
ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಉಪನ್ಯಾಸಕಿ ಪುಷ್ಪಾ ಎಂಬುವವರು ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಇನ್ನು ಸಾವಿಗೂ ಮುನ್ನ ಅವರು ತಮ್ಮ ನೋವು ಮತ್ತು ಅನ್ಯಾಯವನ್ನು ವಿಡಿಯೋನಲ್ಲಿ ಹೇಳಿಕೊಂಡಿದ್ದಾಳೆ.

ಉಪನ್ಯಾಸಕಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂ ಬಳಿ ನಡೆದಿದೆ. ಮೃತ ಮಹಿಳೆಯನ್ನು 28 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದ್ದು, ಘಾಟಿ ಬಳಿಯ ವಿಶ್ವೇಶ್ವರಯ್ಯ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ತಪಸಿಹಳ್ಳಿ ಗ್ರಾಮದ ವೇಣು ಎನ್ನುವರನ್ನ ಪುಷ್ಪಾ ನಗು ನಗುತ್ತಲೆ ಕಳೆದ ನವಂಬರ್ 2024 ರಲ್ಲಿ ಹಸೆಮಣೆ ಏರಿದ್ದರು. ಜೊತೆಗೆ ಆರಂಭದಲ್ಲಿ ಚೆನ್ನಾಗೆ ಇದ್ದ ಗಂಡ ನಂತರ ತನ್ನ ಮನೆಯವರ ಜೊತೆ ಸೇರಿಕೊಂಡು ಅಸಲಿ ಆಟ ಶುರುಮಾಡಿಕೊಂಡಿದ್ದ. ನಿತ್ಯ ಹಣಬೇಕು ಸೈಟ್ ಬೇಕು ಅಂತ ಪುಷ್ಪಾಂಜಲಿಗೆ ಕಿರುಕುಳ ನೀಡಲು ಆರಂಬಿಸಿದ್ನಂತೆ.

ಅಲ್ಲದೆ ಎಷ್ಟೆ ಹೇಳಿದ್ರು ತವರು ಮನೆಯಿಂದ ಸೈಟ್ ತೆಗೆಸಿಕೊಳ್ತಿಲ್ಲ ಅಂತ ಕಳೆದ 9 ತಿಂಗಳಿನಿಂದ ಗೃಹಿಣಿಯ ಜೊತೆ ಸಂಸಾರ ಮಾಡುವುದನ್ನೆ ಬಿಟ್ಟು ಬಿಟ್ಟಿದ್ನಂತೆ. ತಾಳಿ ಕಟ್ಟಿದ ಪತ್ನಿ ಅನ್ನೋದನ್ನು ನೋಡದೆ ಹೀನಾಯಮಾನವಾಗಿ ಪತ್ನಿ ಜೊತೆ ನಡೆದುಕೊಂಡ ಗಂಡನಿಂದ ಪತ್ನಿ ಸಾಕಷ್ಟು ಮನನೊಂದಿದ್ದು ಎರಡು ಮೂರು ಭಾರಿ ಮನೆಯವರಿಗೂ ಹೇಳಿದ್ಲಂತೆ. ಆದ್ರೆ ಸಂಸಾರ ಅಂದಮೇಲೆ ಇದೆಲ್ಲ ಇರೋದೆ ಅಂತ ಬುದ್ದಿವಾದ ಹೇಳಿ ಕಳೆದ ತಿಂಗಳದಷ್ಟೆ ಗಂಡನ ಮನೆಗೆ ಕಳಿಸಿದ್ದಾರೆ.

