Space Sector: ಐದು ಪಟ್ಟು ಬೆಳವಣಿಗೆ ಹೊಂದುವ ದೂರಗಾಮಿ ಯೋಜನೆ ಹಾಕಿಕೊಂಡಿದೆ ಭಾರತೀಯ ಬಾಹ್ಯಾಕಾಶ ವಲಯ

Tracking Growth Of Indian Space Stratups: ಕಳೆದ 24 ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಬಾಹ್ಯಾಕಾಶ ಸಂಬಂಧಿತ ಸ್ಟಾರ್ಟಪ್‌ಗಳು ಭಾರತದಲ್ಲಿ ಆರಂಭಗೊಂಡಿವೆ. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ಪಿಎಸ್ಎಲ್‌ವಿ ರಾಕೆಟ್ ಉತ್ಪಾದಿಸುವ ಜವಾಬ್ದಾರಿಯನ್ನು ಎಚ್ಎಎಲ್ ಮತ್ತು ಎಲ್&ಟಿ ನೇತೃತ್ವದ ಸಮೂಹಕ್ಕೆ ಹಸ್ತಾಂತರಿಸಿದೆ. ಭಾರತದ ಬಾಹ್ಯಾಕಾಶ ಉದ್ಯಮದ ಬೆಳವಣಿಗೆ ಕುರಿತು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಬರೆದ ವಿಶೇಷ ಲೇಖನ ಇಲ್ಲಿದೆ...

Space Sector: ಐದು ಪಟ್ಟು ಬೆಳವಣಿಗೆ ಹೊಂದುವ ದೂರಗಾಮಿ ಯೋಜನೆ ಹಾಕಿಕೊಂಡಿದೆ ಭಾರತೀಯ ಬಾಹ್ಯಾಕಾಶ ವಲಯ
ಭಾರತ ಬಾಹ್ಯಾಕಾಶ ವಲಯ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Apr 10, 2023 | 12:14 PM

Girish Linganna’s Article On Indian Space Development: ಭಾರತೀಯ ಬಾಹ್ಯಾಕಾಶ ವಲಯದ ಮೇಲೆ ನಿಯಂತ್ರಣ ಹೇರದಿರುವುದು ಮತ್ತು ಪ್ರೋತ್ಸಾಹಧನ ಒದಗಿಸುವುದು ಭಾರತೀಯ ಬಾಹ್ಯಾಕಾಶ ವಲಯಕ್ಕೆ ಉತ್ತೇಜನ ನೀಡಿ, ನಾವೀನ್ಯತೆ ಸಾಧಿಸಲು ನೆರವಾದರೂ, ವಾಣಿಜ್ಯಕವಾಗಿ ಜಾಗತಿಕ ಬಾಹ್ಯಾಕಾಶ ತಾಣವನ್ನಾಗಿಸಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಇತ್ತೀಚೆಗೆ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (ಇನ್ಸ್ಪೇಸ್) ಸ್ಥಾಪನೆಯಾದ ಬಳಿಕ ಭಾರತೀಯ ಬಾಹ್ಯಾಕಾಶ ಉದ್ಯಮದೆಡೆಗೆ ಹೆಚ್ಚು ಗಮನ ಹರಿಯುತ್ತಿದೆ. ಇನ್ ಸ್ಪೇಸ್ ಸ್ಥಾಪನೆ ಖಾಸಗಿ ಸಂಸ್ಥೆಗಳನ್ನೂ ಬಾಹ್ಯಾಕಾಶ ವಲಯದಲ್ಲಿ ತೊಡಗಿಸಿಕೊಳ್ಳುವ ಭಾರತ ಸರ್ಕಾರದ ಬಯಕೆಯನ್ನು ಪ್ರದರ್ಶಿಸಿದೆ. ಇನ್ಸ್ಪೇಸ್ (IN-SPACe) ಅಧ್ಯಕ್ಷರಾಗಿರುವ ಪವನ್ ಕುಮಾರ್ ಗೋಯೆಂಕಾ ಅವರು ಸಂದರ್ಶನವೊಂದರಲ್ಲಿ ಕಳೆದ 24 ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಬಾಹ್ಯಾಕಾಶ ಸಂಬಂಧಿತ ಸ್ಟಾರ್ಟಪ್‌ಗಳು ಭಾರತದಲ್ಲಿ ಆರಂಭಗೊಂಡಿವೆ ಎಂದಿದ್ದರು. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಇತ್ತೀಚೆಗೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ಉತ್ಪಾದಿಸುವ ಜವಾಬ್ದಾರಿಯನ್ನು ಎಚ್ಎಎಲ್ ಮತ್ತು ಎಲ್&ಟಿ ನೇತೃತ್ವದ ಸಮೂಹಕ್ಕೆ ಹಸ್ತಾಂತರಿಸಿದೆ. ಇದು ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ, 860 ಕೋಟಿ ರೂಪಾಯಿಗಳ ಮೊತ್ತದಲ್ಲಿ ಐದು ರಾಕೆಟ್‌ಗಳನ್ನು ನಿರ್ಮಿಸುವ ಗುರಿ ಹೊಂದಿದೆ.

