ಗಗನಯಾನ ಯೋಜನೆಯೆಡೆಗೆ ಮೊದಲ ಹೆಜ್ಜೆ: ಮೊದಲ ಅಭಿವೃದ್ಧಿ ಪರೀಕ್ಷಾ ಯೋಜನೆ ಟಿವಿ-ಡಿ1ಗೆ ಭಾರತ ಸನ್ನದ್ಧ

ಟಿವಿ-ಡಿ1 ಯೋಜನೆಯ ಪ್ರಾಥಮಿಕ ಗುರಿ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ರಾಕೆಟ್‌ನಿಂದ ಬೇರ್ಪಡುವಿಕೆ ಮತ್ತು ಅದು ಸುರಕ್ಷಿತ ದೂರಕ್ಕೆ ತಲುಪುವ ತನಕ ಅದರ ಪಥವನ್ನು ಅಧ್ಯಯನ ನಡೆಸುವುದಾಗಿದೆ. ಸುರಕ್ಷಿತ ಅಂತರಕ್ಕೆ ತಲುಪಿದ ಬಳಿಕ ಸಿಇಎಸ್‌ನ ಪ್ಯಾರಾಶೂಟ್‌ಗಳು ತೆರೆದುಕೊಳ್ಳಲಿವೆ. ಯೋಜನೆ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಗಗನಯಾನ ಯೋಜನೆಯೆಡೆಗೆ ಮೊದಲ ಹೆಜ್ಜೆ: ಮೊದಲ ಅಭಿವೃದ್ಧಿ ಪರೀಕ್ಷಾ ಯೋಜನೆ ಟಿವಿ-ಡಿ1ಗೆ ಭಾರತ ಸನ್ನದ್ಧ
ಗಗನಯಾನ: ಮೊದಲ ಅಭಿವೃದ್ಧಿ ಪರೀಕ್ಷಾ ಯೋಜನೆ ಟಿವಿ-ಡಿ1ಗೆ ಭಾರತ ಸನ್ನದ್ಧ
Follow us
TV9 Web
| Updated By: Ganapathi Sharma

Updated on: Oct 20, 2023 | 10:12 PM

ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಅಕ್ಟೋಬರ್ 21ರಂದು ಬೆಳಗ್ಗೆ ಭಾರತೀಯ ಕಾಲಮಾನದಲ್ಲಿ ಅಂದಾಜು 8 ಗಂಟೆಗೆ ಉಡಾವಣೆಗೊಳ್ಳಲಿದೆ. ಈ ಪರೀಕ್ಷಾರ್ಥ ವಾಹನ ಉಡಾವಣೆಯು ಗಗನಯಾನ (Gaganyaan) ಯೋಜನೆಯ ಭಾಗವಾಗಿರುವ, ಅತ್ಯಂತ ಎತ್ತರದ (ಹೈ ಆಲ್ಟಿಟ್ಯೂಡ್) ಅಬಾರ್ಟ್ ಕಾರ್ಯಾಚರಣೆಯಾಗಿದೆ. ಈ ಯೋಜನೆ, ಮ್ಯಾಕ್ 1.2 ವೇಗದಲ್ಲಿ (ಪ್ರತಿ ಗಂಟೆಗೆ 1,400 ಕಿಲೋಮೀಟರ್) ಹಾರಾಟ ನಡೆಸುವ ಸಂದರ್ಭದಲ್ಲಿ ಸಿಬ್ಬಂದಿ ಪಾರಾಗುವ ವ್ಯವಸ್ಥೆಯನ್ನು (ಕ್ರ್ಯೂ ಎಸ್ಕೇಪ್ ಸಿಸ್ಟಮ್ – ಸಿಇಎಸ್) ಪರೀಕ್ಷಿಸಲು ಉದ್ದೇಶಿಸಿದೆ. ಪ್ರಸ್ತುತ ಪರೀಕ್ಷೆಯಲ್ಲಿ ನೂತನವಾಗಿ ಅಭಿವೃದ್ಧಿ ಪಡಿಸಿರುವ ಪರೀಕ್ಷಾ ವಾಹನದ ಬಳಕೆ, ಕ್ರ್ಯೂ ಮಾಡ್ಯುಲ್ ಬೇರ್ಪಡಿಸುವಿಕೆ ಮತ್ತು ಸುರಕ್ಷಿತವಾಗಿ ಮರಳಿ ಪಡೆಯುವಿಕೆಗಳು ಸೇರಿವೆ.

