India-Russia: ಭಾರತಕ್ಕೆ ರಷ್ಯನ್ ಆಯುಧ ಆಮದುಗಳಿಗೆ ಅಡ್ಡಗಾಲಾಗಿರುವ ಅಮೆರಿಕಾದ ನಿರ್ಬಂಧಗಳು

|

Updated on: Apr 26, 2023 | 7:17 PM

ಭಾರತ ರಷ್ಯಾದಿಂದ ಹಲವಾರು ಆಯುಧಗಳನ್ನು ತನ್ನ ಸೇನಾಪಡೆಗಳಿಗಾಗಿ ಖರೀದಿಸುತ್ತದೆ. ಈಗಾಗಲೇ ಭಾರತ ತನಗೆ ಅಗತ್ಯವಿರುವ ಆಯುಧಗಳ ಖರೀದಿಗೆ ಆದೇಶವನ್ನೂ ನೀಡಿದೆ. ಆದರೆ ಈ ಆಯುಧಗಳಿಗೆ ಹಣ ಪಾವತಿ ಮಾಡುವ ವಿಧಾನಗಳನ್ನು ಅಮೆರಿಕಾ ನಿರ್ಬಂಧಿಸಿರುವ ಪರಿಣಾಮವಾಗಿದೆ....

India-Russia: ಭಾರತಕ್ಕೆ ರಷ್ಯನ್ ಆಯುಧ ಆಮದುಗಳಿಗೆ ಅಡ್ಡಗಾಲಾಗಿರುವ ಅಮೆರಿಕಾದ ನಿರ್ಬಂಧಗಳು
Follow us on

ಭಾರತ ರಷ್ಯಾದಿಂದ (India-Russian) ಹಲವಾರು ಆಯುಧಗಳನ್ನು ತನ್ನ ಸೇನಾಪಡೆಗಳಿಗಾಗಿ ಖರೀದಿಸುತ್ತದೆ. ಈಗಾಗಲೇ ಭಾರತ ತನಗೆ ಅಗತ್ಯವಿರುವ ಆಯುಧಗಳ ಖರೀದಿಗೆ ಆದೇಶವನ್ನೂ ನೀಡಿದೆ. ಆದರೆ ಈ ಆಯುಧಗಳಿಗೆ ಹಣ ಪಾವತಿ ಮಾಡುವ ವಿಧಾನಗಳನ್ನು ಅಮೆರಿಕಾ ನಿರ್ಬಂಧಿಸಿರುವ ಪರಿಣಾಮವಾಗಿ, ಭಾರತಕ್ಕೆ ಆಯುಧ ಪೂರೈಕೆ ಸ್ಥಗಿತಗೊಂಡಿದೆ. ಭಾರತ ಖರೀದಿಸಲು ಉದ್ದೇಶಿಸಿರುವ 2 ಬಿಲಿಯನ್ ಡಾಲರ್ ಮೌಲ್ಯದ ಆಯುಧಗಳ ಖರೀದಿ ಕಳೆದ ಒಂದು ವರ್ಷದಿಂದ ಬಾಕಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರೊಡನೆ, ಭಾರತಕ್ಕೆ ರಷ್ಯಾದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯು ಇನ್ನೂ ಪೂರೈಕೆಯಾಗಬೇಕಿದ್ದು, ಅದಕ್ಕೆ ಅಗತ್ಯವಿರುವ ಬಿಡಿಭಾಗಗಳ ಖರೀದಿಗೆ 10ಬಿಲಿಯನ್ ಡಾಲರ್ ಮೌಲ್ಯದ ಸಾಲವನ್ನೂ ರಷ್ಯಾ ಕೊನೆಗೊಳಿಸಿದೆ. ಚೀನಾ, ಪಾಕಿಸ್ತಾನಗಳ ಅಪಾಯವನ್ನು ಎದುರಿಸಲು ಭಾರತ ಬಹುವಾಗಿ ರಷ್ಯಾ ನಿರ್ಮಿತ ಆಯುಧಗಳ ಮೇಲೆ ಅವಲಂಬಿತವಾಗಿರುವುದರಿಂದ, ಈಗ ರಷ್ಯಾ ಭಾರತದ ಮುಂದೆ ಹೊಸ ಸವಾಲನ್ನೇ ಒಡ್ಡಿದೆ.