ಪಿಕ್ಸೆಲ್, ಧ್ರುವ ಸ್ಪೇಸ್, ಹಾಗೂ ಸ್ಪೇಸ್ ಕಿಡ್ಸ್ ಇಂಡಿಯಾದಂತಹ ವಿವಿಧ ಸ್ಟಾರ್ಟಪ್ ಸಂಸ್ಥೆಗಳು ಈಗಾಗಲೇ ತಮ್ಮ ಉಪಗ್ರಹಗಳನ್ನು ಉಡಾವಣೆಗೊಳಿಸಿವೆ. ಇತ್ತೀಚೆಗೆ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯೂ ತನ್ನ ಮೊದಲ ಸಬ್ ಆರ್ಬಿಟಲ್ ಉಪಗ್ರಹವನ್ನು ಉಡಾವಣೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲ ಸ್ಟಾರ್ಟಪ್ ಸಂಸ್ಥೆಗಳು ಬಾಹ್ಯಾಕಾಶ ಉದ್ಯಮದಲ್ಲಿ ದಾಪುಗಾಲಿಡುತ್ತಿವೆ. ಈಗ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ 2%ದಷ್ಟು ಮಾತ್ರವೇ ಇದೆ. ಕೇಂದ್ರ ಸರ್ಕಾರ ಈ ಪಾಲನ್ನು ಹೆಚ್ಚಿಸುವ ಗುರಿ ಹೊಂದಿದ್ದರೂ, ಭಾರತ ಪ್ರಮುಖ ಬಾಹ್ಯಾಕಾಶ ರಫ್ತುದಾರ ಎನಿಸಿಕೊಳ್ಳಬೇಕಾದರೆ ಹಲವು ಪ್ರಮುಖ ಅಂಶಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಸಾಧ್ಯವಾಗಿಸಲು ಕೌಶಲ್ಯ, ಸಂಪನ್ಮೂಲ ಹಾಗೂ ಪ್ರಾವೀಣ್ಯತೆ ಸಂಪಾದಿಸುವ ಅನಿವಾರ್ಯತೆಯಿದೆ.

ಸ್ಥಳೀಯ ಬೇಡಿಕೆ ಮತ್ತು ಇನ್ನೋವೇಟಿವ್ ಉತ್ಪನ್ನಗಳಿಗೆ ಒತ್ತು

ಜಗತ್ತಿನಾದ್ಯಂತ ವಿವಿಧ ಯಶಸ್ವಿ ಬಾಹ್ಯಾಕಾಶ ಉದ್ಯಮಗಳ ಹಿಂದೆ ಅಲ್ಲಿನ ಸರ್ಕಾರಗಳು ಪ್ರಮುಖ ಪಾತ್ರ ನಿರ್ವಹಿಸಿವೆ. ಸರ್ಕಾರಗಳು ಬಾಹ್ಯಾಕಾಶ ವಲಯದ ಪ್ರಮುಖ ಉತ್ಪನ್ನಗಳು ಹಾಗೂ ಸೇವೆಗಳಿಗೆ ಆರಂಭಿಕ ಗ್ರಾಹಕರಾಗಿದ್ದವು. ಸರ್ಕಾರಗಳ ಇಂತಹ ನಡೆ ಉತ್ಪನ್ನಗಳು ಅಥವಾ ಸೇವೆಗಳ ಅಭಿವೃದ್ಧಿಗೆ, ಅವುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ವೃದ್ಧಿಸಲು ನೆರವಾಗುತ್ತವೆ.

