ನಿವೃತ್ತ ಐಎಎಸ್ ಅಧಿಕಾರಿ ಮತ್ತು ಭೂ ಕಬಳಿಕೆ ನಿಗ್ರಹ ಕಾರ್ಯ ಪಡೆಯ ಅಧ್ಯಕ್ಷರಾಗಿದ್ದ ವಿ.ಬಾಲಸುಬ್ರಮಣಿಯನ್ ಅವರ “ಕಲ್ಯಾಣ ಕೆಡುವ ಹಾದಿ “ಎನ್ನುವ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಯಲ್ಲಿ ಪ್ರಾಮಾಣಿಕತೆಯ ಮೌಲ್ಯಗಳು ಕರ್ನಾಟಕದ ರಾಜಕಾರಣ ಮತ್ತು ಅಧಿಕಾರಶಾಹಿ ವಲಯಗಳಲ್ಲಿ ಕುಸಿದಿರುವುದನ್ನು ದಾಖಲಿಸಲಾಗಿದೆ. ಈ ಕುರಿತು ಹಿರಿಯ ಪತ್ರಕರ್ತ ರುದ್ರಪ್ಪ ಸಿ. ಅವರು ಬಾಲಸುಬ್ರಮಣಿಯನ್ ಅವರನ್ನು ಸಂದರ್ಶನ ನಡೆಸಿದ್ದಾರೆ.
ಪ್ರಶ್ನೆ: ತಮ್ಮ ಕೃತಿಯಲ್ಲಿ ಕರ್ನಾಟಕದ ರಾಜಕಾರಣದ ಜೊತೆಗೆ ಅಧಿಕಾರಶಾಹಿ ಅಥವಾ ಕಾರ್ಯಂಗವೂ ಅವನತಿ ಹೊಂದಿರುವುದನ್ನು ದಾಖಲಿಸಿದ್ದೀರಿ. ಇಂತಹ ಪರಿಸ್ಥಿತಿಗೆ ಕಾರಣವಾಗಿರುವ ಪ್ರಮುಖ ಅಂಶಗಳು ಯಾವುವು?
ಉತ್ತರ: ತುರ್ತು ಪರಿಸ್ಥಿತಿಯಲ್ಲಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಕಮಿಟೆಡ್ ಸಿವಿಲ್ ಸರ್ವಿಸಸ್ ಅಂದರೆ “ಬದ್ಧತೆಯಿರುವ ನಾಗರೀಕ ಸೇವೆ” ಎನ್ನುವ ಒಂದು ಪರಿಕಲ್ಪನೆಯನ್ನು ಜಾರಿಗೆ ತಂದರು. ಅದರ ಪ್ರಕಾರ ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕೆಲಸ ಮಾಡಬೇಕಿತ್ತು. ಆಗಿನಿಂದಲೇ ಆಡಳಿತ ವ್ಯವಸ್ಥೆ ಕೆಡಲು ಆರಂಭವಾಯಿತು. ಇದರ ಜೊತೆಗೆ ಐಎಎಸ್, ಐಪಿಎಸ್ ಮುಂತಾದ ಅಖಿಲ ಭಾರತ ಸೇವೆಗಳ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರಗಳ ಸಂಪೂರ್ಣ ನಿಯಂತ್ರಣವಿಲ್ಲ. ಅವರು ಏನಾದರೂ ತಪ್ಪು ಮಾಡಿದರೆ ಅವರನ್ನು ಅಮಾನತು ಮಾಡಬಹುದೇ ವಿನಃ ವಜಾ ಮಾಡುವಂತಿಲ್ಲ. ಅವರಿಗೆ ಸಾಂವಿಧಾನಿಕ ರಕ್ಷಣೆಯಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಸಂಬಳವೂ ಚೆನ್ನಾಗಿದೆ. ಬಹುತೇಕ ಟಾಟಾ, ಬಿರ್ಲಾ, ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ವಲಯದ ವೇತನ ಶ್ರೇಣಿಗೆ ಸಮಾನವಾಗಿದೆ. ನನಗೆ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿ ಪೆನ್ಷನ್ ಬರುತ್ತಿದೆ. ಇಂತಹ ದೊಡ್ಡ ಆದಾಯದಲ್ಲಿ ತುಂಬಾ ಅನುಕೂಲವಾಗಿ ಬದುಕಬಹುದು. ಆದ್ದರಿಂದ ಅಧಿಕಾರಿಗಳು ಭ್ರಷ್ಟರಾಗುವ ಅಗತ್ಯವೇ ಇಲ್ಲ. ಆದರೂ ಶೇ.70 ರಷ್ಟು ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಕೆಲವರು ಸ್ವಲ್ಪ ಭ್ರಷ್ಟರು. ಮತ್ತೆ ಕೆಲವರು ಮಧ್ಯಮ ಮಟ್ಟದ ಭ್ರಷ್ಟ್ರರು. ಇನ್ನು ಉಳಿದವರು ಹೇಗೆ ದುಡ್ಡು ಮಾಡಬೇಕೆಂದು ರಾಜಕಾರಣಿಗಳಿಗೇ ಹೇಳಿ ಕೊಡುತ್ತಾರೆ. ಇದಕ್ಕೆ ದುರಾಸೆಯೇ ಕಾರಣ. ರಾಜಕೀಯ ವ್ಯವಸ್ಥೆಯ ಗುಣ ಮಟ್ಟ ಕೆಡುತ್ತಿರುವುದೇ ಈ ಪರಿಸ್ಥಿತಿಗೆ ಮುಖ್ಯ ಕಾರಣ. ಮುಖ್ಯ ಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್ ಮತ್ತು ದೇವರಾಜ ಅರಸು ಕಾನೂನು ನಿಯಮಗಳ ಪ್ರಕಾರ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆರ್ .ಗುಂಡೂರಾವ್ ಮತ್ತು ಎಸ್.ಬಂಗಾರಪ್ಪನವರ ಕಾಲದಲ್ಲಿ ಭ್ರಷ್ಟಾಚಾರದ ಸಾಮಾಜೀಕರಣ ಮತ್ತು ಪ್ರಜಾಪ್ರಭುತ್ವೀಕರಣ ಆರಂಭವಾಯಿತು.
ಕರ್ನಾಟಕದಲ್ಲಿ ಭ್ರಷ್ಟಾಚಾರ ಅಬಕಾರಿ, ಪಿಡಬ್ಲ್ಯೂ ಡಿ ಮತ್ತು ನೀರಾವರಿ ಇಲಾಖೆಗಳಿಗೆ ಸೀಮಿತವಾಗಿತ್ತು. ಆದರೆ ಎಂಬತ್ತರ ದಶಕದ ನಂತರ ಎಲ್ಲಾ ಇಲಾಖೆಗಳಿಗೂ ವಿಸ್ತಾರವಾಯಿತು. ಎಲ್ಲಾ ಇಲಾಖೆಗಳಿಗೂ ಕಲೆಕ್ಷನ್ ಟಾರ್ಗೆಟ್ ಫಿಕ್ಸ್ ಮಾಡುವ ವ್ಯವಸ್ಥೆ ಬಂಗಾರಪ್ಪನವರ ಕಾಲದಲ್ಲಿ ಆರಂಭವಾಯಿತು. ರಾಜಕಾರಣಿಗಳಿಗೆ ಸದಾ ಅನಿಶ್ಚತೆ ಕಾಡುತ್ತಿರುತ್ತದೆ. ಆದರೆ ಅವರ ಕೈಯಲ್ಲಿ ಇರುವ ಒಂದೇ ಅಸ್ತ್ರವೆಂದರೆ, ಅದು “ಟ್ರಾನ್ಸ್ ಫರ್”. ಅಧಿಕಾರಿಗಳ ಮನಸ್ಸು ಗಟ್ಟಿಯಾಗಿದ್ದರೆ ಅದಕ್ಕೂ ಹೆದರಿಕೊಳ್ಳುವ ಅಗತ್ಯವಿಲ್ಲ. ಆದರೆ ಬಹುತೇಕ ಅಧಿಕಾರಿಗಳು ಅದನ್ನು ಒಂದು ಶಿಕ್ಷೆ ಎಂದುಕೊಂಡು ರಾಜಕಾರಣಿಗಳ ಜೊತೆಗೆ ಕೈ ಜೋಡಿಸಿಬಿಡುತ್ತಾರೆ. ಆದ್ದರಿಂದಲೇ ಅಧಿಕಾರಶಾಹಿಯಲ್ಲಿಯೂ ಕುಸಿತ ಸಂಭವಿಸುತ್ತಿದೆ.
