- Kannada News Photo gallery Canada Open 2023 Lakshya Sen wins Canada Open 2023 beats Li Shi Feng in straight games
Canada Open 2023: ಕೆನಡಾ ಓಪನ್ ಗೆದ್ದು ವರ್ಷದ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದ ಲಕ್ಷ್ಯ ಸೇನ್..!
Lakshya Sen: ಚೀನಾದ ಲಿ ಶಿ ಫೆಂಗ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ವರ್ಷದ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Updated on: Jul 10, 2023 | 8:48 AM

ಜುಲೈ 9 ರ ಭಾನುವಾರ ಕ್ಯಾಲ್ಗರಿಯಲ್ಲಿ ನಡೆದ ಕೆನಡಾ ಓಪನ್ ಫೈನಲ್ ಪಂದ್ಯದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ವರ್ಷದ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಎರಡನೇ ಸೆಟ್‌ನಲ್ಲಿ 16-20 ರಿಂದ ಹಿನ್ನಡೆ ಸಾಧಿಸಿದ್ದ ಲಕ್ಷ್ಯ ಸೇನ್, ಸತತ ಆರು ಪಾಯಿಂಟ್‌ಗಳನ್ನು ಗೆದ್ದು ಅಂತಿಮವಾಗಿ ಪ್ರಶಸ್ತಿಯ ಬರವನ್ನು ಕೊನೆಗೊಳಿಸಿದರು. ಕಳೆದ ವರ್ಷ ಇಂಡಿಯಾ ಓಪನ್ ಪ್ರಶಸ್ತಿ ಗೆದ್ದಿದ್ದ ಸೇನ್ಗೆ ಇದು ಎರಡನೇ BWF ಸೂಪರ್ 500 ಪ್ರಶಸ್ತಿ ಜಯವಾಗಿದೆ.

19ನೇ ಶ್ರೇಯಾಂಕದ ಲಕ್ಷ್ಯ ಸೇನ್ ಪಂದ್ಯವನ್ನು ಉತ್ತಮವಾಗಿ ಪ್ರಾರಂಭಿಸಿ, ಮೊದಲ ಸೆಟ್‌ನಾದ್ಯಂತ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ಅಂತಿಮವಾಗಿ ಮೊದಲ ಸೆಟ್ ಅನ್ನು 21-18 ರಿಂದ ಗೆದ್ದುಕೊಂಡರು. ಆದಾಗ್ಯೂ, 10ನೇ ಶ್ರೇಯಾಂಕದ ಶಿ ಫೆಂಗ್, ಎರಡನೇ ಸೆಟ್‌ನಲ್ಲಿ ಹೋರಾಟ ನೀಡಿದರಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಈ ವರ್ಷದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಸೇನ್, ವರ್ಷದ ಆರಂಭದಲ್ಲಿ ನಡೆದಿದ್ದ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ 16ನೇ ಸುತ್ತಿಗೆ ತಮ್ಮ ಆಟ ಮುಗಿಸಿದ್ದರು. ಆ ಬಳಿಕ ನಡೆದ ಇಂಡೋನೇಷಿಯನ್ ಮಾಸ್ಟರ್ಸ್‌ನಲ್ಲಿಯೂ ಕ್ವಾರ್ಟರ್-ಫೈನಲ್ಗೆ ಸುಸ್ತಾಗಿದ್ದರು. ಕಳೆದ ತಿಂಗಳು ಜೂನ್‌ನಲ್ಲಿ ನಡೆದ ಥೈಲ್ಯಾಂಡ್ ಓಪನ್‌ನ ಸೆಮಿ-ಫೈನಲ್‌ನಲ್ಲಿ ಥೈಲ್ಯಾಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ ಸೋಲನುಭವಿಸಿದ್ದರು.

ಈ ಗೆಲುವಿನೊಂದಿಗೆ ಸೇನ್ ವಿಶ್ವ ಶ್ರೇಯಾಂಕದಲ್ಲಿ 12ನೇ ಸ್ಥಾನಕ್ಕೆ ಏರಲಿದ್ದು, ಮುಂದೆ ನಡೆಯಲ್ಲಿರುವ ಯುಎಸ್ ಓಪನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.














