ಪ್ರಮೋದ್ ಮರವಂತೆ ಚೊಚ್ಚಲ ಕಾದಂಬರಿ: ಓದುಗರ ಮನಕ್ಕೆ ತಂಪೀಯಬಲ್ಲ ‘ತೊಂಡೆ ಚಪ್ಪರ’!

Book Review: ಕಾಂತಾರ ಸಿನಿಮಾದ ‘ಸಿಂಗಾರ ಸಿರಿಯೇ’ ಹಾಡಿನ ಖ್ಯಾತಿಯ ಸಿನಿಮಾ ಸಾಹಿತಿ ಪ್ರಮೋದ್ ಮರವಂತೆ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’ ಓದುಗ ಪ್ರಪಂಚಕ್ಕೆ ಕಾಲಿಟ್ಟಿದೆ. ಪ್ರಮೋದ್ ಮರವಂತೆಯವರ ಸಿನಿಮಾ ಹಾಡುಗಳಂತೆ ಕಾದಂಬರಿಯೂ ಓದುಗರ ಮನಸ್ಸನ್ನು ಗೆಲ್ಲಲಿದೆಯೇ? ಕಾದಂಬರಿಯ ವಿಶೇಷವೇನು? ಪ್ರದೀಪ್ ಶೆಟ್ಟಿ ಬೇಳೂರು ಬರೆದ ಪುಸ್ತಕ ವಿಮರ್ಶೆ ಇಲ್ಲಿದೆ.

ಪ್ರಮೋದ್ ಮರವಂತೆ ಚೊಚ್ಚಲ ಕಾದಂಬರಿ: ಓದುಗರ ಮನಕ್ಕೆ ತಂಪೀಯಬಲ್ಲ ‘ತೊಂಡೆ ಚಪ್ಪರ’!
ಪ್ರಮೋದ್ ಮರವಂತೆ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’

Updated on: Aug 17, 2025 | 6:00 PM

‘ತೊಂಡೆ ಚಪ್ಪರ’. ಇದು ಕನ್ನಡದ ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆಯವರ (Pramod Maravanthe) ಮೊದಲ ಕಾದಂಬರಿ. ಮಲೆನಾಡಿನ ಒಂದು ಪರಿಸರದಲ್ಲಿ ನಡೆದ ಘಟನೆಯನ್ನು ಆಧರಿಸಿದ ಕಥಾ ಹಂದರವನ್ನು ಹೊಂದಿದ್ದರೂ, ತೊಂಭತ್ತರ ದಶಕದ ಆಸುಪಾಸಿನಲ್ಲಿ ಹಳ್ಳಿಯಲ್ಲಿ ಬದುಕುತ್ತಿದ್ದ ಬಹುತೇಕ ಜನರ ಜೀವನದ ಕಥೆ ಮತ್ತು ವ್ಯಥೆಯನ್ನು ಅಕ್ಷರಗಳ ಮೂಲಕ ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ಎಂದರೆ ತಪ್ಪಾಗಲಾರದು.

‘ತೊಂಡೆ ಚಪ್ಪರ’. ಈ ಹೆಸರು ಕೇಳಿದ ಕೂಡಲೇ ಕರಾವಳಿ ಮತ್ತು ಮಲೆನಾಡು ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಥಟ್ಟನೆ ಕಣ್ಮುಂದೆ ಬರುವುದು ಮನೆಯ ಹಿತ್ತಲಲ್ಲಿ ನಾಲ್ಕು ಗೂಟ ನಿಲ್ಲಿಸಿ ಚಪ್ಪರ ಮಾಡಿ, ಮಧ್ಯೆ ತೊಂಡೆಯ ಬಳ್ಳಿಯನ್ನು ಒಂದು ಗೂಟದ ಮೂಲಕ ಹಬ್ಬಿಸಿ, ಅದನ್ನು ಚೆನ್ನಾಗಿ ಪೋಷಿಸುತ್ತಿದ್ದುದು. ಈಗ ಕಾದಂಬರಿಯತ್ತ ಬರೋಣ. ಇದರಲ್ಲಿ ಬರುವ ‘ನಾಗಿ’ ಎನ್ನುವ ಹೆಣ್ಣುಮಗಳು, ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡು, ಏಕಾಂಗಿಯಾಗಿ ಬದುಕಿನ ತೇರು ಎಳೆಯಲು ಪಡುವ ಕಠಿಣ ಹೆಜ್ಜೆಗಳನ್ನು ಗಮನಿಸಬಹುದು. ಆ ಕಡೆ ತಾಯ್ತನದ ಸುಖವೂ ಇಲ್ಲದೆ, ಗಂಡನ ಸಾಂಗತ್ಯವೂ ಇಲ್ಲದೆ ಬದುಕುವ ಒಬ್ಬಂಟಿ ಹೆಣ್ಣು, ಒಂದು ಕ್ಷಣ ತನ್ನ ಬದುಕಿನ ಹಾದಿ ಬದಲಿಸಿ ಬೇರೆ ವ್ಯಕ್ತಿಯ ದೇಹದ ಸುಖದ ಶಾಖಕ್ಕೆ ಕರಗಿದಾಗ ಆಕೆಯ ಬದುಕು ಏನಾಗುತ್ತದೆ? ಹೇಗೆ ತೊಂಡೆಯು ಸೂರ್ಯನ ಬಿಸಿಲಿಗೆ ಬಾಡುವುದೋ ಹಾಗೆಯೇ ಆಕೆಯ ಬದುಕು ಬಾಡುವುದೇ ಅಥವಾ ಅರಳುವುದೇ? ಈ ಪ್ರಶ್ನೆಗೆ ಕಾದಂಬರಿಯಲ್ಲಿ ಉತ್ತರ ಕಂಡುಕೊಳ್ಳಬಹುದು.

