
ಒಂದು ವರ್ಷದ ಹಿಂದಿನ ಮಾತು. ಈ ಘಟನೆ ನಡೆದಾಗ, ರಿಷಿ ಸುನಕ್ ಇಂಗ್ಲೆಂಡಿನ ಪ್ರಧಾನಿಯಾಗಿದ್ದರು. ಅವರ ಅತ್ತೆ, ಸುಧಾ ಮೂರ್ತಿ ಭಾರತದಿಂದ ಇಂಗ್ಲೆಂಡಿಗೆ ಪ್ರಯಾಣಿಸುವಾಗ ಲಂಡನ್ನಿನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ವಿಮಾನ ನಿಲ್ದಾಣದಲ್ಲಿ ಇಳಿದ ಸುಧಾ ಮೂರ್ತಿಯವರಿಗೆ ಕಸ್ಟಮ್ಸ್ ಅಧಿಕಾರಿಯೊಬ್ಬರು ಕೆಲವು ಪ್ರಶ್ನೆಗಳನ್ನು ಕೇಳಿದರಂತೆ. ಅದಕ್ಕೆ ಉತ್ತರಿಸುತ್ತಿದ್ದ ಸುಧಾ ಮೂರ್ತಿ, ತಾವು ನಂಬರ್ 10, ಡೌನಿಂಗ್ ರಸ್ತೆಗೆ ಹೊರಟಿರುವುದಾಗಿ ಹೇಳಿದರು. ಅದನ್ನು ಕೇಳಿದ ಆ ಅಧಿಕಾರಿ ಹೌಹಾರಿದ. ಯಾಕೆಂದರೆ ಆ ವಿಳಾಸದಲ್ಲಿ ಯಾವುದೋ ಹೋಟೆಲ್ ಆಗಲಿ ಅಥವಾ ಯಾರದೋ ಸಾಮಾನ್ಯರ ಮನೆಯಿಲ್ಲ ನೋಡಿ. ಹೇಳಿ ಕೇಳಿ, ಇಂಗ್ಲೆಂಡಿನ ಪ್ರಧಾನಮಂತ್ರಿಯ ಅಧಿಕೃತ ನಿವಾಸವಿರುವ ವಿಳಾಸ ಅದು.
ಸಾಮಾನ್ಯ ಬಟ್ಟೆಯುಟ್ಟು ಭಾರತದಿಂದ ಬಂದಿರುವ ಮಹಿಳೆಯೊಬ್ಬರು ತಾನು ಪ್ರಧಾನಿಯ ಅಧಿಕೃತ ನಿವಾಸಕ್ಕೆ ಹೊರಟಿರುವುದಾಗಿ ಹೇಳುವುದನ್ನು ಕೇಳಿದ ಆ ಅಧಿಕಾರಿ ಒಂದು ಕ್ಷಣ ತಮ್ಮ ಕಿವಿಯನ್ನೇ ನಂಬದಾದರು. ಇಷ್ಟಾದರೂ, ಸುಧಾ ಮೂರ್ತಿ ಸಮಜಾಯಿಷಿ ನೀಡಲಿಲ್ಲ, ತಾನು, ಪ್ರಧಾನಿ ಸುನಕ್ ಅವರ ಹೆಂಡತಿಯಾಗಿರುವ ಅಕ್ಷತಾಳ ಅಮ್ಮ ಎಂದು ಹೇಳಲಿಲ್ಲ ಎನ್ನುವ ವಿಚಾರ ತಡವಾಗಿ ಹೊರಗೆ ಬಂತು. ಅದು ಅವರ ಸರಳತನ ಎಂದು ಹಲವಾರು ಜನ ಕೊಂಡಾಡಿದರೆ, ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದರು. ಆಕಾರ್ ಪಟೇಲ್ರಂತಹ ಪ್ರಗತಿಪರರು ಕೂಡ ಇವರ ಜೊತೆ ಸೇರಿ ಮೂರ್ತಿ ದಂಪತಿಗಳನ್ನು ಹೀಯಾಳಿಸಿದರು. ಈಗಲೂ ಸಹ ‘ಒಳ್ಳೆಯತನ ಮತ್ತು ಸರಳತನ’ವನ್ನು ಹೀಗಳೆಯಬೇಕೆಂದರೆ, ಜನ ಮೂರ್ತಿ ದಂಪತಿಗಳನ್ನು ಟ್ರೋಲ್ ಮಾಡುತ್ತಾರೆ. ಅದು ಇತ್ತೀಚಿಗೆ ವಾಡಿಕೆಯಾಗಿಬಿಟ್ಟಿದೆ.
