Kannada News Photo gallery Battle of the Jagajattis took place in Yadagiri, Here is a glimpse of the fight of the Pailwans, Kannada news
ಯಾದಗಿರಿಯಲ್ಲಿ ನಡೀತು ಜಗಜಟ್ಟಿಗಳ ಕಾಳಗ; ಪೈಲ್ವಾನ್ಗಳ ಕಾದಾಟದ ಝಲಕ್ ಇಲ್ಲಿದೆ
ಅದು ರಾಜ ಮನೆತನದ ಯುದ್ಧ ಭೂಮಿ. ಅಲ್ಲಿ ಪ್ರತಿ ವರ್ಷ ಪೈಲ್ವಾನರು ತಮ್ಮ ಖದರ್ ತೋರಿಸುವುದಕ್ಕೆ ಕಾದಾಟ ನಡೆಸುತ್ತಾರೆ. ನಾಲ್ಕೈದು ರಾಜ್ಯದ ಪೈಲ್ವಾನ್ಗಳು ಕುಸ್ತಿ ಅಖಾಡಕ್ಕೆ ಇಳಿದರೆ ನೋಡಲು ಆಗಮಿಸಿದ್ದವರ ಸಿಳ್ಳೆ, ಚಪ್ಪಾಳೆ ಜೋರಾಗಿರುತ್ತೆ. ವೇಣುಗೋಪಾಲನ ಸನ್ನಿಧಿಯಲ್ಲಿ ನಡೆಯುವ ಕುಸ್ತಿ ಕಾಳವನ್ನ ವಿಕ್ಷಿಸುವುದಕ್ಕೆ ಸಾವಿರಾರು ಮಂದಿ ದಂಡೆ ಹರಿದು ಬರುತ್ತದೆ. ಸಗರ ನಾಡಿನ ಶುರರ ನಾಡಿನಲ್ಲಿ ನಡೆದ ಕುಸ್ತಿ ಕಾಳಗ ಹೇಗಿತ್ತು ಅಂತೀರಾ? ಈ ಸ್ಟೋರಿ ಓದಿ.
1 / 7
ಕಟ್ಟುಮಸ್ತಾದ ದೇಹ ಉಳ್ಳ ಪೈಲ್ವಾನ್ಗಳು ಮೈದಾನಕ್ಕೆ ಇಳಿದ್ರೆ ಸಾಕು ಚಪ್ಪಾಳೆ ಸಿಳ್ಳೆಗಳಿಂದ ಭರಪೂರ ಸ್ವಾಗತ. ಕುಸ್ತಿ ಪೈಲ್ವಾನ್ಗಳ ಕಾಳಗ ವೀಕ್ಷಿಸುತ್ತಿರುವ ಸಾವಿರಾರು ಮಂದಿ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ.
2 / 7
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಿಲ್ಲೆಯ ಸುಪ್ರಸಿದ್ಧ ದೇವಾಲಯವಾದ ವೇಣುಗೋಪಾಲ ಸ್ವಾಮಿ ಹಾಲೋಕಳಿ ಜಾತ್ರೆ ನಡೆಯುತ್ತದೆ. ಜಾತ್ರೆ ನಡೆದ ಮಾರನೆ ದಿನವೆ ಜಗಜಟ್ಟಿಗಳ ಕಾಳಗ ಏರ್ಪಡಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷ ಸಹ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಸುರಪುರದ ಗೋಸಲ ವಂಶಸ್ಥ ರಾಜ ಮನೆತನವು 308 ವರ್ಷಗಳಿಂದ ಪ್ರತಿ ವರ್ಷ ಜಾತ್ರೆ ಹಮ್ಮಿಕೊಳ್ಳುತ್ತಾ ಬಂದಿದೆ.
3 / 7
ರಾಜ ಮನೆತನದವರು ಪುರಾತನ ಕಾಲದಿಂದ ಗ್ರಾಮೀಣ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಪ್ರತಿ ವರ್ಷ 3 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಕೊನೆಯ ದಿನದಂದು ನಡೆಯುವ ಕುಸ್ತಿ ಪಂದ್ಯಗಳು ನೋಡುಗರ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಗ್ರಾಮೀಣ ಪ್ರದೇಶದ ಗಂಡು ಕಲೆ ಎಂದು ಪ್ರಸಿದ್ದಿ ಪಡೆದಿರುವ ಕುಸ್ತಿ ಆಡಲು ಎಂಟೆದೆ ಭಂಟನಾಗಿದ್ದರೆ ಮಾತ್ರ ಸಾಧ್ಯ.
