ಜಾತ್ರೆಗಳೆಂದರೆ ಅಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ರಥೋತ್ಸವ ಪಲ್ಲಕ್ಕಿ ಉತ್ಸವ ನಂಧಿಧ್ವಜ ಮೆರವಣಿಗೆಗಳು ಸೇರಿದಂತೆ ಇತರೆ ಪದ್ದತಿಗಳ ಆಚರಣೆ ಕಾಮನ್ ಆಗಿ ಕಾಣಸಿಗುತ್ತದೆ. ಆದರೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆಯೋ ಲಕ್ಷ್ಮೀ ದೇವಿಯ ಜಾತ್ರೆ ಇವೆಲ್ಲಕ್ಕಿಂತ ಡಿಫರೆಂಟ್ ಆಗಿ ನಡೆಯುತ್ತದೆ.
ಪ್ರತಿ ವರ್ಷ ತಪ್ಪದೇ ನಡೆಯೋ ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಉತ್ತಮ ಮಳೆ, ಬೆಳೆ ಅಷ್ಟೇಯಲ್ಲ ಗ್ರಾಮಕ್ಕೆ ಯಾವುದೇ ಕೇಡು ಆಗದಿರಲಿ, ಕೊರೊನಾ ಹಾಗೂ ಇತರೆ ರೋಗಗಳು ಬಾಧೆಗಳು ಕಾಡದಿರಲಿ ಎಂದು ಜಾತ್ರೆಯನ್ನೇ ಮಾಡುತ್ತಾರೆ.
ಕಳೆದ 500 ಕ್ಕೂ ಆಧಿಕ ವರ್ಷಗಳಿಂದಲೂ ಉಕ್ಕಲಿ ಗ್ರಾಮದಲ್ಲಿ ಇಂತ ಜಾತ್ರೆಯನ್ನು ಮಾಡಿಕೊಂಡು ಬರಲಾಗಿದೆ. ಗ್ರಾಮದ ಲಕ್ಷ್ಮೀ ದೇವರ ಜಾತ್ರೆಯನ್ನು ಮಾಡಿ ಉತ್ತಮ ಮಳೆ ಫಸಲು ಬರಲಿ, ರೋಗರುಜಿನಗಳ ಕಾಟ ಬಾರದಿರಲಿ ಎಂದು ವಿಶೇಷ ಆಚರಣೆ ಮಾಡುತ್ತಾರೆ.
ಗ್ರಾಮದ ಮಧ್ಯ ಭಾಗದಲ್ಲಿರುವ ಲಕ್ಷ್ಮೀ ದೇವರ ದೇವಸ್ಥಾನದಲ್ಲಿ ಹಲವಾರು ಪದ್ದತಿಗಳ ಪ್ರಕಾರ ಪೂಜಾ ವಿಧಿ ವಿಧಾನಗಳ ಜೊತೆಗೆ ವಿಶೇಷ ಪೂಜೆ, ಅಭೀಷೇಕ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯ ಮಾಡುತ್ತಾರೆ.
ಬಳಿಕ ದೇವಸ್ಥಾನದ ಎದುರಿನಲ್ಲಿನ ಹೊಂಡದಲ್ಲಿ ನೀರು ತುಂಬಿಸಿರುತ್ತಾರೆ. ನೀರು ತುಂಬಿದ ಹೊಂಡಕ್ಕೆ ನೂಲು ಸುತ್ತಿ ಪೂಜೆ ಮಾಡುತ್ತಾರೆ. ಇವೆಲ್ಲ ವಿಧಿವಿಧಾನಗಳು ಮುಗಿದ ಬಳಿಕ ದೇವಿಯ ವೇಷ ಧರಿಸಿದ ಹಾಗೂ ಚೌರ ಬೀಸುವ ವೇಷಧಾರಿಗಳ ಮೆರವಣಿಗೆಯನ್ನು ಆರಂಭಿಸುತ್ತಾರೆ. ಇದನ್ನು ಸೋಗು ಹಾಕುವುದು ಎನ್ನುತ್ತಾರೆ.
ಬಳಿಕ ಜಾತ್ರೆಯ ವಿಶೇಷ ರೀತಿ ದೇವಿಯ ಸೋಗು ಹಾಕಿದವರು ಮೆರವಣಿಗೆ ಮೂಲಕ ಲಕ್ಷ್ಮೀ ದೇವಸ್ಥಾನಕ್ಕೆ ಬಂದ ಬಳಿಕ ಆಚರಣೆ ಆರಂಭವಾಗುತ್ತದೆ. ಇನ್ನು ಜಾತ್ರೆಗಾಗಿ ಗ್ರಾಮದ ಎಲ್ಲರೂ ಜಮಾಯಿಸಿರುತ್ತಾರೆ. ಗಂಡನ ಮನೆಯಲ್ಲಿರುವವರು ಜಾತ್ರೆಗಾಗಿ ತವರಿಗೆ ಆಗಮಿಸುವುದು ಸಹ ವಾಡಿಕೆ.