ಈಗ ಮತ್ತೆ ನಾರಾಯಣ ಮೂರ್ತಿ ದಂಪತಿ ಸುದ್ದಿಯಲ್ಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ ಮಾಡುವ ಸರಕಾರದ ತಂಡವೊಂದು ಮೂರ್ತಿ ದಂಪತಿಯ ಮನೆಗೆ ಹೋದಾಗ ನಡೆದ ಘಟನೆ ಈಗ ತುಂಬಾ ಚರ್ಚೆಯಾಗುತ್ತಿದೆ. ‘ತಾವು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ,’ ಎಂದು ಅವರು ಬಂದಿರುವ ತಂಡಕ್ಕೆ ಉತ್ತರಿಸಿದ್ದಾರೆ. ಮತ್ತು ಒಂದು ಹೆಜ್ಜೆ ಮುಂದೆ ಹೋಗಿ, ‘ತಾವು ಹಿಂದುಳಿದ ವರ್ಗದ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆಯುತ್ತಿಲ್ಲ. ಆದ್ದರಿಂದ ಇದು ನಮಗೆ ಸಂಬಂಧಿಸಿದ್ದಲ್ಲ,’ ಎಂದು ಹೇಳಿದರಂತೆ. ತಮ್ಮದೇ ಕೈ ಬರಹದಲ್ಲಿ ಮೂರ್ತಿಯವರೇ ಖುದ್ದಾಗಿ ಬರೆದ ಒಕ್ಕಣಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಇಟ್ಟುಕೊಂಡು ಪ್ರಗತಿಪರ ಚಿಂತಕರು ಮತ್ತು ಅವರ ಕಟ್ಟಾ ಬೆಂಬಲಿಗರು- ಸಿಕ್ಕಿದ್ದೇ ಅವಕಾಶವೆಂದು ನಾರಾಯಣ ಮೂರ್ತಿಯವರ ಮೇಲೆ ಮುಗಿಬಿದ್ದಿದ್ದಾರೆ. ಇಷ್ಟೇ ಆಗಿದ್ದರೆ ಇದನ್ನು ನಿರ್ಲಕ್ಷಿಸಬಹುದಿತ್ತು. ಈ ಬೆಳವಣಿಗೆಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಪ್ರತಿಕ್ರಿಯಿಸುವ ಮೊದಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ, ಮೂರ್ತಿ ದಂಪತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಹಾಗಾಗಿ ಇದನ್ನು ದೊಡ್ಡ ವಿವಾದ ಮಾಡುವ ಅವಶ್ಯಕತೆಯಿಲ್ಲ ಎಂದು ಅಂದುಕೊಂಡರೆ ಅದು ತಪ್ಪು.
