ಟೆಸ್ಟ್ ವೆಹಿಕಲ್ ಅಬರ್ಟ್ ಮಿಷನ್ – 1 ( TV-D1) ಒಂದು ಗಗನಯಾನ ಸುರಕ್ಷತಾ ಪ್ರಯೋಗವಾಗಿದ್ದು, ಇಸ್ರೋದ ಮಹತ್ವಾಕಾಂಕ್ಷಿ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿದೆ. ಈ ಯೋಜನೆ ಶ್ರೀಹರಿಕೋಟಾದ ಮೊದಲ ಉಡಾವಣಾ ವೇದಿಕೆಯಿಂದ ಶನಿವಾರ (ಅಕ್ಟೋಬರ್ 21) ಬೆಳಗ್ಗೆ ತನ್ನ ಎರಡನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡಿತು. ಈ ಉಡಾವಣೆ ಆರಂಭದಲ್ಲಿ ಭಾರತೀಯ ಕಾಲಮಾನದಲ್ಲಿ ಬೆಳಗಿನ 8:00 ಗಂಟೆಗೆ ಉಡಾವಣೆಯಾಗಬೇಕಿತ್ತು. ಆದರೆ ಮೋಡ ಕವಿದ ವಾತಾವರಣ ಮತ್ತು ಮಳೆಯ ಕಾರಣದಿಂದ ಉಡಾವಣೆಯ ಸಮಯವನ್ನು ಬೆಳಗ್ಗೆ 8:45ಕ್ಕೆ ಮುಂದೂಡಲಾಯಿತು. ಆದರೆ, ಗಗನಯಾನ ಯೋಜನೆಯ ಉಡಾವಣಾ ಪ್ರಯತ್ನದಲ್ಲಿ ಏನೋ ಸಮಸ್ಯೆ ಇದೆಯೆಂದು ಗಮನಕ್ಕೆ ಬಂದುದರಿಂದ, ಉಡಾವಣೆಯನ್ನು ಅಂತಿಮವಾಗಿ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಯಿತು.
ಟಿವಿ-ಡಿ1 ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಹಾಗೂ ಕ್ರ್ಯೂ ಮಾಡ್ಯುಲ್‌ಗಳನ್ನು ಅಂದಾಜು 17 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಒಯ್ದು ಬಿಡುಗಡೆಗೊಳಿಸಿತು. ಅಲ್ಲಿಂದ ಎರಡು ಮಾಡ್ಯುಲ್‌ಗಳು ಶ್ರೀಹರಿಕೋಟಾದ ಪೂರ್ವ ತೀರದಿಂದ ಹತ್ತು ಕಿಲೋಮೀಟರ್ ಒಳಗೆ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು. ಯೋಜನೆಯ ಮುಖ್ಯ ಪ್ಯಾರಾಶೂಟ್ ಇಳಿಯುವ ವೇಳೆಗೆ ಸಂಪೂರ್ಣವಾಗಿ ತೆರೆದುಕೊಂಡಿತ್ತು. ಈ ಯೋಜನೆ ಅಬಾರ್ಟ್ ಮಿಷನ್ ಅನ್ನು ಚಾಲ್ತಿಗೊಳಿಸಿ, ಕ್ರ್ಯೂ ಮಾಡ್ಯುಲ್ ಅನ್ನು ಪರೀಕ್ಷಾ ವಾಹನದಿಂದ ದೂರಕ್ಕೆ ಒಯ್ದು, ಸಮುದ್ರದಲ್ಲಿ ಇಳಿಯುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಟಿವಿ-ಡಿ1 ಉಡಾವಣೆಗೊಂಡ 11 ನಿಮಿಷಗಳ ಬಳಿಕ, ಬೆಳಗ್ಗೆ 10:11ಕ್ಕೆ ಕ್ರ್ಯೂ ಮಾಡ್ಯುಲ್ ಸಮುದ್ರಕ್ಕೆ ಇಳಿಯಿತು.
