
ಕಳೆದ ವಾರ ಚಿಕ್ಕಮಗಳೂರಿನ ಕೆನರಾ ಬ್ಯಾಂಕಿನ (Canara bank) ಶಾಖೆಯೊಂದರಲ್ಲಿ, ಬ್ಯಾಂಕಿಗೆ ಬಂದ ಗ್ರಾಹಕರೊಬ್ಬರ ಜೊತೆ ಕನ್ನಡದಲ್ಲಿ (Kannada) ಮಾತನಾಡಲು ಹಿಂಜರಿದ ಬ್ಯಾಂಕಿನ ಸಿಬ್ಬಂದಿ ನಡವಳಿಕೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ‘ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ, ಆದ್ದರಿಂದ ದಯವಿಟ್ಟು ಕನ್ನಡದಲ್ಲಿ ನನಗೆ ವಿವರಿಸಿ,’ ಎಂದು ಗ್ರಾಹಕಿಯೊಬ್ಬರು ಪರಿಪರಿಯಾಗಿ ಕೇಳಿಕೊಂಡರೂ ಬ್ಯಾಂಕಿನ ಸಿಬ್ಬಂದಿ ಹಠಹೊತ್ತು ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವ ವಿಡಿಯೋ ಎಲ್ಲ ಕಡೆ ಹರಿದಾಡಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ತೀವ್ರ ವಿರೋಧ ವ್ಯಕ್ತವಾಗಿದೆ. ಕಟು ಟೀಕೆ ಬಂದಿದೆ.
ಈಗ್ಗೆ ಎರಡು ತಿಂಗಳ ಹಿಂದೆ ಬೆಂಗಳೂರಿನ ಸಮೀಪ ಚಂದಾಪುರದಲ್ಲಿರುವ ಸ್ಟೇಟ್ ಬ್ಯಾಂಕಿನ ಶಾಖೆಯ ಅಧಿಕಾರಿಯೊಬ್ಬರು, ಗ್ರಾಹಕರ ಜೊತೆ ಕನ್ನಡದಲ್ಲಿ ಮಾತನಾಡದೆ ಕಾಲು ಕೆರೆದು ಜಗಳಕ್ಕಿಳಿದಿದ್ದು ಭಾರಿ ವಿವಾದಕ್ಕೆ ಎಡೆಮಾಡಿತ್ತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರಕ್ಕೆ ಪ್ರತಿಕ್ರಿಯಿಸಿ ಅದನ್ನು ಖಂಡಿಸಿದ ಮೇಲೆ, ಸ್ಟೇಟ್ ಬ್ಯಾಂಕ್ನ ಆಡಳಿತ ನಿರ್ವಹಣಾ ಮಂಡಳಿಯವರು ಬೇರೆ ದಾರಿಯಿಲ್ಲದೇ ಅವರನ್ನು ಆ ಶಾಖೆಯಿಂದ ಎತ್ತಂಗಡಿ ಮಾಡಿದ್ದರು. ಆ ಘಟನೆ ಮರೆಯುವ ಮೊದಲೇ ಚಿಕ್ಕಮಗಳೂರಿನಲ್ಲಿ ಕೆನರಾ ಬ್ಯಾಂಕ್ನ ಶಾಖೆಯಲ್ಲಿ ಅಂಥದ್ದೇ ಘಟನೆ ನಡೆದಿದೆ. ನಿರೀಕ್ಷೆಯಂತೆ ಇದಕ್ಕೂ ಕೂಡ ಕನ್ನಡ ಹೋರಾಟಗಾರರು ಧ್ವನಿ ಎತ್ತಿದ್ದು ಬ್ಯಾಂಕಿನ ಸಿಬ್ಬಂದಿಯಿಂದ ಕನ್ನಡ ಅಸ್ಮಿತೆಗೆ ಅವಮಾನವಾಗಿದೆ ಎಂದು ಹೇಳುತ್ತಿರುವುದನ್ನು ಇಲ್ಲಿ ಗಮನಿಸಬಹುದು.