ಮೊದಲಿಗೆ ಬೇರೆ ವಿಚಾರವನ್ನು ಬಿಟ್ಟು ಕಾನೂನಿನ ವಿಚಾರವನ್ನು ಎತ್ತಿಕೊಳ್ಳೋಣ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜಾತಿಗಣತಿಯ ವಿಚಾರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ್ದ ಕೆಲ ನಿರ್ದೇಶನಗಳನ್ನು ನೆನಪಿಸುತ್ತೇನೆ. ಸಿದ್ದರಾಮಯ್ಯ ಮತ್ತು ಅವರ ತಂಡ ನೀಡಿದ ಪ್ರತಿಕ್ರಿಯೆ ತಪ್ಪು ಎಂಬುದು ಅದನ್ನು ನೋಡಿದಾಗ ನಿರೂಪಿತವಾಗುತ್ತದೆ. 1) ಜನರು ನೀಡುವ ಮಾಹಿತಿಯ ದತ್ತಾಂಶವನ್ನು ಮತ್ತು ಅದರ ಗೌಪ್ಯತೆಯನ್ನು ಕಾಪಾಡಬೇಕು 2) ಸಮೀಕ್ಷೆ ಮಾಡುವ ಸರಕಾರಿ ಅಧಿಕಾರಿಗಳು ತಮ್ಮ ಮೊಬೈಲ್ ನಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಆಯೋಗಕ್ಕೆ ಮಾತ್ರ ನೀಡಬೇಕು 3) ಜನರು ನೀಡುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ, ಸರಕಾರಕ್ಕೆ ನೀಡಬಾರದು ಅಥವಾ ಹಂಚಿಕೊಳ್ಳಬಾರದು ಎಂದು ನ್ಯಾಯಾಲಯವು ಹೇಳಿತ್ತು. ಈ ಮೂರು ನಿರ್ದೇಶನವನ್ನು ತಾನು ಪಾಲಿಸುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ಆಯೋಗವು ವಚನ ನೀಡಿತ್ತು.
ಈ ಘಟನೆಯ ಕುರಿತು ಮೂರ್ತಿದಂಪತಿ ಆಪ್ತರ ಜೊತೆ ನಾನು ಮಾತನಾಡಿದಾಗ ಗೊತ್ತಾಗಿದ್ದೇನೆಂದರೆ, ಈ ಮಾಹಿತಿಯನ್ನು ಕುಟುಂಬದ ಸದಸ್ಯರು ಸಾರ್ವಜನಿಕರಿಗೆ ಹಂಚಿಕೊಂಡಿಲ್ಲ. ಆಯೋಗದ ಅಥವಾ ಸಮೀಕ್ಷೆಗೆ ತೆರಳಿದ್ದ ಸರಕಾರಿ ಅಧಿಕಾರಿಗಳು ಈ ಮಾಹಿತಿಯನ್ನು ಸಾರ್ವಜನಿಕರಿಗೆ ಹಂಚಿಕೊಂಡಿದ್ದಾರೆ. ಈ ಕುರಿತು ಕೆಲ ಅಧಿಕಾರಿಗಳೇ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವ ನಾರಾಯಣ ಮೂರ್ತಿ ದಂಪತಿಯ ಅಭಿಪ್ರಾಯ ಕೂಡ ಒಂದು ದತ್ತಾಂಶವೇ. ಆಯೋಗ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ, ಈ ದತ್ತಾಂಶದ ಗೌಪ್ಯತೆಯನ್ನು ಕಾಪಾಡುವ ಕರ್ತವ್ಯ ಸರಕಾರಿ ಅಧಿಕಾರಿಗಳದ್ದು ಮತ್ತು ಆಯೋಗದ್ದಾಗಿತ್ತು. ನಡೆದಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ವಿಶ್ಲೇಷಿಸಿದಾಗ ಒಂದು ಅಂಶ ನಿರೂಪಿತವಾಗುತ್ತದೆ: ನ್ಯಾಯಾಲಯಕ್ಕೆ ಕೊಟ್ಟ ಮಾತಿನಿಂದ ಆಯೋಗವು ಹಿಂದೆ ಸರಿದಿದೆ. ಅಂದರೆ ಆಯೋಗದಿಂದ ನ್ಯಾಯಾಲಯ ನಿಂದನೆಯಾಗಿದೆ.
