ್ 2021ರಲ್ಲಿ ಅವರು ಎಲ್ಲಿದ್ದರು. ನಾವು ಅವರ ಹೆಸರು ಹೇಳಬಹುದು. ಕಾಶ್ಮೀರದ ಇತಿಹಾಸದಲ್ಲಿ ಅವರ ಸ್ಥಾನವೇನು?
ಕಾಶ್ಮೀರಿ ಪಂಡಿತರು ರಾಜ್ಯ ಬಿಟ್ಟು ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಏಕೆ? ಕೇವಲ ಪಂಡಿತರು ರಾಜ್ಯ ಬಿಟ್ಟು ಹೋಗಿದ್ದಲ್ಲ. ಕಾಶ್ಮೀರ ಆತ್ಮದ ಒಂದು ಭಾಗ ಇಲ್ಲಿಂದ ಹೊರಗೆ ಹೋಯಿತು. ಕಾಶ್ಮೀರಿ ಪಂಡಿತರು ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಶಾಲಾ ಶಿಕ್ಷಕರಿಂದ ಹಿಡಿದು ಉಪನ್ಯಾಸಕರು, ಪ್ರಾಧ್ಯಾಪಕರು, ಡೀನ್, ಕುಲಪತಿಗಳ ಜವಾಬ್ದಾರಿ ಅವರೇ ನಿರ್ವಹಿಸುತ್ತಿದ್ದರು. ಯಾವುದೇ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾದರೆ ಆ ಸಮಾಜದ ಭವಿಷ್ಯ ಹಾಳಾಗುತ್ತದೆ. 1990ರಲ್ಲಿ ಏನಾಯಿತು. ಮೊದಲು ಹಾನಿ ಅನುಭವಿಸಿದ್ದು ಶಾಲೆಗಳು. ಹಲವು ಶಾಲೆಗಳನ್ನು ಸುಟ್ಟು ಹಾಕಲಾಯಿತು.
ಸೂಫಿಗಳು, ಕುಶಲಕರ್ಮಿಗಳು ಇಲ್ಲಿದ್ದರು. ಆದರೆ ಇಲ್ಲಿನ ಕೆಲವರಿಗೆ ಕಾಶ್ಮೀರದ ಆಶಯಗಳೇ ಹಿಡಿಸಿರಲಿಲ್ಲ. ಇದಕ್ಕೆ ಯಾರನ್ನು ದೂರಬೇಕು. ಅದರಿಂದ ಯಾರು ಕಷ್ಟ ಅನುಭವಿಸಿದರು. ಶಿಕ್ಷಣ ವ್ಯವಸ್ಥೆ ಹಾಳಾಯಿತು. ಶಿಕ್ಷಣ ಸಿಗದೆ ಮಕ್ಕಳಿಗೆ ತೊಂದರೆಯಾಯಿತು. ಪೋಷಕರು ತೊಂದರೆಗೊಳಗಾದರು, ಉದ್ಯೋಗ ಇಲ್ಲದೆ ಯುವಕರಿಗೆ ಸಮಸ್ಯೆಯಾಯಿತು. ಈ ಕಷ್ಟ ಪರಂಪರೆ ಇಂದಿಗೂ ಮುಂದುವರಿಯುತ್ತಲೇ ಇದೆ. ಹಿಂಸಾಚಾರದಿಂದ ಕಾಶ್ಮೀರ ಸಮಾಜದ ಮೂಲ ವ್ಯವಸ್ಥೆಯೇ ಕಷ್ಟ ಅನುಭವಿಸಿತು. 1990ರಲ್ಲಿ ಭಾರತದ ಆರ್ಥಿಕತೆ ವಿಶ್ವಕ್ಕೆ ಮುಕ್ತವಾಯಿತು. ವಿಶ್ವದ ದೊಡ್ಡ ಕಂಪನಿಗಳು ಭಾರತಕ್ಕೆ ಬಂದವು. ದೇಶದ ಆರ್ಥಿಕ ಪ್ರಗತಿ ಆರಂಭವಾಯಿತು. ಆದರೆ ಕಾಶ್ಮೀರದಲ್ಲಿ ಅದೇ ಹೊತ್ತಿಗೆ ಭಯೋತ್ಪಾದನೆ ವಿಜೃಂಭಿಸಿತ್ತು. ದೇಶಕ್ಕೆ ಸಿಕ್ಕ ಆರ್ಥಿಕ ಪ್ರಗತಿಯ ಅನುಕೂಲ ಕಾಶ್ಮೀರಕ್ಕೆ ಸಿಗಲಿಲ್ಲ.