ಎರಡನೇ ಹಂತದ ನಿರ್ಬಂಧಗಳು ಎದುರಾಗುವ ಅಪಾಯ ಇದ್ದುದರಿಂದ ಭಾರತ ರಷ್ಯಾಗೆ ಡಾಲರ್ ಮೂಲಕ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಸಮಸ್ಯೆಗಳು ತಲೆದೋರತೊಡಗಿದವು. ಆದರೆ ಭಾರತೀಯ ರೂಪಾಯಿ ದರದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆಗಳಿಂದಾಗಿ ರಷ್ಯಾ ರೂಪಾಯಿ ಮೂಲಕ ಪಾವತಿ ಸ್ವೀಕರಿಸಲು ಹಿಂದೇಟು ಹಾಕಿದೆ. ಆದರೆ ಮಾರುಕಟ್ಟೆಯಲ್ಲಿ ಸರಿಯಾದ ದರದಲ್ಲಿ ರಷ್ಯನ್ ರೂಬಲ್ ಖರೀದಿಸಲು ಕಷ್ಟಕರವಾಗುವ ಸಾಧ್ಯತೆಗಳಿಂದ ಭಾರತ ಈ ವ್ಯವಹಾರಕ್ಕೆ ಹಿಂದೇಟು ಹಾಕಿದೆ. ಭಾರತ ಈಗಾಗಲೇ ರಷ್ಯಾದಿಂದ ತೈಲ ಖರೀದಿಗೆ ಯೂರೋ ಮತ್ತು ದಿರ್‌ಹಮ್ ಮೂಲಕ ಹಣ ಪಾವತಿ ಮಾಡುತ್ತಿದ್ದು, ಅದೇ ವಿಧಾನದಲ್ಲಿ ಆಯುಧ ಖರೀದಿಗೂ ಪಾವತಿ ಮಾಡುವುದು ಸುಲಭ ಉಪಾಯವಾಗಿದೆ. ಆದರೆ ತೈಲ ಖರೀದಿಯನ್ನು ಪರಿಗಣಿಸಿದಷ್ಟು ಲಘುವಾಗಿ ಅಮೆರಿಕಾ ಆಯುಧ ಖರೀದಿಯನ್ನು ಪರಿಗಣಿಸುತ್ತದೆ ಎನ್ನಲಾಗದು. ಹಾಗಾದಾಗ ಭಾರತಕ್ಕೆ ಅಮೆರಿಕಾದ ನಿರ್ಬಂಧಗಳು ಎದುರಾಗುವ ಅಪಾಯವಿದ್ದು, ಅದರೊಡನೆ ಯೂರೋ ಮತ್ತು ದಿರ್‌ಹಮ್ ವಿನಿಮಯ ದರ ಭಾರತಕ್ಕೆ ಅಸಮರ್ಪಕ ಎನಿಸಲಿದೆ.