ಆದ್ದರಿಂದ ಭಾರತೀಯ ಬಾಹ್ಯಾಕಾಶ ಉದ್ಯಮ ಉತ್ಪಾದಿಸುವ ನವೀನ ಉತ್ಪನ್ನಗಳಿಗೆ ತಾನು ಪ್ರಾಥಮಿಕ ಗ್ರಾಹಕನಾಗುವ ನಿಟ್ಟಿನಲ್ಲಿ ಭಾರತ ಸರ್ಕಾರವೂ ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕಿದೆ. ಸರ್ಕಾರದ ಈ ಹೆಜ್ಜೆ ಖಾಸಗಿ ವಲಯ ಇಂತಹ ಕಾರ್ಯಗಳಲ್ಲಿ ಹಣ ಹೂಡುವಾಗಿನ ಅಪಾಯವನ್ನು ಎದುರಿಸಲು ಧೈರ್ಯ ನೀಡುತ್ತದೆ. ಒಂದು ವೇಳೆ ಇಂತಹ ವಸ್ತು ಅಥವಾ ಸೇವೆ ಯಶಸ್ವಿಯಾದರೆ, ಅದನ್ನು ಅಂತಾರಾಷ್ಟ್ರೀಯ ವಲಯಕ್ಕೂ ವಿಸ್ತರಿಸಬಹುದು.

ಸ್ಯಾಟಲೈಟ್ ಇಮೇಜರಿ ತಂತ್ರಜ್ಞಾನಕ್ಕೆ ಬೇಡಿಕೆ

ದೇಶದಲ್ಲಿ ಸ್ಯಾಟಲೈಟ್ ಇಮೇಜರಿಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕಿರುವ ಪರಿಹಾರವೆಂದರೆ, ಒಂದು ಸಂಸ್ಥೆ ಪ್ರಮುಖ ಗ್ರಾಹಕನಾಗಿ ಕಾರ್ಯಾಚರಿಸಿ, 1ಎಂ ರೆಸಲ್ಯೂಷನ್‌ನ 50% ಇಮೇಜರಿಯನ್ನು ಖರೀದಿಸುವುದು. ಇಂತಹ ಕ್ರಮ ಉದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಿ, ಇಂತಹ ಸಾಮರ್ಥ್ಯವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ನೆರವಾಗುತ್ತದೆ. ಒಂದು ವೇಳೆ ಆ ಪ್ರಯತ್ನ ಯಶಸ್ಸು ಕಂಡರೆ, ಭಾರತೀಯ ಉದ್ಯಮ ಈ ಉತ್ಪನ್ನವನ್ನು ಉಪಗ್ರಹ ಹಾಗೂ ಇಮೇಜರಿ ಆಧಾರಿತ ಸೇವೆಯನ್ನು ರಫ್ತು ಮಾಡಲು ಬಳಸಬಹುದು.

ಇದನ್ನೂ ಓದಿ: ಮಾದಕ ದ್ರವ್ಯ ಕಳ್ಳ ಸಾಗಾಣಿಕಾ ದಂಧೆಯ ಬಂದೂಕಿನ ನಳಿಗೆಯಲ್ಲಿ ಸಿಲುಕಿರುವ ಭಾರತ

ಪ್ರಸ್ತುತ ಕೇಂದ್ರ ಸರ್ಕಾರ ಇನ್ಸ್ಪೇಸ್ ನಂತಹ ಸಂಸ್ಥೆಯನ್ನು ಸ್ಥಾಪಿಸಿ, ನಿಯಂತ್ರಕ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನ ನಡೆಸುತ್ತಿದೆ. ಆದರೆ ಸಂಪೂರ್ಣ ಬದಲಾವಣೆಗಳನ್ನು ಜಾರಿಗೆ ತರಲು, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಅಗತ್ಯವಿರುವ ಬಾಹ್ಯಾಕಾಶ ಸಂಬಂಧಿ ಸೇವೆಗಳನ್ನು ವಿಸ್ತರಿಸಿ, ಅದರ ಪೂರೈಕೆಗೆ ಖಾಸಗಿ ವಲಯವನ್ನು ಒಳಗೊಳ್ಳುವುದು ಅನಿವಾರ್ಯವಾಗಿದೆ.

ಒಂದು ವೇಳೆ ಖಾಸಗಿ ವಲಯವನ್ನು ರಾಕೆಟ್ ಹೊರಗುತ್ತಿಗೆ ನೀಡಲು ಮತ್ತು ಉಪಗ್ರಹಗಳನ್ನು ಅಭಿವೃದ್ಧಿ ಪಡಿಸುವುದರ ಹೊರತಾಗಿ ಬಾಹ್ಯಾಕಾಶ ಆಧಾರಿತ ಸೇವೆಗಳಿಗೆ ಬಳಸಿಕೊಂಡರೆ, ಅದು ಕೃಷಿ, ನೀರಿನ ನಿರ್ವಹಣೆ, ಮೂಲಭೂತ ಸೌಕರ್ಯಗಳು, ಮೀನುಗಾರಿಕೆ ಸೇರಿದಂತೆ ವಿವಿಧ ವಲಯಗಳ ಕ್ಷಿಪ್ರ ಡಿಜಿಟಲ್ ಬದಲಾವಣೆಗೆ ನೆರವಾಗಲಿದೆ. ಇಂತಹ ಬದಲಾವಣೆ ಭವಿಷ್ಯದಲ್ಲಿ ಸಾರ್ವಜನಿಕರ ಜೀವನಮಟ್ಟದಲ್ಲಿ ಅಪಾರ ಸುಧಾರಣೆ ತರಬಲ್ಲದು.