ಸ್ಟೇಟ್ ಬ್ಯಾಂಕ್ ಇರಲಿ ಅಥವಾ ಕೆನರಾ ಬ್ಯಾಂಕ್ ಇರಲಿ, ಅವರ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಮಾತನಾಡದೇ ಇರುವುದಕ್ಕೆ ಮತ್ತು ಇಂತಹ ಘಟನೆಗಳು ಪುನರಾವೃತ್ತಿಗೊಳ್ಳಲು ಹಲವಾರು ಸಾಮಾಜಿಕ ಕಾರಣಗಳಿವೆ.
1. ಕರ್ನಾಟಕ ಮತ್ತು ದಕ್ಷಿಣದ ರಾಜ್ಯಗಳಿಂದ ಬ್ಯಾಂಕುಗಳಿಗೆ ಉದ್ಯೋಗಕ್ಕೆ ಸೇರುವವರ ಸಂಖ್ಯೆ ತುಂಬಾ ಕಡಿಮೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಕುರಿತು ನನ್ನ ಬಳಿ ಯಾವುದೇ ದತ್ತಾಂಶ ಇಲ್ಲ. ಆದರೆ ಸುತ್ತ ಮುತ್ತ ನೋಡಿದರೆ ಇದಕ್ಕೆ ಕಾರಣಗಳು ಸಿಗುತ್ತವೆ. ಹತ್ತನೇ ತರಗತಿ ಮುಗಿಯುತ್ತಿದ್ದಂತೆ ತಮ್ಮ ಮಕ್ಕಳು ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಪ್ರವೇಶ ಪರೀಕ್ಷೆ ಪಾಸು ಮಾಡಿ ಒಳ್ಳೇ ಕಾಲೇಜಿನಲ್ಲಿ ಸೀಟು ಸಿಗಲಿ ಎಂದು ಪಾಲಕರು ಹೆಣಗಾಡುತ್ತಿರುವುದನ್ನು ನಾವು ದಿನಂಪ್ರತಿ ನೋಡುತ್ತಿದ್ದೇವೆ. ಅದೇ ರೀತಿ ವಾಣಿಜ್ಯ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮಕ್ಕಳು ಎಂಬಿಎ ಮಾಡುವ ಕನಸು ಕಾಣುವುದೇ ಹೆಚ್ಚು. ಯಾವ ಮಕ್ಕಳು ಕೂಡ ಬ್ಯಾಂಕಿಂಗ್ ಪರೀಕ್ಷೆ ಪಾಸು ಮಾಡಿ ಗುಮಾಸ್ತ ಹುದ್ದೆ ಸೇರಿ ಜೀವನ ಕಟ್ಟಿಕೊಳ್ಳುವ ಕನಸು ಕಾಣುವುದಿಲ್ಲ. ಅಥವಾ ಪರೀಕ್ಷಾರ್ಥ ಸೇವಾವಧಿಯ ಅಧಿಕಾರಿ ಹುದ್ದೆಗೆ (probationary officers cadre) ಅಖಿಲ ಭಾರತ ಮಟ್ಟದ ಪರೀಕ್ಷೆ ಎದುರಿಸಿ ನೇರವಾಗಿ ಮಧ್ಯಮ ಹಂತದ ಅಧಿಕಾರಿಯಾಗುವ ಎದೆಗಾರಿಕೆಯನ್ನು ತೋರಿಸುವುದಿಲ್ಲ. 12ನೇ ತರಗತಿಯಲ್ಲಿ ಕಡಿಮೆ ಅಂಕ ಬಂದವರು ಸಹ ಮುಂದೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರಲು ಅಷ್ಟೇನೂ ಉತ್ಸಾಹ ತೋರುವ ಲಕ್ಷಣ ಕಾಣುತ್ತಿಲ್ಲ. ಆದರೆ ಉತ್ತರ ಭಾರತದ ಲಕ್ಷಾಂತರ ಮಕ್ಕಳು ಬ್ಯಾಂಕಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ, ಅಧಿಕಾರಿ ಮಟ್ಟದ ಪರೀಕ್ಷೆಯಲ್ಲಿಯೂ ಸಹ ಉತ್ತರ ಭಾರತದ ಮಕ್ಕಳದ್ದೇ ಮೇಲುಗೈ. ಈ ಹಿನ್ನಲೆಯಲ್ಲಿ ದಕ್ಷಿಣದಲ್ಲಿರುವ ಶಾಖೆಗಳಿಗೆ ಉತ್ತರ ಭಾರತದಿಂದ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಬ್ಯಾಂಕುಗಳಲ್ಲಿ ಒಂದು ನಿಯಮ ಇದೆ: ಪರೀಕ್ಷಾರ್ಥ ಸೇವಾ ಅವಧಿ ಯಲ್ಲಿರುವ (probationary period) ಅಧಿಕಾರಿಗಳನ್ನು, ಸೇವೆಗೆ ಸೇರಿದ ಕೂಡಲೇ ಅವರು ಸೇರಿದ ವಿಭಾಗ (division) ಬಿಟ್ಟು ಹೊರ ರಾಜ್ಯಕ್ಕೆ ವರ್ಗಾಯಿಸುವ ಕಾನೂನು ಯಾವ ಬ್ಯಾಂಕಿನಲ್ಲಿಯೂ ಇಲ್ಲ. ಆದರೆ ಸೇವೆಗೆ ಸೇರಿ, ಖಾಯಂಗೊಂಡ ನಂತರ ಮತ್ತು ಮೂರು ನಾಲ್ಕು ವರ್ಷಗಳ ಸೇವೆ ಸಂದ ನಂತರ ಅವರನ್ನು ಬೇರೆ ಬೇರೆ ರಾಜ್ಯಗಳಿಗೆ ವರ್ಗಾಯಿಸುವ ವಾಡಿಕೆ ಇದೆ.
2. ಇಲ್ಲಿ ಇನ್ನೊಂದು ವಿಚಾರ ಇದೆ. ಹೊಸದಾಗಿ ಸೇವೆಗೆ ಸೇರಿದವರು ತಮ್ಮ ಗಂಡ ಅಥವಾ ಹೆಂಡತಿ ನೌಕರಿ ಮಾಡುವ ಜಾಗಕ್ಕೆ ವರ್ಗಾಯಿಸಬೇಕೆಂದು ಕೋರಿದರೆ ಬ್ಯಾಂಕುಗಳು ಇಲ್ಲ ಎನ್ನುವುದಿಲ್ಲ. ಬ್ಯಾಂಕ್ ನೇಮಕಾತಿ ನಿಯಮಗಳಡಿ ಇದನ್ನು ಒಪ್ಪಿ ಮಾನವೀಯ ದೃಷ್ಟಿಕೋನದಡಿ ವರ್ಗ ಮಾಡುತ್ತಾರೆ. ಪ್ರಾಯಶಃ ಬೆಂಗಳೂರಿನ ಸುತ್ತಮುತ್ತ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಗಂಡಂದಿರನ್ನು ಸೇರಿಕೊಳ್ಳಲು ಮಹಿಳಾ ಸಿಬ್ಬಂದಿ ಅಥವಾ ಅಧಿಕಾರಿಗಳು ಉತ್ತರ ಭಾರತದಿಂದ ವರ್ಗಾವಣೆ ಮಾಡಿಸಿಕೊಂಡು ಬಂದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ಸುತ್ತಮುತ್ತಲಿರುವ ರಾಷ್ಟ್ರೀಯ ಬ್ಯಾಂಕುಗಳ ಶಾಖೆಗಳಲ್ಲಿ ಕನ್ನಡಬಾರದಿರುವ ಉದ್ಯೋಗಿಗಳೇ ಸಿಗುತ್ತಿದ್ದಾರೆ.