ಭಾರತ ಸರ್ಕಾರ ಈ ಕುರಿತು ರಷ್ಯಾದೊಡನೆ ಮಾತುಕತೆ ನಡೆಸಿದ್ದು, ಆಯುಧ ಖರೀದಿಗೆ ಪಡೆದುಕೊಂಡ ರೂಪಾಯಿಯನ್ನು ಭಾರತದ ಸಾಲ ಮತ್ತು ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿತು. ಆದರೆ ಈ ಪರಿಹಾರಕ್ಕೆ ರಷ್ಯಾ ಒಪ್ಪಿಗೆ ಸೂಚಿಸಲಿಲ್ಲ. ಜನವರಿ ತಿಂಗಳಲ್ಲಿ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಾಸ್ಕೋಗೆ ತೆರಳಿದ ಸಂದರ್ಭದಲ್ಲಿ ಈ ವಿಚಾರ ಹೆಚ್ಚು ಚರ್ಚೆಗೆ ಬಂದಿತ್ತು. ಇದೇ ವಿಷಯ ರಷ್ಯಾದ ಉಪ ಪ್ರಧಾನಿ ಡೆನಿಸ್ ಮಂಟುರೋವ್ ಹಾಗೂ ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರ ಸಭೆಯಲ್ಲೂ ಚರ್ಚೆಗೊಳಗಾಯಿತು. ಜೈಶಂಕರ್ ಅವರು ರೂಪಾಯಿ ಮೂಲಕ ಪಾವತಿ ನಡೆಸಲಯ ಇನ್ನಷ್ಟು ಕಾರ್ಯ ನಡೆಸಬೇಕಿದೆ ಎಂದಿದ್ದರು.

ಪ್ರಸ್ತುತ ಭಾರತದ ಬಳಿ 250ಕ್ಕೂ ಹೆಚ್ಚು ರಷ್ಯಾ ನಿರ್ಮಿತ ಸು-30 ಎಂಕೆಐ ಯುದ್ಧ ವಿಮಾನಗಳು, 7 ಕಿಲೋ – ವರ್ಗದ ಸಬ್‌ಮರೀನ್‌ಗಳು ಹಾಗೂ 1,200ಕ್ಕೂ ಹೆಚ್ಚು ಟಿ-90 ಟ್ಯಾಂಕ್‌ಗಳಿದ್ದು, ಎಲ್ಲವೂ ಇನ್ನು ಹತ್ತು ವರ್ಷಗಳ ಕಾಲ ಕಾರ್ಯಾಚರಿಸಬಲ್ಲವು. ಇವೆಲ್ಲಕ್ಕೂ ಬಿಡಿಭಾಗಗಳ ಅವಶ್ಯಕತೆಯಿದೆ. ಮಾಸ್ಕೋದಿಂದ ಪೂರೈಕೆ ತಡೆಯಾಗಿರುವ ಪರಿಣಾಮವಾಗಿ, ರಷ್ಯಾದ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮೇಲೆ ಅಪಾರವಾಗಿ ಅವಲಂಬಿತವಾಗಿರುವ ಭಾರತೀಯ ವಾಯುಪಡೆಗೆ ಅತಿದೊಡ್ಡ ಪೆಟ್ಟು ಬಿದ್ದಿದೆ. ಒಂದು ವೇಳೆ ಚೀನಾ ಮತ್ತು ಪಾಕಿಸ್ತಾನಗಳ ಜೊತೆ ಹಂಚಿಕೊಂಡಿರುವ ಭಾರತದ ಗಡಿಯಲ್ಲಿ ಈ ನಿರ್ವಹಣಾ ಕಾರ್ಯಗಳನ್ನು ರಷ್ಯಾ ಕೈಗೊಳ್ಳಲು ಸಾಧ್ಯವೇ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ.

ಇದನ್ನೂ ಓದಿ:LCA Trainer: ಎಲ್‌ಸಿಎ ತೇಜಸ್ ಯೋಜನೆಗೆ ಬಹುದೊಡ್ಡ ಉತ್ತೇಜನ: ಆಗಸಕ್ಕೇರಿದ ಮೊದಲ ಉತ್ಪಾದನಾ ಸರಣಿಯ ಎಲ್‌ಸಿಎ ಟ್ರೈನರ್

