Updated on: Jan 21, 2023 | 10:19 AM
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ 20 ಲೀಗ್ ಒಂದು ಹಂತ ತಲುಪಿದ್ದರೆ, ಇತ್ತ ಯುಎಇಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ 20 ಪಂದ್ಯಾವಳಿಯು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಿದೆ.
ಈ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಟಾರ್ ಓಪನರ್ ಅಲೆಕ್ಸ್ ಹೇಲ್ಸ್ ಶತಕ ಸಿಡಿಸಿ ಮಿಂಚಿದ್ದಾರೆ. ಡೆಸರ್ಟ್ ವೈಪರ್ಸ್ ಪರ ಆಡುತ್ತಿರುವ ಹೇಲ್ಸ್, ಅಬುಧಾಬಿ ನೈಟ್ ರೈಡರ್ಸ್ ವಿರುದ್ಧ 110 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ 8 ಪಂದ್ಯಗಳ ಬಳಿಕ ಈ ಲೀಗ್‌ನಲ್ಲಿ ಮೊದಲ ಶತಕ ದಾಖಲಾಗಿರುವುದು ಗಮನಾರ್ಹ.
ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 59 ಎಸೆತಗಳನ್ನು ಎದುರಿಸಿದ ಹೇಲ್ಸ್, 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 110 ರನ್ ಚಚ್ಚಿದರು.
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಹೇಲ್ಸ್ ಕೊನೆಯ ಎಸೆತದಲ್ಲಿ ರನೌಟ್ ಆದರು. ಇದಕ್ಕೂ ಮೊದಲು ಅವರು ಮುನ್ರೊ (56) ಅವರೊಂದಿಗೆ ಎರಡನೇ ವಿಕೆಟ್‌ಗೆ ದಾಖಲೆಯ 164 ರನ್ ಕೂಡ ಸೇರಿಸಿದರು.
ಹೇಲ್ಸ್ ಅವರ ಶತಕದ ನೆರವಿನಿಂದ ಡೆಸರ್ಟ್ ವೈಪರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಬಳಿಕ ಈ ಗುರಿ ಬೆನ್ನಟ್ಟಿದ ಅಬುಧಾಬಿ ನೈಟ್‌ರೈಡರ್ಸ್ ಕೇವಲ 108 ರನ್‌ಗಳಿಗೆ ಆಲೌಟ್ ಆಗುವ ಮೂಲಕ 111 ರನ್‌ಗಳಿಂದ ಸೋಲನುಭವಿಸಿತು.