ಪ್ರಮೋದ್ ಮರವಂತೆಯವರ ಸಿನಿಮಾ ಸಾಹಿತ್ಯವನ್ನು ಗುನುಗಿದ್ದ ನಾವು, ಈ ಕಾದಂಬರಿಯ ಮೂಲಕ ಮಲೆನಾಡಿನ ಭಾಷಾ ಸೊಗಡನ್ನು ಆಸ್ವಾದಿಸಬಹುದು. ಆ ಭಾಷೆಯ ಮೇಲೆ ಲೇಖಕರಿಗಿರುವ ಪ್ರೀತಿ ಮತ್ತು ಹಿಡಿತವನ್ನು ಗಮನಿಸಬಹುದು. ಸರಳವಾಗಿ ಒಂದು ಕಥೆಯನ್ನು ಕಟ್ಟಿಕೊಡುತ್ತಾ ಹೋಗಿರುವ ಪರಿಯನ್ನು ನಾವಿಲ್ಲಿ ಕಾಣಬಹುದಾಗಿದೆ‌.

ಕಾದಂಬರಿಯ ಆರಂಭದಿಂದ ಅಂತ್ಯದವರೆಗೆ ಪ್ರತಿ ಪುಟದಲ್ಲಿಯೂ ನಾವು ಬೆಳೆದ ಪರಿಸರದಲ್ಲಿ ಘಟಿಸಿಹೋದ ಘಟನೆಗಳನ್ನೇ ಅಕ್ಷರ ರೂಪದಲ್ಲಿ ಜೋಡಿಸಿದ್ದಾರೆಯೇನೋ ಎಂಬಂತೆ ಓದುಗರಿಗೆ ಭಾಸವಾಗದೆ ಇರದು.
ಹಾಗೆಯೇ, ಬರುವ ಪಾತ್ರಗಳೆಲ್ಲವೂ ನಾವು ನಮ್ಮ ಬಾಲ್ಯದ ದಿನಗಳಲ್ಲಿ ನೋಡಿದ ಹಾಗೂ ಕೆಲವೊಮ್ಮೆ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿದ ವ್ಯಕ್ತಿಚಿತ್ರಣ ಕಟ್ಟಿಕೊಡುವುದು ನಿಶ್ಚಿತ. ಯಾವ ಪಾತ್ರಗಳನ್ನೂ ಅನಾವಶ್ಯಕ ಎಳೆಯದೆ, ಹಿತ ಮಿತವಾಗಿ ಹೆಣೆದು ಕೊಟ್ಟಿದ್ದು ಲೇಖಕರ ಬರವಣಿಗೆಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ‌.

ಅಜಮಾಸು 30-40 ವರ್ಷ ವಯಸ್ಸಿನ ಆಸುಪಾಸಿನವರಿಗೆಲ್ಲಾ ಈ ಕಾದಂಬರಿ ಅವರ ಬಾಲ್ಯದ ದಿನಗಳನ್ನು ಮೆಲುಕುಹಾಕಿಕೊಟ್ಟರೆ ಅಚ್ಚರಿಯೇನೂ ಇಲ್ಲ. ಒಟ್ಟಂದದಲ್ಲಿ, ಚೆನ್ನಾಗಿ ಓದಿಸಿಕೊಂಡು ಹೋಗುವ ‘ತೊಂಡೆ ಚಪ್ಪರ’ ಓದುಗರಿಗೆ ನಿರಾಸೆಯನ್ನಂತೂ ಉಂಟುಮಾಡದು.

ಪುಸ್ತಕ ವಿಮರ್ಶೆ: ಪ್ರದೀಪ್ ಶೆಟ್ಟಿ ಬೇಳೂರು

  • ಪುಸ್ತಕದ ಹೆಸರು: ತೊಂಡೆ ಚಪ್ಪರ
  • ಲೇಖಕರು: ಪ್ರಮೋದ್ ಮರವಂತೆ
  • ಪುಟಗಳು: 128
  • ಪುಸ್ತಕದ ಪ್ರಕಾಶಕರು: ಸಸಿ ಪ್ರಕಾಶನ, ಮೈಸೂರು
  • ಬೆಲೆ: 155 ರೂ.

ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Sun, 17 August 25