ಟಿವಿ-ಡಿ1 ಯೋಜನೆಯ ಉದ್ದೇಶವೇನು?

  • ಹಾರಾಟ ಪರೀಕ್ಷೆ ಹಾಗೂ ಪರೀಕ್ಷಾ ವಾಹನದ ಉಪ ವ್ಯವಸ್ಥೆಗಳ ಪರೀಕ್ಷೆ.
  • ಹಾರಾಟ ಪ್ರದರ್ಶನದ ಮೂಲಕ ಸಿಬ್ಬಂದಿ ರಕ್ಷಣಾ ವ್ಯವಸ್ಥೆಯ (ಕ್ರ್ಯೂ ಎಸ್ಕೇಪ್ ಸಿಸ್ಟಮ್ – ಸಿಇಎಸ್) ಕಾರ್ಯಾಚರಣೆಯ ಮೌಲ್ಯಮಾಪನ.
  • ಕ್ರ್ಯೂ ಮಾಡ್ಯುಲ್ ವ್ಯವಸ್ಥೆಯ ಸಾಮರ್ಥ್ಯಗಳ ಪರೀಕ್ಷೆ, ಎತ್ತರದಿಂದ ಭೂಮಿಗೆ ಇಳಿಯುವ ಸಂದರ್ಭದಲ್ಲಿ ಅದರ ವೇಗವನ್ನು ತಗ್ಗಿಸುವ ಪರೀಕ್ಷೆ ಹಾಗೂ ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದು.

ಪರೀಕ್ಷಾ ವಾಹನ (ಟೆಸ್ಟ್ ವೆಹಿಕಲ್) ಒಂದು ಹಂತದ, ದ್ರವ ಇಂಧನ ಚಾಲಿತ ರಾಕೆಟ್ ಆಗಿದ್ದು, ಇದರಲ್ಲಿ ಸುಧಾರಿತ ವಿಕಾಸ್ ಇಂಜಿನನ್ನು ಅಳವಡಿಸಲಾಗಿದೆ. ಇದರ ಮುಂಭಾಗದಲ್ಲಿ ಕ್ರ್ಯೂ ಮಾಡ್ಯುಲ್ (ಸಿಎಂ) ಹಾಗೂ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಇರಲಿವೆ. ಜಿಎಸ್ಎಲ್‌ವಿ ಎಲ್40 ಹಂತದಿಂದ ಮಾರ್ಪಡಿಸಲಾದ ರಾಕೆಟ್‌ನ್ನು ಬಳಸಲಿರುವ ಟಿವಿ-ಡಿ1, ಗಗನಯಾನ ಯೋಜನೆಯ ಮೊದಲ ಅಭಿವೃದ್ಧಿ ಹಾರಾಟವಾಗಿರಲಿದೆ. ಇದನ್ನು ಸಮುದ್ರ ಮಟ್ಟದಿಂದ 11 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಉಡಾವಣೆಗೊಳಿಸಲಾಗುತ್ತದೆ. ಈ ಹಾರಾಟದ ಸಂದರ್ಭದಲ್ಲಿ, ಫ್ಲೈಟ್ ಅಬಾರ್ಟ್ (ಹಾರಾಟ ಸ್ಥಗಿತ) ಪರಿಸ್ಥಿತಿಗೆ ಚಾಲನೆ ನೀಡಲಾಗುವುದು. ಅಬಾರ್ಟ್ ಬಳಿಕವೂ ಯೋಜನಾ ಕ್ಯಾಪ್ಸುಲ್ ಹಾರಾಟ ಮುಂದುವರಿಸಿ, 16.6 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಸಾಗಲಿದೆ.

ಯೋಜನೆಯ ಗುರಿಗಳು

ಟಿವಿ-ಡಿ1 ಯೋಜನೆಯ ಪ್ರಾಥಮಿಕ ಗುರಿ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ರಾಕೆಟ್‌ನಿಂದ ಬೇರ್ಪಡುವಿಕೆ ಮತ್ತು ಅದು ಸುರಕ್ಷಿತ ದೂರಕ್ಕೆ ತಲುಪುವ ತನಕ ಅದರ ಪಥವನ್ನು ಅಧ್ಯಯನ ನಡೆಸುವುದಾಗಿದೆ. ಸುರಕ್ಷಿತ ಅಂತರಕ್ಕೆ ತಲುಪಿದ ಬಳಿಕ ಸಿಇಎಸ್‌ನ ಪ್ಯಾರಾಶೂಟ್‌ಗಳು ತೆರೆದುಕೊಳ್ಳಲಿವೆ. ಈ ಬಾರಿ ಪರೀಕ್ಷಿಸುವ ಕ್ಯಾಪ್ಸುಲ್, ಮಾನವ ಸಹಿತ ಯೋಜನೆಯ ಸಿಇಎಸ್‌ನಷ್ಟೇ ತೂಕ ಹೊಂದಿರಲಿದೆ. ಈ ಯೋಜನೆಯ ಯಶಸ್ವಿ ಪ್ರಯೋಗ, ರಷ್ಯಾ, ಅಮೆರಿಕಾ, ಚೀನಾಗಳ ಬಳಿಕ ಭಾರತ ಈ ತಂತ್ರಜ್ಞಾನದಲ್ಲಿ ಸಾಧನೆ ತೋರಿದ ನಾಲ್ಕನೇ ರಾಷ್ಟ್ರ ಎನಿಸಲಿದೆ.

ಗಗನಯಾನ ಯೋಜನೆಯಲ್ಲಿ ನಾಲ್ಕು ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್‌ಗಳನ್ನು ಉದ್ದೇಶಿಸಲಾಗಿದೆ. ಟಿವಿ-1 ಹಾಗೂ ಟಿವಿ-2 ಯೋಜನೆಗಳು ತಂತ್ರಜ್ಞಾನ ಪ್ರದರ್ಶನ ಯೋಜನೆಗಳಾಗಿವೆ. ಟಿವಿ-3 ಹಾಗೂ ಟಿವಿ-4 ಯೋಜನೆಗಳನ್ನು 2024ರಲ್ಲಿ ಗಗನಯಾನ-1 (ರೋಬಾಟಿಕ್ ಪೇಲೋಡ್ ಜೊತೆಗೆ) ಬಳಿಕ ನಡೆಸಲು ಉದ್ದೇಶಿಸಲಾಗಿದೆ.