ನಾರಾಯಣಮೂರ್ತಿಯವರು ಜಾತಿ ಸಮೀಕ್ಷಾ ತಂಡಕ್ಕೆ ನೀಡಿದ ಮಾಹಿತಿಯ ಬಗ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಏಐಸಿಸಿ ಪ್ರಧಾನ ಕಾರ್ಯದರ್ಶಿ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಮತ್ತು ಟೀಕಿಸುವ ಭರದಲ್ಲಿಅವರನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ. ನ್ಯಾಯಾಲಯ ಆಯೋಗಕ್ಕೆ ಖಡಾಖಂಡಿತವಾಗಿ ಹೇಳಿತ್ತ-ಈ ಸಮೀಕ್ಷೆಯ ಮಾಹಿತಿಯನ್ನು ಸರಕಾರದ ಜೊತೆ ಹಂಚಿಕೊಳ್ಳಬಾರದು. ಮೂರ್ತಿ ದಂಪತಿ ನೀಡಿದ ಮಾಹಿತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಗೆ ಸಿಕ್ಕಿತು? ಇದು ಹೇಗೆ ಸಾಧ್ಯ? ಅವರು ಹೇಗೆ ಪ್ರತಿಕ್ರಿಯಿಸಿದರು? ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮತ್ತು ಅವರ ಪಟಾಲಂಗೆ ಸಮೀಕ್ಷೆಯ ಎಲ್ಲ ಮಾಹಿತಿಗಳು ದೊರಕುತ್ತಿವೆ ಎಂದಂತಾಯ್ತು. ಈ ಹಂತದಲ್ಲಿ ಕೂಡ, ನ್ಯಾಯಾಲಯಕ್ಕೆ ನೀಡಿದ ತನ್ನ ಮಾತನ್ನು ಆಯೋಗ ಉಳಿಸಿಕೊಂಡಿಲ್ಲವೆಂಬುದು ಜಗಜ್ಜಾಹೀರವಾಯಿತು. ಅಷ್ಟೇ ಅಲ್ಲ, ನ್ಯಾಯಾಲಯದ ನಿರ್ದೇಶನಕ್ಕೂ ಮೀರಿ, ಕರ್ನಾಟಕದ ಪ್ರಜೆಯೊಬ್ಬರ ಖಾಸಗಿ ಮಾಹಿತಿಯನ್ನು ಆಯೋಗ ಸರಕಾರದ ಜೊತೆ ಹಂಚಿಕೊಳ್ಳುತ್ತಿದೆ ಎಂಬುದು ನಿಚ್ಚಳವಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳ ಹೇಳಿಕೆಯಿಂದ ನ್ಯಾಯಾಲಯ ನಿಂದನೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಒಂದು ದಶಕದ ಹಿಂದೆ ಹಿರಿಯ ಪತ್ರಕರ್ತ ಹರೀಶ್ ಖರೆ, ನಾರಾಯಣಮೂರ್ತಿಯವರನ್ನು ನಕ್ಸಲ್‌ಗೆ ಹೋಲಿಸಿದ್ದರು. ಅಲ್ಲೀವರೆಗೆ, ಎಡಪಂಥೀಯ ಪಕ್ಷಗಳ ನಾಯಕರು ಮಾತ್ರ ಬಂಡವಾಳಶಾಹಿಗಳನ್ನು ಟೀಕಿಸುತ್ತಿದ್ದರು. ಆ ನಂತರ, ಈ ಕೆಲಸವನ್ನು ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ. ನೀವು ಗಮನಿಸಿರಬಹುದು- ಬೆಂಗಳೂರಿನ ಗುಂಡಿ ಮುಚ್ಚುವ ವಿಚಾರದಲ್ಲಿ ಕೂಡ ಕರ್ನಾಟಕದ ಸರಕಾರದ ಸಚಿವರುಗಳು ಬಂಡವಾಳಶಾಹಿಗಳ ವಿರುದ್ದ ತಮ್ಮ ಅಸಹಿಷ್ಣುತೆ ತೋರಿಸಿದ್ದಾರೆ. ಸರಕಾರದಿಂದ ನೀರು ವಿದ್ಯುತ್ತು ಎಲ್ಲ ಪಡೀತಾರೆ. ಮೇಲಿಂದ ನಮ್ಮನ್ನೇ ಟೀಕಿಸುತ್ತಾರೆ ಎಂಬುದು ಕಾಂಗ್ರೆಸ್ ಪಕ್ಷದ ನಾಯಕರ ವಾದ. ಇದು ಹೊಸದಲ್ಲ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಲ್ಲ. ಅಧಿಕಾರದಲ್ಲಿರುವ ಎಲ್ಲ ಪಕ್ಷಗಳದ್ದೂ ಇದೇ ವರಸೆ. ಈ ಹಿಂದೆ, ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ, ಸಮ್ಮಿಶ್ರ ಸರಕಾರದ ಹಿಂದಿನ ಸೀಟಿನಲ್ಲಿ ಕುಳಿತು ಗಾಡಿಚಲಾಯಿಸುತ್ತಿದ್ದವರು ದೇವೇಗೌಡರು. ಅವರು ನಾರಾಯಣ ಮೂರ್ತಿಯವರನ್ನು ರಿಯಲ್ ಎಸ್ಟೇಟ್ ಏಜೆಂಟ್ ಎಂದು ಬಯ್ದಿದ್ದಷ್ಟೇ ಅಲ್ಲ, ತಿಂಗಳುಗಟ್ಟಲೇ ನಾರಾಯಣ ಮೂರ್ತಿಯವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದು ನೆನಪಿಲ್ಲವೇ?
ಬೆಂಗಳೂರಿನ ರಸ್ತೆಗಳ ಗುಂಡಿಗಳಿಂದಾಗಿ, ಜನ ಬೆನ್ನುಹುರಿಯನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವಾಗ ಜನ ಸುಮ್ಮನಿರಬೇಕು, ಸರಕಾರದ ಜೊತೆ ಸಹಕರಿಸಬೇಕು, ಬಂಡವಾಳಶಾಹಿಗಳು ಮಾತನಾಡಬಾರದು ಎಂಬುದು ಎಷ್ಟು ಸರಿ? ಅದು ಅಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲಿ ನಮಗಾಗಿರುವ ಮುಜುಗರದ ಬಗ್ಗೆ ಮಾತನಾಡಬಾರದು ಎಂಬುದು ಹೇಗೆ ಸರಿ? ರಾಷ್ಟ್ರಮಟ್ಟದಲ್ಲಿ, ಬಂಡವಾಳಶಾಹಿಗಳನ್ನು ಗುರಿಯಾಗಿಸಿ ಪದೇ ಪದೇ ಮಾತನಾಡುವುದಾಗಲಿ ಅಥವಾ ಕರ್ನಾಟಕದಲ್ಲಿ ಮೂರ್ತಿ ದಂಪತಿಗಳನ್ನು ಗುರಿಯಾಗಿಸಿ ಮಾತನಾಡಿದ್ದನ್ನು ಒಂದು ಮುಗಿದ ಘಟನೆಯಾಗಿ ನೋಡಬಾರದು. ಎಡಪಂಥೀಯ ಪತ್ರಕರ್ತರು, ಸಮಾಜವಾದಿ ಹಿನ್ನೆಲೆಯಿಟ್ಟುಕೊಂಡು ಕೆಲಸ ಮಾಡುವ ಹೆಚ್ಚಿನ ಸರಕಾರೇತರ ಸೇವಾ ಸಂಸ್ಥೆಗಳು (NGO) ಇದನ್ನು ತುಂಬಾ ಇಷ್ಟಪಡುತ್ತವೆ. ಹಾಗಾಗಿ, ತಾನು ಹೆಣೆದಿರುವ ರಾಜಕೀಯ ಸಂಕಥನದ ಭಾಗವಾಗಿ, ಮೂರ್ತಿ ದಂಪತಿಗಳನ್ನು ಮತ್ತು ಬೇರೆ ಬಂಡವಾಳಶಾಹಿಗಳನ್ನು ಕಾಂಗ್ರೆಸ್ ಪಕ್ಷ ಟೀಕಿಸುತ್ತದೆ. ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಾಗುವ ಲಕ್ಷಣ ನಿಚ್ಚಳವಾಗಿದೆ.
