
ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅನೇಕ ಕಡೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿರುವ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶಗಳನ್ನು ಪ್ರಕಟಿಸಿ ವಿವರಗಳನ್ನು ನೀಡಿದ್ದಾರೆ. ಭಾನುವಾರ ರಾತ್ರಿ ಸುಮಾರು 8 ರಿಂದ 9 ತಾಸು ಮಳೆಯಾಗಿದೆ.

ಭಾನುವಾರ ತಡರಾತ್ರಿ 1.30 ರ ನಂತರ ಪ್ರಾರಂಭವಾದ ಮಳೆ ಮುಂಜಾನೆ ವರೆಗೂ ಸುರಿದಿದೆ. ಜಯನಗರ, ಬಿಟಿಎಂ ಲೇಔಟ್, ಯಶವಂತಪುರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.

ತಡರಾತ್ರಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಬೆಳಗಿನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಸಿಟಿ ಮಾರ್ಕೆಟ್, ದಕ್ಷಿಣ ಮತ್ತು ನೈಋತ್ಯ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮುಂಜಾನೆಯೇ ಸಂಚಾರಕ್ಕೆ ಅಡಚಣೆಯಾಯಿತು.

ರಾತ್ರಿ ಸುರಿದ ಮಳೆ ಬ್ರ್ಯಾಂಡ್ ಬೆಂಗಳೂರಿನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ರಾಜಧಾನಿಯ ಹಲವೆಡೆ ಮಳೆಗೆ ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗಿವೆ. ಪ್ರತಿ ಬಾರಿ ಮಳೆ ಬಂದಾಗಲೂ ಕೆರೆಯಂತಾಗುವ ಸಾಯಿಲೇಔಟ್ನಲ್ಲಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ಗೊರಗುಂಟೆಪಾಳ್ಯ, ಹೆಬ್ಬಾಳ ಸುತ್ತಮುತ್ತ ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಜೆಸಿ ರಸ್ತೆಯಲ್ಲಿಯೂ ಹೊಂಡಗುಂಡಿಗಳಿಂದಾಗಿ ವಾಹನ ಸಂಚಾರ ನರಕವಾಗಿದೆ. ಮಳೆಯ ಅಬ್ಬರಕ್ಕೆ ಬಿಬಿಎಂಪಿಯ ಕಳಪೆ ಕಾಮಗಾರಿ ಬಟಾಬಯಲಾಗಿದೆ.

ಕೇವಲ ಒಂದೆರಡು ದಿನಗಳ ಮಳೆ ಬೆಂಗಳೂರಿನ ಜನರು ನರಕ ನೋಡುವಂತೆ ಮಾಡಿಬಿಟ್ಟಿದೆ. ಇತ್ತ ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ಜಪ ಮಾಡುತ್ತಿರುವ ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಮಳೆಗಾಲದ ಸಿದ್ಧತೆ ಮಾಡಿಕೊಳ್ಳದಿರುವುದು ಮಳೆ ಸೃಷ್ಟಿಸಿದ ಅವಾಂತರಗಳಿಂದ ಬಟಾಬಯಲಾಗಿದೆ. ಮಳೆಗಾಲ ಹತ್ತಿರವಾಗುತ್ತದ್ದು, ವರುಣನ ಅಬ್ಬರ ರಾಜಧಾನಿಯಲ್ಲಿ ಇನ್ನೇನೆಲ್ಲ ಅವಾಂತರಗಳನ್ನ ಸೃಷ್ಟಿಸುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.