ಯಾವಾಗ ದೇವರ ಸೋಗು ಹಾಕಿರುವವರ ಮೆರವಣಿಗೆ ದೇವಸ್ಥಾನ ತಲುಪುತ್ತದೆಯೋ ಆಗ ವಿಶೇಷ ಆಚರಣೆಗೆ ಹಸಿರು ನಿಶಾನೆ ಸಿಗುತ್ತದೆ. ದೇವಸ್ಥಾನದ ಎದುರಿನ ಹೊಂಡದಲ್ಲಿ ಈಗಾಗಲೇ ನೀರು ತುಂಬಿಸಲಾಗಿದ್ದು ಆ ನೀರಲ್ಲಿ ಒಂದು ತಂಡದ ಸದಸ್ಯರು ಬಟ್ಟೆಯ ಮೂಟೆಗಳಲ್ಲಿ ತುಂಬಿಕೊಂಡು ಎದುರು ತಂಡದವರು ಮೇಲೆ ಎರಚುತ್ತಾರೆ.
ಹೀಗೆ ನೀರು ಎರಚಿಸಿಕೊಂಡ ತಂಡವದವರು ಪ್ರತಿಯಾಗಿ ಎದುರು ತಂಡದವನ್ನು ಬಾಳೆಯ ದಿಮ್ಮಿನ ಸಿಪ್ಪೆಯಿಂದ ಹೊಡೆಯುತ್ತಾರೆ. ಪರಸ್ಪರ ನೀರು ಎರಚುವುದು ಪ್ರತಿಯಾಗಿ ಬಾಳೆ ದಿಂಡಿನ ಸಿಪ್ಪೆಯಿಂದ ಹೊಡೆಯುವುದು ನಿರಂತರವಾಗಿ ನಡೆಯುತ್ತಲೇ ಹೋಗುತ್ತದೆ. ಈ ರೀತಿಯ ಆಚರಣೆ ದೇವಸ್ಥಾನದ ಎದುರಿನ ಹೊಂಡದಲ್ಲಿನ ನೀರು ನಡೆಯುತ್ತದೆ.
ಮಕ್ಕಳು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗಿರುತ್ತಾರೆ. ಇಂತಹ ಆಚರಣೆ ಮಾಡುವುದರಿಂದ ಗ್ರಾಮದಲ್ಲಿ ಯಾವುದೇ ಮಾರಕ ರೋಗಗಳು ಬರುವುದಿಲ್ಲ. ಎಲ್ಲರಿಗೂ ಒಳಿತಾಗುತ್ತದೆ. ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಅಷ್ಟೇಯಲ್ಲ ಉಕ್ಕಲಿ ಗ್ರಾಮದಲ್ಲಿರುವ ಎಲ್ಲಾ ಜಾತಿ ಕೋಮು ಸಮುದಾಯದ ಜನರು ಯಾವುದೇ ಬೇಧಭಾವ ಇಲ್ಲದೇ ಜಾತ್ರೆಯಲ್ಲಿ ಭಾಗಿಯಾಗೋದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಎಲ್ಲರೂ ಸಹೋದರತ್ವದಿಂದಲೇ ಇರಬೇಕೆಂಬ ಉದ್ದೇಶದಿಂದ ಎಲ್ಲರೂ ಸೇರಿ ಜಾತ್ರೆಯನ್ನು ಆಚರಣೆ ಮಾಡುತ್ತೆವೆಂದು ಗ್ರಾಮದ ಹಿರಿಯರು ಹೇಳಿದ್ದಾರೆ.
ಇನ್ನು ಇಂತಹ ಜಾತ್ರೆ ವಿಜಯಪುರ ಜಿಲ್ಲೆಯಲ್ಲಷ್ಟೇ ಕಾಣಸೀಗುವುದು. ಬಹು ವೈಶಿಷ್ಟ್ಯವಾದ ಉಕ್ಕಲಿ ಗ್ರಾಮದ ಲಕ್ಷ್ಮೀ ದೇವರ ಜಾತ್ರೆಯನ್ನು ಪ್ರತಿ ವರ್ಷ ತಪ್ಪದೇ ಅಚ್ಚು ಕಟ್ಟಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ.
Published On - 3:00 pm, Sun, 21 May 23