
ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು 27 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಕಳೆದ ಬಾರಿ ತಂಡದಲ್ಲಿದ್ದ ಕೆಲ ಸ್ಟಾರ್ ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಪಟ್ಟಿಯಲ್ಲಿರುವ ಅನೇಕ ಸ್ಟಾರ್ ಆಟಗಾರರ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿದೆ. ಇದಾಗ್ಯೂ ಆರ್ಸಿಬಿ ತಂಡದ ಮಾಜಿ ಆಟಗಾರನ ಬಗ್ಗೆ ಯಾರು ಮಾತನಾಡುತ್ತಿಲ್ಲ. ಆದರೆ ಆತ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ.

ಹೌದು, ಆಕಾಶ್ ಚೋಪ್ರಾ ಹೇಳಿದ ಆಟಗಾರ ಮತ್ಯಾರೂ ಅಲ್ಲ, ಆರ್ಸಿಬಿ ತಂಡದ ಮಾಜಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್. 2018 ರಿಂದ ಆರ್ಸಿಬಿ ಪರ ಆಡಿದ್ದ ಸುಂದರ್ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿದ್ದರು. ಇದಾಗ್ಯೂ ಗಾಯದ ಕಾರಣ ಕಳೆದ ಸೀಸನ್ಲ್ಲಿ ಆಡಿರಲಿಲ್ಲ.

ಈ ಬಾರಿ ಆರ್ಸಿಬಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಮಾತ್ರ ಉಳಿಸಿಕೊಂಡಿದೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ನ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾಗಿರುವ ಸುಂದರ್ ಅವರ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಆಕಾಶ್ ಚೋಪ್ರಾ.

ಐಪಿಎಲ್ನಲ್ಲಿ ಇದುವರೆಗೆ 42 ಪಂದ್ಯಗಳನ್ನಾಡಿರುವ ವಾಷಿಂಗ್ಟನ್ ಸುಂದರ್ 27 ಪಡೆದಿದ್ದಾರೆ. ಆದರೆ ವಾಷಿಂಗ್ಟನ್ ಸುಂದರ್ ಪ್ರತಿ ಓವರ್ನಲ್ಲಿ ನೀಡಿರುವ ರನ್ ಕೇವಲ 6.94 ರನ್ ಮಾತ್ರ. ಐಪಿಎಲ್ನ ಅತ್ಯುತ್ತಮ ಎಕಾನಮಿ ಬೌಲರ್ ಎನಿಸಿಕೊಂಡಿರುವ ಸುಂದರ್ ಅವರು ದೊಡ್ಡ ಮೊತ್ತಕ್ಕೆ ಹರಾಜಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.