ಕ್ರ್ಯೂ ಮಾಡ್ಯುಲ್ (ಸಿಎಂ) ಗಗನಯಾತ್ರಿಗಳು ಇರುವ ಸ್ಥಳವಾಗಿದ್ದು, ಭೂಮಿಯ ವಾತಾವರಣವನ್ನು ಹೋಲುವ ಒತ್ತಡದ ವಾತಾವರಣ ಹೊಂದಿರುತ್ತದೆ. ಈ ಯೋಜನೆಯ ಸಿಎಂ ಅಭಿವೃದ್ಧಿಯ ವಿವಿಧ ಹಂತಗಳಲ್ಲಿದೆ. ಅದರಲ್ಲೂ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ (ಟಿವಿ-ಡಿ1) ಯೋಜನೆಯ ಸಿಎಂ ಒತ್ತಡ ರಹಿತ ಆವೃತ್ತಿಯಾಗಿದ್ದು, ಇದರ ಸಂಪೂರ್ಣ ಸಿದ್ಧತೆಗಳು ಪೂರ್ಣಗೊಂಡಿದ್ದು, ಉಡಾವಣಾ ವೇದಿಕೆಗೆ ತೆರಳಲು ಸಿದ್ಧವಾಗಿದೆ. ಒತ್ತಡ ರಹಿತ ಸಿಎಂ ಆವೃತ್ತಿ ನೈಜ ಗಗನಯಾನ ಯೋಜನೆಯ ಆವೃತ್ತಿಯ ಸಿಎಂನ ಗಾತ್ರ ಮತ್ತು ಭಾರಕ್ಕೆ ಸಮನಾಗಿದ್ದು, ವೇಗ ತಗ್ಗಿಸಲು ಮತ್ತು ಮರಳಿ ಸಂಗ್ರಹಿಸಲು ಬೇಕಾದ ವ್ಯವಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ ಸಂಪೂರ್ಣ ಪ್ಯಾರಾಶೂಟ್ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಅವುಗಳೊಡನೆ ರಿಕವರಿ ಏಡ್ಸ್ ಆ್ಯಕ್ಚುವೇಷನ್ ವ್ಯವಸ್ಥೆಗಳು, ಪೈರೋಟೆಕ್ನಿಕ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಸಿಎಂ ಒಳಗಿರುವ ಏವಿಯಾನಿಕ್ಸ್ ವ್ಯವಸ್ಥೆಗಳು ಸಂಚರಣೆ (ನ್ಯಾವಿಗೇಶನ್), ಸೀಕ್ವೆನ್ಸಿಂಗ್, ಟೆಲಿಮೆಟ್ರಿ ಹಾಗೂ ಇನ್ಸ್ಟ್ರುಮೆಂಟೇಶನ್ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ನಿರ್ವಹಿಸಲು ಡ್ಯುಯಲ್ ರಿಡಂಡಂಟ್ ಮೋಡ್‌ನಲ್ಲಿ ಕಾರ್ಯಾಚರಿಸುತ್ತವೆ. ಈ ಯೋಜನೆಗಾಗಿ ಸಿಎಂ ಇನ್ಸ್ಟ್ರುಮೆಂಟೇಷನ್ ವ್ಯವಸ್ಥೆ ಹೊಂದಿದ್ದು, ಇದು ಹಾರಾಟ ದಾಖಲೆಗಳನ್ನು ಪರಿಶೀಲಿಸಿ, ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯಾಚರಿಸಿವೆಯೇ ಎಂದು ತಿಳಿದುಕೊಳ್ಳುತ್ತದೆ. ಕ್ರ್ಯೂ ಮಾಡ್ಯುಲ್ ಬಂಗಾಳ ಕೊಲ್ಲಿಯಲ್ಲಿ ಪತನಗೊಂಡ ಬಳಿಕ, ಅದನ್ನು ಅದಕ್ಕಾಗಿಯೇ ಮೀಸಲಾದ ಭಾರತೀಯ ನೌಕಾಪಡೆಯ ನೌಕೆ ಮತ್ತು ಮುಳುಗು ತಂಡದವರು ಅದನ್ನು ಸಂಗ್ರಹಿಸುತ್ತಾರೆ.

ಶನಿವಾರದಂದು ನಡೆಯಲಿರುವ ಈ ಯೋಜನೆಯ ಒಟ್ಟಾರೆ ಅವಧಿ 8.8 ನಿಮಿಷಗಳಾಗಿರಲಿವೆ.

