
ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಸ್ಮೃತಿ ಮಂಧಾನ (Smriti Mandhana) ಅವರ ಸಿಡಿಲಬ್ಬರದ ಶತಕದೊಂದಿಗೆ ಎಂಬುದು ವಿಶೇಷ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಕೇವಲ 50 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಈ ಸಿಡಿಲಬ್ಬರದ ಸೆಂಚುರಿಯೊಂದಿಗೆ ಸ್ಮೃತಿ ಮಂಧಾನ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆರಂಭಿಕ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಸುಝಿ ಬೆಟ್ಸ್ ಹಾಗೂ ಇಂಗ್ಲೆಂಡ್ನ ಟ್ಯಾಮಿ ಬ್ಯೂಮೆಂಟ್ ಹೆಸರಿನಲ್ಲಿತ್ತು. ಈ ಇಬ್ಬರು ಆರಂಭಿಕರಾಗಿ ಕಣಕ್ಕಿಳಿದು ತಲಾ 12 ಶತಕ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ 13ನೇ ಸೆಂಚುರಿ ಸಿಡಿಸುವ ಮೂಲಕ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಶತಕ ಬಾರಿಸಿದ ಓಪನರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಪರ ಅತೀ ವೇಗದ ಸೆಂಚುರಿ ಸಿಡಿಸಿದ ಹೆಗ್ಗಳಿಕೆಯನ್ನು ಕೂಡ ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಮಹಿಳಾ ಬ್ಯಾಟರ್ ಎಂಬ ಹಿರಿಮೆಗೂ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಮೃತಿ (13 ಶತಕ) ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 15 ಶತಕ ಬಾರಿಸಿರುವ ಆಸ್ಟ್ರೇಲಿಯಾ ಮೆಗ್ ಲ್ಯಾನಿಂಗ್ ಮೊದಲ ಸ್ಥಾನದಲ್ಲಿದ್ದಾರೆ.

ಹಾಗೆಯೇ ದೆಹಲಿಯಲ್ಲಿ ಸಿಡಿಸಿದ ಶತಕದೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನೂ ಸಹ ಸ್ಮೃತಿ ತಮ್ಮದಾಗಿಸಿಕೊಂಡಿದ್ದಾರೆ. ಸ್ಮೃತಿ ಮಂಧಾನ ಆಸೀಸ್ ವಿರುದ್ಧ ಈವರೆಗೆ 4 ಸೆಂಚುರಿ ಬಾರಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಹಾಗೆಯೇ ಶತಕ ಸಿಡಿಸಲು ತೆಗೆದುಕೊಂಡಿದ್ದು ಕೇವಲ 50 ಎಸೆತಗಳನ್ನು ಮಾತ್ರ. ಈ ಮೂಲಕ ಭಾರತದ ಪರ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗದ ಅರ್ಧಶತಕ ಹಾಗೂ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಒಂದು ಸ್ಫೋಟಕ ಶತಕದೊಂದಿಗೆ ಸ್ಮೃತಿ ಮಂಧಾನ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿರುವುದು ವಿಶೇಷ.