‘Virupaksha’: ಸು-ಎಂಕೆಐ ಯುದ್ಧ ವಿಮಾನಗಳಿಗೆ ಹೆಚ್ಚಿನ ಸಾಮರ್ಥ್ಯ ನೀಡಲಿದೆ ದೇಶೀ ‘ವಿರೂಪಾಕ್ಷ’ ರೇಡಾರ್: ಇದರ ವಿಶೇಷ ಇಲ್ಲಿದೆ ನೋಡಿ
ಭಾರತ ತನ್ನ ಬಳಿ ಇರುವ, ರಷ್ಯನ್ ಮೂಲದ ಸು-30ಎಂಕೆಐ ಯುದ್ಧ ವಿಮಾನಗಳಿಗೆ ದೇಶೀಯ ನಿರ್ಮಾಣದ, 'ವಿರೂಪಾಕ್ಷ' ಎಂಬ ಆಧುನಿಕ ರೇಡಾರ್ ಅಳವಡಿಸಿ, ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸುತ್ತಿದೆ. ಭಾರತೀಯ ವಾಯುಪಡೆ (ಐಎಎಫ್) ತನ್ನ 84 ವಿಮಾನಗಳಿಗೆ 65,000 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರೇಡಾರ್ ಹಾಗೂ ಆಧುನಿಕ ಆಯುಧ ವ್ಯವಸ್ಥೆಗಳನ್ನು ಅಳವಡಿಸಲು ಯೋಚಿಸುತ್ತಿದೆ.
ಭಾರತ ತನ್ನ ಬಳಿ ಇರುವ, ರಷ್ಯನ್ ಮೂಲದ ಸು-30ಎಂಕೆಐ ಯುದ್ಧ ವಿಮಾನಗಳಿಗೆ ದೇಶೀಯ ನಿರ್ಮಾಣದ, ‘ವಿರೂಪಾಕ್ಷ’ (‘Virupaksha’ radar)ಎಂಬ ಆಧುನಿಕ ರೇಡಾರ್ ಅಳವಡಿಸಿ, ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸುತ್ತಿದೆ. ಭಾರತೀಯ ವಾಯುಪಡೆ (ಐಎಎಫ್) ತನ್ನ 84 ವಿಮಾನಗಳಿಗೆ 65,000 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರೇಡಾರ್ ಹಾಗೂ ಆಧುನಿಕ ಆಯುಧ ವ್ಯವಸ್ಥೆಗಳನ್ನು ಅಳವಡಿಸಲು ಯೋಚಿಸುತ್ತಿದೆ. ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಮಿಲಿಟರಿ ವಲಯದಲ್ಲಿ ಸ್ವಾವಲಂಬನೆ ತರುವ ಪ್ರಯತ್ನಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ. ಅದರೊಡನೆ, ಸು-30ಎಂಕೆಐ ಯುದ್ಧ ವಿಮಾನಗಳನ್ನು ಬಳಸುವ ಇತರ ರಾಷ್ಟ್ರಗಳಿಗೂ ಈ ಆಯುಧಗಳನ್ನು ರಫ್ತು ಮಾಡುವ ಆಲೋಚನೆ ಭಾರತದ ಮುಂದಿದೆ.
