ಎ.ಆರ್. ರೆಹಮಾನ್ ಮಗಳು ಖತಿಜಾ ರೆಹಮಾನ್ ಮದುವೆ ನೆರವೇರಿದೆ. ಕುಟುಂಬದವರು ಮತ್ತು ಆಪ್ತರು ಮಾತ್ರ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಮದುವೆ ಬಳಿಕ ಕ್ಲಿಕ್ಕಿಸಿದ ಫೋಟೋವನ್ನು ರೆಹಮಾನ್ ಮತ್ತು ಖತಿಜಾ ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ಎ.ಆರ್. ರೆಹಮಾನ್ ಅವರು ತಮ್ಮ ಕುಟುಂಬದ ವಿಚಾರವನ್ನು ಸಾಧ್ಯವಾದಷ್ಟು ಖಾಸಗಿಯಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಈಗ ಅವರ ಮಗಳ ಮದುವೆ ಕೂಡ ಸದ್ದಿಲ್ಲದೇ ನಡೆದಿದೆ. ನವದಂಪತಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಗಾಯಕರಾದ ನೀತಿ ಮೋಹನ್, ಚಿನ್ಮಯಿ ಶ್ರೀಪಾದ, ಹರ್ಷದೀಪ್ ಖೌರ್, ಶ್ರೇಯಾ ಘೋಷಾಲ್ ಸೇರಿದಂತೆ ಸಂಗೀತ ಲೋಕದ ಹಲವರು ಶುಭ ಹಾರೈಸಿದ್ದಾರೆ.
ಮಗಳ ಮದುವೆಯ ಖುಷಿಯ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಎ.ಆರ್. ರೆಹಮಾನ್ ಅವರು ಎಲ್ಲರ ಶುಭ ಹಾರೈಕೆ ಬೇಡಿದ್ದಾರೆ. ‘ಈ ದಂಪತಿ ಮೇಲೆ ದೇವರ ಕೃಪೆ ಇರಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗಳಿಗಾಗಿ ಮುಂಚಿತವಾಗಿಯೇ ಧನ್ಯವಾದಗಳು’ ಎಂದು ಎ.ಆರ್. ರೆಹಮಾನ್ ಬರೆದುಕೊಂಡಿದ್ದಾರೆ.
2021ರ ಡಿಸೆಂಬರ್ 29ರಂದು ರಿಯಾಸ್ದೀನ್ ಶೇಖ್ ಮೊಹಮ್ಮದ್ ಮತ್ತು ಖತಿಜಾ ರೆಹಮಾನ್ ನಿಶ್ಚಿತಾರ್ಥ ನೆರವೇರಿತ್ತು. ಖತಿಜಾ ರೆಹಮಾನ್ ಅವರು ಕೂಡ ಸಂಗೀತದಲ್ಲಿ ಪಳಗಿದ್ದಾರೆ. ಅನೇಕ ಸಿನಿಮಾ ಗೀತೆಗಳನ್ನು ಅವರು ಹಾಡಿದ್ದಾರೆ.
ಮದುವೆ ನಂತರದ ಫೋಟೋ ಹಂಚಿಕೊಂಡಿರುವ ಖತಿಜಾ ರೆಹಮಾನ್ ಅವರು, ‘ಇದು ನನ್ನ ಜೀವನದ ಬಹುನಿರೀಕ್ಷಿತ ದಿನ’ ಎಂದು ಬರೆದುಕೊಂಡಿದ್ದಾರೆ. ಖತಿಜಾ ಮತ್ತು ರಿಯಾಸ್ದೀನ್ ಶೇಖ್ ಮೊಹಮ್ಮದ್ ಅವರಿಗೆ ಅನೇಕರು ಅಭಿನಂದನೆ ತಿಳಿಸಿದ್ದಾರೆ.
Published On - 3:01 pm, Fri, 6 May 22