  • ‘ಇನ್ ಫ್ಲೈಟ್ ಅಬಾರ್ಟ್ ಡೆಮಾನ್ಸ್ಟ್ರೇಷನ್’ ಯೋಜನೆ 8.8 ನಿಮಿಷಗಳದ್ದಾಗಿರಲಿದೆ.
  • ಈ ಪ್ರಕ್ರಿಯೆ, ಹಾರಾಟದ ಸಂದರ್ಭದಲ್ಲಿ 1.2 ಮ್ಯಾಕ್ ವೇಗದಲ್ಲಿ (ಪ್ರತಿ ಗಂಟೆಗೆ 1,482 ಕಿಲೋಮೀಟರ್ ವೇಗ) ಚಲಿಸುವಾಗ ನಡೆಯುವ ಅಬಾರ್ಟ್ ಪ್ರಕ್ರಿಯೆಯ ರೀತಿಯಲ್ಲೇ ಇರಲಿದೆ.
  • ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಕ್ರ್ಯೂ ಮಾಡ್ಯುಲ್ (ಸಿಎಂ) ಜೊತೆಗೆ ಪರೀಕ್ಷಾ ವಾಹನದಿಂದ (ಟಿವಿ) 11.7 ಕಿಲೋಮೀಟರ್ ಎತ್ತರದಲ್ಲಿ ಬೇರ್ಪಡಲಿದೆ.
  • ಸ್ವಯಂಚಾಲಿತ ಅಬಾರ್ಟ್ ಪ್ರಕ್ರಿಯೆ ಸಿಇಎಸ್ ಮತ್ತು ಸಿಎಂ ಅನ್ನು 16.6 ಕಿಲೋಮೀಟರ್ ಎತ್ತರದಲ್ಲಿ ಬೇರ್ಪಡುತ್ತದೆ.
  • ಪ್ಯಾರಾಶೂಟ್‌ಗಳು ತೆರೆದು, ಬಳಿಕ ಸಿಎಂ ಶ್ರೀಹರಿಕೋಟಾದ ಕಡಲ ತೀರದಿಂದ ಬಹುತೇಕ 10 ಕಿಲೋಮೀಟರ್ ಒಳಗೆ ಇಳಿಯಲಿದೆ.
  • ಭಾರತೀಯ ನೌಕಾಪಡೆಯ ಒಂದು ತಂಡ ಸಿಎಂ ಸಮುದ್ರಕ್ಕೆ ಇಳಿದ ಬಳಿಕ ಅದನ್ನು ರಕ್ಷಿಸಲಿದೆ. ಸಿಇಎಸ್ ಹಾಗೂ ಟಿವಿ ಭಾಗಗಳು ಸಮುದ್ರದಲ್ಲಿ ಮುಳುಗಲಿವೆ.

ಭಾರತದ ಗಗನಯಾನ ಯೋಜನೆ: ಸುರಕ್ಷಿತ ಮಾನವ ಸಹಿತ ಹಾರಾಟಕ್ಕೆ ಹಾದಿ

ಗಗನಯಾನ ಯೋಜನೆ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದು, ಅವರನ್ನು ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಗೆ ತಲುಪಿಸುತ್ತದೆ. ಅವರ ಯೋಜನೆ ಮೂರು ದಿನಗಳ ಅವಧಿಯದಾಗಿದ್ದು, ಅವರು ಮೂರು ದಿನಗಳ ಭೂಮಿಗೆ ಮರಳಿ, ಭಾರತೀಯ ಸಮುದ್ರದಲ್ಲಿ ನಿರ್ದಿಷ್ಟ ಜಾಗದಲ್ಲಿ ಇಳಿಯಲಿದ್ದಾರೆ.

ಗಗನಯಾನ ಯೋಜನೆ ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿರುವ ಎಲ್‌ವಿಎಂ3 ಅನ್ನು ಬಳಸಿಕೊಳ್ಳಲಿದೆ. ಈ ರಾಕೆಟ್ ಒಂದು ಘನ ಹಂತ, ಒಂದು ದ್ರವ ಹಂತ ಹಾಗೂ ಕ್ರಯೋಜೆನಿಕ್ ಹಂತಗಳನ್ನು ಒಳಗೊಂಡಿರಲಿದೆ. ಈ ರಾಕೆಟ್ ಭಾಗಗಳನ್ನು ಮಾನವರನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಸಮರ್ಥವಾಗುವಂತೆ ಮಾರ್ಪಡಿಸಲಾಗಿದ್ದು, ಇದನ್ನು ಹ್ಯುಮನ್ ರೇಟೆಡ್ ಎಲ್‌ವಿಎಂ3 (ಎಚ್ಎಲ್‌ವಿಎಂ3) ಎಂದು ಕರೆಯಲಾಗುತ್ತದೆ.