ಇದನ್ನೂ ಓದಿ: ನೀರಿಗಾಗಿ ಸ್ವಯಂಪ್ರೇರಿತ ಅಳಿಲು ಸೇವೆಗೆ ವಿಪುಲ ಅವಕಾಶ; ಡಾ ರವಿಕಿರಣ ಪಟವರ್ಧನ
ಪ್ರಶ್ನೆ: ಅಧಿಕಾರಿಗಳಿಗೆ ಇರುವ ಸಾಂವಿಧಾನಿಕ ರಕ್ಷಣೆಯನ್ನು ಸಂವಿಧಾನದ ತಿದ್ದುಪಡಿ ಮೂಲಕ ತೆಗೆದು ಹಾಕಿದರೆ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಬಹುದೇ?
ಉತ್ತರ: ಇಲ್ಲ. ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತೆದೆ. ಇಂಡಿಯಾ, ಪಾಕಿಸ್ತಾನದ ರೀತಿ ಆಗುತ್ತದೆ. ಅಲ್ಲಿ ಅಧಿಕಾರಿಗಳಿಗೆ ಸಾಂವಿಧಾನಿಕ ರಕ್ಷಣೆ ಇಲ್ಲ. ಅಲ್ಲಿ ನಾಮಿನೇಷನ್ ಪದ್ಧತಿಯಿದೆ. ಆದ್ದರಿಂದ ಯಾವಾಗಲೂ ಅಸ್ಥಿರತೆ ಇರುತ್ತದೆ. ನಮ್ಮ ದೇಶದಲ್ಲಿ ಸಾಂವಿಧಾನಿಕ ರಕ್ಷಣೆ ಇದ್ದರೂ ಅಧಿಕಾರಶಾಹಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂತಹ ರಕ್ಷಣೆಯನ್ನು ರದ್ದು ಪಡಿಸಿದರೆ ಪರಿಸ್ಥಿತಿ ಇನ್ನೂ ಕೆಡುತ್ತೆ. ಒಂದು ಬಲವಾದ ಅಧಿಕಾರಶಾಹಿ ಸ್ಟೀಲ್ ಫ್ರೇಮ್ ರೀತಿ ಇರಲಿ ಎಂದು ವಲ್ಲಭಭಾಯಿ ಪಟೇಲ್ ಅವರು ಅಧಿಕಾರಿಗಳಿಗೆ ಇಂತಹ ರಕ್ಷಣೆಯನ್ನು ನೀಡಿದ್ದರು. ಕೇಂದ್ರದಲ್ಲಿ ದುರ್ಬಲವಾದ ಸಮ್ಮಿಶ್ರ ಸರ್ಕಾರಗಳು ಬಂದರೂ ಅಥವಾ ಯಾವುದೇ ಸರ್ಕಾರ ಇಲ್ಲದಿದ್ದರೂ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತದೆ. ಸಾಂವಿಧಾನಿಕ ರಕ್ಷಣೆಯನ್ನು ತೆಗೆದು ಹಾಕಿದರೆ ಅಸ್ಥಿರತೆ ಉಂಟಾಗುತ್ತದೆ.
ಪ್ರಶ್ನೆ: ಈಗ ಉದ್ಯೋಗ ಭದ್ರತೆ ಇರುವುದು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ. ಕೆಲಸ ಮಾಡಿದರೂ ಅಥವಾ ಮಾಡದೇ ಇದ್ದರೂ ಪ್ರತಿ ತಿಂಗಳು ಸಂಬಳ ಮಾತ್ರ ಗ್ಯಾರಂಟಿಯಾಗಿ ಸಿಗುತ್ತದೆ ಎನ್ನುವ ಧೋರಣೆಯೇ ಒಂದು ಶಾಪವಾಗಿ ಪರಿಣಮಿಸಿದೆ. ಕಾರ್ಪೊರೇಟ್ ವಲಯದಲ್ಲಿ ಇರುವಂತೆ ಕಾರ್ಯಕ್ಷಮತೆ ಆಧಾರದ ಮೇಲೆ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಉದ್ಯೋಗದ ಕರಾರನ್ನು ನವೀಕರಿಸುವ ಗುತ್ತಿಗೆ ಪದ್ದತಿಯನ್ನು ಜಾರಿಗೆ ತರಬಹುದೇ?
