- Kannada News Photo gallery Chanakya Niti: Chanakya says these habits of a wife ruin her husband's life
Chanakya Niti: ಹೆಂಡತಿ ಹೀಗಿದ್ದರೆ ಗಂಡನ ಬದುಕು ನರಕಕ್ಕೆ ಸಮ ಎನ್ನುತ್ತಾರೆ ಚಾಣಕ್ಯ
ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು ಹೇಗೆ ಗಳಿಸಬೇಕು, ಎಂತಹವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ದಾಂಪತ್ಯ ಜೀವನ ಹೇಗಿರಬೇಕು ಎಂಬುದು ಸೇರಿದಂತೆ ನಮ್ಮ ಜೀವನಕ್ಕೆ ಬೇಕಾದ ಪ್ರತಿಯೊಂದು ಅಗತ್ಯ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಸುಖಕರ ದಾಂಪತ್ಯ ಜೀವನಕ್ಕಾಗಿ ಉಪಯುಕ್ತ ನೀತಿಗಳನ್ನು ತಿಳಿಸಿಕೊಟ್ಟಿರುವ ಚಾಣಕ್ಯರು ಹೆಂಡತಿಯ ಯಾವ ಅಭ್ಯಾಸಗಳು, ಗುಣಗಳು ಗಂಡನ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂಬುದನ್ನು ಕೂಡಾ ಹೇಳಿದ್ದಾರೆ. ಹೌದು ಹೆಂಡತಿಯ ಈ ಕೆಲವು ಅಭ್ಯಾಸಗಳು ಗಂಡನಾದವನ ಜೀವನವನ್ನು ನರಕವಾಗಿಸುತ್ತಂತೆ. ಅದೇನೆಂಬುದನ್ನು ನೋಡೋಣ ಬನ್ನಿ.
Updated on: May 18, 2025 | 7:29 PM

ಚಾಣಕ್ಯರು ತನ್ನ ನೀತಿಶಾಸ್ತ್ರದಲ್ಲಿ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಹೆಂಡತಿಯ ಯಾವ ಅಭ್ಯಾಸಗಳು ಗಂಡನ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂಬುದನ್ನು ಕೂಡಾ ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಪ್ರತಿಯೊಂದು ವಿಷಯಕ್ಕೂ ಗಂಡನ ಮೇಲೆ ಕೋಪ ಮಾಡಿಕೊಳ್ಳುವ ಹೆಂಡತಿಯಿದ್ದರೆ, ಆ ಗಂಡನ ಜೀವನ ನರಕದಂತಿರುತ್ತಂತೆ. ಕೆಲವು ಮಹಿಳೆಯರು ಸಣ್ಣಪುಟ್ಟ ವಿಷಯಕ್ಕೂ ಗಂಡನ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಹೆಂಡತಿಯ ಈ ಸ್ವಭಾವ ಗಂಡನನ್ನು ಒತ್ತಡಕ್ಕೆ, ಖಿನ್ನತೆಗೆ ನೂಕುವ ಸಾಧ್ಯತೆ ಇರುತ್ತದೆ.

ಅನುಮಾನ ಪಡುವ ಹೆಂಡತಿ: ಕೆಲವು ಮಹಿಳೆಯರಿಗೆ ಗಂಡನ ಮೇಲೆ ಅನುಮಾನ ಪಡುವ ಕಾಯಿಲೆ ಇರುತ್ತದೆ. ಗಂಡ ಎಷ್ಟೇ ಸರಿಯಿದ್ದರೂ ಹೆಂಡತಿ ಸುಖಾ ಸಮ್ಮನೆ ತನ್ನ ಗಂಡನ ಮೇಲೆ ಅನುಮಾನ ಪಟ್ಟರೆ, ಇದು ಗಂಡನಿಗೆ ಸಾಕಷ್ಟು ನೋವುಂಟುಮಾಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಅನುಮಾನವೆಂಬ ಭೂತ ಗಂಡ ಹೆಂಡತಿಯ ಸಂಬಂಧವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಅತಿಯಾದ ಖರ್ಚು: ಹೆಂಡತಿಯ ಅತಿಯಾಗಿ ಖರ್ಚು ಮಾಡುವ ಅಭ್ಯಾಸ ಕೆಲವೊಂದು ಬಾರಿ ಗಂಡನನ್ನು ಸಾಲದಲ್ಲಿ ಸಿಲುಕಿಸಬಹುದು. ಹೌದು ಹೆಂಡತಿ ದುರಾಸೆ ಪಟ್ಟು, ಪ್ರತಿದಿನ ಹೊಸ ಬೇಡಿಕೆಗಳನ್ನು ಇಡುತ್ತಿದ್ದರೆ, ಮತ್ತು ತನ್ನ ಆಸೆಯನ್ನು ಪೂರೈಸದಿದ್ದರೆ ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಬೆದರಿಕೆ ಹಾಕಿದರೆ, ಇದು ಖಂಡಿತ ಗಂಡನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಮತ್ತು ಹೆಂಡತಿಯ ಆಸೆಯನ್ನು ಪೂರೈಸಲು ಗಂಡನಾದವು ಸಾಲ ಮಾಡಿ ಇಕ್ಕಟ್ಟಿಗೆ ಸಿಲುಕುವ ಪರಿಸ್ಥಿತಿಯೂ ಎದುರಾಗಬಹುದು.