ಈ ಗುರಿಯನ್ನು ಸಾಧಿಸಲು ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಬೇಕು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂತಹ ಗುರಿಗಳನ್ನು ನಿರ್ವಹಿಸುವ ಜವಾಬ್ದಾರಿ ವಹಿಸಬಹುದಾಗಿದ್ದು, ಅದರ ಮಾರ್ಗದರ್ಶನದಲ್ಲಿ ಖಾಸಗಿ ಸಂಸ್ಥೆಗಳು ಅಗತ್ಯ ಕಾರ್ಯಗಳನ್ನು ಕೈಗೊಳ್ಳಬಹುದು.

ನೈಜ ನಿಯಂತ್ರಕ ಸುಧಾರಣೆ

ಭಾರತ ಸರ್ಕಾರ ಬಾಹ್ಯಾಕಾಶ ಉದ್ಯಮದ ಮೇಲ್ವಿಚಾರಣೆ ನಡೆಸಲು ಮತ್ತು ಉತ್ತೇಜಿಸಲು ಇನ್ಸ್ಪೇಸ್ ಸಂಸ್ಥೆಯನ್ನು ಆರಂಭಿಸಿದ್ದು, ಅದು ಸ್ವತಂತ್ರವಾಗಿ ಕಾರ್ಯಾಚರಿಸಲು ಅಗತ್ಯ ಕಾನೂನು ಚೌಕಟ್ಟಿನ ಕೊರತೆಯ ಕಾರಣದಿಂದ ಬಾಹ್ಯಾಕಾಶ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ.

ಇನ್ಸ್ಪೇಸ್ ಸಂಸ್ಥೆ ನ್ಯಾಯಸಮ್ಮತ ನಿಯಂತ್ರಕ ಸಂಸ್ಥೆ ಎನಿಸಲು ಸರ್ಕಾರ ಅದಕ್ಕೆ ಪ್ರತ್ಯೇಕವಾಗಿ ಸಂಸ್ಥೆ ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿಲ್ಲ ಶಾಸಕಾಂಗ ಆದೇಶ ಹೊರಡಿಸಬೇಕು. ಇದು ಇನ್ಸ್ಪೇಸ್ ಸ್ವತಂತ್ರ ನಿಯಂತ್ರಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು, ಇಸ್ರೋ ಅಥವಾ ಬಾಹ್ಯಾಕಾಶ ಇಲಾಖೆಯ ಪ್ರಭಾವಕ್ಕೆ ಒಳಗಾಗದಿರಲು ನೆರವಾಗುತ್ತದೆ.

ಟ್ರಾಯ್ ಪ್ರಕಾರ ಇನ್ಸ್ಪೇಸ್ ಮಸೂದೆಯನ್ನು ಜಾರಿಗೆ ತರುವುದರ ಮೂಲಕ ಸುಧಾರಣೆಗಳ ವೇಗವನ್ನು ಸಾಕಷ್ಟು ಹೆಚ್ಚಿಸಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಉದ್ಯಮದಲ್ಲಿ ಪಾಲುದಾರರಾಗಲು ಆಸಕ್ತಿ ಹೊಂದಿರುವ ವಿದೇಶೀ ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಬಹುದು. ಇದೆಲ್ಲದರ ಅಂತಿಮ ಗುರಿಯೆಂದರೆ, ಒಂದು ಸುಸಜ್ಜಿತ ನಿಯಂತ್ರಕ ವ್ಯವಸ್ಥೆಯನ್ನು ಜಾರಿಗೆ ತಂದು, ಆ ಮೂಲಕ ಸ್ಪೇಸ್ ಕಮಿಷನ್, ಬಾಹ್ಯಾಕಾಶ ಇಲಾಖೆ ಅಥವಾ ಮಂತ್ರಿಮಂಡಲದ ಅನುಮತಿ ಪಡೆಯುವ ಅನಿವಾರ್ಯತೆಯನ್ನು ಇಲ್ಲವಾಗಿಸಿ, ಇನ್ಸ್ಪೇಸ್ ಸಂಸ್ಥೆಗೆ ನಿಯಂತ್ರಕ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಒದಗಿಸುವುದು.

ಸಮರ್ಪಕ ಸಂಗ್ರಹಣಾ ಕ್ರಮ

ಮುಂದುವರಿದ ರಾಷ್ಟ್ರಗಳ ಸರ್ಕಾರಗಳು ತಮ್ಮ ಬಾಹ್ಯಾಕಾಶ ಸಂಸ್ಥೆಗಳ ಖರೀದಿ ಕ್ರಮಗಳನ್ನು ಕಾಲ ಕಾಲಕ್ಕೆ ಬದಲಾವಣೆಗೊಳಿಸಿ ನೆರವಾಗುತ್ತವೆ. ಇದರಲ್ಲಿ ಅಪಾಯವನ್ನು ಹಂಚಿಕೊಳ್ಳುವ, ಹಾಗೂ ಅಗತ್ಯ ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರಚುರಪಡಿಸುವ ಕ್ರಮಗಳೂ ಸೇರಿವೆ.

ಅಮೆರಿಕಾ ಸರ್ಕಾರ ನಾಸಾ ಸಂಸ್ಥೆಗೆ ಸಹಾಯ ಮಾಡಲು ಹಲವು ಖರೀದಿ ಕ್ರಮಗಳನ್ನು ಅಭಿವೃದ್ಧಿ ಪಡಿಸಿರುವುದನ್ನು ನಾಸಾ ಸ್ಪೇಸ್ ಆ್ಯಕ್ಟ್ ಅಗ್ರಿಮೆಂಟ್ ಎಂದು ಕರೆಯಲಾಗಿದೆ.

ಈ ಮೂಲಕ ನಾಸಾ ಸಂಸ್ಥೆಗೆ ಗುತ್ತಿಗೆಗಳು, ಒಪ್ಪಂದಗಳು, ಹಾಗೂ ಕೆಲಸಕ್ಕೆ ಸಂಬಂಧಿಸಿದ ಇತರ ವ್ಯವಹಾರಗಳನ್ನು ನಡೆಸುವ ಮತ್ತು ಇಂತಹ ಒಪ್ಪಂದಗಳಿಗೆ ನಿಬಂಧನೆಗಳನ್ನು ವಿಧಿಸುವ ಸ್ವಾತಂತ್ರ್ಯ ನೀಡಲಾಗಿದೆ. ಈ ಅಧಿಕಾರ ನಾಸಾಗೆ ಕಮರ್ಷಿಯಲ್ ಆರ್ಬಿಟಲ್ ಟ್ರಾನ್ಸ್‌ಪೋರ್ಟೇಷನ್ ಸರ್ವಿಸಸ್ (ಸಿಒಟಿಎಸ್) ಹಾಗೂ ಕಮರ್ಷಿಯಲ್ ಕ್ರ್ಯೂ ಡೆವಲಪ್‌ಮೆಂಟ್ (ಸಿಸಿಡಿಇವಿ) ಯಂತಹ ವಿಶಿಷ್ಟ ಖರೀದಿ ಕ್ರಮಗಳಿಗೆ ನೀಡಿದ್ದು, ಸ್ಪೇಸ್ ಎಕ್ಸ್‌ನಂತಹ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ: ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಫಿನ್‌ಲ್ಯಾಂಡ್: ಕಿಡಿ ಹಚ್ಚಿದ ಪುಟಿನ್‌ಗೆ ಜಾಗತಿಕ ರಾಜಕಾರಣದಲ್ಲಿ ಹೊಸ ದುಃಸ್ವಪ್ನ

ಸ್ಪೇಸ್ ಫೋರ್ಸ್‌ನಂತಹ ಅಮೆರಿಕಾದ ರಕ್ಷಣಾ ಸಂಸ್ಥೆಗಳು ಇಂಡೆಫಿನೆಟ್ ಡೆಲಿವರಿ ಇಂಡೆಫಿನೆಟ್ ಕ್ವಾಂಟಿಟಿ (ಐಡಿಐಕ್ಯು) ಒಪ್ಪಂದಗಳನ್ನು ಮಾಡಿಕೊಂಡು, ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿ, ಉಪಯುಕ್ತ ಎನಿಸುವ ತನಕ ಬೆಂಬಲ ನೀಡುತ್ತವೆ. ಇದು ಐಡಿಐಕ್ಯು ಒಪ್ಪಂದಗಳು ಹೇಗೆ ಕಾರ್ಯಾಚರಿಸುತ್ತವೆ ಎನ್ನುವುದಕ್ಕೆ ಆಸಕ್ತಿಕರ ಉದಾಹರಣೆಯಾಗಿದೆ.

ಸಣ್ಣ ಹಾಗೂ ಮಧ್ಯಮ ಗಾತ್ರದ ಸಂಸ್ಥೆಗಳ, ಸ್ಟಾರ್ಟಪ್ ಸಂಸ್ಥೆಗಳ ನಿರ್ಮಾಣದ, ವಾಣಿಜ್ಯಿಕ ಲಾಭದ ಸಾಮರ್ಥ್ಯ ಹೊಂದಿರುವ ನೂತನ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಪ್ರಚುರಪಡಿಸಲು ಮತ್ತು ಅವುಗಳ ರಫ್ತಿನ ಸಾಧ್ಯತೆಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ಖರೀದಿ ಸುಧಾರಣೆಗಳನ್ನು ಜಾರಿಗೆ ತರಬೇಕಿದೆ.

ಭಾರತ ಸರ್ಕಾರ ಆವಿಷ್ಕಾರದ ದೃಷ್ಟಿಯಿಂದ ಎದುರಾಗುವ ಅಪಾಯಗಳನ್ನು ಎದುರಿಸುವ ಖರೀದಿ ಸುಧಾರಣೆಗಳನ್ನು ಜಾರಿಗೆ ತಂದು, ಆ ಮೂಲಕ ವಾಣಿಜ್ಯಿಕವಾಗಿ ಲಾಭದಾಯಕ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ, ಹಾಗೂ ಬೌದ್ಧಿಕ ಆಸ್ತಿ ಅಭಿವೃದ್ಧಿಗೆ ಸಹಕಾರ ನೀಡಬೇಕು.

ಮಾಹಿತಿಗಳನ್ನೊಳಗೊಂಡ ನೀತಿಗಳ ನಿರ್ವಹಣೆ

ಹಾಗೆ ನೋಡಿದರೆ, ಭಾರತದ ಬಾಹ್ಯಾಕಾಶ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಉದ್ಯೋಗಿಗಳ ಸಂಖ್ಯೆ, ಬಾಹ್ಯಾಕಾಶ ಸಂಬಂಧಿತ ಸೇವೆಗಳಲ್ಲಿ ಭಾರತದ ರಫ್ತಿನ ಪ್ರಮಾಣ, ಅಥವಾ ಬಾಹ್ಯಾಕಾಶ ವಲಯದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಸೇರಿದಂತೆ ಹಲವು ಸೂಚ್ಯಂಕಗಳ ಕುರಿತಾದ ನಿಖರ ಮಾಹಿತಿಗಳು, ಅಧ್ಯಯನಗಳು ಲಭ್ಯವಿಲ್ಲ.

ಇನ್ಸ್ಪೇಸ್ ಸಂಸ್ಥೆಯ ಪ್ರೊಮೋಷನ್ ಡೈರೆಕ್ಟರೇಟ್, ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳ ಸೂಕ್ಷ್ಮ ಮತ್ತು ಸ್ಥೂಲ ಆರ್ಥಿಕತೆಯನ್ನು ಗಮನಿಸಲು ಒಂದು ಪ್ರತ್ಯೇಕ ವಿಭಾಗವನ್ನು ಹೊಂದುವ ಅಗತ್ಯವಿದೆ. ಈ ವಿಭಾಗದಲ್ಲಿ ತಾಂತ್ರಿಕತೆ, ಅರ್ಥಶಾಸ್ತ್ರ, ಹಾಗೂ ಸಾಮಾಜಿಕ ವಿಜ್ಞಾನ ಕ್ಷೇತ್ರಗಳ ತಜ್ಞರನ್ನು ಹೊಂದಿ, ಅವರ ಸಹಕಾರದೊಂದಿಗೆ ದೇಶದ ಬಾಹ್ಯಾಕಾಶ ಚಟುವಟಿಕೆಗಳ ಅಭಿವೃದ್ಧಿಯನ್ನು ಸತತವಾಗಿ ಗಮನಿಸಬಹುದು.

ಈ ಮೂಲಕ ವಾರ್ಷಿಕ ಅಭಿವೃದ್ಧಿ ದರವನ್ನು ಗುರುತಿಸಲು ಮತ್ತು ಅವುಗಳ ಆಧಾರದಲ್ಲಿ ನೀತಿಗಳಲ್ಲಿ ಮಾರ್ಪಾಡು ತರಲು ನೀಲಿ ನಕ್ಷೆಯಾಗಿ ಬಳಸಬಹುದು. ವಿದೇಶೀ ನೇರ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ, ಡಾಲರ್ ಮೌಲ್ಯದಲ್ಲಿ ಒಟ್ಟು ರಫ್ತು, ಹಾಗೂ ಇತರ ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬಹುದು.