ಉತ್ತರ: ಗುತ್ತಿಗೆ ಪದ್ದತಿಯನ್ನು ಜಾರಿಗೆ ತಂದರೆ, ಬಿಜೆಪಿ ಸರ್ಕಾರವಿದ್ದಾಗ ಬಿಜೆಪಿ ಪಕ್ಷದವರನ್ನ ಅಧಿಕಾರಿಗಳಾಗಿ ನೇಮಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರ ಬಂದಾಗ ಅವರನ್ನೆಲ್ಲಾ ಕಿತ್ತು ಹಾಕಿ ಕಾಂಗ್ರೆಸ್ ಬೆಂಬಲಿಗರನ್ನು ತರುತ್ತಾರೆ. ರಾಜಕೀಯ ವ್ಯವಸ್ಥೆಯಲ್ಲಿರುವ ಅಸ್ಥಿರತೆ ಅಧಿಕಾರಶಾಹಿಗೂ ಪ್ರವೇಶವಾಗುತ್ತದೆ. ಆದ್ದರಿಂದ ಅದೊಂದು ವಿವೇಕದ ನಿರ್ಧಾರವಾಗುವುದಿಲ್ಲ.
ಪ್ರಶ್ನೆ: ಕೇಂದ್ರ ಸರ್ಕಾರ 2014 ರಿಂದ ಇದುವರೆಗೆ 400 ಭ್ರಷ್ಟ ಮತ್ತು ಅಧ್ಯಕ್ಷ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಅದೇ ರೀತಿ ಮಾಡಿ ಆಡಳಿತ ವ್ಯವಸ್ಥೆಯನ್ನು ಶುದ್ದೀಕರಿಸಬಹುದೇ?
ಉತ್ತರ: ಇಲ್ಲಿ ಅದನ್ನು ಯಾವ ಸರ್ಕಾರಗಳೂ ಮಾಡುತ್ತಿಲ್ಲ. ಏಕೆಂದರೆ ಭ್ರಷ್ಟ ಅಧಿಕಾರಿಗಳಿಗೆ ಭಾರೀ ಡಿಮ್ಯಾಂಡ್ ಇದೆ. ಆದ್ದರಿಂದ ಭ್ರಷ್ಟರನ್ನು ಸರ್ಕಾರದಿಂದ ತೊಲಗಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಅಪರಾಧ ಪ್ರಕ್ರಿಯೆ ಸಂಹಿತೆಯ 197 ನೇ ಕಲಂ ಪ್ರಕಾರ ಯಾವುದೇ ಅಧಿಕಾರಿಯ ವಿರುದ್ಧ ಪ್ರಾಷಿಕ್ಯೂಷನ್ನಿಗೆ ಸರ್ಕಾರದ ಪೂರ್ವಾನುಮತಿ ಅಗತ್ಯವಿದೆ. ಯಾವುದೇ ಅಧಿಕಾರಿ ಇನ್ ದಿ ಕೋರ್ಸ್ ಆಫ್ ಹಿಸ್ ಡ್ಯೂಟಿ ಅಂದರೆ ತನ್ನ ಕರ್ತವ್ಯದ ಸಂದರ್ಭದಲ್ಲಿ ತಪ್ಪು ಮಾಡಿದ್ದರೆ ಪೂರ್ವಾನುಮತಿಯ ಅಗತ್ಯವಿದೆ ಎಂದು ಈ ಕಲಂ ಹೇಳುತ್ತದೆ. ದುಡ್ಡು ಅಥವಾ ಲಂಚ ತೆಗೆದುಕೊಳ್ಳುವುದು ಅಧಿಕಾರಿಯ ಡ್ಯೂಟಿಯ ವ್ಯಾಪ್ತಿಗೆ ಬರುವುದಿಲ್ಲ. ಅದು ಡ್ಯೂಟಿಯಿಂದ ಹೊರಗಿನ ಕೃತ್ಯ. ಈ ರೀತಿ ವ್ಯಾಖ್ಯಾನ ಮಾಡುವ ಮೂಲಕ “ಪ್ರಾಷಿಕ್ಯೂಷನ್ನಿಗೆ ಪೂರ್ವಾನುಮತಿಯ ಅಗತ್ಯವೇ ಇಲ್ಲ; ನೇರವಾಗಿ ತನಿಖಾ ಸಂಸ್ಥೆಗಳು ಕ್ರಮವನ್ನು ಜರುಗಿಸಬಹುದು” ಎಂದು ಯಾವುದೇ ಮುಖ್ಯಮಂತ್ರಿಯವರು ಮತ್ತು ಸಚಿವ ಸಂಪುಟ ನಿರ್ಧರಿಸಲು ಸಾಧ್ಯವಿದೆ. ಆದರೆ ಯಾವ ಪಕ್ಷಗಳ ಸರ್ಕಾರಗಳು ಬಂದರೂ ಅದನ್ನು ಮಾಡುವುದಿಲ್ಲ. ಪೂರ್ವಾನುಮತಿ ನೀಡುವ ಅಧಿಕಾರವನ್ನು ಬಿಟ್ಟು ಕೊಟ್ಟರೆ ಅಧಿಕಾರಿಗಳ ಮೇಲೆ ನಿಯಂತ್ರಣ ತಪ್ಪಿ ಹೋಗುತ್ತದೆ ಎಂದು ಅಧಿಕಾರಸ್ಥರು ಭಾವಿಸುತ್ತಾರೆ. ಆದ್ದರಿಂದಲೇ ಇದುವರೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಯಾವ ಅಧಿಕಾರಿಯೂ ಜೈಲಿಗೆ ಹೋಗಿಲ್ಲ ಮತ್ತು ಕೆಲಸದಿಂದ ವಜಾ ಆಗಿಲ್ಲ.
ಪ್ರಶ್ನೆ: ಅಧಿಕಾರಿಗಳು ಸದುದ್ದೇಶದಿಂದ ಮತ್ತು ಉತ್ಸಾಹದಿಂದ ಕಾರ್ಯ ನಿರ್ವಹಿಸುವಾಗ ಎಡವುವುದು ಸಹಜ. ಅದಕ್ಕೆ ಬೋನಾಫೈಡ್ ಎರರ್ ಅಥವಾ ಅಮಾಯಕ ತಪ್ಪು ಎನ್ನುತ್ತಾರೆ. ಆದ್ದರಿಂದ ಅದು ಕ್ಷಮಾರ್ಹ. ಆದರೆ ಕೆಲವು ಅಧಿಕಾರಿಗಳು ಕ್ರಿಮಿನಲ್ ನಿರ್ಲಕ್ಷದಿಂದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಾರೆ ಮತ್ತು ಸಾವು ನೋವಿಗೆ ಕಾರಣರಾಗುತ್ತಾರೆ. ಅಂತವರನ್ನು ಕೂಡಾ ಕೇವಲ ಅಮಾನತ್ತು ಮಾಡುತ್ತಾರೆ. ಅಮಾನತು ಒಂದು ಶಿಕ್ಷೆಯೇ ಅಲ್ಲ. ಉದಾಹರಣೆಗೆ ಮೂರು ತಿಂಗಳ ಹಿಂದೆ ಅತ್ತಿಬೆಲೆಯಲ್ಲಿ ಪಟಾಕಿ ದುರಂತದಲ್ಲಿ 17 ಯುವಕರು ಜೀವಂತವಾಗಿ ದಹನವಾದರು. ಅಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಮತ್ತು ಗೃಹ ಸಚಿವರು ಈ ಪ್ರಕರಣಕ್ಕೆ ಅಧಿಕಾರಿಗಳ ವೈಫಲ್ಯವೂ ಮೇಲ್ನೋಟಕ್ಕೆ ಕಾರಣ ಎಂದು ಹೇಳಿದ್ದರು. ಆದರೆ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆಯೇ ವಿನಃ ಅವರ ವಿರುದ್ಧ ಎಫ್ಐಆರ್ ಇನ್ನೂ ದಾಖಲಿಸಿಲ್ಲ ಏಕೆ?
