ಐಪಿಎಲ್ ಮೆಗಾ ಹರಾಜಿಗೆ ಇನ್ನ ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿವೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ ತಂಡಗಳಿಗಿಂತ ಮಿಗಿಲಾಗಿ ಆರ್‌ಸಿಬಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರು ಹಾಗೂ ನಾಯಕರನ್ನು ಹುಡುಕುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೇವಲ 3 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಕಳೆದ ಸೀಸನ್ನವರೆಗೆ ಈ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಅವರ ಹೆಸರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡ ಮುಂದಿನ ಸೀಸನ್‌ನಲ್ಲಿ ಹೊಸ ನಾಯಕನೊಂದಿಗೆ ಆಡುವುದನ್ನು ಕಾಣಬಹುದು. ಇದೆಲ್ಲದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ, ಆರ್ಸಿಬಿಯ ನಾಯಕನ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್ ಅವರನ್ನು ತಂಡದ ನಾಯಕನನ್ನಾಗಿ ಮಾಡಬೇಕು ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ನಾಯಕನ ಪಾತ್ರದಲ್ಲಿ ರಜತ್ ಪಾಟಿದಾರ್ ಅವರನ್ನು ನೋಡಬೇಕೆಂದು ನಾನು ಭಾವಿಸುತ್ತೇನೆ. ಏಕೆಂದರೆ ಎರಡು ವರ್ಷಗಳ ನಂತರ ಆರ್ಸಿಬಿಗೆ ಹೊಸ ನಾಯಕನ ಅಗತ್ಯ ಎದುರಾಗಿದೆ. ಆದ್ದರಿಂದ, ರಜತ್ ಪಾಟಿದರ್ ಮೇಲೆ ನಂಬಿಕೆ ಇಡಬಹುದು. ಇದರಿಂದ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ರಜತ್ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು ಎಂದಿದ್ದಾರೆ.
ರಜತ್ ಪಾಟಿದಾರ್ ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 34.73 ಸರಾಸರಿಯಲ್ಲಿ 799 ರನ್ ಗಳಿಸಿದ್ದಾರೆ. ರಜತ್ ಪಾಟಿದಾರ್ ಐಪಿಎಲ್‌ನಲ್ಲಿ 7 ಅರ್ಧ ಶತಕ ಮತ್ತು 1 ಶತಕವನ್ನು ಸಹ ಸಿಡಿಸಿದ್ದಾರೆ. 2022ರ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಅವರು ಲಕ್ನೋ ವಿರುದ್ಧ ಈ ಶತಕವನ್ನು ಸಿಡಿಸಿದ್ದರು.
ಇದಲ್ಲದೇ ರಜತ್ ಪಾಟಿದಾರ್ ಟೀಂ ಇಂಡಿಯಾ ಪರ 3 ಟೆಸ್ಟ್ ಪಂದ್ಯ ಹಾಗೂ 1 ಏಕದಿನ ಪಂದ್ಯವನ್ನೂ ಆಡಿದ್ದಾರೆ. ಟೆಸ್ಟ್‌ನಲ್ಲಿ, ಅವರು 10.50 ಸರಾಸರಿಯಲ್ಲಿ ಕೇವಲ 63 ರನ್ ಗಳಿಸಿದರೆ, ಏಕದಿನದಲ್ಲಿ 22 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಆದರೂ ಅವರು ಟೀಂ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೇವಲ 3 ಆಟಗಾರರನ್ನು ಉಳಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆರ್‌ಸಿಬಿ ವಿರಾಟ್ ಕೊಹ್ಲಿಯನ್ನು ಗರಿಷ್ಠ 21 ಕೋಟಿ ರೂ., ರಜತ್ ಪಾಟಿದಾರ್ ಅವರನ್ನು 11 ಕೋಟಿಗೆ ಉಳಿಸಿಕೊಂಡಿದ್ದರೆ, ಯಶ್ ದಯಾಳ್ ಅವರನ್ನು 5 ಕೋಟಿಗೆ ಉಳಿಸಿಕೊಳ್ಳಲಾಗಿದೆ. ಪ್ರಸ್ತುತ ತಂಡದ ಬಳಿ 83 ಕೋಟಿ ರೂ ಹಣವಿದ್ದು, 3 ಮ್ಯಾಚ್ ಕಾರ್ಡ್ ಆಯ್ಕೆಯನ್ನು ಹೊಂದಿದೆ.
Published On - 10:39 pm, Wed, 20 November 24