2011ರ ಜನಗಣತಿಯ ಪ್ರಕಾರ ಕಾಶ್ಮೀರದ ಒಟ್ಟು ಜನಸಂಖ್ಯೆಯಲ್ಲಿ 30 ವರ್ಷದ ಒಳಗಿನವರು ಶೇ 62ರಷ್ಟು ಮಂದಿಯಿದ್ದರು. ಇದಾಗಿ 10 ವರ್ಷಗಳ ನಂತರ, ಅಂದರೆ 2021ರಲ್ಲಿ ಈ ಪ್ರಮಾಣ ಶೇ 66 ಇರಬಹುದು. ಅಂದರೆ ಈ ಮಕ್ಕಳು ಸಂಘರ್ಷದ ಅವಧಿಯಲ್ಲಿಯೇ ಬೆಳೆದವರು. ಗನ್ ಸಂಸ್ಕೃತಿ, ಕರ್ಫ್ಯೂ ನೋಡಿಕೊಂಡು ಬೆಳೆದಿರುವ ಮಕ್ಕಳ ಮನಸ್ಸಿನಲ್ಲಿ ಹಿಂಸೆಯ ಕಲೆಗಳಿವೆ. ತೀವ್ರವಾದವನ್ನು ಅವರು ಹತ್ತಿರದಿಂದ ನೋಡಿದ್ದಾರೆ. ಅವರಿಂದ ನಾವು ಏನು ನಿರೀಕ್ಷಿಸಲು ಸಾಧ್ಯವಿದೆ?
ಕಾಶ್ಮೀರದ ಸಮಸ್ಯೆಗೆ ಇರುವ ಹಲವು ಮುಖಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೃಷಿ, ತೋಟಗಾರಿಕೆ ಕಾಶ್ಮೀರದ ಮುಖ್ಯ ಆದಾಯದ ಮೂಲ. 2019ರಲ್ಲಿ ಸೇಬು ಸಾಗಿಸುವ ಟ್ರಕ್ಗಳನ್ನು ಸುಟ್ಟು, ಚಾಲಕರನ್ನು ಕೊಂದಾಗ ಏನಾಯಿತು? ರೈತರ ಮನಸ್ಥಿತಿ ಏನಾಗಿರಬೇಕು? ಕೊಯ್ಲಿನ ಅವಧಿಯಲ್ಲಿ ಯಾರೋ ಬಂದು ಬೆಳೆ ಹಾಳು ಮಾಡುತ್ತಾರೆ ಎಂದರೆ ಏನು? ರೈತರು ತಮ್ಮ ಮಕ್ಕಳನ್ನು ಬೇಕಿದ್ದರೆ ಮಳೆಯಲ್ಲಿ ನೆನೆಯಲು ಬಿಡುತ್ತಾರೆ. ಆದರೆ ಬೆಳೆ ಕಾಪಾಡಿಕೊಳ್ಳಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಾರೆ. ಬೆಳೆ ಹಾಳು ಮಾಡಿದರೆ ರೈತರ ಮಕ್ಕಳನ್ನು ಅವರ ಕಣ್ಣೆದುರು ಕೊಂದಂತೇ ಆಗುತ್ತದೆ.
ಶಿಕ್ಷಣ, ವ್ಯಾಪಾರ, ಜೀವನೋಪಾಯ… ಹೀಗೆ ಕಾಶ್ಮೀರದ ಮಕ್ಕಳ ಸಾವಿಗೆ ಕಾರಣರಾಗುತ್ತಿರುವವರು, ಬೆಳೆಯನ್ನು ಹಾಳು ಮಾಡುತ್ತಿರುವವರು, ಮಕ್ಕಳ ಶಿಕ್ಷಣಕ್ಕೆ ಇರುವ ಅವಕಾಶ ಕಿತ್ತುಕೊಳ್ಳುತ್ತಿರುವವರು ಸ್ನೇಹಿತರಾಗಲು ಸಾಧ್ಯವಿಲ್ಲ. ಇದು ಕಾಶ್ಮೀರಿಗಳಿಗೆ ಅರ್ಥವಾಗಬೇಕು. ಕಾಶ್ಮೀರಿಗಳ ಮುಖ್ಯ ಆದಾಯದ ಮೂಲವೇ ಪ್ರವಾಸೋದ್ಯಮ. ಪ್ರವಾಸಿಗರು ಬಂದರೆ ಮಾತ್ರ ಆರ್ಥಿಕತೆ ಬೆಳೆಯುತ್ತದೆ. ಆದರೆ ಈಗ ಹೊಟೆಲ್, ವಿಮಾನ ಟಿಕೆಟ್ಗಳ ಬುಕಿಂಗ್ ನಿಂತು ಹೋಗಿದೆ. ಪ್ರವಾಸಿಗರು ಬರದಿದ್ದರೆ ಯಾರಿಗೆ ನಷ್ಟವಾಗುತ್ತದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಅಮಾಯಕರ ಕೊಲೆಯಿಂದ ಅಲ್ಲಿನ ಸ್ಥಳೀಯರ ಬದುಕೇ ಹಾಳಾಗುತ್ತಿದೆ.
