
ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ನಲ್ಲಿ ನಾಲ್ವರು ಮಾತ್ರ 100 ಪಂದ್ಯಗಳನ್ನಾಡಿದ್ದಾರೆ. ಈ ನಾಲ್ವರಲ್ಲಿ ಕೊನೆಯವರು ಆ್ಯಡಂ ಝಂಪಾ. ಸೇಂಟ್ ಕಿಟ್ಸ್ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಝಂಪಾ 100 ಟಿ20 ಪಂದ್ಯಗಳನ್ನಾಡಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇದರೊಂದಿಗೆ ಆಸ್ಟ್ರೇಲಿಯಾ ಪರ 100 ಟಿ20 ಪಂದ್ಯಗಳನ್ನಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯನ್ನು ಆ್ಯಡಂ ಝಂಪಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಆಸೀಸ್ ಪರ ಈ ಸಾಧನೆ ಮಾಡಿದವರೆಲ್ಲರೂ ಬ್ಯಾಟರ್ಗಳು ಎಂಬುದು ವಿಶೇಷ. ಇದೀಗ ಇದೇ ಮೊದಲ ಬಾರಿಗೆ ಬೌಲರ್ರೊಬ್ಬರು ನೂರು ಪಂದ್ಯಗಳ ಮೈಲುಗಲ್ಲು ಮುಟ್ಟಿದ್ದಾರೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪರ 100 ಪಂದ್ಯಗಳನ್ನಾಡಿದ್ದು ಗ್ಲೆನ್ ಮ್ಯಾಕ್ಸ್ವೆಲ್, ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್. ಫಿಂಚ್ 103 ಪಂದ್ಯಗಳಲ್ಲಿ ಕಾಣಿಸಿಕೊಂಡರೆ, ವಾರ್ನರ್ ಆಸೀಸ್ ಪರ 110 ಟಿ20 ಪಂದ್ಯಗಳನ್ನಾಡಿದ್ದರು. ಇನ್ನು 121 ಪಂದ್ಯಗಳೊಂದಿಗೆ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ಪರ ಅತ್ಯಧಿಕ ಟಿ20 ಮ್ಯಾಚ್ ಆಡಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಝಂಪಾ 4ನೇ ಸ್ಥಾನ ಅಲಂಕರಿಸಿದ್ದಾರೆ.

ಆಸ್ಟ್ರೇಲಿಯಾ ಪರ ಈವರೆಗೆ 100 ಟಿ20 ಪಂದ್ಯಗಳನ್ನಾಡಿರುವ ಝಂಪಾ 99 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 2171 ಎಸೆತಗಳನ್ನು ಎಸೆದಿರುವ ಅವರು 125 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ ಭಾರತದ ಪರ 159 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಐರ್ಲೆಂಡ್ನ ಪೌಲ್ ಸ್ಟೀರ್ಲಿಂಗ್ 151 ಪಂದ್ಯಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಇನ್ನು 9 ಪಂದ್ಯಗಳನ್ನಾಡಿದರೆ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯನ್ನು ಮುರಿಯಬಹುದು.
Published On - 8:54 am, Tue, 29 July 25