ಇದನ್ನೂ ಓದಿ: ಎಚ್ಎಎಲ್ ನಲ್ಲಿ 3ನೇ ಎಲ್‌ಸಿಎ ಉತ್ಪಾದನೆ ಉದ್ಘಾಟಿಸಿದ ರಕ್ಷಣಾ ಕಾರ್ಯದರ್ಶಿ: 100ನೇ ಸುಖೋಯಿ-30 ಎಂಕೆಐ ಆರ್‌ಓಎಚ್ ವಿಮಾನ ವಾಯುಪಡೆಗೆ ಹಸ್ತಾಂತರ

ಈ ಅಂಶಗಳನ್ನು ಗಮನಿಸುತ್ತಾ, ಇತರ ಸೂಚಕಗಳಾದ ಗಾಳಿ ಮತ್ತು ನೀರಿನ ಗುಣಮಟ್ಟದಲ್ಲಿ ಸುಧಾರಣೆ, ಬೆಳೆಗಳ ಅಭಿವೃದ್ಧಿ ಹಾಗೂ ಇಂಗಾಲದ ಹೊರಸೂಸುವಿಕೆಯಲ್ಲಿನ ಕಡಿತಗಳ ಕುರಿತೂ ಸಂಶೋಧನೆ ಕೈಗೊಳ್ಳಬೇಕು.

ಕಳೆದ ಹಲವಾರು ವರ್ಷಗಳಲ್ಲಿ, ನೀತಿಗಳನ್ನು ವ್ಯಕ್ತಿನಿಷ್ಠ ಮಾಹಿತಿಗಳ ಆಧಾರದಲ್ಲಿ ರೂಪಿಸಲಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಬಾಹ್ಯಾಕಾಶ ಉದ್ಯಮದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಅಗತ್ಯವಿರುವ ಆರ್ಥಿಕ ಹಾಗೂ ಸಾಮಾಜಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ರಫ್ತು ಸಹಕಾರ

ಭಾರತದ ಕುಶಲ ಸಾಫ್ಟ್‌ವೇರ್ ಕಾರ್ಮಿಕ ಬಲದ ಕಾರಣದಿಂದ ಹಲವು ಅತ್ಯುತ್ತಮ ಡೌನ್‌ಸ್ಟ್ರೀಮ್ ಅಪ್ಲಿಕೇಶನ್ ಸಂಸ್ಥೆಗಳು ಭಾರತದಲ್ಲಿ ಮೂಡಿಬರುತ್ತಿವೆ.

ವಸ್ಸಾರ್ ಲ್ಯಾಬ್ಸ್, ಸ್ಯಾಟ್‌ಶ್ಯೂರ್, ಆಕ್ವಾಕನೆಕ್ಟ್, ಕ್ರಾಪ್ ಇನ್, ಮತ್ತಿತರ ಕಂಪನಿಗಳು ಭಾರತೀಯ ಉದ್ಯಮಿಗಳು ಹೇಗೆ ಬಾಹ್ಯಾಕಾಶ ಮತ್ತು ಸಾಫ್ಟ್‌ವೇರ್‌ಗಳನ್ನು ಜೊತೆಯಾಗಿಸಿ, ಉದ್ಯಮಗಳಿಗೆ ಮಾತ್ರವಲ್ಲದೆ, ಸಮಾಜಕ್ಕೂ ನೆರವಾಗುವಂತಹ ಉತ್ಪನ್ನಗಳನ್ನು ಹೊರತರುತ್ತಾರೆ ಎನ್ನುವುದಕ್ಕೆ ಉದಾಹರಣೆಗಳಾಗಿವೆ. ಈ ಸಂಸ್ಥೆಗಳು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲೂ ಸಾಮಾಜಿಕ ಪರಿಣಾಮ ಬೀರಬಲ್ಲವು.