ಕಳೆದ ಐದು ವರ್ಷಗಳಿಂದ ರಷ್ಯಾ ಮೇಲೆ ಸತತ ನಿರ್ಬಂಧಗಳು ಮತ್ತು ಆಯುಧ ಖರೀದಿಯಲ್ಲಿ 19% ಕುಸಿತ ಎದುರಾಗಿದ್ದರೂ, ಇನ್ನಿತರ ಆಯುಧ ಉತ್ಪಾದಕ ರಾಷ್ಟ್ರಗಳು ಕಠಿಣ ಸ್ಪರ್ಧೆ ಒಡ್ಡುತ್ತಿದ್ದರೂ, ರಷ್ಯಾ ಇಂದಿಗೂ ಭಾರತದ ಅತಿದೊಡ್ಡ ಮಿಲಿಟರಿ ಹಾರ್ಡ್‌ವೇರ್ ಪೂರೈಕೆದಾರ ರಾಷ್ಟ್ರವಾಗಿದೆ. ಆದರೆ ರಷ್ಯಾ ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ಧದ ಕುರಿತಾಗಿ ಭಾರತ ರಾಜತಾಂತ್ರಿಕವಾಗಿ ಪ್ರತಿಕ್ರಿಯೆ ನೀಡಿದ್ದು, ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಹೊರಗುಳಿದಿದೆ. ಆದರೆ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಬೇಕೆಂದು ಭಾರತ ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ ತಿಂಗಳಲ್ಲಿ ಜಿ-20 ನಾಯಕರ ಸಭೆಯನ್ನು ಆಯೋಜಿಸುವಾಗ ಈ ಯುದ್ಧದ ವಿಚಾರ ಮತ್ತೆ ಮುನ್ನಲೆಯಲ್ಲಿ ಚರ್ಚೆಗೆ ಬರಲಿದೆ. ಈ ಸಭೆ ಭಾರತ ರಷ್ಯಾಗೆ ಆಯುಧ ಖರೀದಿಗೆ ಪಾವತಿ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳದಂತೆ ಮಾಡಬಹುದು. ಅಮೆರಿಕಾ ಮತ್ತು ಇತರ ರಾಷ್ಟ್ರಗಳು ಭಾರತವನ್ನು ಚೀನಾದ ಹೆಚ್ಚುತ್ತಿರುವ ಮಿಲಿಟರಿ ಮತ್ತು ಆರ್ಥಿಕ ದೃಢತೆಯ ಎದುರಿನ ಭದ್ರಕೋಟೆ ಎಂಬುದಾಗಿ ಪರಿಗಣಿಸುತ್ತಿದ್ದು, ಭಾರತಕ್ಕೆ ಅಗತ್ಯ ಮಿಲಿಟರಿ ಉಪಕರಣಗಳನ್ನು ಪೂರೈಸುವ ಭರವಸೆ ನೀಡಿವೆ. ಆದರೆ, ಈ ಕ್ರಮಗಳ ಬಳಿಕವೂ ಭಾರತ ರಷ್ಯಾದ ಆಯುಧಗಳಿಂದ ಸಂಪೂರ್ಣ ಸ್ವತಂತ್ರವಾಗಲು, ಸ್ಥಿರ ರಕ್ಷಣಾ ಸ್ಥಾನವನ್ನು ಹೊಂದಲು ಹಲವು ವರ್ಷಗಳೇ ಬೇಕಾಗಬಹುದು. ಜೋ ಬಿಡನ್ ನೇತೃತ್ವದ ಅಮೆರಿಕಾ ಆಡಳಿತ ಭಾರತ ರಷ್ಯಾ ಜೊತೆ ಹೊಂದಿರುವ ಸಂಬಂಧಗಳಿಗೆ ಯಾವುದೇ ನಿರ್ಬಂಧ ಹೇರದಿದ್ದರೂ, ಅದು ಹಲವು ಹೆಜ್ಜೆಗಳನ್ನು ತೆಗೆದುಕೊಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, ಮುಂಬೈ ಮೂಲದ ಪೆಟ್ರೋಕೆಮಿಕಲ್ ಸಂಸ್ಥೆ ಇರಾನಿನಿಂದ ತೈಲ ಉತ್ಪನ್ನಗಳನ್ನು ಖರೀದಿಸಿದ ಪರಿಣಾಮವಾಗಿ ಅಮೆರಿಕಾ ಆ ಸಂಸ್ಥೆಯನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಿದೆ.

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:14 pm, Wed, 26 April 23