
ಆದರ್ಶ ಪತಿಗೆ ಯಾವ ಗುಣಗಳು ಇರಬೇಕು, ಗಂಡನಿಗೆ ಈ ಕೆಲವು ವಿಶೇಷ ಗುಣಗಳಿದ್ದರೆ ದಾಂಪತ್ಯ ಜೀವನ ಯಾವಾಗಲೂ ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಬುದ್ಧಿವಂತ ಗಂಡನಿದ್ದರೆ ಹೆಂಡತಿಯ ಬಾಳು ಬಂಗಾರದಂತಿರುತ್ತದೆ. ಹೌದು ಆತನಿಗೆ ಕುಟುಂಬವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಾನೆ.

ತಾಳ್ಮೆ: ಚಾಣಕ್ಯರ ಪ್ರಕಾರ, ಒಬ್ಬ ಆದರ್ಶ ಪತಿ ತನ್ನ ಹೆಂಡತಿಯನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಆಕೆಯೊಂದಿಗೆ ತಾಳ್ಮೆಯಿಂದ ವರ್ತಿಸುತ್ತಾನೆ. ಕೋಪಗೊಂಡಾಗಲೂ ಅವನು ಯೋಚಿಸಿ ಮಾತನಾಡುತ್ತಾನೆ. ಅವನು ತನ್ನ ಹೆಂಡತಿ ಹೇಳುವುದನ್ನು ಗಮನವಿಟ್ಟು ಕೇಳುತ್ತಾನೆ, ಯಾವುದೇ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳುವುದಿಲ್ಲ. ಹೀಗೆ ತಾಳ್ಮೆಯಿಂದ ವರ್ತಿಸುವ ಗಂಡನಿದ್ದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

ಪ್ರಾಮಾಣಿಕತೆ, ವಿಶ್ವಾಸ: ಗಂಡನು ಯಾವಾಗಲೂ ತನ್ನ ಹೆಂಡತಿಗೆ ಪ್ರಾಮಾಣಿಕ ಮತ್ತು ನಿಷ್ಠನಾಗಿರಬೇಕು. ಪ್ರಾಮಾಣಿಕತೆ ಮತ್ತು ನಂಬಿಕೆ ಸಂಬಂಧಗಳನ್ನು ಬಲಪಡಿಸುತ್ತದೆ. ಆದ್ದರಿಂದ ಯಾವುದೇ ವಿಷಯದಲ್ಲಿ ಸುಳ್ಳು ಹೇಳದೆ ಹೆಂಡತಿಯೊಂದಿಗೆ ಪ್ರಾಮಾಣಿಕತೆಯಿಂದ ಇದ್ದರೆ ಸಂಬಂಧ ಸುಖಕರವಾಗಿರುತ್ತದೆ ಎನ್ನುತ್ತಾರೆ ಚಾಣಕ್ಯ.

ಹೆಂಡತಿಗೆ ಗೌರವ ನೀಡುವುದು: ಚಾಣಕ್ಯರ ಪ್ರಕಾರ, ತನ್ನ ಹೆಂಡತಿಯನ್ನು ಗೌರವಿಸುವ ಪತಿಯೇ ನಿಜವಾದ ಜೀವನ ಸಂಗಾತಿ. ಯಾರು ಹೆಂಡತಿಯನ್ನು ಗೇಲಿ ಮಾಡುತ್ತಾನೋ, ಬೈಯುತ್ತಾನೋ ಅಥವಾ ಅವಮಾನ ಮಾಡುತ್ತಾನೋ ಅಂತಹವನೊಂದಿಗೆ ಆತನ ಪತ್ನಿ ಎಂದಿಗೂ ಸಂತೋಷದಿಂದ ಇರಲು ಸಾಧ್ಯವಿಲ್ಲ. ಯಾರು ಹೆಂಡತಿಯನ್ನು ಗೌರವದಿಂದ ನಡೆಸಿಕೊಳ್ಳುತ್ತಾನೋ, ಆತನ ಸಂಸಾರವೂ ಸುಖಮಯವಾಗಿರುತ್ತದೆ.

ಜವಾಬ್ದಾರಿ: ಗಂಡ ಮನೆಯ ಪ್ರತಿಯೊಂದು ವಿಷಯದಲ್ಲೂ ಬೇಜವಾಬ್ದಾರಿತನವನ್ನು ತೋರದೆ ಜವಾಬ್ದಾರಿ ತೆಗೆದುಕೊಳ್ಳುವವನಾಗಿರಬೇಕು. ಆಗ ಮಾತ್ರ ಕುಟುಂಬವು ಸಂತೋಷವಾಗಿರುತ್ತದೆ. ಚಾಣಕ್ಯರ ಪ್ರಕಾರ ಜವಾಬ್ದಾರಿ ಆದರ್ಶ ಪತಿಯ ಲಕ್ಷಣವಾಗಿದೆ.

ಸಹಾಯ: ಮನೆ ಕೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುವ ಗಂಡನಿದ್ದರೆ, ದಾಂಪತ್ಯ ಜೀವನವು ಸುಖಕರವಾಗಿರುತ್ತದೆ. ಅಂತಹ ಪತಿಯನ್ನು ಪಡೆದ ಪತ್ನಿಯೇ ಅದೃಷ್ಟವಂತೆ ಎನ್ನುತ್ತಾರೆ ಚಾಣಕ್ಯ. ಮನೆ ಕೆಲಸಗಳನ್ನು ಕ್ಷುಲ್ಲಕ ಎಂದು ಪರಿಗಣಿಸದೆ, ಪ್ರತಿ ಕೆಲಸದಲ್ಲೂ ಹೆಂಡತಿಗೆ ಸಹಾಯವಾಗಿ ನಿಲ್ಲುವುದು, ಕಷ್ಟದ ಸಮಯದಲ್ಲಿ ಹೆಂಡತಿಗೆ ಬೆಂಬಲವಾಗಿ ನಿಲ್ಲುವುದು ಆದರ್ಶ ಪತಿಯ ಲಕ್ಷಣವಾಗಿದೆ.

ದಯೆ: ದಯಾಳು ಮನೋಭಾವದ ಪತಿಯನ್ನು ಪಡೆದ ಹೆಂಡತಿ ತುಂಬಾನೇ ಅದೃಷ್ಟವಂತೆ ಎನ್ನುತ್ತಾರೆ ಚಾಣಕ್ಯ. ಏಕೆಂದರೆ ದಯಾಳು ಗಂಡನು ತನ್ನ ಹೆಂಡತಿ ಮತ್ತು ಮಕ್ಕಳ ಭಾವನೆಗಳನ್ನು ಗೌರವಿಸುತ್ತಾನೆ. ಅವರ ಭಾವನೆಗಳಿಗೆ ಬೆಲೆ ಕೊಡುತ್ತಾನೆ. ಗಂಡನ ಈ ಗುಣ ದಾಂಪತ್ಯ ಜೀವನವನ್ನು ಸುಖಕರವಾಗಿ ಸಾಗುವಂತೆ ಮಾಡುತ್ತದೆ.