ಆದ್ರೆ ಗಂಡನ ಮನೆಗೆ ಬಂದ ನಂತರವು ತಮ್ಮ ಹಳೆ ಚಾಳಿಯನ್ನ ಕುಟುಂಬಸ್ಥರು ಮುಂದುವರೆಸಿದ್ದು ಮನೆಯವರು ಕಿರುಕುಳ ತಾಳಲಾರದ ಪುಷ್ಪಾ ಶನಿವಾರ ಕಾಲೇಜಿಗೆ ಕೆಲಸಕ್ಕೆ ಅಂತ ಹೋದವಳು ವಾಪಸ್ ಬಂದಿರಲಿಲ್ಲ. ಇನ್ನೂ ಕಳೆದ ಎರಡು ದಿನಗಳಿಂದ ಎಲ್ಲೆಡೆ ಹುಡುಕಾಡಿದ ಪೋಷಕರಿಗೆ ಇಂದು ಬೆಳಗ್ಗೆ ಘಾಟಿ ಸುಬ್ರಮಣ್ಯದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನಲ್ಲಿ ಮೃತದೇಹ ತೆಲಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಎಲ್ಲರೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಕಳೆದ ವರ್ಷವಷ್ಟೆ ಮಗಳ ಜೀವನ ಚೆನ್ನಾಗಿರಲಿ ಅಂತ ಪುಷ್ಪಾ ತಂದೆ ನಾರಾಯಣಪ್ಪ 5 ಲಕ್ಷ ಹಣ ವರದಕ್ಷಿಣೆ, ಚಿನ್ನಾಭರಣವನ್ನೆಲ್ಲ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ರಂತೆ. ಆದ್ರೆ ಅಷ್ಟೆಲ್ಲ ಮಾಡಿದ್ರು ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ, ಮತ್ತು ಮೈದುನ ನಾರಾಯಣಸ್ವಾಮಿ ಸೇರಿಕೊಂಡು ಮಗಳಿಗೆ ಕಿರುಕುಳ ನೀಡಿ ಸಾಯುವಂತೆ ಮಾಡಿದ್ದು ಮಗಳ ಸಾವಿಗೆ ಗಂಡನ ಮನೆಯವರೆ ಕಾರಣ ಅಂತ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ.

ಮದುವೆಯ ದಿನದಿಂದಲೂ ವೇಣು ತನ್ನ ಪತ್ನಿಯೊಂದಿಗೆ ಸಹಜ ದಾಂಪತ್ಯ ಜೀವನ ನಡೆಸಿರಲಿಲ್ಲ. ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎಂದು ಹೇಳಿದ್ದು, ಅತ್ತೆ ಮತ್ತು ಇತರ ಮನೆಯವರು ಪುಷ್ಪಾಳಿಗೆ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ರೀತಿಯ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳದಿಂದ ಬೇಸತ್ತ ಪುಷ್ಪಾ, ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಮುನ್ನ ಚಿತ್ರೀಕರಿಸಿದ ವಿಡಿಯೋದಲ್ಲಿ ಪುಷ್ಪಾ ತಾನು ಎದುರಿಸುತ್ತಿದ್ದ ಕಿರುಕುಳ ಮತ್ತು ಕುಟುಂಬದವರ ಅಸಹನೀಯ ವರ್ತನೆ ಕುರಿತು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತಷ್ಟು ಗಂಭೀರ ಪಡೆದುಕೊಂಡಿದೆ. ಈ ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಂಡ ವೇಣು, ಅತ್ತೆ ಮತ್ತು ಇತರ ಮನೆಯವರ ವಿರುದ್ಧ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ.

ನಾನು ಮದುವೆಯಾಗಿ ಗಂಡನ ಮನೆಗೆ ಹೋದ ದಿನದಿಂದ ನನ್ನ ಗಂಡ ನನ್ನ ಜೊತೆ ಸರಿಯಾಗಿ ಸಂಸಾರ ಮಾಡದೆ, ನನ್ನಿಂದ ದೂರ ಉಳಿಯುತ್ತಿದ್ದರು. ಸಂಸಾರ ಮಾಡಬೇಕೆಂದು ಎಷ್ಟು ಪ್ರಯತ್ನ ಪಟ್ಟರು ಗಂಡ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವಿಚಾರವನ್ನು ನಮ್ಮ ಅತ್ತೆ ಮಾವನಿಗೆ ತಿಳಿಸಿದರೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರು ಎಂದು ಆರಂಭದಲ್ಲಿ ಹೇಳುತ್ತಿದ್ದರು. ಗಂಡನಿಗೆ ನಾವು ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಈಗ ಮಗು ಬೇಡ 1-2 ವರ್ಷ ಹೋಗಲಿ ನಂತರ ಮಗು ಮಾಡಿಕೊಳ್ಳೋಣ. ಈಗ ಯಾಕೆ ಅರ್ಜೆಂಟ್ ಎಂದು ನನಗೆ ಬೈಯುತ್ತಿದ್ದರು ಪುಷ್ಪಾವತಿ ಹೇಳಿಕೊಂಡಿದ್ದಾರೆ.

ನನಗೆ ಅನುಮಾನ ಬಂದು, ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದು ಗಂಡನಿಗೆ ತಿಳಿಸಿದ್ದೆ. ಆಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅವರನ್ನು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆಲ್ಲ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಬಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪುಷ್ಪಾವತಿ ಆರೋಪಿಸಿದ್ದಾರೆ.
Published On - 7:49 pm, Mon, 20 October 25