- Kannada News Photo gallery Asian Champions Trophy 2023 India sealed a one sided 7-2 win against China
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೀನಾ ವಿರುದ್ಧ 2-7 ಅಂತರದ ಜಯ ಸಾಧಿಸಿದ ಭಾರತ ಹಾಕಿ ತಂಡ
Asian Champions Trophy 2023: ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ ಆರಂಭಿಕ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ಅವರ ತಲಾ 2 ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡ ಚೀನಾ ತಂಡವನ್ನು 7-2 ಗೋಲುಗಳಿಂದ ಮಣಿಸಿದೆ.
Updated on: Aug 04, 2023 | 10:15 AM

ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ ಆರಂಭಿಕ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ಅವರ ತಲಾ 2 ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡ ಚೀನಾ ತಂಡವನ್ನು 7-2 ಗೋಲುಗಳಿಂದ ಮಣಿಸಿದೆ.

ಭಾರತದ ಪರ ಹರ್ಮನ್‌ಪ್ರೀತ್ 5 ಮತ್ತು 8ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ವರುಣ್ ಕುಮಾರ್ 19 ಮತ್ತು 30ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ದಾಖಸಿದರು. ಹೀಗಾಗಿ ವಿರಾಮದ ವೇಳೆಗೆ ಭಾರತ ತಂಡ 6 ಗೋಲುಗಳಿಂದ ಮುನ್ನಡೆ ಸಾಧಿಸಿತು.

ಭಾರತ ತಂಡದ ಪರ ಸುಖಜಿತ್ ಸಿಂಗ್ 15ನೇ ನಿಮಿಷದಲ್ಲಿ, ಆಕಾಶದೀಪ್ ಸಿಂಗ್ 16ನೇ ನಿಮಿಷದಲ್ಲಿ ಮತ್ತು ಮನ್ದೀಪ್ ಸಿಂಗ್ 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಆಕಾಶದೀಪ್ ಅವರ ಫೀಲ್ಡ್ ಗೋಲ್ ಹೊರತುಪಡಿಸಿ ಭಾರತದ ಎಲ್ಲಾ ಗೋಲುಗಳು ಪೆನಾಲ್ಟಿ ಕಾರ್ನರ್‌ಗಳಿಂದ ಬಂದವು. ಅಂದರೆ ಪೆನಾಲ್ಟಿ ಕಾರ್ನರ್‌ಗಳಿಂದ 6 ಗೋಲುಗಳು ಬಂದವು. ಇದರೊಂದಿಗೆ ಮನ್ದೀಪ್ ಸಿಂಗ್ ತಮ್ಮ ವೃತ್ತಿ ಜೀವನದಲ್ಲಿ 100 ಗೋಲುಗಳನ್ನು ಪೂರೈಸಿದರು.

ಚೀನಾ ಪರ ವೆನ್ಹುಯಿ ಯೆ 18ನೇ ನಿಮಿಷದಲ್ಲಿ ಮತ್ತು ಜಿಶೆಂಗ್ ಗಾವೊ 25ನೇ ನಿಮಿಷದಲ್ಲಿ ಗೋಲು ದಾಖಲಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಈ ಪಂದ್ಯವನ್ನು ಭಾರತ ತಂಡ 7-2 ಗೋಲುಗಳಿಂದ ಗೆದ್ದುಕೊಂಡಿತು. ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡ ಜಪಾನ್ ತಂಡವನ್ನು ಎದುರಿಸಲಿದೆ.

ಇನ್ನು ಮೊದಲ ದಿನ ನಡೆದ ಇತರೆ ಪಂದ್ಯಗಳಲ್ಲಿ ದಕ್ಷಿಣ ಕೊರಿಯಾ 2-1ರಿಂದ ಜಪಾನ್ ತಂಡವನ್ನು ಮಣಿಸಿದರೆ, ಮಲೇಷ್ಯಾ 3-1ರಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತು.
