ಅಹಂಕಾರ: ತಾನೇ ಶ್ರೇಷ್ಠ, ಎಲ್ಲವೂ ನನ್ನಿಂದಲೇ ಎನ್ನುತ್ತಾ, ಗಂಡನಿಗೆ ಮರಿಯಾದೆ ಕೊಡದೆ ಆತನನ್ನು ಕೀಳಾಗಿ ಕಾಣುತ್ತಾ ಅಹಂಕಾರದಿಂದ ವರ್ತಿಸುವ ಹೆಣ್ಣಿನಿಂದ ದಾಂಪತ್ಯ ಜೀವನ ಹಾಳಾಗುತ್ತದೆ. ದಾಂಪತ್ಯ ಜೀವನದಲ್ಲಿ ಇಬ್ಬರೂ ಸಮಾನರು ಎಂಬ ಭಾವನೆ ಇರಬೇಕು. ಹೀಗಿದ್ದರೆ ಮಾತ್ರ ದಾಂಪತ್ಯ ಜೀವನ ಬಲು ಸುಂದರವಾಗಿರುತ್ತದೆ.

ಅಸಭ್ಯ ಪದ ಬಳಕೆ: ಚಾಣಕ್ಯ ನೀತಿಯ ಪ್ರಕಾರ, ಕಠಿಣ ಮಾತುಗಳನ್ನಾಡುವ, ಗಂಡನ ಮೇಲೆ ಅಸಭ್ಯ ಪದ ಬಳಕೆ ಮಾಡುವ ಹೆಂಡತಿಯಿದ್ದರೆ, ಗಂಡನ ಜೀವನ ನರಕಕ್ಕೆ ಸಮಾನವಾಗಿರುತ್ತಂತೆ. ಹೆಂಡತಿಯ ಇಂತಹ ಮಾತುಗಳು ಗಂಡನ ಮನಸ್ಸನ್ನು ಘಾಸಿಗೊಳಿಸಬಹುದು. ಅಷ್ಟೇ ಅಲ್ಲದೆ ಆಕೆಯಿಂದ ಗಂಡನ ನೆಮ್ಮದಿ ಮಾತ್ರವಲ್ಲ ಮನೆಯ ವಾತಾವರಣ ಕೂಡಾ ಹಾಳಾಗುವ ಸಾಧ್ಯತೆ ಇರುತ್ತದೆ.

ಸೋಮಾರಿತನ: ಕೆಲವು ಮಹಿಳೆಯರು ಹುಟ್ಟಿನಿಂದಲೇ ಸೋಮಾರಿಗಳಾಗಿರುತ್ತಾರೆ. ಮದುವೆಯ ನಂತರವೂ ಈ ಅಭ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೆ, ಹೆಂಡತಿಯ ಈ ಅಭ್ಯಾಸವು ಗಂಡನಿಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಮಾರಕವಾಗಿರುತ್ತದೆ. ಸೋಮಾರಿ ಹೆಂಡತಿ ಗಂಡನನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಹೆಂಡತಿಯಿದ್ದರೆ, ಗಂಡನಾದವನು ದುಡಿಯುವ ಜೊತೆಗೆ ಮನೆ ಕೆಲಸಗಳನ್ನು ಕೂಡಾ ತಾನೇ ಮಾಡಬೇಕಾಗುತ್ತದೆ. ಇದರಿಂದ ಆತನಿಗೆ ನೆಮ್ಮದಿ ಅನ್ನೋದೇ ಇರೊಲ್ಲ.




