
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 11 ರನ್ ಕಲೆಹಾಕುವ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೂಲಕ ಅಭಿಷೇಕ್ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರನ್ನು ಹಿಂದಿಕ್ಕಿದ್ದಾರೆ. ಆದಾಗ್ಯೂ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯುವಲ್ಲಿ ಅಭಿಷೇಕ್ ವಿಫಲರಾದರು. ಇದರ ಜೊತೆಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1,000 ರನ್ ಪೂರೈಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅಭಿಷೇಕ್ ಶರ್ಮಾ 528 ಎಸೆತಗಳಲ್ಲಿ 1000 ಅಂತರರಾಷ್ಟ್ರೀಯ ಟಿ20 ರನ್ ಪೂರೈಸಿದರು. ಇದೀಗ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ 569 ಎಸೆತಗಳಲ್ಲಿ 1000 ರನ್ ಪೂರೈಸಿದ್ದರು. ಮೂರನೇ ಸ್ಥಾನದಲ್ಲಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ 573 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಅಭಿಷೇಕ್ ಶರ್ಮಾ ಕೇವಲ 28 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಸಾಧನೆ ಮಾಡಿದ ಭಾರತೀಯರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ 1,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಕೆಎಲ್ ರಾಹುಲ್ 29 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಕಲೆಹಾಕುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಹಾಗೆಯೇ ಭಾರತ ಟಿ20ತಂಡದ ನಾಯಕ ಸೂರ್ಯಕುಮಾರ್ ಯಾದವ್ 31 ಇನ್ನಿಂಗ್ಸ್‌ಗಳಲ್ಲಿ 1,000 ರನ್‌ಗಳನ್ನು ಪೂರೈಸಿದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ರೋಹಿತ್ ಶರ್ಮಾ 40 ಇನ್ನಿಂಗ್ಸ್‌ಗಳಲ್ಲಿ 1,000 ರನ್‌ಗಳನ್ನು ಪೂರೈಸಿದ್ದರು.