ಇದನ್ನೂ ಓದಿ: ಗಗನಯಾನ ಯೋಜನೆಯೆಡೆಗೆ ಮೊದಲ ಹೆಜ್ಜೆ: ಮೊದಲ ಅಭಿವೃದ್ಧಿ ಪರೀಕ್ಷಾ ಯೋಜನೆ ಟಿವಿ-ಡಿ1ಗೆ ಭಾರತ ಸನ್ನದ್ಧ
ಆರಂಭದಲ್ಲಿ, ಸ್ವಯಂಚಾಲಿತ ಉಡಾವಣಾ ಪ್ರಕ್ರಿಯೆ ಉದ್ದೇಶಿತ ರೀತಿಯಲ್ಲಿ ಬೆಳಗ್ಗೆ 8:30ಕ್ಕೆ ಆರಂಭಗೊಂಡಿತ್ತು. ಆದರೆ ಯೋಜನೆಯ ಕಂಪ್ಯೂಟರ್‌ಗಳು ಉಡಾವಣಾ ಪೂರ್ವ ಸಿದ್ಧತೆಯ ಹಂತದಲ್ಲಿ ಒಂದಷ್ಟು ಸಮಸ್ಯೆಗಳನ್ನು ಪತ್ತೆಹಚ್ಚಿದವು. ಆ ಕಾರಣದಿಂದ ಉಡಾವಣೆಯನ್ನು ನಿಲ್ಲಿಸಲಾಯಿತು. ಈ ಹಾರಾಟದ ಸಂದರ್ಭದಲ್ಲಿನ ಅಬಾರ್ಟ್ ಪ್ರಕ್ರಿಯೆ 8.8 ನಿಮಿಷಗಳ ಕಾಲ ನಡೆಯಲಿತ್ತು.
“ಯೋಜನೆಯ ಉಡಾವಣೆ ಬೆಳಗ್ಗೆ 8:00 ಗಂಟೆಗೆ ನಡೆಯುವುದೆಂದು ಉದ್ದೇಶಿಸಲಾಗಿತ್ತು. ಆದರೆ ಹವಾಮಾನದ ಕಾರಣದಿಂದ ಉಡಾವಣೆಯನ್ನು 8:45ಕ್ಕೆ ಮುಂದೂಡಲಾಯಿತು. ಯೋಜನೆಯ ಜವಾಬ್ದಾರಿ ಹೊಂದಿದ್ದ ಇಸ್ರೋ ವಿಜ್ಞಾನಿಗಳು ತಕ್ಷಣವೇ ಅದರಲ್ಲಿ ಕಂಡುಬಂದಿದ್ದ ದೋಷವನ್ನು ಪತ್ತೆಹಚ್ಚಲು ಕಾರ್ಯಪ್ರವೃತ್ತರಾದರು. ಯೋಜನಾ ನಿರ್ವಾಹಕರು ಪರಿಸ್ಥಿತಿಯನ್ನು ವಿಶ್ಲೇಷಿಸಿ, ಹೊಸ ಉಡಾವಣಾ ಸಮಯವನ್ನು ಘೋಷಿಸುವ ಮುನ್ನ ಸಮಸ್ಯೆಯನ್ನು ಸರಿಪಡಿಸಲು ಆರಂಭಿಸಿದರು” ಎಂದು ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ತಿಳಿಸಿದ್ದಾರೆ.