ದಕ್ಷಿಣ ಏಷ್ಯಾ, ಆಫ್ರಿಕಾ, ಹಾಗೂ ಲ್ಯಾಟಿನ್ ಅಮೆರಿಕಾದಂತಹ ಭೌಗೋಳಿಕ ಪ್ರದೇಶಗಳಲ್ಲಿ ತಲೆದೋರುವ ಸಮಸ್ಯೆಗಳಿಗೆ, ಸಾಂಸ್ಕೃತಿಕ ಭಿನ್ನತೆಗಳಿಗೆ ಹಾಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವಿಕೆಗೆ ಭಾರತದ ಪರಿಹಾರಗಳು ಪಾಶ್ಚಾತ್ಯ ಬಾಹ್ಯಾಕಾಶ ಶಕ್ತಿಗಳು ಒದಗಿಸುವ ಪರಿಹಾರಗಳಿಂದ ಹೆಚ್ಚು ಪರಿಣಾಮಕಾರಿ ಮತ್ತು ಸೂಕ್ತವಾಗಿವೆ. ಈ ಭೂಪ್ರದೇಶಗಳು ಎದುರಿಸುವ ಸವಾಲುಗಳನ್ನು ಭಾರತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: LCA Trainer: ಎಲ್‌ಸಿಎ ತೇಜಸ್ ಯೋಜನೆಗೆ ಬಹುದೊಡ್ಡ ಉತ್ತೇಜನ: ಆಗಸಕ್ಕೇರಿದ ಮೊದಲ ಉತ್ಪಾದನಾ ಸರಣಿಯ ಎಲ್‌ಸಿಎ ಟ್ರೈನರ್

ಸ್ಥಳೀಯವಾಗಿ ಹೆಚ್ಚಿನ ಪ್ರಚಾರ ಪಡೆಯಲು, ಭಾರತದಲ್ಲಿ ಅಭಿವೃದ್ಧಿ ಪಡಿಸಲಾದ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ನಡುವಿನ ಸಂಬಂಧವನ್ನು ತಿಳಿಯಬೇಕಾಗುತ್ತದೆ. ಇನ್ಸ್ಪೇಸ್ ಸಂಸ್ಥೆ ಭಾರತದ ವಿದೇಶೀ ಕಾರ್ಯಾಚರಣೆಗಳೊಡನೆ ಸಮನ್ವಯ ಸಾಧಿಸಿ, ಇಂತಹ ಯೋಜನೆಗಳ ಅಭಿವೃದ್ಧಿಗೆ ನೆರವಾಗುತ್ತದೆ. ಆದರೆ ಇದಕ್ಕಾಗಿ ಭಾರತೀಯ ಉದ್ಯಮಗಳೊಡನೆ ಕಾರ್ಯ ನಿರ್ವಹಿಸಿ, ತಮ್ಮ ದೇಶಕ್ಕೆ ಉಪಯೋಗ ಒದಗಿಸುವ ಸಹಯೋಗಿ ಸಂಸ್ಥೆಗಳ ಅಗತ್ಯವಿದೆ. ಈ ಕ್ರಮಗಳು ಮುಂದಿನ ದಿನಗಳಲ್ಲಿ ಭಾರತದ ಬಾಹ್ಯಾಕಾಶ ಸಂಬಂಧಿ ಉತ್ಪನ್ನಗಳು ಮತ್ತು ಸೇವೆಗಳ ರಫ್ತಿಗೆ ಸಹಕರಿಸಲಿವೆ.

ಇದನ್ನು ಆರಂಭಿಸಲು ಒಂದು ದಾರಿಯೆಂದರೆ, ಒಂದು ನಿರ್ದಿಷ್ಟ ಉದ್ದೇಶದ ಆಧಾರಿತವಾದ ವ್ಯಾಪಾರ ನಿಯೋಗವನ್ನು ಆರಂಭಿಸುವುದು. ಇಲ್ಲಿ ಭಾರತೀಯ ಉದ್ಯಮಗಳು ವಿದೇಶೀ ಸಹಯೋಗಿಗಳಿಂದ ಸಹಕಾರ ಪಡೆದುಕೊಳ್ಳುವಂತೆ ಮಾಡಬಹುದು.

ಯಾವುದೇ ದೇಶದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾದರೆ, ಈ ಮೇಲಿನ ಎಲ್ಲ ಆಯಾಮಗಳನ್ನೂ ಕೇಂದ್ರೀಕೃತ ಮತ್ತು ಸ್ವತಂತ್ರ ರೀತಿಯಲ್ಲಿ ಗಮನಿಸಬೇಕಾಗುತ್ತದೆ. ಆ ಮೂಲಕ ಬಾಹ್ಯಾಕಾಶ ವಲಯದ ಅಭಿವೃದ್ಧಿ ಸಾಧಿಸಬಹುದು.

ಭಾರತ ಬಾಹ್ಯಾಕಾಶ ವಲಯದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಹೊಂದಿರುವವರು ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಕಡೆಗೆ ಗಮನ ಹರಿಸಲಿ ಎಂದು ಆಶಿಸೋಣ.

Girish Linganna

ಗಿರೀಶ್ ಲಿಂಗಣ್ಣ

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Mon, 10 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್