ನಮ್ಮ ನಡುವೆ ಈ ಹಿಂದೆ ನಡೆದ ಮತ್ತು ಪ್ರಸ್ತುತದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನಲ್ಲಿಯೂ ಒಂದಿಷ್ಟು ಸಿಟ್ಟು ಸೆಡವು ಹುಟ್ಟುವುದು ಸಹಜ. ಮಡುಗಟ್ಟಿದ ಆ ಸಿಟ್ಟು ಒಂದಲ್ಲ ಒಂದು ದಿನ ಹೊರಬೀಳಬೇಕು ತಾನೆ? ಸಮಾಜದಲ್ಲಿ ಪ್ರಬಲರಾಗಿರುವವರ ವಿರುದ್ಧ, ಸಂಖ್ಯೆಯಲ್ಲಿ ಹೆಚ್ಚಿರುವ ಜಾತಿಗಳ ನಾಯಕರುಗಳ ವಿರುದ್ಧ-ಅವರು ತಪ್ಪು ಮಾಡುತ್ತಿದ್ದರೂ- ಮಾತನಾಡಲು ಆಗದು. ಅದು ರಾಜಕೀಯ ಪ್ರಮಾದ (politically incorrect)ಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮೊಳಗೆ ಮಡುಗುಟ್ಟಿರುವ ಸಿಟ್ಟಿಗೆ ಯಾರನ್ನಾದರೂ ಬಯ್ಯಬೇಕು. ಅದು ಹೇಗೆ? ಇದನ್ನು ಹಾಸ್ಯವೆನ್ನಿ ಅಥವಾ ಗಂಭೀರ ವಿಚಾರವೆನ್ನಿ. ತಮ್ಮ ಕೋಪ ತಣಿಸಿಕೊಳ್ಳಲು, ಮಧ್ಯಮವರ್ಗದ ಜನ ಶೌಚಾಲಯಕ್ಕೆ ಹೋಗಿ ಮೂತ್ರ ಮಾಡುವಾಗ ಯಾರಿಗೂ ಕೇಳಿಸದಂತೆ ಬಯ್ದು ಬರ್ತಾರಂತೆ. ಈಗ ಕಾಲ ಬದಲಾಗಿದೆ. ಜನ ಶೌಚಾಯಲಕ್ಕೆ ಹೋಗುವ ಬದಲು, ಸಾಮಾಜಿಕ ಜಾಲತಾಣದಲ್ಲಿ ಕಂಡವರ ಮೇಲೆ ಅದರಲ್ಲಿಯೂ ಬಂಡವಾಳಶಾಹಿಗಳನ್ನು ಟ್ರೋಲ್ ಮಾಡಿ, ಅವರನ್ನು ಟೀಕಿಸಿ, ತಮಗಾದ ಅವಾಚಿತ ಅವಮಾನಕ್ಕೆ ಸಿಟ್ಟಿಗೆ ಸೇಡು ತೀರಿಸಿಕೊಳ್ಳುತ್ತಾರೆ. ಇದು ಪೀಡನಾರತಿ. ಇದನ್ನು ಇಂಗ್ಲಿಷಿನಲ್ಲಿ sadistic pleasure ಎನ್ನುತ್ತಾರೆ. ನಾಡಿನ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರುಗಳು, ಮೂರ್ತಿ ದಂಪತಿಗಳನ್ನು ಟೀಕಿಸುತ್ತ ಟ್ರೋಲಿಗರ ಜೊತೆ ಸ್ಪರ್ಧೆಗಿಳಿದಿದ್ದು, ಅತ್ಯಂತ ವಿಷಾದನೀಯ.
Published On - 4:30 pm, Sat, 18 October 25