ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ
Abhishek Sharma Records: ಭಾರತ ಟಿ20 ತಂಡದ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಚುಟುಕು ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ವೆಸ್ಟ್ ಇಂಡೀಸ್ನ ದೈತ್ಯ ಆ್ಯಂಡ್ರೆ ರೆಸೆಲ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದು ಎಂಬುದು ವಿಶೇಷ. ಅಂದರೆ 2025 ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಭಿಷೇಕ್ ಶರ್ಮಾ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
Updated on: Dec 31, 2025 | 8:01 AM

ಅಭಿಷೇಕ್ ಶರ್ಮಾ (Abhishek Sharma) ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ. ಈ ಸ್ಟ್ರೈಕ್ ರೇಟ್ನೊಂದಿಗೆ ಅಭಿ ಸ್ಫೋಟಕ ದಾಂಡಿಗ ಆ್ಯಂಡ್ರೆ ರಸೆಲ್ ಅವರ ವರ್ಲ್ಡ್ ರೆಕಾರ್ಡ್ ಅನ್ನೇ ಅಳಿಸಿ ಹಾಕಿದ್ದಾರೆ.

ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದು ವರ್ಷದಲ್ಲಿ 200ರ ಸ್ಟ್ರೈಕ್ ರೇಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಈವರೆಗೆ ಯಾವುದೇ ಬ್ಯಾಟರ್ 200ರ ಸ್ಟ್ರೈಕ್ ರೇಟ್ನಲ್ಲಿ ವರ್ಷಾಂತ್ಯಗೊಳಿಸಿರಲಿಲ್ಲ.

2024 ರಲ್ಲಿ ವೆಸ್ಟ್ ಇಂಡೀಸ್ನ ಸ್ಫೋಟಕ ದಾಂಡಿಗ ಆ್ಯಂಡ್ರೆ ರಸೆಲ್ 185.34 ಸ್ಟ್ರೈಕ್ ರೇಟ್ನಲ್ಲಿ 1074 ರನ್ ಕಲೆಹಾಕಿದ್ದರು. ಈ ಮೂಲಕ ವರ್ಷವೊಂದರಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.

ಈ ವಿಶ್ವ ದಾಖಲೆಯನ್ನು ಅಭಿಷೇಕ್ ಶರ್ಮಾ ಉಡೀಸ್ ಮಾಡಿದ್ದಾರೆ. 2025 ರಲ್ಲಿ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಒಟ್ಟು 1602 ರನ್ ಕಲೆಹಾಕಿದ್ದಾರೆ. ಅದು ಕೂಡ 202.01 ಸ್ಟ್ರೈಕ್ ರೇಟ್ನಲ್ಲಿ. ಈ ಮೂಲಕ ಟಿ20 ಇತಿಹಾಸದಲ್ಲೇ ಒಂದೇ ವರ್ಷದೊಳಗೆ 200+ ಸ್ಟ್ರೈಕ್ ರೇಟ್ನಲ್ಲಿ 1500+ ರನ್ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 190+ ಸ್ಟ್ರೈಕ್ ರೇಟ್ನಲ್ಲಿ 500 ಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ವರ್ಷ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಪರ ಒಟ್ಟು 859 ರನ್ ಕಲೆಹಾಕಿದ್ದಾರೆ. ಅದು ಸಹ 193.46 ಸ್ಟ್ರೈಕ್ ರೇಟ್ನಲ್ಲಿ. ಈ ಮೂಲಕ ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲೂ ಹೊಸ ಇತಿಹಾಸ ನಿರ್ಮಿಸಿದ್ದಾರೆ.