ಮೊದಲಿಗೆ, ಉಡಾವಣೆ ನಡೆಸಲು ಆದೇಶ ನೀಡುವ ಸ್ವಯಂಚಾಲಿತ ಉಡಾವಣಾ ಪ್ರಕ್ರಿಯೆ ಮೊದಲ ಪ್ರಯತ್ನದಲ್ಲಿ ಸುಗಮವಾಗಿ ಆರಂಭಗೊಂಡಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಇಂಜಿನ್ ಉಡಾವಣೆ ನೆರವೇರಲಿಲ್ಲ. ಯೋಜನೆಯ ಕಂಪ್ಯೂಟರ್ ಒಂದು ದೋಷವನ್ನು ಪತ್ತೆಹಚ್ಚಿತು. ಅದರ ಪರಿಣಾಮವಾಗಿ ಉಡಾವಣೆಯನ್ನು ಸ್ಥಗಿತಗೊಳಿಸಲಾಯಿತು. ಸ್ವಯಂಚಾಲಿತ ಉಡಾವಣಾ ಪ್ರಕ್ರಿಯೆ ಎಂದರೆ, ಪೂರ್ವ ನಿರ್ಧರಿತ, ಸ್ವಯಂಚಾಲಿತ ಸರಣಿ ಹಂತಗಳು ಮತ್ತು ಕಾರ್ಯಾಚರಣೆಗಳಾಗಿದ್ದು, ಬಾಹ್ಯಾಕಾಶ ನೌಕೆ, ರಾಕೆಟ್, ಅಥವಾ ಇತರ ಏರೋಸ್ಪೇಸ್ ವಾಹನಗಳ ಉಡಾವಣೆಯನ್ನು ಆರಂಭಿಸಲು ಸಿದ್ಧತೆ ನಡೆಸುತ್ತವೆ. ಈ ಪ್ರಕ್ರಿಯೆಗಳನ್ನು ಉಡಾವಣಾ ವಾಹನದ ವಿವಿಧ ವ್ಯವಸ್ಥೆಗಳು, ಬಿಡಿಭಾಗಗಳು ನಿರೀಕ್ಷಿತ ರೀತಿಯಲ್ಲೇ ಕಾರ್ಯಾಚರಿಸುತ್ತಿವೆಯೇ, ಉಡಾವಣೆ ಯಶಸ್ವಿಯಾಗಿ ನೆರವೇರಲು ಸಾಧ್ಯವಾಗುತ್ತದೆಯೇ ಎಂದು ತಿಳಿದುಕೊಳ್ಳಲು ನಡೆಸಲಾಗುತ್ತದೆ.
ಉಡಾವಣಾ ವಾಹನದ ಕಂಪ್ಯೂಟರ್ ಇಂಜಿನ್ ನಲ್ಲಿ ಏನೋ ಅಸಂಗತತೆ ಕಂಡುಹಿಡಿದಿದೆ ಎಂದರೆ, ಬಾಹ್ಯಾಕಾಶ ನೌಕೆಯ ಇಂಜಿನ್‌ನ್ನು ನಿರ್ವಹಿಸುವ ಕಂಪ್ಯೂಟರ್ ಏನೋ ಅಸಹಜವಾದುದನ್ನು ಅಥವಾ ಅನಿರೀಕ್ಷಿತವಾದುದನ್ನು ಪತ್ತೆಹಚ್ಚಿದೆ ಎಂದರ್ಥ. ಇದರಲ್ಲಿ ಅಸಹಜ ಇಂಜಿನ್ ಪ್ರದರ್ಶನ, ನಿರೀಕ್ಷಿತ ನಿಯತಾಂಕಗಳಿಂದ ಬದಲಾವಣೆಗಳು, ಅಥವಾ ಪ್ರೊಪಲ್ಷನ್ ವ್ಯವಸ್ಥೆಯಲ್ಲಿನ ಸಂಭಾವ್ಯ ಸಮಸ್ಯೆಗಳೂ ಇರಬಹುದು. ಇಂಜಿನ್ನಿನಲ್ಲಿ ಅಸಹಜತೆಯನ್ನು ಪತ್ತೆಹಚ್ಚುವುದು ಒಂದು ಸುರಕ್ಷತಾ ಕ್ರಮವಾಗಿದ್ದು, ಇಂಜಿನ್ ಸಮರ್ಪಕವಾಗಿ ಕಾರ್ಯಾಚರಿಸುತ್ತಿದೆ ಮತ್ತು ಉಡಾವಣೆ ಯಾವುದೇ ಸಮಸ್ಯೆಯಿಲ್ಲದೆ ನೆರವೇರುವಂತೆ ಮಾಡುತ್ತದೆ. ಇದು ಉಡಾವಣಾ ಹಂತಗಳನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸಿ, ಉಡಾವಣೆ ಮುಂದುವರಿಯುವ ಮುನ್ನ ಸಮಸ್ಯೆ ಏನೆಂದು ಪತ್ತೆಹಚ್ಚಿ, ಸರಿಪಡಿಸಲು ನೆರವಾಗುತ್ತದೆ.