ಉತ್ತರ: ಅದೊಂದು ಘನಘೋರ ದುರಂತ. ಅದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾಗಿರುವ ಎಲ್ಲರ ಮೇಲೆ ಎಫ್ಐಆರ್ ದಾಖಲಿಸಬೇಕಿತ್ತು. ಅಧಿಕಾರಿಗಳ ವೈಫಲ್ಯವನ್ನು ಗುರ್ತಿಸಿರುವ ಗೃಹ ಸಚಿವರು ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಏಕೆ ಸೂಚನೆ ನೀಡಿಲ್ಲ? ಇದಕ್ಕೆ ರಾಜಕಾರಣಿಗಳ ಒತ್ತಡವೇ ಕಾರಣ. ಅಧಿಕಾರಿಗಳು ಎರಡು ಅಥವಾ ಮೂರು ಎಂಎಲ್ಎಗಳು ಮತ್ತು ಮಂತ್ರಿಗಳ ಮೂಲಕ ಅಲ್ಲಿಗೆ ಬಂದಿರುತ್ತಾರೆ. ಅವರ ವಿರುದ್ಧ ಕೇಸ್ ಬುಕ್ ಮಾಡಲು ಆ ಎಂಎಲ್ಎಗಳು ಮತ್ತು ಮಂತ್ರಿಗಳೇ ಬಿಡುವುದಿಲ್ಲ.
ಪ್ರಶ್ನೆ: ಆಡಳಿತ ವ್ಯವಸ್ಥೆಯ ಕಾಯಕಲ್ಪ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಸುಧಾರಿಸುವುದು ಹೇಗೆ?
ಉತ್ತರ: ಅದಕ್ಕೆ ಯಾವುದೇ ಮಂತ್ರದಂಡವಿಲ್ಲ. ಈಗಿನ ಪರಿಸ್ಥಿತಿಗೆ ಇಡೀ ಸಮಾಜವೇ ಹೊಣೆ. ಕೇವಲ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಸರ್ಕಾರವನ್ನು ನಡೆಸುವ ರಾಜಕಾರಣಿಗಳಿಗೆ ಉತ್ತಮ ಆಡಳಿತವನ್ನು ನಡೆಸುವುದರಲ್ಲಿ ಆಸಕ್ತಿ ಇಲ್ಲದಿದ್ದರೆ ಆಡಳಿತಶಾಹಿ ತಾನಾಗಿಯೇ ಉತ್ತಮ ಆಡಳಿತವನ್ನು ನೀಡಲು ಸಾಧ್ಯವಿಲ್ಲ. ಅಧಿಕಾರಿಗಳಲ್ಲಿ ಇನ್ನೂ ಕೆಲವರು ಪ್ರಾಮಾಣಿಕರು ಇದ್ದಾರೆ. ಅವರು ಶೇಕಡ ಮೂವತ್ತರಷ್ಟು ಇರಬಹುದು. ಆದರೆ ಅವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಪ್ರಾಮಾಣಿಕ ಅಧಿಕಾರಿಗಳು ಈಗ ಅಳಿವಿನ ಅಂಚಿನಲ್ಲಿರುವ ತಳಿಗಳಷ್ಟೆ. ಇಡೀ ವ್ಯವಸ್ಥೆ ಸುಧಾರಣೆಯಾಗದೆ ಆಡಳಿತಶಾಹಿಯನ್ನು ಮಾತ್ರ ಸುಧಾರಿಸಲು ಸಾಧ್ಯವಿಲ್ಲ.
ಸಂದರ್ಶನ: ರುದ್ರಪ್ಪ.ಸಿ
ಹಿರಿಯ ಪತ್ರಕರ್ತ (9620026931)
ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Mon, 5 February 24