331 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ
Abhishek Sharma Record: ಏಷ್ಯಾಕಪ್ನ 14ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 171 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 18.5 ಓವರ್ಗಳಲ್ಲಿ 174 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Sep 22, 2025 | 9:53 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಸಿಕ್ಸ್ ಸಿಡಿಸುವ ಮೂಲಕ... ಹೀಗೆ ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದಿರುವುದು ಮತ್ಯಾರೂ ಅಲ್ಲ, ಟೀಮ್ ಇಂಡಿಯಾದ ಯಂಗ್ ಗನ್ ಅಭಿಷೇಕ್ ಶರ್ಮಾ (Abhishek Sharma).

ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಚಚ್ಚಿದ್ದರು. ಈ ವೇಳೆ ಸಿಡಿಸಿದ 5 ಸಿಕ್ಸ್ಗಳೊಂದಿಗೆ ಅಭಿ ಟಿ20 ಕ್ರಿಕೆಟ್ನಲ್ಲಿ ಐವತ್ತು ಸಿಕ್ಸರ್ಗಳನ್ನು ಪೂರೈಸಿದ್ದಾರೆ. ಅದು ಸಹ ಕೇವಲ 331 ಎಸೆತಗಳಲ್ಲಿ..!

ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 50 ಸಿಕ್ಸ್ಗಳ ಮೈಲುಗಲ್ಲು ಮುಟ್ಟಿದ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ವೆಸ್ಟ್ ಇಂಡೀಸ್ನ ಎವಿನ್ ಲೂಯಿಸ್ ಹೆಸರಿನಲ್ಲಿತ್ತು.

ವೆಸ್ಟ್ ಇಂಡೀಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಎವಿನ್ ಲೂಯಿಸ್ 366 ಎಸೆತಗಳಲ್ಲಿ 50 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 50 ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮುರಿದು ಅಭಿಷೇಕ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಭಿಷೇಕ್ ಶರ್ಮಾ ಮೊದಲ 50 ಸಿಕ್ಸರ್ಗಳನ್ನು ಪೂರೈಸಲು ತೆಗೆದುಕೊಂಡಿರುವುದು ಕೇವಲ 331 ಎಸೆತಗಳನ್ನು ಮಾತ್ರ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 50 ಸಿಕ್ಸ್ ಸಿಡಿಸಿದ ದಾಂಡಿಗ ಎಂಬ ವಿಶ್ವ ದಾಖಲೆಯನ್ನು ಅಭಿಷೇಕ್ ಶರ್ಮಾ ನಿರ್ಮಿಸಿದ್ದಾರೆ.