4 / 7
ಎದುರಾಳಿಯನ್ನು ಬಗ್ಗು ಬಡಿಯಬೇಕಾದರೆ ನಾನಾ ಪಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಸೋಲಿನ ಮುಖಹೊತ್ತು ಮನೆಗೆ ವಾಪಸ್ಸ್ ತೆರಳಬೇಕಾಗುತ್ತದೆ. ಕುಸ್ತಿ ಪಟುಗಳಿಗೆ ಉಲ್ಲಾಸ ತುಂಬಲು ತಮಟೆ ಬಾರಿಸುವ ಮೂಲಕ ಕುಸ್ತಿ ಅಂಗಳದ ಸುತ್ತ ಒಂದು ಸುತ್ತು ಹಾಕಿ ಕುಸ್ತಿಗಾಗಿ ಪಟುಗಳನ್ನು ಆಹ್ವಾನ ಮಾಡಲಾಗುತ್ತದೆ. ಮಧ್ಯಾಹ್ನದಿಂದ ನಡೆದ ಕುಸ್ತಿಯಲ್ಲಿ 200ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು.
5 / 7
ಒಟ್ಟು ಮೂರು ದಿನಗಳವರೆಗೆ ನಡೆಯುವ ವೇಣುಗೋಪಾಲಸ್ವಾಮಿಯ ಜಾತ್ರೆ ಕೊನೆಯ ಹಂತ ತಲುಪುವುದು ಕುಸ್ತಿ ಪಂದ್ಯಗಳೊಂದಿಗೆ. ಕುಸ್ತಿ ಕಣದಲ್ಲಿ ಮದಗಜಗಳ ಕಾಳಗ ನೋಡುವುದೇ ಮತ್ತೊಂದು ಸೊಬಗು. ಜಗಜಟ್ಟಿಗಳ ಗಂಟೆಗಟ್ಟಲೆ ನಡೆಯುವ ಕಾಳಗವು ನೋಡುಗರ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಸಾವಿರಾರು ಜನ ಕುಸ್ತಿ ಕಾಳಗ ನೋಡುತ್ತಾ ಮೈಮರೆಯುತ್ತಾರೆ.
6 / 7
ಕುಸ್ತಿಯಲ್ಲಿ ಭಾಗವಹಿಸುವ ಫೈಲ್ವಾನರನ್ನು ಯಾರಾದರು ಎದುರಿಸುತ್ತಿರಾ ಎಂದು ತಮಟೆ ಬಾರಿಸುತ್ತಾ ಕುಸ್ತಿ ಕಣದ ಸುತ್ತ ಮುತ್ತ ರೌಂಡ್ಸ್ ಹೊಡೆಸುತ್ತಾರೆ. ಅವನಿಗೆ ಎದುರಿಸುವ ಫೈಲ್ವಾನ್ ಸಿಕ್ಕರೆ ಕಾಳಗ ಶುರುವಾಗುತ್ತದೆ. ಕುಸ್ತಿಯಲ್ಲಿ ಗೆದ್ದವರಿಗೆ ಅಲ್ಲಿಯೇ ನಗದು ಬಹುಮಾನವನ್ನು ಅರಸು ಮನೆತನದ ಯುವರಾಜ ನೀಡುತ್ತಾರೆ. 100 ರೂ. ಕುಸ್ತಿ ಪಂದ್ಯದಿಂದ ಹಿಡಿದು 10 ಸಾವಿರ ರೂ. ವರೆಗಿನ ಪಂದ್ಯಗಳು ನಡೆಯುತ್ತವೆ. ಇನ್ನು ಕೊನೆಯಾಗಿ ನಡೆಯುವ ಪಂದ್ಯೆಗಳಲ್ಲಿ ಗೆದ್ದವರಿಗೆ ರಾಜ ಮನೆತನದಿಂದ 10 ತೊಲೆಯ ಬೆಳ್ಳಿಯ ಕೈ ಖಡಗ ಜೊತೆಗೆ ಸಾವಿರಾರು ರೂ. ನಗದು ಸಹ ನೀಡಲಾಗುತ್ತೆ. ಇನ್ನು ಈ ಸಗರ ನಾಡಿದ ಶುರರ ಊರಲ್ಲಿ ನಡೆಯುವ ಕುಸ್ತಿ ಕಾಳಗದಲ್ಲಿ ಭಾಗವಹಿಸಲು ಆಂಧ್ರ,ತೆಲಂಗಾಣ,ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಯಿಂದ ಫೈಲ್ವಾನರು ಕಾದಟಕ್ಕಾಗಿ ಬರುತ್ತಾರೆ.
7 / 7
ಒಟ್ಟಿನಲ್ಲಿ ಜಗಜಟ್ಟಿಗಳು ಸೆಡ್ಡು ಹೊಡೆದು ಕುಸ್ತಿ ಆಡುವ ರೋಚಕತೆ ಮಾತ್ರ ನೋಡುಗರ ಉತ್ಸಾಹ ಇಮ್ಮಡಿಗೋಳಿಸದೆ ಇರಲು ಸಾದ್ಯವಿಲ್ಲ. ಆಧುನಿಕ ಕ್ರೀಡೆಗಳ ನಡುವೆ ಗ್ರಾಮೀಣ ಪ್ರದೇಶದ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆದ್ರೆ, ಸುರಪುರದ ರಾಜ ಮನೆತನದವರು ಮಾತ್ರ ಇಂತಹ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.