3. ತೊಂಬತ್ತರ ದಶಕದ ಮಾತು. ರಾಮ್ ವಿಲಾಸ್ ಪಾಸ್ವಾನ್ ಮತ್ತು ಲಾಲು ಪ್ರಸಾದ್ ಯಾದವ್ ಹೆಚ್ಚಿನ ಕಾಲ ರೈಲ್ವೆ ಮಂತ್ರಿಯಾಗಿ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದರು. ಆಗಿದ್ದ ವಾಸ್ತವ ಸಂಗತಿಯೊಂದನ್ನು ನೆನಪಿಸುತ್ತಿದ್ದೇನೆ; ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯ ಜಾಹೀರಾತುಗಳು ಬಿಹಾರ್ ಮತ್ತು ಪಶ್ಚಿಮ ಬಂಗಾಳದ ಪತ್ರಿಕೆಗಳಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು. ಇದೇ ಕಾರಣಕ್ಕೆ, ಇವತ್ತಿಗೂ ಕೂಡ ಕರ್ನಾಟಕದ ಹಲವಾರು ಸಣ್ಣ ಸಣ್ಣ ಊರುಗಳಲ್ಲಿರುವ ರೈಲ್ವೆ ನಿಲ್ದಾಣಗಳಲ್ಲಿ ಉತ್ತರ ಭಾರತದ ಅಧಿಕಾರಿಗಳು ಕಾಣಸಿಗುತ್ತಾರೆ. ಇದೇ ಸ್ಥಿತಿ ಬ್ಯಾಂಕಿಂಗ್ ವ್ಯವಸ್ಥೆಗೂ ಬಂದಿದೆ. ಬ್ಯಾಂಕಿಂಗ್ ಪರೀಕ್ಷೆಯ ಜಾಹೀರಾತುಗಳು ಎಲ್ಲಾ ಪತ್ರಿಕೆಗಳಲ್ಲಿಯೂ ಬರುತ್ತಿವೆ. ನಮ್ಮ ರಾಜ್ಯದಲ್ಲೂ ಕಾಣಸಿಗುತ್ತಿವೆ. ಆದರೆ, ಇಂತಹ ಪರೀಕ್ಷೆಗಳಿಗೆ ಅರ್ಜಿ ಹಾಕಿ, ತಯಾರಿ ಮಾಡಿಕೊಂಡು, ಪರೀಕ್ಷೆ ಬರೆದು ಉತ್ತೀರ್ಣರಾಗಿ ಬ್ಯಾಂಕಿಂಗ್ ಸೇವೆಗೆ ಸೇರುವವರ ಸಂಖ್ಯೆ ಮಾತ್ರ ಅತಿ ಕಡಿಮೆ. ಇದಕ್ಕೆ ಕೇಂದ್ರ ಸರಕಾರವನ್ನು ಹೊಣೆ ಮಾಡುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ, ಇಂದು ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ಗಳಲ್ಲಿ ಪ್ರಮುಖವಾದವು ಕರ್ನಾಟಕದಲ್ಲೇ ಆರಂಭವಾದವು. ಉದಾಹರಣೆಗೆ; ಸಿಂಡಿಕೇಟ್ ಬ್ಯಾಂಕ್ (ಕರ್ನಾಟಕದಲ್ಲೇ ಆರಂಭವಾಗಿದ್ದ ಕೆನರಾದೊಂದಿಗೆ ವಿಲೀನ), ಕಾರ್ಪೊರೇಷನ್ ಬ್ಯಾಂಕ್ (ಈಗ ಯೂನಿಯನ್ ಬ್ಯಾಂಕ್ ಜತೆ ವಿಲೀನ), ವಿಜಯಾ ಬ್ಯಾಂಕ್ (ಈಗ ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನ) ಅನ್ನು ಉಲ್ಲೇಖಿಸಬಹುದು. ಬ್ಯಾಂಕ್ ರಾಷ್ಟ್ರೀಕರಣವಾದ ಮೇಲೂ ಕೂಡ ತುಂಬಾ ಜನ ಕರ್ನಾಟಕದಿಂದ ಬ್ಯಾಂಕಿಂಗ್ ಉದ್ಯೋಗಕ್ಕೆ ಸೇರುತ್ತಿದ್ದರು. ಇವೆಲ್ಲ ಬದಲಾಗಿದ್ದು 1990 ರ ದಶಕದಲ್ಲಿ. ಯಾವಾಗ ಐಟಿ ಕ್ಷೇತ್ರದ ಓಘ ಶುರುವಾಯಿತೋ ಆಗಿನಿಂದ ನಮ್ಮ ಮಕ್ಕಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳುವುದನ್ನು ತುಂಬಾ ಕಡಿಮೆ ಮಾಡಿದ್ದಾರೆ.
