ಈಗಾಗಲೇ ಟಿ20 ವಿಶ್ವಕಪ್ ಆರಂಭವಾಗಿದ್ದು, ಟೂರ್ನಿಯ ಗ್ರೂಪ್ ಸುತ್ತಿನಲ್ಲಿ ಇದುವರೆಗೆ 11 ಪಂದ್ಯಗಳು ನಡೆದಿವೆ. ನಡೆದಿರುವ 11 ಪಂದ್ಯಗಳೂ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದೆ. ಆದರೆ ಈ 11 ಪಂದ್ಯಗಳಲ್ಲಿ ಆ 3 ಪಂದ್ಯಗಳ ಪಲಿತಾಂಶ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಐಸಿಸಿ ಶ್ರೇಯಾಂಕದಲ್ಲಿ ಅಗ್ರ 8 ರಲ್ಲಿ ಸ್ಥಾನ ಪಡೆಯದ ಕಾರಣ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯಲು ಗುಂಪು ಸುತ್ತುಗಳನ್ನು ಆಡಬೇಕಾಯಿತು. ಇದರಲ್ಲಿ ಶ್ರೀಲಂಕಾ ತಂಡ ಈ ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದರೆ, ವಿಂಡೀಸ್ ತಂಡ ಎರಡು ಬಾರಿ T20 ವಿಶ್ವಕಪ್ ಗೆದ್ದಿದೆ. ಅದರಲ್ಲೂ ವೆಸ್ಟ್ ಇಂಡೀಸ್ ಎರಡು ಬಾರಿ ಈ ಪ್ರಶಸ್ತಿಯನ್ನು ಗೆದ್ದ ಏಕೈಕ ತಂಡವಾಗಿದೆ. ಆದರೆ, ಈ ಎರಡೂ ತಂಡಗಳು ಕೂಡ ಅರ್ಹತಾ ಸುತ್ತಿನಲ್ಲಿ ಶಾಕಿಂಗ್ ಸೋಲನ್ನು ಎದುರಿಸಬೇಕಾಯಿತು.
ಇದಕ್ಕೆ ಉದಾಹರಣೆಯಾಗಿ, ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನಮೀಬಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಮೊದಲ ಪಂದ್ಯದಲ್ಲಿಯೇ ನಮೀಬಿಯಾ ವಿರುದ್ಧ ಲಂಕಾ ತಂಡ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 163 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 108 ರನ್ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ನಮೀಬಿಯಾ 55 ರನ್‌ಗಳಿಂದ ಗೆದ್ದುಕೊಂಡಿತು.
ಇದಕ್ಕೆ ಎರಡನೇ ಉದಾಹರಣೆಯಾಗಿ, ಬಿ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ 42 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 160 ರನ್ ಗಳಿಸಿತ್ತು. ಆದರೆ, ವೆಸ್ಟ್ ಇಂಡೀಸ್ ತಂಡ ಕೇವಲ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಎರಡು ಬಾರಿಯ ವಿಶ್ವಚಾಂಪಿಯನ್‌ಗೆ ಇದು ಅನಿರೀಕ್ಷಿತ ಶಾಕ್ ನೀಡಿತ್ತು.
ಮೂರನೇ ಉದಾಹರಣೆಯಾಗಿ, ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಎರಡನೇ ಬಾರಿಗೆ ಸೋಲಿನ ಶಾಕ್ ನೀಡುವಲ್ಲಿ ಐರ್ಲೆಂಡ್ ತಂಡ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 146 ರನ್ ಗಳಿಸಿತು. ಈ ಗುರಿಯನ್ನು ಐರ್ಲೆಂಡ್ ತಂಡ ಕೇವಲ 1 ವಿಕೆಟ್ ಕಳೆದುಕೊಂಡು 17.3 ಓವರ್‌ಗಳಲ್ಲಿ ಸಾಧಿಸಿತು. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