ಎಲ್ಲರಿಗೂ ಆಸೆ ಇದ್ದೆ ಇರುತ್ತೆ. ಒಂದು ಬಾರಿಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕು. ಅದರಲ್ಲೂ ಮಧ್ಯಮವರ್ಗದ ಬಡಮಕ್ಕಳು ಕೂಡ ಈ ಕನಸನ್ನ ಕಾಣುತ್ತಿರುತ್ತಾರೆ. ಸದ್ಯ ಆ ಕನಸು ನನಸಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ವಿಮಾನ ಭಾಗ್ಯ ಕಲ್ಪಿಸಿದ್ದು, ಮಕ್ಕಳೊಂದಿಗೆ ಶಿಕ್ಷಕರು ಫುಲ್ ಖುಷ್ ಆಗಿದ್ದಾರೆ.
ತುಮಕೂರು ತಾಲೂಕಿನ ಹರಳೂರು ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ರಾಜಣ್ಣ ಎಂಬುವರು ತಮ್ಮ ಶಾಲೆಯ ಒಟ್ಟು 51 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಡುಗೆ ಸಿಬ್ಬಂದಿಯನ್ನು ಬೆಂಗಳೂರಿನಿಂದ ಪುಣೆಗೆ ಕರೆದುಕೊಂಡು ಹೋಗಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪುಣೆಗೆ ತೆರಳಿ, ಅಲ್ಲಿಂದ ಶಿರಡಿ, ನಾಸಿಕ್, ಪಂಡರಾಪುರ, ಶನಿ ಶಿಂಗ್ನಾಪುರ, ಅಜಂತಾ ಎಲ್ಲೋರಾ ಸೇರಿದಂತೆ ವಿಜಯಪುರ ಪ್ರವಾಸ ಮುಗಿಸಿ ಬಂದಿದ್ದಾರೆ. ಒಟ್ಟು 2,67 ಲಕ್ಷ ರೂ. ಹಣವನ್ನ ತಾವೇ ನೀಡಿದ್ದಾರೆ. ಸದ್ಯ ಪ್ರವಾಸ ಮುಗಿಸಿ ಬಂದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಫುಲ್ ಖುಷ್ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕ ರಾಜಣ್ಣ, ನಾನು ಚಿಕ್ಕವಯಸ್ಸಿನಿಂದ ವಿಮಾನದಲ್ಲಿ ಓಡಾಡಬೇಕು ಅಂತಾ ಆಸೆ ಇತ್ತು. ಆಕಾಶದಲ್ಲಿ ವಿಮಾನ ಹೋದರೆ ಅದು ನೋಡಿ ಖುಷಿ ಪಡುತ್ತಿದ್ದೆ. ಹೀಗಾಗಿ ಏನಾದರೂ ಮಾಡಿ ನಮ್ಮ ಶಾಲಾ ಮಕ್ಕಳನ್ನ ವಿಮಾನದಲ್ಲಿ ಕರೆದುಕೊಂಡು ಹೋಗಿ ಅವರಿಗೂ ಆ ಅನುಭವ ನೀಡಿ ಖುಷಿ ಪಡಬೇಕೆನಿಸಿತು. ಹೀಗಾಗಿ ಸ್ವಂತ ಖರ್ಚಿನಲ್ಲಿ ಇದನ್ನ ಮಾಡಿದ್ದೇನೆ ಎಂದಿದ್ದಾರೆ.
ಒಂದು ಬಾರಿಯಾದರೂ ವಿಮಾನ ಪ್ರಯಾಣ ಮಾಡಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಸದ್ಯ ಶಿಕ್ಷಕ ವಿದ್ಯಾರ್ಥಿಗಳ ಕನಸು ನನಸು ಮಾಡಿ ಸೈ ಎನಿಸಿಕೊಂಡಿದ್ದಾರೆ.