ಕೆಲ ದೇಶಗಳಲ್ಲಿ ಏರ್ಪೋರ್ಟ್ ಚೆಕ್ ಅಂದರೆ ಹೇಗಿರುತ್ತೆ ಅಂತ ನಮಗೆ ಗೊತ್ತು. ಕೆಲ ದೇಶಗಳಲ್ಲಿ ‘ಪಾಕಿ’ ಎಂದು ಕರೆದರೆ ಅದು ಬೈದಂತೆ. ನಮ್ಮದು ಅಂಥ ಸಮಾಜ ಆಗಬೇಕು ಅಂದುಕೊಳ್ತೀರಾ? ನಾವು ಆ ದಾರಿಯಲ್ಲಿ ಹೋಗಬೇಕೆ? ನಮಗೆ 5000ಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ಕಾಶ್ಮೀರದ ಇನ್ಸಾನಿಯತ್, ಸೂಫಿಯತ್ ಹೆಸರುವಾಸಿ. ಕಾಶ್ಮೀರಿ ಅನ್ನಿಸಿಕೊಳ್ಳುವುದು ಹೆಮ್ಮೆಯ ಸಂಗತಿ ಆಗಬೇಕು, ಅವಮಾನದ ಸಂಗತಿ ಆಗಬಾರದು.
ಕಾಶ್ಮೀರದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಬಹುಸಂಖ್ಯಾತರು ಏಕೆ ಮೌನವಾಗಿದ್ದಾರೆ? ನಮ್ಮದು ಪ್ರಜಾಪ್ರಭುತ್ವ ಪದ್ಧತಿ. ನಮಗೆ ವಾಕ್ ಸ್ವಾತಂತ್ರ್ಯವಿದೆ. ಆದರೆ ಭಯೋತ್ಪಾದಕರು ಜನರನ್ನು ಕೊಲ್ಲುತ್ತಿದ್ದರೂ ಈಗ ಮಾತನಾಡದಿದ್ದರೆ, ಅಂಥವರಿಗೆ ಮುಂದೆ ಕಾಶ್ಮೀರದ ಬಗ್ಗೆ ಮಾತನಾಡಲು ಯಾವುದೇ ಅಧಿಕಾರ ಇರುವುದಿಲ್ಲ. ನೀವು ಒಂದು ನಿರ್ದಿಷ್ಟ ದಿನಾಂಕವನ್ನು ಆಯ್ಕೆ ಮಾಡಿಕೊಂಡು ಅಲ್ಲಿಂದಾಚೆಗೆ ಮಾತನಾಡುತ್ತೇನೆ ಎಂದರೆ ಒಪ್ಪಲು ಆಗುವುದಿಲ್ಲ. ಜನರು ಅದನ್ನು ಒಪ್ಪಬಾರದು.
ಈ ಬೆಳವಣಿಗೆಗಳಿಂದ ಯಾರು ಸೋಲುತ್ತಿದ್ದಾರೆ ಗೊತ್ತೇ? ಕಾಶ್ಮೀರದಲ್ಲಿ ಸೋಲುತ್ತಿರುವುದು ಸರಿಯಾದ ಶಿಕ್ಷಣ ಪಡೆಯದ ಕಾಶ್ಮೀರದ ಮಗು, ಭಯೋತ್ಪಾದನೆಯ ಪ್ರಭಾವಕ್ಕೆ ಒಳಗಾದ ಮಗನನ್ನು ಎನ್ಕೌಂಟರ್ನಲ್ಲಿ ಕಳೆದುಕೊಂಡ ತಾಯಿ ದೊಡ್ಡ ನಷ್ಟ ಅನುಭವಿಸುತ್ತಿದ್ದಾಳೆ. 1990ರ ನಂತರ ಬಂದ ವ್ಯವಸ್ಥೆಯು ಆಕೆಯ ಮಗನನ್ನು ಕಿತ್ತುಕೊಂಡಿತು. ಆಕೆಯ ದುಃಖಕ್ಕೆ ಭಯೋತ್ಪಾದನೆಯೇ ಕಾರಣ. ನಾವು ಒಂದು ಸಮಾಜವಾಗಿ ಆಕೆಯ ಕಣ್ಣೊರೆಸುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ಉಗ್ರ ನಿಗ್ರಹ ಕಾರ್ಯಾಚರಣೆ: ಜಮ್ಮು ಕಾಶ್ಮೀರದ ನಿವಾಸಿಗಳು ಮನೆಯಿಂದ ಹೊರಬರಬೇಡಿ ಎಂದ ಭದ್ರತಾ ಪಡೆ
ಇದನ್ನೂ ಓದಿ: Terrorists Encounter: ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿದ ಸೈನಿಕರು; ರಾಜೌರಿಯಲ್ಲಿ 6 ಎಲ್ಇಟಿ ಉಗ್ರರ ಹತ್ಯೆ