ಎಚ್ಎಲ್‌ವಿಎಂ3 ಒಂದು ವೇಗವಾಗಿ ಕಾರ್ಯಾಚರಿಸುವ, ಹೈ ಥ್ರಸ್ಟ್ ಸಾಲಿಡ್ ಮೋಟರ್‌ಗಳನ್ನು ಅಳವಡಿಸಿರುವ ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ಹೊಂದಿದೆ. ಈ ವ್ಯವಸ್ಥೆ, ಉಡಾವಣಾ ವೇದಿಕೆಯಲ್ಲಾಗಲಿ, ಹಾರಾಟದ ಸಂದರ್ಭದಲ್ಲಾಗಲಿ ತುರ್ತು ಸಂದರ್ಭ ಎದುರಾದರೆ ಕ್ರ್ಯೂ ಮಾಡ್ಯುಲ್ ಅನ್ನು ಅದರೊಳಗಿರುವ ಗಗನಯಾತ್ರಿಗಳ ಸಹಿತ ವೇಗವಾಗಿ ಸುರಕ್ಷಿತ ಅಂತರಕ್ಕೆ ಚಲಿಸುವಂತೆ ಮಾಡುತ್ತದೆ.

ಭೂಮಿಯ ಸುತ್ತಲೂ ಸುತ್ತುವ ಆರ್ಬಿಟಲ್ ಮಾಡ್ಯುಲ್‌ಗೆ (ಒಎಂ) ಕ್ರ್ಯೂ ಮಾಡ್ಯುಲ್ ಹಾಗೂ ಸರ್ವಿಸ್ ಮಾಡ್ಯುಲ್‌ಗಳನ್ನು ಅಳವಡಿಸಲಾಗಿರುತ್ತದೆ. ಒಎಂ ಆಧುನಿಕ ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಹೊಂದಿದ್ದು, ಗಗನಯಾತ್ರಿಗಳ ಸುರಕ್ಷತೆಗೆ ಖಾತ್ರಿ ಒದಗಿಸುತ್ತದೆ.

ಕ್ರ್ಯೂ ಮಾಡ್ಯುಲ್ ಭೂಮಿಯ ರೀತಿಯಲ್ಲಿ ಮಾನವರಿಗೆ ವಾಸಯೋಗ್ಯ ವಾತಾವರಣವನ್ನು ಒದಗಿಸುತ್ತದೆ. ಇದು ಎರಡು ಗೋಡೆಗಳನ್ನು ಹೊಂದಿದ್ದು, ಒತ್ತಡ ಸಹಿತ ಆಂತರಿಕ ಲೋಹದ ರಚನೆಯನ್ನು ಒಳಗೊಂಡಿದೆ. ಒತ್ತಡ ರಹಿತ ಹೊರ ರಚನೆ ಉಷ್ಣದಿಂದ ರಕ್ಷಿಸುವ ವ್ಯವಸ್ಥೆಯನ್ನು ಹೊಂದಿದೆ.

ಕ್ರ್ಯೂ ಮಾಡ್ಯುಲ್ ಒಳಗಡೆ, ಕ್ರ್ಯೂ ಇಂಟರ್‌ಫೇಸ್‌ಗಳು, ಮಾನವ ಕೇಂದ್ರಿತ ಉಪಕರಣಗಳು, ಜೀವ ರಕ್ಷಕ ವ್ಯವಸ್ಥೆಗಳು, ಹಾಗೂ ಭೂಮಿಯೆಡೆಗೆ ಇಳಿಯುವ ವ್ಯವಸ್ಥೆಗಳಿವೆ. ಇದು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳುವ ರೀತಿಯಲ್ಲಿ ವಿನ್ಯಾಸ ಹೊಂದಿದೆ.

ಇನ್ನೊಂದೆಡೆ ಸರ್ವಿಸ್ ಮಾಡ್ಯುಲ್ ಕಕ್ಷೆಯಲ್ಲಿರುವಾಗ ಕ್ರ್ಯೂ ಮಾಡ್ಯುಲ್‌ಗೆ ಬೆಂಬಲ ನೀಡುತ್ತದೆ. ಈ ಒತ್ತಡ ರಹಿತ ರಚನೆ ಒಂದು ಥರ್ಮಲ್ ಸಿಸ್ಟಮ್, ಪ್ರೊಪಲ್ಷನ್ ಸಿಸ್ಟಮ್, ವಿದ್ಯುತ್ ವ್ಯವಸ್ಥೆ, ಏವಿಯಾನಿಕ್ಸ್ ವ್ಯವಸ್ಥೆಗಳು ಮತ್ತು ನಿಯೋಜನಾ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)