ಇಂತಹ ಸನ್ನಿವೇಶದಲ್ಲಿ, ಉಡಾವಣಾ ವಾಹನದ ಇಗ್ನಿಷನ್ ವ್ಯವಸ್ಥೆಯಲ್ಲಿ ಏನಾದರೂ ದೋಷವಿದೆಯೇ ಎಂದು ಸಿಬ್ಬಂದಿಗಳೇ ಪರಿಶೀಲಿಸಬೇಕಾಗಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯೋಜನಾ ನಿರ್ವಾಹಕರು, ಅಥವಾ ಇಂಜಿನಿಯರ್‌ಗಳು ಸ್ವತಃ ಪರಿಶೀಲನೆ ನಡೆಸಿ, ಇಗ್ನಿಷನ್ ಭಾಗಗಳು ಸಮರ್ಥವಾಗಿ ಕಾರ್ಯಾಚರಿಸುತ್ತಿವೆ ಎಂದು ಖಾತ್ರಿಪಡಿಸಬೇಕಾಗುತ್ತದೆ. ಇದನ್ನು ರಾಕೆಟ್ ಇಂಜಿನ್ ಅನ್ನು ಆರಂಭಿಸುವ ವ್ಯವಸ್ಥೆಯಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟವಾಗಿಸಲು ಕೈಗೊಳ್ಳಲಾಗುತ್ತದೆ. ಯಾಕೆಂದರೆ, ಇಗ್ನಿಷನ್ ವ್ಯವಸ್ಥೆಯಲ್ಲಿನ ದೋಷಗಳು ಉಡಾವಣೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಲ್ಲದು. ಸಿಬ್ಬಂದಿಗಳು ನಡೆಸುವ ಪರಿಶೀಲನೆಯಲ್ಲಿ ಯಶಸ್ವಿ ಇಗ್ನಿಷನ್ ಪ್ರಕ್ರಿಯೆ ನಡೆಯುವ ಸಲುವಾಗಿ, ಇಗ್ನಿಷನ್ ವ್ಯವಸ್ಥೆಯ ಪರಿಶೀಲನೆ, ಪರೀಕ್ಷೆ, ಸಂಭಾವ್ಯ ದುರಸ್ತಿ ಅಥವಾ ಬದಲಿ ಭಾಗಗಳ ಜೋಡಣೆಗಳು ಸೇರಿವೆ.
ಒಂದು ಬಾರಿ ಈ ಸಮಸ್ಯೆ ಸರಿಹೋದ ಬಳಿಕ, ಯೋಜನಾ ನಿರ್ವಾಹಕರು ಮತ್ತು ಇಂಜಿನಿಯರ್‌ಗಳು ಸಂಪೂರ್ಣ ಉಡಾವಣಾ ವಾಹನದ ಸಿದ್ಧತೆ ಮತ್ತು ಸಿಸ್ಟಮ್‌ಗಳನ್ನು ಅಂದಾಜಿಸಿ, ಸೂಕ್ತ ಪರೀಕ್ಷೆಗಳನ್ನು ಕೈಗೊಂಡು, ಉಡಾವಣೆಗೆ ಸಿದ್ಧ ಎಂದು ಅನುಮತಿ ನೀಡಿದ್ದಾರೆ. ಇದಾದ ಬಳಿಕ, ಯೋಜನಾ ನಿಯಂತ್ರಣ ತಂಡ ನೂತನ ಉಡಾವಣಾ ಸಮಯವನ್ನು ನಿಗದಿಪಡಿಸಿ, ಯಶಸ್ವಿ ಉಡಾವಣೆ ನೆರವೇರುವಂತೆ ಮಾಡಿದ್ದಾರೆ.
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)