ಭಾರತಕ್ಕೆ ಬರಲಿದ್ದಾರೆ ಲಿಯೋನೆಲ್ ಮೆಸ್ಸಿ..! ಕೇರಳದಲ್ಲಿ ಫುಟ್ಬಾಲ್ ಪಂದ್ಯವನ್ನಾಡಲಿದೆ ಅರ್ಜೆಂಟೀನಾ ತಂಡ
Argentina football team: ಕೇರಳ ಕ್ರೀಡಾ ಸಚಿವರಾದ ವಿ. ಅಬ್ದುರಹಿಮಾನ್ ಅವರು ಅರ್ಜೆಂಟೀನಾ ಫುಟ್ಬಾಲ್ ತಂಡವು ಮುಂದಿನ ವರ್ಷ ಕೇರಳದಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದೆ ಎಂದು ಘೋಷಿಸಿದ್ದಾರೆ. ಲಿಯೋನೆಲ್ ಮೆಸ್ಸಿ ಅವರನ್ನೊಳಗೊಂಡ ಈ ತಂಡದ ಪಂದ್ಯಕ್ಕೆ ರಾಜ್ಯ ಸರ್ಕಾರ ಪೂರ್ಣ ಬೆಂಬಲ ನೀಡುತ್ತಿದೆ. ಉದ್ಯಮಿಗಳು ಆರ್ಥಿಕ ನೆರವು ನೀಡಲಿದ್ದಾರೆ. ಕೊಚ್ಚಿಯಲ್ಲಿ ಪಂದ್ಯ ನಡೆಯುವ ಸಾಧ್ಯತೆಯಿದೆ.
1 / 6
ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ಒಳಗೊಂಡ ಅರ್ಜೆಂಟೀನಾ ಫುಟ್ಬಾಲ್ ತಂಡ ಮುಂದಿನ ವರ್ಷ ಕೇರಳದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನು ಆಡಲಿದೆ ಎಂದು ಕೇರಳ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಮಾಹಿತಿ ನೀಡಿದ್ದಾರೆ.
2 / 6
ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ‘ರಾಜ್ಯ ಸರ್ಕಾರದ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ಪಂದ್ಯ ನಡೆಯಲಿದ್ದು, ಈ ಹೈವೋಲ್ಟೇಜ್ ಫುಟ್ಬಾಲ್ ಈವೆಂಟ್ ಅನ್ನು ಆಯೋಜಿಸಲು ಬೇಕಾದ ಎಲ್ಲಾ ಆರ್ಥಿಕ ಬೆಂಬಲವನ್ನು ರಾಜ್ಯದ ಉದ್ಯಮಿಗಳು ಒದಗಿಸುತ್ತಾರೆ. ಈ ಬಗ್ಗೆ ಅರ್ಜೆಂಟೀನಾ ತಂಡದ ಮ್ಯಾನೇಜ್‌ಮೆಂಟ್ ಅಧಿಕೃತ ಘೋಷಣೆ ಮಾಡಲಿದೆ ಎಂದಿದ್ದಾರೆ.
3 / 6
ವಾಸ್ತವವಾಗಿ ಅರ್ಜೆಂಟೀನಾ ಫುಟ್ಬಾಲ್ ತಂಡವು ವೆನೆಜುವೆಲಾ ವಿರುದ್ಧದ ಫಿಫಾ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಭಾರತಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿತ್ತು. ಅರ್ಜೆಂಟೀನಾ ಮತ್ತು ವೆನೆಜುವೆಲಾ ನಡುವಿನ ಈ ಪಂದ್ಯವು ಸೆಪ್ಟೆಂಬರ್ 2, 2011 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯವನ್ನು ಅರ್ಜೆಂಟೀನಾ ತಂಡವು 1-0 ಅಂತರದಿಂದ ಗೆದ್ದುಕೊಂಡಿತ್ತು.
4 / 6
ಆ ವೇಳೆ ಭಾರತ ಪ್ರವಾಸವನ್ನು ಸಾಕಷ್ಟು ಹೊಗಳಿದ್ದ ಮೆಸ್ಸಿ, ಭಾರತೀಯರು ನೀಡಿದ ಪ್ರೀತಿ ನನ್ನ ಹೃದಯದಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದ್ದರು. ಇನ್ನು ಭಾರತಕ್ಕೆ ಭೇಟಿ ನೀಡಿರುವ ಫುಟ್ಬಾಲ್ ದಿಗ್ಗಜರ ಪಟ್ಟಿಯಲ್ಲಿ ಮೆಸ್ಸಿ ಅಲ್ಲದೆ, ಫುಟ್ಬಾಲ್ ದಿಗ್ಗಜರಾದ ಡೇವಿಡ್ ಬೆಕ್ಹ್ಯಾಮ್, ಪೀಲೆ, ಡಿಯಾಗೋ ಮರಡಾನ್, ಆಲಿವರ್ ಕಾನ್, ಜಿನೆಡಿನ್ ಜಿಡಾನೆ ಮತ್ತು ಎಮಿಲಿಯೊ ಮಾರ್ಟಿನೆಜ್ ಕೂಡ ಸೇರಿದ್ದಾರೆ.
5 / 6
ಈ ಫುಟ್ಬಾಲ್ ಪಂದ್ಯದ ಹೊರತಾಗಿ ಕೇರಳದಲ್ಲಿ ಫುಟ್ಬಾಲ್ ಅಕಾಡೆಮಿಯನ್ನು ಸಹ ಸ್ಥಾಪಿಸಬಹುದು ಎಂದು ಹೇಳಲಾಗುತ್ತಿದೆ. ಈ ಅಕಾಡೆಮಿಯ ಸ್ಥಾಪನೆ ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂಬುದು ಕೇರಳ ಸರ್ಕಾರದ ಆಶಯವಾಗಿದೆ.
6 / 6
ಇನ್ನು ಈ ಅರ್ಜೆಂಟೀನಾ ಪ್ರವಾಸದಲ್ಲಿ ಎರಡು ಪಂದ್ಯಗಳು ನಡೆಯುವ ಸಾಧ್ಯತೆ ಇದ್ದು, ಈ ವೇಳೆ ಅರ್ಜೆಂಟೀನಾ ತಂಡ, ಏಷ್ಯಾದ ಪ್ರಬಲ ತಂಡವನ್ನು ಎದುರಿಸಬಹುದು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಈ ಪಂದ್ಯ ಕೊಚ್ಚಿಯಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
Published On - 6:55 pm, Wed, 20 November 24