ಇದನ್ನೂ ಓದಿ: ದಯಾನಂದ್ ಮತ್ತು ಅಧಿಕಾರಿಗಳ ಅಮಾನತು: ಭಾವನಾತ್ಮಕ ಆಕ್ರೋಶ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸದು
4. ಕರ್ನಾಟಕದಲ್ಲಿ ಇರುವ ತನಕ, ತಮ್ಮ ಬ್ಯಾಂಕಿನ ಉದ್ಯೋಗಿಗಳು ಗ್ರಾಮೀಣ ಭಾಗದ ಗ್ರಾಹಕರ ಜೊತೆ ಕನ್ನಡದಲ್ಲಿ ಮಾತನಾಡುವ ವ್ಯವಸ್ಥೆಯನ್ನು ಪ್ರತಿಯೊಂದು ಬ್ಯಾಂಕ್ ಕಲ್ಪಿಸಿ ಕೊಡಬೇಕಲ್ಲವೇ? ಈ ಪ್ರಶ್ನೆ ಮೂಡುವುದು ಸಹಜ. ನಿಜ, ಈ ರೀತಿಯ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಮತ್ತು, ಬ್ಯಾಂಕುಗಳು ಆಯಾ ರಾಜ್ಯದ ಸಂಸ್ಕೃತಿಗೆ ಸಂವೇದನಾಶೀಲರಾಗಿ ಇರುವುದರಲ್ಲಿ ತಪ್ಪೇನಿಲ್ಲ. ಅದು ಅವರ ಕರ್ತವ್ಯ ಕೂಡ. ಇದನ್ನು ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಗಣಿಸಬೇಕು. ಸಾಧ್ಯವಾದಷ್ಟರ ಮಟ್ಟಿಗೆ ಆಯಾ ರಾಜ್ಯದ ಅಧಿಕಾರಿಗಳನ್ನು ಅಥವಾ ಗುಮಾಸ್ತರನ್ನು ಮಾತೃಭಾಷೆಯ ರಾಜ್ಯದಲ್ಲಿಯೇ ಕೆಲಸಕ್ಕೆ ನಿಯೋಜಿಸುವುದು; ಅಥವಾ ಹೊರ ರಾಜ್ಯದಿಂದ ಅಧಿಕಾರಿಗಳು ಅಥವಾ ಗುಮಾಸ್ತರು ನಮ್ಮ ರಾಜ್ಯಕ್ಕೆ ಬಂದರೆ, ಗ್ರಾಹಕರ ಜೊತೆ ಸೌಜನ್ಯದಿಂದ ವರ್ತಿಸಬೇಕೆಂದು ಎಲ್ಲಾ ಬ್ಯಾಂಕಿಗಳಿಗೂ ಮತ್ತೊಮ್ಮೆ ನಿರ್ದೇಶನ ನೀಡಿದರೆ ತಪ್ಪೇನು ಆಗುವುದಿಲ್ಲ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Fri, 11 July 25