ವಿರೂಪಾಕ್ಷ ರೇಡಾರ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ಅದರ ಸಹಯೋಗಿ ಪ್ರಯೋಗಾಲಯಗಳು ಅಭಿವೃದ್ಧಿ ಪಡಿಸಿವೆ. ಇದೊಂದು ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್ ಆಗಿದ್ದು, ಪ್ರಸ್ತುತ ಸು-30ಎಂಕೆಐ ಯುದ್ಧ ವಿಮಾನಗಳಲ್ಲಿ ಬಳಕೆಯಲ್ಲಿರುವ ಪ್ಯಾಸಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಪಿಇಎಸ್ಎ) ರೇಡಾರ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಮೇಲುಗೈ ಹೊಂದಿದೆ. ಎಇಎಸ್ಎ ರೇಡಾರ್ ಹೆಚ್ಚಿನ ವ್ಯಾಪ್ತಿ, ಉತ್ತಮ ನಿಖರತೆ, ಹೆಚ್ಚು ನಂಬಿಕಾರ್ಹತೆ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಜಾಮಿಂಗ್ ಪ್ರಯತ್ನಗಳ ವಿರುದ್ಧ ಹೆಚ್ಚಿನ ಪ್ರತಿರೋಧ ಹೊಂದಿದೆ. ಇದು ಗಾಳಿಯಿಂದ ಗಾಳಿಗೆ ಹಾಗೂ ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಸಂದರ್ಭದಲ್ಲಿ ಹಲವು ಗುರಿಗಳನ್ನು ಏಕಕಾಲದಲ್ಲಿ ಹಿಂಬಾಲಿಸುವ ಸಾಮರ್ಥ್ಯ ಹೊಂದಿದೆ.
ವಿರೂಪಾಕ್ಷ ರೇಡಾರ್‌ಗೆ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದೂಗಳು ಆರಾಧಿಸುವ ಭಗವಂತ ಶಿವನ ಒಂದು ರೂಪವಾದ ವಿರೂಪಾಕ್ಷನ ಹೆಸರಿಡಲಾಗಿದೆ. ಈ ಹೆಸರು ರೇಡಾರಿನ ಸ್ವದೇಶೀ ನಿರ್ಮಾಣ ಮತ್ತು ಶತ್ರುಗಳ ಪ್ರದೇಶದ ಗುರಿಯನ್ನು ನಾಶಪಡಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಈ ರೇಡಾರ್ 2025ರ ವೇಳೆಗೆ ಸು-30ಎಂಕೆಐ ಯುದ್ಧ ವಿಮಾನದಲ್ಲಿ ಅಳವಡಿಸಲು ಸಾಧ್ಯವಾಗುವ ನಿರೀಕ್ಷೆಗಳಿದ್ದು, ಆ ಬಳಿಕ ಭಾರತೀಯ ವಾಯುಪಡೆ ತನ್ನ ವಿಮಾನಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಿದೆ. ಈ ಅಭಿವೃದ್ಧಿಯಲ್ಲಿ ನೂತನ ಏವಿಯಾನಿಕ್ಸ್, ಇಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳು, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಹಾಗೂ ಅಸ್ತ್ರ ಬಿಯಾಂಡ್ ವಿಶುವಲ್ ರೇಂಜ್ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು ಸೇರಿವೆ.
ಸು-30ಎಂಕೆಐ ಯುದ್ಧ ವಿಮಾನ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದು, ವಾಯುಪಡೆ ಪ್ರಸ್ತುತ 260 ವಿಮಾನಗಳನ್ನು ಕಾರ್ಯಾಚರಿಸುತ್ತಿದೆ. 1997ರ ಬಳಿಕ, ಸು-30ಎಂಕೆಐ ವಿಮಾನಗಳನ್ನು ವಿವಿಧ ತಂಡಗಳಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಅವುಗಳು ಕಳೆದ ವರ್ಷಗಳಲ್ಲಿ ಹಲವು ಮಾರ್ಪಾಡುಗಳನ್ನು ಹೊಂದಿವೆ. ಸು-30ಎಂಕೆಐ ಯುದ್ಧ ವಿಮಾನಗಳು ಹಲವು ಕಾರ್ಯಾಚರಣೆಗಳು, ಮಿಲಿಟರಿ ಅಭ್ಯಾಸಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿವೆ. ಅವುಗಳಲ್ಲಿ 2019ರ ಬಾಲಾಕೋಟ್ ವಾಯುದಾಳಿ ಹಾಗೂ 2020ರ ಚೀನಾದ ಜೊತೆಗಿನ ಚಕಮಕಿಗಳು ಸೇರಿವೆ. ಈ ಯುದ್ಧ ವಿಮಾನಗಳು ಫ್ರಾನ್ಸ್, ಸಿಂಗಾಪುರ, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾಗಳಂತಹ ಮಿತ್ರ ರಾಷ್ಟ್ರಗಳ ಜೊತೆಗಿನ ಜಂಟಿ ಮಿಲಿಟರಿ ಅಭ್ಯಾಸಗಳಲ್ಲಿ ಭಾಗಿಯಾಗಿವೆ.
ಇದನ್ನೂ ಓದಿ: ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ಅಪ್ರತಿಮ ಶಕ್ತಿ; ಅಭ್ಯಾಸ ಉಡಾವಣೆ ಯಶಸ್ವಿ; ಕೆಲವೇ ದೇಶಗಳ ಸಾಲಿಗೆ ಭಾರತ
ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಹಲವು ರಾಷ್ಟ್ರಗಳು ಸು-30ಎಂಕೆಐ ವಿಮಾನಗಳನ್ನು ಬಳಸುತ್ತಿರುವುದರಿಂದ, ಸು-30ಎಂಕೆಐ ಯುದ್ಧ ವಿಮಾನಗಳ ಅಭಿವೃದ್ಧಿಯನ್ನು ಭಾರತೀಯ ವಾಯುಪಡೆ ರಕ್ಷಣಾ ರಫ್ತು ನಡೆಸಲು ಸೂಕ್ತ ಅವಕಾಶ ಎಂದು ಪರಿಗಣಿಸಿದೆ. ಈ ದೇಶಗಳು ವಿರೂಪಾಕ್ಷ ರೇಡಾರ್ ಹಾಗೂ ಇತರ ಆಧುನಿಕ ವ್ಯವಸ್ಥೆಗಳು ಸು-30ಎಂಕೆಐ ವಿಮಾನಗಳಿಗೆ ಒದಗಿಸುವ ಮಹತ್ತರ ಸಾಮರ್ಥ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಭಾರತ ಈಗಾಗಲೇ ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ರಫ್ತು ಮಾಡಿದ್ದು, ಇತರ ದೇಶಗಳೊಡನೆಯೂ ಈ ಕುರಿತು ಮಾತುಕತೆ ನಡೆಸುತ್ತಿದೆ. ಭಾರತ ಸು-30ಎಂಕೆಐ ಯುದ್ಧ ವಿಮಾನಗಳ ಬಹುದೊಡ್ಡ ಬಳಕೆದಾರನಾಗಿದ್ದು, ನಿರಂತರವಾಗಿ ಅವುಗಳ ಸಾಮರ್ಥ್ಯ ವೃದ್ಧಿಸಲು ಪ್ರಯತ್ನ ನಡೆಸುತ್ತಾ ಬಂದಿದೆ.
ವಿರೂಪಾಕ್ಷ ರೇಡಾರ್ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಆ ಮೂಲಕ ಮಹತ್ವದ ರಕ್ಷಣಾ ಉಪಕರಣಗಳಿಗಾಗಿ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲಿದೆ. ಈ ಅಭಿವೃದ್ಧಿಗಳು ಸಂಕೀರ್ಣವಾದ ಮತ್ತು ಕ್ರಿಯಾತ್ಮಕ ಸನ್ನಿವೇಶಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ಸನ್ನದ್ಧತೆ ಹಾಗೂ ಪರಿಣಾಮಕಾರಿ ಯುದ್ಧ ಸಾಮರ್ಥ್ಯವನ್ನು ವೃದ್ಧಿಸಲಿವೆ. ಈ ರೇಡಾರ್ ಸು-30ಎಂಕೆಐ ಯುದ್ಧ ವಿಮಾನಗಳಿಗೆ ಹೆಚ್ಚಿನ ಮೇಲುಗೈ ಒದಗಿಸಿ, ಅವುಗಳನ್ನು ಯಾವುದೇ ಸಂಭಾವ್ಯ ಶತ್ರುಗಳಿಗೂ ಶಕ್ತಿಶಾಲಿ ಆಯುಧವನ್ನಾಗಿಸಲಿದೆ.
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)